ಕೇಂದ್ರದಿಂದ 80 ಸಾವಿರ ಕೋಟಿ ನಷ್ಟ, ಆದರೂ ಎಲ್ಲಾ ಶಾಸಕರಿಗೂ ಅನುದಾನ: ಸಿಎಂ
x

ಕೇಂದ್ರದಿಂದ 80 ಸಾವಿರ ಕೋಟಿ ನಷ್ಟ, ಆದರೂ ಎಲ್ಲಾ ಶಾಸಕರಿಗೂ ಅನುದಾನ: ಸಿಎಂ

ಅನುದಾನಕ್ಕಾಗಿ ಪಟ್ಟು ಹಿಡಿದು ವಿಪಕ್ಷಗಳ ಸಾಸಕರು ಸದನದ ಬಾವಿಗಿಳಿದು ನಡೆಸಿದ ಧರಣಿ, ಸಿಎಂ ಭರವಸೆಯ ನಂತರ ತಿಳಿಯಾಯಿತು.


ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾಗಿದ್ದ 80,000 ಕೋಟಿ ರೂ. ಹಣ ಬಾರದೆ ನಷ್ಟವಾಗಿದ್ದರೂ, ರಾಜ್ಯದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕುಂಠಿತಗೊಳಿಸಿಲ್ಲ, ಎಲ್ಲಾ 224 ಶಾಸಕರ ಕ್ಷೇತ್ರಗಳಿಗೂ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆ ಅಧಿವೇಶನದ ವೇಳೆ ಸ್ಪಷ್ಟಪಡಿಸಿದರು.

ಅನುದಾನಕ್ಕಾಗಿ ಪಟ್ಟು ಹಿಡಿದು ವಿಪಕ್ಷಗಳ ಸಾಸಕರು ಸದನದ ಬಾವಿಗಿಳಿದು ನಡೆಸಿದ ಧರಣಿ, ಸಿಎಂ ಭರವಸೆಯ ನಂತರ ತಿಳಿಯಾಯಿತು. ಇದೇ ವೇಳೆ ಸಿಎಂ 2006-10ರ ಅವಧಿಯ ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆಗೆ ಎಸ್ಐಟಿ ರಚಿಸುವುದಾಗಿ ಸಿಎಂ ಘೋಷಣೆ ಮಾಡಿದರು.

ಅನುದಾನಕ್ಕಾಗಿ ವಿಪಕ್ಷಗಳ ಧರಣಿ, ಸಿಎಂ ಭರವಸೆ

ಎಲ್ಲಾ ಶಾಸಕರಿಗೂ ಅಭಿವೃದ್ಧಿ ಮತ್ತು ಅತಿವೃಷ್ಟಿ ಪರಿಹಾರಕ್ಕಾಗಿ ಅನುದಾನ ನೀಡುವುದಾಗಿ ಪ್ರಕಟಿಸಿದರು. "ಬಿಜೆಪಿ, ಜೆಡಿಎಸ್ ಶಾಸಕರಿಗೂ ಅನುದಾನ ಕೊಡುತ್ತೇನೆ, ಆದರೆ ಎಷ್ಟು ಕೊಡುತ್ತೇನೆ ಎಂದು ಹೇಳುವುದಿಲ್ಲ," ಎಂದರು. ಇದಕ್ಕೆ ತೃಪ್ತರಾಗದ ವಿಪಕ್ಷ ಸದಸ್ಯರು, ತಕ್ಷಣವೇ ತಲಾ 50 ಕೋಟಿ ರೂ. ಅನುದಾನ ಘೋಷಿಸುವಂತೆ ಪಟ್ಟು ಹಿಡಿದು ಸದನದ ಬಾವಿಗಿಳಿದು ಧರಣಿ ಆರಂಭಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ, "ನಿಮ್ಮನ್ನೆಲ್ಲ ಕರೆದು, ಕಾಫಿ ಕೊಟ್ಟು, ನಿಮ್ಮ ಕ್ಷೇತ್ರಗಳ ಕಾಮಗಾರಿಗಳ ಆ್ಯಕ್ಷನ್ ಪ್ಲ್ಯಾನ್ ತೆಗೆದುಕೊಂಡು ಹಣ ಬಿಡುಗಡೆ ಮಾಡುತ್ತೇನೆ. ವಿರೋಧ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ," ಎಂದು ಭರವಸೆ ನೀಡಿದರು. ಸಿಎಂ ಅವರ ಈ ಮಾತಿಗೆ ಸಮಾಧಾನಗೊಂಡ ವಿಪಕ್ಷ ಸದಸ್ಯರು ಧರಣಿಯನ್ನು ಹಿಂಪಡೆದರು.

ಕೇಂದ್ರದ ವಿರುದ್ಧ ಸಿಎಂ ವಾಗ್ದಾಳಿ

ರಾಜ್ಯದ ಆರ್ಥಿಕ ಸಂಕಷ್ಟಕ್ಕೆ ಕೇಂದ್ರ ಸರ್ಕಾರದ ನೀತಿಯೇ ಕಾರಣ ಎಂದು ಆರೋಪಿಸಿದ ಸಿಎಂ, "ಕೇಂದ್ರ ಬಜೆಟ್​ನಲ್ಲಿ ಘೋಷಿಸಿದಂತೆ ಅಪ್ಪರ್ ಭದ್ರಾ ಯೋಜನೆಗೆ 5,300 ಕೋಟಿ ರೂ. ಇಂದಿಗೂ ಬಂದಿಲ್ಲ. 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ವಿಶೇಷ ಅನುದಾನ 5,495 ಕೋಟಿ ರೂ. ಸಹ ಬಂದಿಲ್ಲ. ಹೀಗೆ ಎಲ್ಲವನ್ನೂ ಸೇರಿಸಿದರೆ ರಾಜ್ಯಕ್ಕೆ ಸುಮಾರು 80,000 ಕೋಟಿ ರೂ. ನಷ್ಟವಾಗಿದೆ. ಇಷ್ಟು ಹಣ ಬರದಿದ್ದರೆ ಅಭಿವೃದ್ಧಿ ಹೇಗೆ ಮಾಡಲು ಸಾಧ್ಯ? ನಮಗೆ ಬರಬೇಕಾದ ತೆರಿಗೆ ಪಾಲು ಸರಿಯಾಗಿ ಬಂದಿದ್ದರೆ ನೀವು ಕೇಳಿದಷ್ಟು ಅನುದಾನ ಕೊಡಬಹುದಿತ್ತು," ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.

ದಲಿತರ ಬಗ್ಗೆ ಬಿಜೆಪಿಗೆ ಮೊಸಳೆ ಕಣ್ಣೀರು

ಎಸ್ಸಿಪಿ-ಟಿಎಸ್ಪಿ ಕಾಯ್ದೆ ಕುರಿತು ಮಾತನಾಡಿದ ಅವರು, "ದಲಿತರ ಬಗ್ಗೆ ಬಿಜೆಪಿಯವರು ಮೊಸಳೆ ಕಣ್ಣೀರು ಸುರಿಸುತ್ತಾರೆ. ನಾವು ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಡುವ ಕಾಯ್ದೆ ಮಾಡಿದ್ದೇವೆ. ಈ ವರ್ಷ 42,017 ಕೋಟಿ ರೂ. ನಿಗದಿ ಮಾಡಿದ್ದೇವೆ. ಬಿಜೆಪಿ ಅಧಿಕಾರದಲ್ಲಿರುವ ಒಂದೇ ಒಂದು ರಾಜ್ಯದಲ್ಲಾದರೂ ಈ ರೀತಿ ಮಾಡಿದ್ದಾರೆಯೇ? ಕೇಂದ್ರದಲ್ಲಾದರೂ ಮಾಡಿದ್ದಾರೆಯೇ?" ಎಂದು ಪ್ರಶ್ನಿಸಿದರು.

ಗ್ಯಾರಂಟಿ ನಿಲ್ಲಲ್ಲ, ನುಡಿದಂತೆ ನಡೆಯುತ್ತೇವೆ

"ಗ್ಯಾರಂಟಿ ಯೋಜನೆಗಳನ್ನು ಲೋಕಸಭಾ ಚುನಾವಣೆ ಬಳಿಕ ನಿಲ್ಲಿಸುತ್ತಾರೆ ಎಂದರು, ಆದರೆ ನಾವು ಮುಂದುವರಿಸಿದ್ದೇವೆ. ರಾಜಸ್ಥಾನದಲ್ಲಿ ಪ್ರಧಾನಿ ಮೋದಿಯವರೇ ನಮ್ಮ ಯೋಜನೆಗಳನ್ನು ಟೀಕಿಸಿದ್ದರು, ಆದರೆ ಈಗ ಅನೇಕ ರಾಜ್ಯಗಳು ನಮ್ಮನ್ನು ಕಾಪಿ ಮಾಡುತ್ತಿವೆ. ನಾವು ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ, ಜನರಿಗೆ ದ್ರೋಹ ಮಾಡುವುದಿಲ್ಲ," ಎಂದು ಸಿಎಂ ಸ್ಪಷ್ಟಪಡಿಸಿದರು.

ಅಕ್ರಮ ಗಣಿಗಾರಿಕೆ: ಎಸ್ಐಟಿ ತನಿಖೆಗೆ ನಿರ್ಧಾರ

2006-10ರ ಅವಧಿಯ ಅಕ್ರಮ ಗಣಿಗಾರಿಕೆ ಕುರಿತು ಎಚ್.ಕೆ. ಪಾಟೀಲ್ ನೇತೃತ್ವದ ಸಚಿವ ಸಂಪುಟ ಉಪಸಮಿತಿ ವರದಿಯ ಶಿಫಾರಸುಗಳ ಬಗ್ಗೆ ಮಾತನಾಡಿದ ಸಿಎಂ, "ಅಕ್ರಮ ಗಣಿಗಾರಿಕೆಯಿಂದಾಗಿ ಸರ್ಕಾರಕ್ಕೆ 78,245 ಕೋಟಿ ರೂ. ನಷ್ಟವಾಗಿದೆ. ಈ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ರಚಿಸಲಾಗುವುದು. ಜೊತೆಗೆ, ಪ್ರಕರಣಗಳ ತನಿಖೆಗೆ ಎಸ್ಐಟಿ ರಚಿಸಲಾಗುವುದು. 'ಬಿ' ರಿಪೋರ್ಟ್ ಹಾಕಿರುವ 29 ಪ್ರಕರಣಗಳನ್ನು ಮರುಪರಿಶೀಲಿಸಲಾಗುವುದು ಹಾಗೂ ಸಿಬಿಐ ತನಿಖೆ ನಡೆಸದ ಪ್ರಕರಣಗಳನ್ನು ವಾಪಸ್ ಪಡೆದು ಎಸ್ಐಟಿ ತನಿಖೆಗೆ ಒಳಪಡಿಸಲು ಕೇಂದ್ರವನ್ನು ಕೋರಲಾಗುವುದು," ಎಂದು ಸದನಕ್ಕೆ ತಿಳಿಸಿದರು.

Read More
Next Story