Dengue Outbreak | ಡೆಂಗಿ ಪ್ರಕರಣ: ಅಮಿಕಸ್ ಕ್ಯೂರಿ ನೇಮಿಸಿದ ಹೈಕೋರ್ಟ್‌
x
ಹೈಕೋರ್ಟ್

Dengue Outbreak | ಡೆಂಗಿ ಪ್ರಕರಣ: ಅಮಿಕಸ್ ಕ್ಯೂರಿ ನೇಮಿಸಿದ ಹೈಕೋರ್ಟ್‌

ಡೆಂಗ್ಯೂ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಆಧರಿಸಿ ಹೈಕೋರ್ಟ್ ದಾಖಲಿಸಿಕೊಂಡಿರುವ ಈ ಸು-ಮೊಟೊ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.


Click the Play button to hear this message in audio format

ರಾಜ್ಯದಾದ್ಯಂತ ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಡೆಂಗ್ಯೂ ಜ್ವರವನ್ನು ತಡೆಯಲು ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡುವ ನಿಟ್ಟಿನಲ್ಲಿ ದಾಖಲಿಸಿಕೊಂಡಿರುವ ಸು-ಮೊಟೊ(ಸ್ವಯಂ ಪ್ರೇರಿತ) ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಕುರಿತ ಪ್ರಕರಣದಲ್ಲಿ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ (ನ್ಯಾಯಾಲಯಕ್ಕೆ ಸಹಕರಿಸುವ) ಹೈಕೋರ್ಟ್ ನೇಮಿಸಿದೆ.

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಆಧರಿಸಿ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠವು, 'ಅರ್ಜಿ ಕುರಿತು ಹೈಕೋರ್ಟ್‌ಗೆ ಅಗತ್ಯ ಸಲಹೆ ಹಾಗೂ ನೆರವು ನೀಡಲು ಕೆ.ಎನ್‌.ಫಣೀಂದ್ರ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸಲಾಗುತ್ತಿದೆ' ಎಂದು ತಿಳಿಸಿತು. 'ಅರ್ಜಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಫಣೀಂದ್ರ ಅವರಿಗೆ ಹಸ್ತಾಂತರಿಸಬೇಕು' ಎಂದು ರಿಜಿಸ್ಟ್ರಿಗೆ ಸೂಚಿಸಿ ವಿಚಾರಣೆಯನ್ನು ಇದೇ 31ಕ್ಕೆ ಮುಂದೂಡಿತು.

'ಈ ಹಿಂದಿನ ವಿಚಾರಣೆ ವೇಳೆ ನ್ಯಾಯಪೀಠವು, 'ಬೆಂಗಳೂರು ಮಹಾನಗರವೂ ಸೇರಿದಂತೆ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಿ ಡೆಂಗ್ಯೂ ಹರಡದಂತೆ ತಡೆಯಲು, ರೋಗಿಗಳಿಗೆ ಒದಗಿಸಿರುವ ವೈದ್ಯಕೀಯ ಸೌಲಭ್ಯ, ಜ್ವರದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೈಗೊಂಡಿರುವ ಕ್ರಮಗಳೇನು ಎಂಬುದನ್ನು ತಿಳಿಸಿ' ಎಂದು ರಾಜ್ಯ ಸರ್ಕಾರ ಮತ್ತು ಸಕ್ಷಮ ಪ್ರಾಧಿಕಾರಗಳಿಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸೂಚಿಸಿತ್ತು.

15 ಸಾವಿರ ಗಡಿ ದಾಟಿದ ಪ್ರಕರಣಗಳು

ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಡೆಂಗ್ಯೂ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆ ಕಂಡಿದ್ದು, ಒಟ್ಟು ದೃಢಪಟ್ಟ ಪ್ರಕರಣಗಳ ಪ್ರಮಾಣ 15 ಸಾವಿರದ ಗಡಿ ದಾಟಿದೆ. ಗ್ರಾಮೀಣ ಭಾಗದಲ್ಲಿ ಜ್ವರ, ಮೈಕೈ ನೋವು, ತಲೆನೋವು, ವಾಂತಿ ಪ್ರಕರಣಗಳು ಸಾಂಕ್ರಾಮಿಕವಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಡೆಂಗ್ಯೂ ಲಕ್ಷಣಗಳಿದ್ದರೂ ಅವರಿಗೆ ಡೆಂಗ್ಯೂ ಪರೀಕ್ಷೆ ನಡೆಸದೆ ಸಾಮಾನ್ಯ ನೆಗಡಿ-ಜ್ವರದ ಮಾತ್ರೆಗಳನ್ನು ಕೊಟ್ಟು ಸಾಗಹಾಕಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆದಾಗ್ಯೂ ತೀರಾ ಅಪರೂಪದ ಗಂಭೀರ ಸ್ಥಿತಿಯ ರೋಗಿಗಳಿಗೆ ಮಾತ್ರ ಡೆಂಗ್ಯೂ ಪರೀಕ್ಷೆ ನಡೆಸುತ್ತಿದ್ದರೂ ಒಟ್ಟಾರೆ ಪ್ರಕರಣಗಳು ಹದಿನೈದು ಸಾವಿರಕ್ಕೂ ಅಧಿಕವಾಗಿರುವುದು ಆತಂಕಕಾರಿ ಸಂಗತಿಯಾಗಿದ್ದು, ಸರ್ಕಾರದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ ಎಂಬ ಮಾತುಗಳೂ ಇವೆ.

ಆರೋಗ್ಯ ಇಲಾಖೆಯ ಅಧಿಕೃತ ಬುಲೆಟಿನ್‌ ಪ್ರಕಾರ, ಬುಧವಾರ(ಜು.24) ರಾಜ್ಯದಲ್ಲಿ 443 ಹೊಸ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಈವರೆಗೆ ಧೃಢಪಟ್ಟ ಪ್ರಕರಣಗಳ ಸಂಖ್ಯೆ 15,544 ಕ್ಕೆ ಏರಿಕೆ ಕಂಡಿದೆ. ಈವರೆಗೆ ಒಟ್ಟು ಹತ್ತು ಸಾವು ಪ್ರಕರಣಗಳು ವರದಿಯಾಗಿದ್ದು, ಐದು ಮಂದಿ ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 6995 ಪ್ರಕರಣಗಳು ದೃಢಪಟ್ಟಿದ್ದು, ಮೂವರು ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಹಾವೇರಿ ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಕರಣಗಳು ದೃಢಪಟ್ಟಿವೆ.

ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಮೆಗ್ಗಾನ್‌ ಆಸ್ಪತ್ರೆಯ ನರ್ಸಿಂಗ್‌ ಆಫೀಸರ್‌ ಆಗಿದ್ದ ಹೇಮಾ ಎಂಬುವರು ಬುಧವಾರ ಡೆಂಗ್ಯೂ ಸೋಂಕಿಗೆ ಬಲಿಯಾಗಿದ್ದಾರೆ. ಎರಡು ವಾರಗಳ ಹಿಂದೆ ಸರ್ಕಾರಿ ವೈದ್ಯರೊಬ್ಬರು ಡೆಂಗ್ಯೂ ಸೋಂಕಿಗೆ ಬಲಿಯಾಗಿದ್ದರು.

Read More
Next Story