Dengue Outbreak | ಸೋಂಕಿತ ವ್ಯಕ್ತಿಗಳ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ಸೂಚನೆ
x
ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ಸೋಂಕಿತ ವ್ಯಕ್ತಿಗಳ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Dengue Outbreak | ಸೋಂಕಿತ ವ್ಯಕ್ತಿಗಳ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ಸೂಚನೆ

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಬೆಂಗಳೂರಿನ ಯಲಹಂಕದ ಡೆಂಗ್ಯೂ ಹಾಟ್ ಸ್ಪಾಟ್‌ಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.


Click the Play button to hear this message in audio format

ರಾಜ್ಯದಲ್ಲಿ ಡೆಂಗ್ಯೂ ಸೋಂಕು ಸಮುದಾಯದ ಮಟ್ಟಕ್ಕೆ ಹರಡಿರುವ ಹಿನ್ನೆಲೆಯಲ್ಲಿ ತಡವಾಗಿ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ, ಇದೀಗ ಸೋಂಕಿತರ ಮೇಲೆ 14 ದಿನಗಳ ಕಾಲ ನಿಗಾ ವಹಿಸುವಂತೆ ಸೂಚನೆ ನೀಡಿದೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಅಧಿಕಾರಿಗಳಿಗೆ ಶುಕ್ರವಾರ ಈ ಸೂಚನೆ ನೀಡಿದ್ದು, ಡೆಂಗ್ಯೂ ಸೋಂಕಿತರ ಮೇಲೆ ನಿಗಾ ಇಡುವ ಮೂಲಕ ರೋಗ ಹತೋಟಿಗೆ ಕ್ರಮವಹಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಅವರು ಶುಕ್ರವಾರ ಯಲಹಂಕದ ಡೆಂಗ್ಯೂ ಹಾಟ್ ಸ್ಪಾಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಲಹಂಕ ವಿಧಾನಸಭಾ ಕ್ಷೇತ್ರದ ಸಿಂಗನಾಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಡೆಂಗ್ಯೂ ತಡೆ ಜಾಗೃತಿ ಜಾಥಾದಲ್ಲಿ ಸಚಿವರು ಭಾಗವಹಿಸಿದ್ದರು. ಶಾಲೆಗಳಿಗೂ ತೆರಳಿ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಕೆಲವು ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಇಳಿಮುಖವಾಗಿವೆ. ರಾಜ್ಯದ ಒಟ್ಟು ಡೆಂಗ್ಯೂ ಪ್ರಕರಣಗಳಲ್ಲಿ ಬೆಂಗಳೂರಿನ ಪಾಲು ಶೇ.50 ರಷ್ಟಿದೆ. ಆದ್ದರಿಂದ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಗಮನಹರಿಸಲು ಸೂಚಿಸಿದ್ದೇನೆ. ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದು, ಮುಂದಿನ ತಿಂಗಳಿನಿಂದ ಪ್ರಕರಣಗಳಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

10 ಜಿಲ್ಲೆಗಳಲ್ಲಿ ಡೆಂಗ್ಯೂ ಹಾಟ್ ಸ್ಪಾಟ್‌ಗಳಿಗೆ ಉಪನಿರ್ದೇಶಕ ಮಟ್ಟದ ಅಧಿಕಾರಿಗಳನ್ನು ಕಳುಹಿಸಲಾಗುತ್ತಿದೆ. ಜುಲೈ 29ರಿಂದ ಎರಡು ದಿನಗಳ ಕಾಲ ಹಾಟ್‌ಸ್ಪಾಟ್‌ಗಳಿಗೆ ಅಧಿಕಾರಿಗಳು ಭೇಟಿ ನೀಡಿ ಡೆಂಗ್ಯೂ ನಿಯಂತ್ರಣ ಕ್ರಮಗಳ ಅನುಷ್ಠಾನಕ್ಕೆ ವಿಶೇಷ ಗಮನ ಹರಿಸಲಿದ್ದಾರೆ. ಒಂದು ಪ್ರದೇಶದಲ್ಲಿ ಎರಡಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾದರೆ ಡೆಂಗ್ಯೂ ಹಾಟ್‌ಸ್ಪಾಟ್ ಎಂದು ಗುರುತಿಸಲಾಗುತ್ತದೆ. ಹೆಚ್ಚಿನ ಪ್ರಕರಣಗಳು ಕಂಡು ಬಂದಲ್ಲಿ ಜ್ವರ ಚಿಕಿತ್ಸಾಲಯಗಳನ್ನು ತೆರೆದು ಎಲ್ಲ ಜ್ವರ ಬಂದವರನ್ನು ಡೆಂಗ್ಯೂ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅವರು ತಿಳಿಸಿದರು.

ನಿಫಾ ವೈರಸ್‌ ಬಗ್ಗೆ ವಿವರ ನೀಡಿದ ಅವರು, ರಾಜ್ಯದಲ್ಲಿ ನಿಫಾ ವೈರಸ್ ಪ್ರಕರಣಗಳು ಪತ್ತೆಯಾಗಿಲ್ಲ. ಕೇರಳದಲ್ಲಿ ಈ ವೈರಸ್‌ ಪತ್ತೆಯಾಗಿರುವುದರಿಂದ ನೆರೆಯ ರಾಜ್ಯದ ಗಡಿ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ. ರಾಜ್ಯದಿಂದ ಕೇರಳಕ್ಕೆ ತೆರಳುವವರು ಅಗತ್ಯವಿದ್ದರೆ ಮಾತ್ರ ಪ್ರಯಾಣಿಸಿ, ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದೇವೆ. ರಾಜ್ಯದಲ್ಲಿ ಇತ್ತೀಚೆಗಷ್ಟೇ ಝಿಕಾ ವೈರಸ್ ಪತ್ತೆಯಾಗಿದೆ. ಅದು ಅಪಾಯಕಾರಿಯಲ್ಲ. ಆದರೆ ನಿಫಾ ಬಗ್ಗೆ ಎಚ್ಚರಿಕೆ ಅಗತ್ಯ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಿದೆ ಎಂದು ಅವರು ತಿಳಿಸಿದರು.

ಡೆಂಗ್ಯೂ ತಡೆ ಜಾಗೃತಿ ಜಾಥಾದಲ್ಲಿ ಭಾಗವಹಿಸಿರುವ ಬಗ್ಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಂದು ಯಲಹಂಕ ವಿಧಾನಸಭಾ ಕ್ಷೇತ್ರದ ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಡೆಂಗ್ಯೂ ತಡೆ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದೆ. ರ್ಯಾಲಿ ಸಂದರ್ಭದಲ್ಲಿ ಮನೆಗಳ ಸುತ್ತ ನೀರು ನಿಲ್ಲುವುದನ್ನು ತಡೆಯುವುದು ಮತ್ತು ಟ್ಯಾಂಕ್‌ಗಳು, ಸಿಂಟೆಕ್ಸ್ ಕಂಟೇನರ್‌ಗಳು ಮತ್ತು ಡ್ರಮ್‌ಗಳಲ್ಲಿ ಸ್ವಚ್ಛತೆ ಕಾಪಾಡುವ ಮಹತ್ವವನ್ನು ನಾನು ಒತ್ತಿ ಹೇಳಿದ್ದೇನೆ. ಡೆಂಗ್ಯೂ ಹರಡುವುದನ್ನು ತಡೆಯುವಲ್ಲಿ ಈ ಕ್ರಮಗಳು ಬಹಳ ಅಗತ್ಯವಾಗಿದೆ. ಜ್ವರದ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ಆರೈಕೆಯನ್ನು ಪಡೆಯಲು ಮತ್ತು ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗುವಂತೆ ಎಲ್ಲರಿಗೂ ಒತ್ತಾಯಿಸಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.

ಆರೋಗ್ಯ ಇಲಾಖೆಯು ಹಂಚಿಕೊಂಡ ಬುಲೆಟಿನ್ ಪ್ರಕಾರ ಜನವರಿ 1 ರಿಂದ ಜುಲೈ 25 ರವರೆಗೆ 16,038 ಜನರಿಗೆ ಡೆಂಗ್ಯೂ ಪಾಸಿಟಿವ್ ಬಂದಿದೆ. ಇವರಲ್ಲಿ 12,709 ಜನರು ಚೇತರಿಸಿಕೊಂಡಿದ್ದಾರೆ. 3,319 ಸಕ್ರಿಯ ಪ್ರಕರಣಗಳು, 2,655 ಜನರು ಮನೆಯ ಆರೈಕೆಯಲ್ಲಿದ್ದಾರೆ ಮತ್ತು 641 ಆಸ್ಪತ್ರೆಗೆ ದಾಖಲಾಗಿದ್ದಾರೆ. ಈವರೆಗೆ ಈ ಡೆಂಗ್ಯೂ ಜ್ವರಕ್ಕೆ ರಾಜ್ಯದಲ್ಲಿ 10 ಜನರನ್ನು ಬಲಿ ತೆಗೆದುಕೊಂಡಿದೆ.

Read More
Next Story