ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈ ಬಿಡಲು ಆಗ್ರಹ; ಪರಿಸರವಾದಿಗಳಿಂದ ಸಿಎಂಗೆ ಮನವಿ
x
ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಕೈ ಬಿಡಲು ಒತ್ತಾಯಿಸಿ ʼಪರಿಸರಕ್ಕಾಗಿ ನಾವು ಸಂಘಟನೆʼಯು ಸಿಎಂ ಅವರಿಗೆ ಮನವಿ ಸಲ್ಲಿಸಿದೆ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈ ಬಿಡಲು ಆಗ್ರಹ; ಪರಿಸರವಾದಿಗಳಿಂದ ಸಿಎಂಗೆ ಮನವಿ


ಪಶ್ಚಿಮಘಟ್ಟದ ಅತ್ಯಂತ ಸೂಕ್ಷ್ಮ ಪ್ರದೇಶವಾದ ಶರಾವತಿ ನದಿ ಕಣಿವೆಯಲ್ಲಿ ಉದ್ದೇಶಿತ ಶರಾವತಿ ಮತ್ತು ವಾರಾಹಿ ಪಂಪ್ಡ್ಸ್ಟೋರೇಜ್ ಯೋಜನೆ ಕೈಬಿಡಬೇಕು ಎಂದು ʼಪರಿಸರಕ್ಕಾಗಿ ನಾವುʼ ಪರಿಸರ ಕಾರ್ಯಕರ್ತರ ರಾಜ್ಯ ಸಂಘಟನೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಈಗಾಗಲೇ ಹಲವು ಅಣೆಕಟ್ಟುಗಳು ಹಾಗೂ ಜಲವಿದ್ಯುತ್ ಘಟಕಗಳಿಂದ ಒತ್ತಡಕ್ಕೆ ಒಳಗಾಗಿರುವ ಶರಾವತಿ ಕಣಿವೆಯ ಪರಿಸರ ವ್ಯವಸ್ಥೆಗೆ ಹೊಸ ಪಂಪ್ಡ್‌ ಸ್ಟೋರೇಜ್‌ ಯೋಜನೆಯಿಂದ ಇನ್ನಷ್ಟು ಹಾನಿಯಾಗಲಿದೆ.

ಪಶ್ಚಿಮಘಟ್ಟವು ಕಾವೇರಿ, ಹೇಮಾವತಿ, ತುಂಗಭದ್ರಾ, ವರದಾ ಸೇರಿದಂತೆ ಅನೇಕ ನದಿಗಳ ಉಗಮಸ್ಥಾನವಾಗಿವೆ. ಈ ಘಟ್ಟಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳಿಂದ ಹಾನಿ ಮಾಡಿದರೆ ಹವಾಮಾನ ಸಮತೋಲನ ಕಳೆದುಕೊಳ್ಳಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆ ನಿಲ್ಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಂಘಟನೆ ಮನವಿ ಮಾಡಿದೆ.

ಸಂಘಟನೆ ಆಕ್ಷೇಪಣೆಗಳೇನು?

ಯೋಜನೆಯು ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ 1972ರ ವನ್ಯಜೀವಿ (ರಕ್ಷಣೆ) ಕಾಯ್ದೆಯ 29ನೇ ವಿಧಿಯ ಉಲ್ಲಂಘನೆಯಾಗಲಿದೆ. ಶರಾವತಿ ಕಣಿವೆ ಸಿಂಗಳೀಕ ಮತ್ತು ದಾಸ ಮಂಗಟ್ಟೆ ಮುಂತಾದ ಅಪರೂಪದ ಪ್ರಾಣಿ ಪಕ್ಷಿಗಳ ನೆಲೆಯಾಗಿದೆ.

ಪಶ್ಚಿಮಘಟ್ಟದ ನಿತ್ಯಹರಿದ್ವರ್ಣ ಕಾಡು ಪ್ರದೇಶದಲ್ಲಿ ಸುರಂಗ, ರಸ್ತೆ ಮತ್ತು ನಿರ್ಮಾಣ ಕಾಮಗಾರಿ ನಡೆದರೆ ಭಾರೀ ಭೂಕುಸಿತ ಮತ್ತು ಹವಾಮಾನ ಬದಲಾವಣೆಗಳ ಅಪಾಯವಿದೆ ಎಂಬ ಆಕ್ಷೇಪ ವ್ಯಕ್ತಪಡಿಸಿದೆ.

ಕೊಡಗು, ವಯನಾಡು ಭಾಗದಲ್ಲಿ ಮಾನವ ಹಸ್ತಕ್ಷೇಪದಿಂದ ಉಂಟಾದ ಭಾರೀ ಭೂಕುಸಿತಗಳಿಂದ ಪಾಠ ಕಲಿಯಬೇಕಾಗಿದೆ. ಸೌರಶಕ್ತಿ ವಿಸ್ತರಣೆ, ಪರಿಸರ ಹಾನಿ ಇಲ್ಲದ ಇತರ ಜಲಾಶಯಗಳಲ್ಲಿ ಪಂಪ್ಡ್‌ ಸ್ಟೋರೇಜ್‌ ಪರಿಗಣನೆ, ಬ್ಯಾಟರಿ ಶಕ್ತಿ ಸಂಗ್ರಹ (BESS) ತಂತ್ರಜ್ಞಾನ ಬಳಸುವ ಅವಕಾಶಗಳಿವೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಶರಾವತಿ ಕಣಿವೆ ಕೇವಲ ವಿದ್ಯುತ್ ಕಾರಿಡಾರ್ ಅಲ್ಲ, ಅದು ರಾಜ್ಯದ ಅಪರೂಪದ ಅರಣ್ಯ ಸಂಪತ್ತು, ವನ್ಯಜೀವಿಗಳ ನೆಲೆ, ಲಕ್ಷಾಂತರ ಜನರ ಕುಡಿಯುವ ನೀರಿನ ಮೂಲ ಮತ್ತು ಮಲೆನಾಡಿನ ಜೀವನಾಡಿಯಾಗಿದೆ ಎಂದು ಪರಿಸರಕ್ಕಾಗಿ ನಾವು ಸಂಘಟನೆ ಪತ್ರದಲ್ಲಿ ಹೇಳಿದೆ.

ಸಂಘಟನೆ ಬೇಡಿಕೆಗಳೇನು?

  • ಶರಾವತಿ ಮತ್ತು ವಾರಾಹಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗಳನ್ನು ಕೂಡಲೇ ಕೈಬಿಡಬೇಕು.
  • ಸಂಬಂಧಿತ ಇಲಾಖೆಗಳಿಗೆ ಯೋಜನೆಗೆ ಕುರಿತ ಪೂರ್ವ ತಯಾರಿ ಮತ್ತು ಸಮೀಕ್ಷೆ ಕಾರ್ಯಗಳನ್ನು ನಿಲ್ಲಿಸಲು ನಿರ್ದೇಶಿಸಬೇಕು.
  • ಪರ್ಯಾಯ, ಪರಿಸರಪೂರಕ ಇಂಧನ ಆಯ್ಕೆಗಳಿಗೆ ಪ್ರಾಮುಖ್ಯತೆ ನೀಡಬೇಕು.
  • 1972ರ ವನ್ಯಜೀವಿ ಕಾಯ್ದೆ ಗೌರವಿಸಿ, ಇಂದಿರಾ ಗಾಂಧಿಯವರ ಪರಿಸರ ಕಾಳಜಿಗೆ ನಿಜವಾದ ಗೌರವ ತೋರಿಸಬೇಕು.
Read More
Next Story