Dengue Outbreak | ಸರ್ಕಾರದ ವೈಫಲ್ಯ: ಸು- ಮೊಟೋ ಕೇಸು ದಾಖಲಿಸಿ ವಿಚಾರಣೆ ಆರಂಭಿಸಿದ ಹೈಕೋರ್ಟ್
x

Dengue Outbreak | ಸರ್ಕಾರದ ವೈಫಲ್ಯ: ಸು- ಮೊಟೋ ಕೇಸು ದಾಖಲಿಸಿ ವಿಚಾರಣೆ ಆರಂಭಿಸಿದ ಹೈಕೋರ್ಟ್

ರಾಜ್ಯದಲ್ಲಿ ಡೆಂಗ್ಯೂ ಸಾಂಕ್ರಾಮಿಕ ಉಲ್ಬಣಗೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಹೈಕೋರ್ಟ್‌, ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಓದುಗರ ಪತ್ರವನ್ನೇ ಆಧಾರವಾಗಿಟ್ಟುಕೊಂಡು ಸರ್ಕಾರದ ವಿರುದ್ಧ ಸು-ಮೊಟೋ ಪ್ರಕರಣ ದಾಖಲಿಸಿ ವಿಚಾರಣೆ ಆರಂಭಿಸಿದೆ


ರಾಜ್ಯದಲ್ಲಿ ಉಲ್ಬಣಿಸಿರುವ ಡೆಂಗ್ಯೂ ಸೋಂಕು ನಿಯಂತ್ರಣದ ವಿಷಯದಲ್ಲಿ ಸರ್ಕಾರದ ವೈಫಲ್ಯವನ್ನು ಮನಗಂಡಿರುವ ರಾಜ್ಯ ಹೈಕೋರ್ಟ್, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಬುಧವಾರ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ದಾಖಲಿಸಿಕೊಂಡು ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ.

“ಡೆಂಗಿ ಜ್ವರ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ವೈದ್ಯಕೀಯ ತುರ್ತುಪರಿಸ್ಥಿತಿ ಘೋಷಿಸುವ ಅಗತ್ಯವಿದೆ ಎಂದು ʼಡೆಕ್ಕನ್ ಹೆರಾಲ್ಡ್ʼ ದಿನಪತ್ರಿಕೆಯಲ್ಲಿ ಮಂಗಳವಾರ(ಜು.9) ರಾಯಚೂರು ಮೂಲದ ಎಚ್ ಕೆ ವಿಜಯಕುಮಾರ್ ಎಂಬುವರು ಓದುಗರ ಪತ್ರ ವಿಭಾಗದಲ್ಲಿ ಬರೆದಿರುವುದನ್ನು ಆಧರಿಸಿ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಲು ಆದೇಶಿಸಲಾಗಿದೆ” ಎಂದು ಮುಖ್ಯನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ, ಮುಕ್ತ ಕಲಾಪದಲ್ಲಿ ತಿಳಿಸಿದೆ.

ಇದೇ ವೇಳೆ ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ತುರ್ತು ನೊಟೀಸ್ ಜಾರಿಮಾಡಲು ಮುಖ್ಯನ್ಯಾಯಮೂರ್ತಿಗಳು ಆದೇಶಿಸಿದರು.

“ಉತ್ತಮ ವಾತಾವರಣದಲ್ಲಿ ಬದುಕುವುದು ಸಂವಿಧಾನದ 21ನೇ ವಿಧಿಯಡಿ ನಾಗರಿಕರ ಮೂಲಭೂತ ಹಕ್ಕು. ಬೆಂಗಳೂರು ನಗರವೂ ಸೇರಿದಂತೆ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಿ ಡೆಂಗ್ಯೂ ಹರಡದಂತೆ ತಡೆಯಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮ, ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯಾದ್ಯಂತ ಡೆಂಗ್ಯೂ ರೋಗಿಗಳಿಗೆ ಕಲ್ಪಿಸಿರುವ ವೈದ್ಯಕೀಯ ಸೌಲಭ್ಯ ವಿವರ, ಸಾರ್ವಜನಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ವಿವರ ನೀಡಬೇಕು” ಎಂದೂ ಆದೇಶದಲ್ಲಿ ತಾಕೀತು ಮಾಡಲಾಗಿದೆ.

ಈ ಕುರಿತ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಇದೇ ತಿಂಗಳ 23ರ ಗಡುವು ನೀಡಲಾಗಿದ್ದು, ಅದಕ್ಕೂ ಮುನ್ನ ಎಲ್ಲಾ ಮಾಹಿತಿಯನ್ನು ಸಲ್ಲಿಸಬೇಕು ಎಂದೂ ಖಡಕ್ ಸೂಚನೆ ನೀಡಲಾಗಿದೆ.

ಪ್ರತಿವಾದಿಗಳಾದ ಸಂಬಂಧಿತ ಇಲಾಖೆಗಳಿಗೆ ಅರ್ಜಿ ರವಾನೆಯಾಗುವವರೆಗೆ ಕಾಯಬಾರದು. ತತಕ್ಷಣವೇ ಕಾರ್ಯಪ್ರವೃತ್ತರಾಗಿ ಇಂದೇ ನೊಟೀಸ್ ತಲುಪುವಂತೆ ನೋಡಿಕೊಳ್ಳಬೇಕು ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಪೀಠ ಸೂಚಿಸಿತು.

ಸರ್ಕಾರದ ಪರವಾಗಿ ಕೋರ್ಟ್ ನೊಟೀಸ್ ಪಡೆಯುವುದಾಗಿ ಸರ್ಕಾರಿ ವಕೀಲ ಎಸ್ ಎಸ್ ಮಹೇಂದ್ರ ನ್ಯಾಯಪೀಠಕ್ಕೆ ತಿಳಿಸಿದರು. ಅಲ್ಲದೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ ಶೆಟ್ಟಿ, “ರಾಜ್ಯದ ಮುಖ್ಯಕಾರ್ಯದರ್ಶಿ ಹಾಗೂ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ನ್ಯಾಯಾಯದ ಆದೇಶವನ್ನು ತಂದು, ಮುಂದಿನ ವಿಚಾರಣೆ ವೇಳೆಗೆ ಅನುಪಾಲನಾ ವರದಿ ಸಲ್ಲಿಸಲಾಗುವುದು” ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

Read More
Next Story