ಸಾಹಿತಿಗಳೂ ರಾಜಕಾರಣಿಗಳು ಹೇಳಿಕೆ | ಡಿಸಿಎಂ ಕ್ಷಮೆಯಾಚನೆಗೆ ಸಾಹಿತಿಗಳ ಒತ್ತಾಯ
x
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌

ಸಾಹಿತಿಗಳೂ ರಾಜಕಾರಣಿಗಳು ಹೇಳಿಕೆ | ಡಿಸಿಎಂ ಕ್ಷಮೆಯಾಚನೆಗೆ ಸಾಹಿತಿಗಳ ಒತ್ತಾಯ

ಸಾಹಿತಿಗಳೂ ರಾಜಕಾರಣಿಗಳೇ ಎಂಬ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ಹೇಳಿಕೆ ಅತ್ಯಂತ ಖಂಡನೀಯ. ಈ ಹೇಳಿಕೆಗೆ ಅವರು ಕ್ಷಮೆಯಾಚಿಸಬೇಕು ಎಂದು ಸಾಹಿತಿಗಳು, ಸಾಮಾಜಿಕ ಹೋರಾಟಗಾರರು, ರಂಗಕರ್ಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಾಂಗ್ರೆಸ್‌ ಪಕ್ಷದ ಕಾರ್ಯಾಲಯದಲ್ಲಿ ಸಾಹಿತ್ಯ ಅಕಾಡೆಮಿ ಸೇರಿದಂತೆ ವಿವಿಧ ಅಕಾಡೆಮಿ, ಪ್ರಾಧಿಕಾರ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರ ಸಭೆ ನಡೆಸಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ನಡೆ ಇದೀಗ ವಿವಾದಕ್ಕೀಡಾಗಿದೆ.

ಸಾಹಿತಿಗಳು, ಕಲಾವಿದರು, ಸಾಮಾಜಿಕ ಹೋರಾಟಗಾರರನ್ನು ಪಕ್ಷದ ಕಾರ್ಯಕರ್ತರ ರೀತಿ ಕಾಣುತ್ತಿರುವ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿಗಳು ಪಕ್ಷದ ಕಚೇರಿಯಲ್ಲಿ ಅಕಾಡೆಮಿ-ಪ್ರಾಧಿಕಾರಗಳ ಅಧ್ಯಕ್ಷರ ಸಭೆ ನಡೆಸಿ ಆ ಸಂಸ್ಥೆಗಳನ್ನು ಪಕ್ಷದ ಘಟಕಗಳಂತೆ ಕಂಡಿದ್ದಾರೆ. ಅಲ್ಲದೆ, ಆ ಬಗ್ಗೆ ಪ್ರಶ್ನಿಸಿದವರಿಗೆ ಸಾಹಿತಿಗಳೂ ರಾಜಕಾರಣಿಗಳೇ ಎಂದು ಹೇಳಿಕೆ ನೀಡಿರುವುದು ಖಂಡನೀಯ ಎಂದು ರಾಜ್ಯದ ಸಾಹಿತಿಗಳು, ಕಲಾವಿದರು, ಸಾಮಾಜಿಕ ಹೋರಾಟಗಾರರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಬುಧವಾರ ಐವತ್ತಕ್ಕೂ ಹೆಚ್ಚು ಮಂದಿ ಸಾಂಸ್ಕೃತಿಕ ರಂಗದ ಪ್ರಮುಖರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಡಿಸಿಎಂ ಡಿ ಕೆ ಶಿವಕುಮಾರ್‌ ಅವರು ಕ್ಷಮೆ ಯಾಚಿಸುವಂತೆ ಒತ್ತಾಯಿಸಿದ್ದಾರೆ.

ಸಾಹಿತಿ- ಕಲಾವಿದರ ಹೇಳಿಕೆಯ ಪೂರ್ಣ ಪಾಠ ಇಂತಿದೆ;

ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಉಪ-ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ʼಕಾಂಗ್ರೆಸ್‌ ಪಕ್ಷದ ಕಚೇರಿಗೆ ಸಾಹಿತಿಗಳನ್ನು ಕರೆದು ಸಭೆ ನಡೆಸಿದ್ದು ನಾನೇ, ಅದರಲ್ಲಿ ತಪ್ಪೇನು? ಸಾಹಿತಿಗಳು ರಾಜಕಾರಣಿಗಳೇ, ಎಂಬ ಮಾತನ್ನಾಡಿದ್ದಾರೆ. ಅಲ್ಲದೆ ಅಕಾಡೆಮಿಯ ನೇಮಕಗಳೂ ಸಹ ನಿಗಮ ಮತ್ತು ಮಂಡಳಿಗಳ ನೇಮಕದಂತೆ ಪಕ್ಷದ ಹಿತಾಸಕ್ತಿಯ ನೇಮಕವೇ ಆಗಿದೆ. ಸಾಹಿತಿಗಳೂ ಕೂಡ ಪಕ್ಷ ರಾಜಕಾರಣಿಗಳೇ. ಅವರು ಬಾಯಿ ಬಿಟ್ಟು ಹೇಳಿಕೊಳ್ಳುವುದಿಲ್ಲ ಅಷ್ಟೇ. ಅಕಾಡೆಮಿಗಳ ಸ್ವಾಯತ್ತತೆ ಅಂತಾ ಏನೂ ಇಲ್ಲ. ಎಲ್ಲಾ ಸರ್ಕಾರದ ನೇಮಕಾತಿಗಳೇ. ಹೀಗಾಗಿ ಎಲ್ಲಿ ಬೇಕಾದರೂ ಸಭೆ ಕರೆಯಬಹುದು ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಉಪ-ಮುಖ್ಯಮಂತ್ರಿಗಳ ಈ ಉದ್ಧಟತನ ಹಾಗೂ ಅಧಿಕಾರದ ದರ್ಪದಿಂದ ಕೂಡಿದ ಈ ಹೇಳಿಕೆಯನ್ನು ನಾವು ಒಕ್ಕೊರಲಿನಿಂದ ಖಂಡಿಸುತ್ತೇವೆ. ಸರ್ಕಾರದ ಉಪ ಮುಖ್ಯಮಂತ್ರಿಯವರ ಈ ಹೇಳಿಕೆಯನ್ನು ಮಾನ್ಯ ಮುಖ್ಯಮಂತ್ರಿಗಳು ಮತ್ತು ಸರ್ಕಾರದ ಇತರೆ ಸಚಿವರು ಅನುಮೋದಿಸುತ್ತಾರೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕಿದೆ. ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಲು ಹೊರಟಿರುವ ಕೋಮುವಾದಿ ಹಾಗು ಸರ್ವಾಧಿಕಾರಿ ಧೋರಣೆಯ ಫ್ಯಾಸಿಸ್ಟ್‌ ಶಕ್ತಿಗಳನ್ನು ಸೋಲಿಸಲು ಎಲ್ಲಾ ಪ್ರಗತಿಪರ, ಪ್ರಜಾಸತ್ತಾತ್ಮಕ ಹಾಗು ಜಾತ್ಯತೀತ ಶಕ್ತಿಗಳನ್ನು ಜೊತೆಗೆ ಕೊಂಡೊಯ್ಯಬೇಕಾದ ಇಂದಿನ ರಾಜಕೀಯ ಸಂದರ್ಭದಲ್ಲಿ ಉಪ-ಮುಖ್ಯಮಂತ್ರಿಗಳ ಈ ಹೇಳಿಕೆ ನಮಗೆ ಅಘಾತವನ್ನುಂಟುಮಾಡಿದೆ.

ಪಾಳೇಗಾರಿಕೆ ಮನೋಧೋರಣೆ

ಉಪಮುಖ್ಯಮಂತ್ರಿಯವರ ಈ ನಡೆ ಪಾಳೇಗಾರಿಕೆ ಮನೋಧೋರಣೆಯಾಗಿದ್ದು ಸರ್ವಾಧಿಕಾರ ಹಾಗು ದರ್ಪದ ನಡೆಯಾಗಿದೆ. ಇದನ್ನು ನಾವು ಪ್ರಬಲವಾಗಿ ಖಂಡಿಸುತ್ತೇವೆ ಮತ್ತು ಬೇಷರತ್‌ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸುತ್ತೇವೆ. ನಾವು ಸಂವಿಧಾನಬದ್ಧ ರಾಜಕೀಯದಲ್ಲಿ ನಂಬಿಕೆ ಇಟ್ಟು ಸಂವಿಧಾನದ ಆಶಯದಂತೆ ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಗಣರಾಜ್ಯವನ್ನಾಗಿ ರೂಪಿಸಲು ಕೆಲ ನಿರ್ವಹಿಸುತ್ತಿದ್ದೇವೆಯೇ ಹೊರತು ಯಾವುದೇ ಪಕ್ಷದ ಬಾಲಂಗೋಚಿಗಳಲ್ಲ. ಉಪ ಮುಖ್ಯಮಂತ್ರಿಗಳು ಪ್ರಗತಿಪರರು ಅವರ ಹಂಗಿನಲ್ಲಿದ್ದಾರೆ ಎಂದುಕೊಂಡರೆ ಅದು ಅವರ ಮೂರ್ಖತನವೇ ಸರಿ. ಇವರ ಧೋರಣೆಯನ್ನು ಗಮನಿಸಿದರೆ, ಇವರು ಸರ್ವಾಧಿಕಾರಿ ಮೋದಿಯವರಿಗಿಂತ ಭಿನ್ನವಿಲ್ಲವೆನಿಸುತ್ತದೆ. ಹಾಗೆಯೇ, ಕಾಂಗ್ರೆಸ್ಸಿನ ಬಹುಮುಖಗಳಲ್ಲಿ ಒಂದನ್ನು ಡಿ ಕೆ ಶಿವಕುಮಾರ್ ಅನಾವರಣಗೊಳಿಸಿದಂತಿದೆ! ಕಾಂಗ್ರೆಸ್ಸಿನ ನಾಯಕರಿಗೆ ಈ ಧೈರ್ಯ ಬರಲು, ಓಲೈಸುವ ಮನೋಧರ್ಮದ ನಮ್ಮ ಸಾಹಿತಿಗಳೂ-ಬರಹಗಾರರು ಕಾರಣ ಎಂಬುದನ್ನು ನಾವು ಮರೆಯಬಾರದು. ಸಾಹಿತಿಗಳು ತಮ್ಮ ಅಂತಃಸಾಕ್ಷಿಗೆ ಓಗೊಟ್ಟು ಇದನ್ನು ಖಂಡಿಸಿ ತಮ್ಮ ಸ್ವಾಯತ್ತ ಮನೋಧರ್ಮವನ್ನು ಸಾರುವ ಕೆಲಸ ಮಾಡಬೇಕಿದೆ.

ಉಪ ಮುಖ್ಯಮಂತ್ರಿಗಳ ಸ್ಥಾನಕ್ಕೆ ಕಳಂಕ

ಉಪಮುಖ್ಯಮಂತ್ರಿಗಳ ಈ ನಿಲುವು ಅಧಿಕಾರದ ಅಹಂಕಾರದಿಂದ ಕೂಡಿದ್ದು ಅವರ ಸ್ಥಾನಕ್ಕೆ ಕಳಂಕ ತಂದಿದೆ. ಒಕ್ಕೂಟದ ಮೋದಿ ಸರ್ಕಾರವು ಇದೇ ರೀತಿಯ ಅಹಂಕಾರದಿಂದಲೇ ಎಲ್ಲಾ ಸ್ವಾಯತ್ತ ಹಾಗು ಸಾಂವಿಧಾನಿಕ ಸಂಸ್ಥೆಗಳನ್ನು ಸರ್ವಾನಾಶ ಮಾಡಿ, ಸರ್ಕಾರದ ಗುಲಾಮರಾಗಿಸಿಕೊಂಡಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಆದರೆ ಈಗ ಕಾಂಗ್ರೆಸ್ ಸರ್ಕಾರವು ಕೂಡ ಸ್ವಾಯತ್ತ ಸಂಸ್ಥೆಗಳ ಬಗ್ಗೆ ಮೋದಿ ಸರ್ಕಾರದ ಸರ್ವಾಧಿಕಾರಿ ನಿಲುವನ್ನೇ ಅನುಸರಿಸಿದರೆ, ನಮ್ಮ ನಿಲುವು ಏನಾಗಬೇಕೆಂದು ಪ್ರಜ್ಞಾವಂತ ಸಮಾಜ ಯೋಚಿಸಬೇಕಿದೆ. ಮೋದಿ ಸರ್ಕಾರದ ಸರ್ವಾಧಿಕಾರಕ್ಕೆ, ದರ್ಪ ಹಾಗೂ ದುರಹಂಕಾರಕ್ಕೆ ತೋರಿದ ವಿರೋಧವನ್ನೇ ಕಾಂಗ್ರೆಸ್ ಸರ್ಕಾರದ ಧೋರಣೆಗೂ ತೋರಬೇಕಾದ ಅನಿವಾರ್ಯತೆಯನ್ನು ಉಪ ಮುಖ್ಯಮಂತ್ರಿಯವರು ಸೃಷ್ಟಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲವೆಂಬುದು ನಮ್ಮ ಒಮ್ಮತದ ಅಭಿಪ್ರಾಯ.

ಪಕ್ಷ ರಾಜಕಾರಣ ಮಾನದಂಡವಲ್ಲ

ಅಕಾಡೆಮಿ ಮತ್ತು ಪ್ರಾಧಿಕಾರಗಳು ಉಳಿದ ಬೋರ್ಡ್ ಮತ್ತು ನಿಗಮಗಳಂತಲ್ಲ. ಸಾಹಿತ್ಯ ಕಲೆ ಸಂಸ್ಕೃತಿಗೆ ಸಂಬಂಧಿಸಿದ ಈ ಅಕಾಡೆಮಿ ಹಾಗು ಪ್ರಾಧಿಕಾರಗಳು ವಿಷಯ ತಜ್ಞರ ತಜ್ಞತೆಯ ನೆಲೆಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಗಳು. ಇವುಗಳಿಗೆ ಸರ್ಕಾರವೇ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿದರೂ, ಅದು ತಜ್ಞತೆಯ ಮತ್ತು ಆ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಮಾನದಂಡವಾಗಿ ಇಟ್ಟುಕೊಂಡು ನೇಮಕವಾಗಿರುತ್ತದೆಯೇ ಹೊರತು ರಾಜಕೀಯ ಅಥವಾ ಪಕ್ಷ ರಾಜಕಾರಣ ಮಾನದಂಡವಲ್ಲ. ಅಂತಹ ತಜ್ಞರನ್ನು ನೇಮಿಸುವುದು ವ್ಯಕ್ತಿಯ ಘನತೆಗಿಂತ ಸರಕಾರ ಹಾಗು ಸಂಸ್ಥೆಯ ಘನತೆಯನ್ನು ಹೆಚ್ಚಿಸುತ್ತದೆ. ನೇಮಕವಾಗುವ ಅಧ್ಯಕ್ಷರು ಮತ್ತು ಸದಸ್ಯರು ತಾವು ನೇಮಕವಾದ ಸಂಸ್ಥೆಯನ್ನು ಪ್ರತಿನಿಧಿಸುತ್ತಾರೆಯೇ ಹೊರತು ರಾಜಕೀಯ ಪಕ್ಷವನ್ನಲ್ಲ. ಜೊತೆಗೆ, ಈ ಸಂಸ್ಥೆಗಳು ಜನರ ತೆರಿಗೆ ಹಣದಲ್ಲಿ ನಡೆಯುವ ಸಂಸ್ಥೆಗಳೇ ಹೊರತು ಯಾವುದೇ ಪಕ್ಷ ಹಂಗಿನಲ್ಲಲ್ಲ.

ಸ್ವಾಯತ್ತ ಸಂಸ್ಥೆಗಳ ಘನತೆ ಕುಗ್ಗಿಸಿದೆ

ಅಕಾಡೆಮಿ ಮತ್ತು ಪ್ರಾಧಿಕಾರಗಳಂತ ಸ್ವಾಯತ್ತ ಸಂಸ್ಥೆಗಳ ಘನತೆಯನ್ನು ಕುಗ್ಗಿಸಿದೆ. ಇದೇ ಸಂದರ್ಭದಲ್ಲಿ ಅಲ್ಲಿ ಭಾಗವಹಿಸಿದ ಅಧ್ಯಕ್ಷರು ಸದಸ್ಯರು ಪಕ್ಷ ರಾಜಕಾರಣಕ್ಕೆ ಹೊರತಾಗಿ ತಮ್ಮ ಜವಾಬ್ದಾರಿ ಹಾಗು ಘನತೆಯನ್ನು ಎತ್ತಿ ಹಿಡಿಯುವಲ್ಲಿ ಪ್ರಮಾದವೆಸಗಿದ್ದಾರೆ. ಇದು ಪ್ರಗತಿಪರ ಕನ್ನಡ ಸಾರಸ್ವತ ಲೋಕಕ್ಕೆ ಒಂದು ಕಪ್ಪು ಚುಕ್ಕೆ. ತುಂಬಾ ನೋವಿನ ಬೆಳವಣಿಗೆ. ಸಾಂವಿಧಾನಿಕ ಹಾಗು ಪ್ರಜಾಪ್ರಭುತ್ವೀಯ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆ ತರುವ ಇಂತಹ ನಡುವಳಿಕೆಗಳನ್ನು, ಪ್ರಸ್ತುತ ಸರಕಾರದಿಂದ ನೇಮಕಗೊಂಡಿರುವ ಸ್ವಾಯತ್ತ ಸಾಹಿತ್ಯ, ಸಂಸ್ಕೃತಿ, ಕಲೆ ಹಾಗು ಶೈಕ್ಷಣಿಕ ಸಂಸ್ಥೆ ಹಾಗು ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರೂ ವಿರೋಧಿಸಿ, ಸಂಸ್ಥೆಗಳ ಪ್ರಜಾಪ್ರಭುತ್ವೀಯ ಘನತೆಯನ್ನು ಎತ್ತಿಹಿಡಿಯಬೇಕೆಂದು ನಾವು ಒತ್ತಾಯಿಸುತ್ತೇವೆ.

ಬಹಿರಂಗ ಹೇಳಿಕೆಗೆ ಪ್ರಮುಖರಾದ ಎಚ್‌ ಎಸ್‌ ಅನುಪಮಾ, ವಿ ಪಿ ನಿರಂಜನಾರಾಧ್ಯ, ಬಸವರಾಜ ಸೂಳಿಭಾವಿ, ಡಾ ಶ್ರೀನಿವಾಸ ಕಕ್ಕಿಲಾಯ, ಕೆ ಫಣಿರಾಜ್‌, ಕೆ ಪಿ ಸುರೇಶ್, ಬಿ ಸುರೇಶ್‌, ಕೇಸರಿ ಹರವೂ, ಕೆ ವಿ ನಾರಾಯಣ, ರಹಮತ್‌ ತರೀಕೆರೆ, ನಾ ದಿವಾಕರ, ಎಚ್‌ ಎಸ್‌ ರಾಘವೇಂದ್ರ ರಾವ್‌, ಸುನಂದಾ ಕಡಮೆ, ನಟರಾಜ್‌ ಬೂದಾಳ್‌, ಆರ್‌ ಜಿ ಹಳ್ಳಿ ನಾಗರಾಜ, ಎನ್‌ ಎಸ್‌ ಶಂಕರ, ಬಾನು ಮಷ್ತಾಕ್‌, ಪ್ರೊ ಕಾಳೇಗೌಡ ನಾಗವಾರ ಮತ್ತಿತರರು ಸಹಿ ಮಾಡಿದ್ದಾರೆ.

Read More
Next Story