Dengue Outbreak | ರಾಜ್ಯಾದ್ಯಂತ ವ್ಯಾಪಿಸಿದ ಡೆಂಗ್ಯೂ; 23 ಜಿಲ್ಲೆಗಳಲ್ಲಿ ಹೊಸ ಪ್ರಕರಣ ಪತ್ತೆ
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಕಳೆದ 24 ತಾಸಿನಲ್ಲಿಯೇ ರಾಜ್ಯಾದ್ಯಂತ ಮೂರೂವರೆ ಸಾವಿರದಷ್ಟು ಪರೀಕ್ಷೆಗಳನ್ನು ನಡೆಸಿದ್ದು, ಸುಮಾರು ಐದು ನೂರು ಹೊಸ ಪ್ರಕರಣ ಪತ್ತೆಯಾಗಿವೆ.
ಆ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು ದೃಢ ಪ್ರಕರಣಗಳ ಸಂಖ್ಯೆ 14,223ಕ್ಕೆ ಏರಿದೆ. ಆ ಪೈಕಿ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿಯೇ ಬರೋಬ್ಬರಿ 6382 ಪ್ರಕರಣ ದೃಢಪಟ್ಟಿವೆ.
ಭಾನುವಾರ ಪತ್ತೆಯಾಗಿರುವ 469 ಹೊಸ ಡೆಂಗ್ಯೂ ಪ್ರಕರಣಗಳೂ ಸೇರಿದಂತೆ ರಾಜ್ಯದಲ್ಲಿ ಈ ವರೆಗೆ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3428 ಕ್ಕೆ ಏರಿಕೆ ಕಂಡಿದೆ. ಹೊಸದಾಗಿ 23 ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಸೋಂಕು ರಾಜ್ಯವ್ಯಾಪಿ ವ್ಯಾಪಿಸಿರುವ ಅಪಾಯ ಎದುರಾಗಿದೆ.
ಭಾನುವಾರ ಒಂದೇ ದಿನ ಬಿಬಿಎಂಪಿ ವ್ಯಾಪ್ತಿಯೊಂದರಲ್ಲೇ 1749 ಪರೀಕ್ಷೆಗಳನ್ನು ನಡೆಸಲಾಗಿದ್ದು, 292 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.
ಅಲ್ಲದೆ ಅಂದು, ಕಲಬುರ್ಗಿಯಲ್ಲಿ 20, ಉಡುಪಿಯಲ್ಲಿ 17, ಮೈಸೂರಿನಲ್ಲಿ 15, ರಾಮನಗರದಲ್ಲಿ 14, ಧಾರವಾಡದಲ್ಲಿ 12, ಬಳ್ಳಾರಿಯಲ್ಲಿ 11, ಚಿತ್ರದುರ್ಗ, ತುಮಕೂರು ಹಾಗೂ ಶಿವಮೊಗ್ಗದಲ್ಲಿ ತಲಾ 10 ಹೊಸ ಪ್ರಕರಣಗಳು ದೃಢಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಪ್ರಕರಣಗಳು ದೃಢಪಟ್ಟಿವೆ.
ಆದರೆ ಗಮನಿಸಬೇಕಾದ ಸಂಗತಿ ಎಂದರೆ, ರಾಜ್ಯದ 23 ಜಿಲ್ಲೆಗಳಲ್ಲಿ ಹೊಸದಾಗಿ ದೃಢ ಪ್ರಕರಣಗಳು ವರದಿಯಾಗಿವೆ.
ಈ ನಡುವೆ, ಸೋಂಕಿತರ ಪೈಕಿ 14 ಮಂದಿ ರಾಜ್ಯದ ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 562 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ, 2866 ಮಂದಿ ಮನೆ ಆರೈಕೆ ಪಡೆಯುತ್ತಿದ್ದಾರೆ.