ಕೇಂದ್ರದಲ್ಲಿ INDIA  ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು 8,500 ರೂ!  ವದಂತಿ ನಂಬಿ ʻಐಪಿಪಿಬಿʼ ಖಾತೆಗೆ ಮುಗಿಬಿದ್ದ ಮಹಿಳೆಯರು
x
ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಮಹಿಳೆಯರು

ಕೇಂದ್ರದಲ್ಲಿ INDIA ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು 8,500 ರೂ! ವದಂತಿ ನಂಬಿ ʻಐಪಿಪಿಬಿʼ ಖಾತೆಗೆ ಮುಗಿಬಿದ್ದ ಮಹಿಳೆಯರು

ಪ್ರತಿ ತಿಂಗಳು ಮಹಿಳೆಯರ ಖಾತೆಗೆ 8,500 ರೂಪಾಯಿ ಜಮೆ ಆಗಲಿದೆ ಎನ್ನುವುದನ್ನು ನಂಬಿ ಮಹಿಳೆಯರು ಗುಂಪು ಗುಂಪಾಗಿ ಅಂಚೆ ಕಚೇರಿಗೆ ಆಗಮಿಸುತ್ತಿದ್ದಾರೆ. ಬೆಳಿಗ್ಗೆಯಿಂದಲೇ ಅಂಚೆ ಕಚೇರಿಗೆ ಆಗಮಿಸುತ್ತಿರುವ ಸಾವಿರಾರು ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಡಿಜಿಟಲ್ ಖಾತೆ ತೆರೆಯುತ್ತಿದ್ದಾರೆ..


ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ಸಾರ್ವಜನಿಕರು ಬೆಂಗಳೂರಿನ ಪ್ರಧಾನ ಅಂಚೆ ಕಚೇರಿ (ಜಿಪಿಒ)ಯ ಮುಂದೆ ಗುಂಪು ಸೇರುತ್ತಿದ್ದು, ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಡಿಜಿಟಲ್ ಖಾತೆ ತೆರೆಯುವುದಕ್ಕೆ ಮುಗಿಬೀಳುತ್ತಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಪ್ರತಿ ತಿಂಗಳೂ ಅಂಚೆ ಕಚೇರಿಯಲ್ಲಿರುವ ಮಹಿಳೆಯರ ಖಾತೆಗೆ 8,500 ರೂಪಾಯಿ ಜಮೆ ಆಗಲಿದೆ ಎನ್ನುವ ವದಂತಿಯಿಂದ ಮಹಿಳೆಯರು ಗುಂಪು ಗುಂಪಾಗಿ ಅಂಚೆ ಕಚೇರಿಗೆ ಆಗಮಿಸುತ್ತಿದ್ದಾರೆ. ಬೆಂಗಳೂರಿನ ಪ್ರಧಾನ ಅಂಚೆ ಕಚೇರಿ (ಜಿಪಿಒ)ದಲ್ಲಿ ನಿತ್ಯವೂ ಸಾವಿರಾರು ಮಹಿಳೆಯರು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಅಂಚೆ ಖಾತೆ ಮಾಡಿಸಿಕೊಳ್ಳುತ್ತಿದ್ದಾರೆ.

ಖಾತೆ ಏಕೆ ಬೇಕು ಎನ್ನುವುದೇ ಗೊತ್ತಿಲ್ಲ!

ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಡಿಜಿಟಲ್ ಖಾತೆಯನ್ನು ಏಕೆ ಮಾಡಿಸಬೇಕು ಹಾಗೂ ಇದರಿಂದ ಆಗುವ ಲಾಭವೇನು ಎನ್ನುವ ವಿಷಯವನ್ನೇ ತಿಳಿಯದೆ ಮಹಿಳೆಯರು ಅಂಚೆ ಖಾತೆ ತೆರೆಯಲು ಬರುತ್ತಿದ್ದಾರೆ. ಐಪಿಪಿಬಿ ಮಾಡಿಸಲು ಬರುವ ಮಹಿಳೆಯರನ್ನು ಪ್ರಶ್ನಿಸಿದರೆ, “ನಮಗೆ ಗೊತ್ತಿಲ್ಲ, ಪಕ್ಕದ ಮನೆಯವರು ಮಾಡಿಸಿದ್ದಾರೆ. ಅದಕ್ಕೆ ನಾವು ಬಂದಿದ್ದೇವೆ. ಪ್ರತಿ ತಿಂಗಳೂ ಖಾತೆಗೆ 8,500 ರೂಪಾಯಿ ಜಮೆ ಆಗಲಿದೆ ಎಂದಿದ್ದಾರೆ” ಎಂದು ಮುಗ್ಧವಾಗಿ ಉತ್ತರಿಸುತ್ತಿದ್ದಾರೆ.

ದುಡ್ಡು ಬರುತ್ತೆ ಅಂತ ಹೇಳಿದ್ರು; ಅದಕ್ಕೆ ಬಂದ್ವಿ

ʻಅಂಚೆ ಇಲಾಖೆಯಲ್ಲಿ ಖಾತೆ ತೆಗೆದರೆ ಖಾತೆಗೆ ಹಣ ಬರುತ್ತೆ ಅಂತ ಪಕ್ಕದ ಮನೆಯವರು ಹೇಳಿದ್ರು ಅದಕ್ಕೆ ಬಂದು ಖಾತೆ ಮಾಡಿಸಿದೆʼ ಎಂದು ಆನೆಪಾಳ್ಯದ ನಿವಾಸಿ ಗೀತಾ ಅವರು ಹೇಳಿದರು.

ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಲ್ಲಿ 2000 ಸಾವಿರ ರೂಪಾಯಿ ಖಾತೆಗೆ ಹಾಕುವಂತೆ ಮುಂದೆ 8,500 ರೂಪಾಯಿ ಹಾಕುತ್ತಾರಂತೆ. ಹಣ ಹಾಕುತ್ತಾರೋ ಇಲ್ಲವೋ ಗೊತ್ತಿಲ್ಲ ಒಂದು ಖಾತೆ ಇರಲಿ ಎಂದು ಖಾತೆ ಪ್ರಾರಂಭಿಸಿದ್ದೇನೆʼ ಎಂದು ನಕ್ಕರು.

`ಗೃಹಲಕ್ಷ್ಮಿ ಯೋಜನೆಯ ಮೂಲಕ 2000 ಸಾವಿರ ರೂಪಾಯಿ ಹಾಕುತ್ತಿದ್ದಾರೆ. ಅದೇ ರೀತಿ ಮುಂದೆ ಪ್ರತಿ ತಿಂಗಳು 8,500 ಸಾವಿರ ರೂಪಾಯಿ ಖಾತೆಗೆ ಹಾಕುತ್ತಾರೆ. ಅದಕ್ಕೆ ಈಗಲೇ ಅಂಚೆ ಇಲಾಖೆಯಲ್ಲಿ ಖಾತೆ ತೆರೆದಿದ್ದೇನೆʼ ಎಂದು ಫಾತಿಮಾ ಎನ್ನುವವರು ಹೇಳಿದರು.

ಹಿನ್ನೆಲೆ ಏನು ?

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಭಾಷಣವೊಂದರಲ್ಲಿ ಇಂಡಿಯಾ ಮೈತ್ರಿಕೂಟವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳೂ 8,500 ರೂಪಾಯಿಯಂತೆ ವರ್ಷಕ್ಕೆ 1 ಲಕ್ಷ ರೂಪಾಯಿ ಮೊತ್ತವನ್ನು ಮಹಿಳೆಯರ ಖಾತೆಗೆ ವರ್ಗಾಯಿಸುವುದಾಗಿ ಹೇಳಿದ್ದರು. ಆದರೆ, ಈ ಯೋಜನೆಯ ಹಣ ಬರಬೇಕಾದರೆ ಅಂಚೆ ಇಲಾಖೆಯಲ್ಲಿ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಡಿಜಿಟಲ್ ಖಾತೆ ಇರಬೇಕು ಎನ್ನುವ ವದಂತಿ ಹಬ್ಬಿದ್ದು, ಜನ ಅಂಚೆ ಕಚೇರಿಗೆ ಮುಗಿಬೀಳುತ್ತಿದ್ದಾರೆ.

ಐಪಿಪಿಬಿ ಯೋಜನೆ ಎಂದರೇನು ?

ಅಂಚೆ ಇಲಾಖೆಯು ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಡಿಜಿಟಲ್ ಖಾತೆ ಯೋಜನೆಯನ್ನು ಎರಡು ವರ್ಷಗಳ ಹಿಂದೆಯೇ ಪರಿಚಯಿಸಿದೆ. ಇದು ಉಳಿತಾಯ ಖಾತೆಯಾಗಿದೆ. ಕೇವಲ 200 ರೂಪಾಯಿ ಪಾವತಿ ಮಾಡುವ ಮೂಲಕ ಜನ ಈ ಖಾತೆಯನ್ನು ತೆರೆಯಬಹುದಾಗಿದೆ. ಆದರೆ, ಇದೀಗ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಅಂಚೆ ಇಲಾಖೆಯ ವಿವಿಧ ವಿಭಾಗಗಳ ಸಿಬ್ಬಂದಿಯನ್ನು ಬಳಸಿಕೊಂಡು ಖಾತೆ ತೆರೆಯಲಾಗುತ್ತಿದೆ. ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ 15 ಕೌಂಟರ್‌ಗಳನ್ನು ತೆರೆಯಲಾಗಿದ್ದು, ಈ ವರ್ಷ ಮೇ 6ರಿಂದ ಮೇ 29ರವರೆಗೆ ಜಿಪಿಒವೊಂದರಲ್ಲೇ 8,604 ಖಾತೆಗಳ ಸೇರ್ಪಡೆಯಾಗಿದೆ ಎಂದು ಅಂಚೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆಯರನ್ನು ನಿಯಂತ್ರಿಸಲು ಅಂಚೆ ಇಲಾಖೆ ಸಿಬ್ಬಂದಿ, ಪೊಲೀಸರ ಪರದಾಟ!

ಐಪಿಪಿಬಿಗಾಗಿ ಸಾವಿರಾರು ಜನ ಅಂಚೆ ಕಚೇರಿಗೆ ಬರುತ್ತಿದ್ದು, ಮಹಿಳೆಯರನ್ನು ನಿಯಂತ್ರಿಸಲು ಜನ ಪರದಾಡುತ್ತಿದ್ದಾರೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಬೆಂಗಳೂರಿನ ಯಾವುದೇ ಅಂಚೆ ಕಚೇರಿಗೆ ಹೋದರು ಐಪಿಪಿಬಿ ಖಾತೆ ತೆಗೆಯಲು ಅವಕಾಶವಿದೆ. ಒಂದು ತಿಂಗಳಿನಿಂದಲೂ ಸಾವಿರಾರು ಜನ ಮಹಿಳೆಯರು ಬರುತ್ತಿದ್ದು, ಇದೀಗ ಟೋಕನ್ ವ್ಯವಸ್ಥೆ ಮಾಡಲಾಗಿದೆ. ಈ ಖಾತೆಯನ್ನು ಮಾಡಿಸಲು ಯಾವುದೇ ನಿಗದಿತ ದಿನಾಂಕ ಇಲ್ಲ ಎಂದು ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಹದೇಶ ಅವರು ತಿಳಿಸಿದ್ದಾರೆ.


ಅಂಚೆ ಇಲಾಖೆಯಿಂದ ಜಾಗೃತಿ

ಅಂಚೆ ಇಲಾಖೆಯಲ್ಲಿ ಮಹಿಳೆಯರು ಖಾತೆ ತೆರೆಯಲು ಮಹಿಳೆಯರು ಗುಂಪು ಗುಂಪಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯ ಅಧಿಕಾರಿಗಳು ಸಹ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಗ್ರಾಹಕರು IPPB ಖಾತೆಯನ್ನು ತೆರೆದರೆ ಅವರ ಖಾತೆಗೆ ಅಂಚೆ ಇಲಾಖೆಯಿಂದ ಹಣವನ್ನು ಹಾಕಲಾಗುವುದು ಎಂಬ ಸುಳ್ಳು ವದಂತಿಯು ಹಬ್ಬಿರುವುದರಿಂದ ಗುಂಪು ಗುಂಪಾಗಿ ಗ್ರಾಹಕರು IPPB ಖಾತೆ ತೆರೆಯಲು ಈ ಕಚೇರಿಗೆ ಬರುತ್ತಿದ್ದಾರೆ. ಆದರೆ, ಇದು ಸತ್ಯಕ್ಕೆ ದೂರವಾದ ವಿಚಾರವಾಗಿದ್ದು ಅಂಚೆ ಇಲಾಖೆಯಿಂದ IPPB ಖಾತೆಗೆ ಯಾವ ಹಣವನ್ನು ಜಮಾಮಾಡಲಾಗುತ್ತಿಲ್ಲ. ಗ್ರಾಹಕರ ಅನುಕೂಲಕ್ಕಾಗಿ ಹಾಗೂ ಗ್ರಾಹಕರ ಇಚ್ಛೆಯಂತೆ ಅಂಚೆ ಕಚೇರಿಯಿಂದ IPPB ಖಾತೆಯನ್ನು ತೆರೆಯಲಾಗುವುದು. ಈ ಖಾತೆ ತೆರೆಯಲು ಕನಿಷ್ಠ ಜಮಾ ಮೊತ್ತ 200 ರೂಪಾಯಿ ಆಗಿದೆ. IPPB ಪ್ರೀಮಿಯಂ ಖಾತೆಯ ಮೂಲಕ ಗ್ರಾಹಕರು ವಿವಿಧ ಪ್ರಾಧಿಕಾರಗಳಿಗೆ ಹಣ ಪಾವತಿ ಮಾಡಬಹುದು ಹಾಗೂ IPPB ಖಾತೆಗೆ ಆಧಾರ್ ಕಾರ್ಡ್ ಜೋಡಣೆ ಮಾಡುವ ಮೂಲಕ ನೇರ ಫಲಾನುಭವಿ ಖಾತೆಗೆ ಹಣ ವರ್ಗಾವಣೆ (DBT) ಮಾಡುವ ಸೇವೆಯನ್ನು ಪಡೆಯಬಹುದು ಎಂದು ಅಂಚೆ ಇಲಾಖೆಯ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.


Read More
Next Story