Dengue Outbreak | ಡೆಂಗ್ಯೂ ನಿಯಂತ್ರಣಕ್ಕೆ ಟಾಸ್ಕಫೋರ್ಸ್‌ ರಚನೆಗೆ ಸಿಎಂ ಸೂಚನೆ: 7,547ಕ್ಕೆ ಏರಿದ ಪ್ರಕರಣ
x

Dengue Outbreak | ಡೆಂಗ್ಯೂ ನಿಯಂತ್ರಣಕ್ಕೆ ಟಾಸ್ಕಫೋರ್ಸ್‌ ರಚನೆಗೆ ಸಿಎಂ ಸೂಚನೆ: 7,547ಕ್ಕೆ ಏರಿದ ಪ್ರಕರಣ


ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಡೆಂಗ್ಯೂ ಪ್ರಕರಣ ಜನರಲ್ಲಿ ಭೀತಿ ಹುಟ್ಟಿಸಿದ್ದು, ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸಲು ಜಿಲ್ಲಾಮಟ್ಟದಲ್ಲಿ ಟಾಸ್ಕ್‌ಫೋರ್ಸ್‌ ರಚನೆ ಮಾಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸೂಚನೆ ನೀಡಿದ್ದಾರೆ.

ಡಿಸಿ-ಸಿಇಒ ಸಭೆಯಲ್ಲಿ ಡೆಂಗ್ಯೂ ತಡೆಗೆ ಅಗತ್ಯ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಈ ವೇಳೆ ಸೋಂಕು ನಿಯಂತ್ರಿಸಲು ರೋಗಿಗಳ ಆರೈಕೆ, ಮೃತರ ಕುಟುಂಬದವರಿಗೆ ನೈತಿಕವಾಗಿ ಬಲ ತುಂಬುವ ನಿಟ್ಟಿನಲ್ಲಿ ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಎರಡು ತಿಂಗಳ ಮಟ್ಟಿಗಾದರೂ ಜಿಲ್ಲಾ ಮಟ್ಟದಲ್ಲಿ ಟಾಸ್ಕ್‌ಫೋರ್ಸ್‌ ಅನ್ನು ಆರಂಭಿಸಬೇಕು. ಡೆಂಗ್ಯೂ ಉಲ್ಬಣವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಇದಕ್ಕೆ ಡಿಸಿ ಹಾಗೂ ಸಿಇಒಗಳೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಹಣದ ಕೊರತೆಯಂತೂ ಇಲ್ಲ. ವಿವೇಚನೆ ಬಳಸಿ ಹಣ ಬಳಕೆ ಮಾಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಆತಂಕಕಾರಿ ಪ್ರಮಾಣದಲ್ಲಿ ಏರಿಕೆ

ರಾಜ್ಯದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಬೆಂಗಳೂರು ನಗರವೊಂದರಲ್ಲೇ ಹೊಸದಾಗಿ 91 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ನಗರದಲ್ಲಿ ಡೆಂಗ್ಯೂ ಪಾಸಿಟಿವ್ ಸಂಖ್ಯೆ 2,174ಕ್ಕೆ ಏರಿಕೆ ಆಗಿದೆ. ಆತಂಕದ ವಿಷಯವೆಂದರೆ, 24 ಗಂಟೆಯಲ್ಲಿ 82 ಮಕ್ಕಳು ಡೆಂಗ್ಯೂ ಸೋಂಕಿಗೆ ತುತ್ತಾಗಿದ್ದಾರೆ.

ರಾಜ್ಯಾದ್ಯಂತ ಡೆಂಗ್ಯೂ ಹಾವಳಿ ಹೆಚ್ಚುತ್ತಿದ್ದು, ಮಂಗಳವಾರ ಕರ್ನಾಟಕದಲ್ಲಿ 185 ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಈ ವರ್ಷ ವರದಿಯಾದ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 7,547ಕ್ಕೆ ಏರಿಕೆಯಾಗಿದೆ. ಹೊಸದಾಗಿ ಪತ್ತೆಯಾಗಿರುವ ಡೆಂಗ್ಯೂ ಪೀಡಿತರ ಪೈಕಿ ವರ್ಷದೊಳಗಿನ ಒಂದು ಮಗು, ಒಂದರಿಂದ 18 ವರ್ಷದೊಳಗಿನ 81 ಮಂದಿ, 18 ವರ್ಷ ಮೇಲ್ಪಟ್ಟ 103 ಮಂದಿ ಮೃತಪಟ್ಟಿದ್ದಾರೆ.

ಶಿವಮೊಗ್ಗ, ದಾವಣಗೆರೆಯಲ್ಲಿ ಸಾವು

ರಾಜ್ಯದಲ್ಲಿ ಮಂಗಳವಾರ ಶಂಕಿತ ಡೆಂಗ್ಯೂಗೆ 9 ತಿಂಗಳ ಮಗು ಸೇರಿ ಮೂವರು ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆ ರಿಪ್ಪನ್‌ಪೇಟೆಯ ರಾಘವೇಂದ್ರ ನಾಯಕ್‌ ಪತ್ನಿ ರಶ್ಮಿ ಆರ್‌. ನಾಯಕ್‌ (42) ತೀವ್ರ ಜ್ವರದಿಂದ ಬಳಲುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಶಿರಾಳಕೊಪ್ಪದ ಕಾನಕೇರಿ ಬಡಾವಣೆಯ ಖಾನಿ ಜಾವೀದ್‌ ಅವರ ಪುತ್ರ 9 ತಿಂಗಳ ಕೌಸೇನ್‌ ವಾಂತಿ ಬೇಧಿ, ಜ್ವರದಿಂದ ಬಳಲುತ್ತಿದ್ದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 3 ದಿನಗಳ ಹಿಂದೆ ಮಗು ಮೃತಪಟ್ಟಿದೆ. ಜ್ವರದಿಂದ ಬಳಲುತ್ತಿದ್ದ ದಾವಣಗೆರೆ ಹರಿಹರದ ಕೇಶವನಗರ ನಿವಾಸಿ ಅರುಣ (22) ಮೃತಪಟ್ಟಿದ್ದು, ಡೆಂಗ್ಯೂವಿನಿಂದ ಸಾವು ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Read More
Next Story