ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ಸಚಿವಾಲಯ, ರಿವಾಲ್ವಿಂಗ್‌ ಫಂಡ್‌ ಸ್ಥಾಪನೆಗೆ ಒತ್ತಾಯ
x

ಅನಿವಾಸಿ ಕನ್ನಡಿಗರು ಗುರುವಾರ ಬೆಳಗಾವಿ ಅಧಿವೇಶನದಲ್ಲಿ ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು

ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ಸಚಿವಾಲಯ, ರಿವಾಲ್ವಿಂಗ್‌ ಫಂಡ್‌ ಸ್ಥಾಪನೆಗೆ ಒತ್ತಾಯ

ಉದ್ಯಮ ಸ್ಥಾಪನೆಗೆ ವಿವಿಧ ಪರವಾನಗಿಗಳನ್ನು ಪಡೆಯಲು 25–26 ಕಚೇರಿಗಳಿಗೆ ಅಲೆದಾಡಬೇಕಾಗಿದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಅನಿವಾಸಿ ಕನ್ನಡಿಗರು ಆಗ್ರಹಿಸಿದರು.


ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ, 1,000 ಕೋಟಿ ರೂ. ನಿಧಿ ಸ್ಥಾಪನೆ (ರಿವಾಲ್ವಿಂಗ್ ಫಂಡ್), ವಿವಿಧ ಯೋಜನೆಗಳಿಗೆ ಏಕಗವಾಕ್ಷಿ ವ್ಯವಸ್ಥೆ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 38 ದೇಶಗಳ ಕನ್ನಡ ಕೂಟಗಳ ಅಧ್ಯಕ್ಷರು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಬೆಳಗಾವಿ ಸುವರ್ಣಸೌಧದಲ್ಲಿ ಗುರುವಾರ ಸಿಎಂ ಹಾಗೂ ಡಿಸಿಎಂ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅನಿವಾಸಿಗಳ ಕನ್ನಡಿಗರ ಕೂಟದ ಮುಖಂಡ ಡಾ. ರೋನಾಲ್ಡ್ ಕೊಲಾಸೊ, ಅನಿವಾಸಿ ಕನ್ನಡಿಗರು ಉತ್ಪಾದನಾ, ಸೇವಾ ಉದ್ಯಮ, ಶಿಕ್ಷಣ, ಆರೋಗ್ಯ, ಆತಿಥ್ಯ (ಹಾಸ್ಪಿಟಾಲಿಟಿ) ಸೇರಿ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಸುಮಾರು 38 ದೇಶಗಳಿಂದ 42 ಜನ ಕನ್ನಡಿಗರು ಬಂದಿದ್ದೇವೆ. 2023 ರ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಅನಿವಾಸಿ ಕನ್ನಡಿಗರ ವಿವಿಧ ಬೇಡಿಕೆಗಳ ಪಟ್ಟಿಯನ್ನು ಸಿಎಂ, ಡಿಸಿಎಂ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಿಗೆ ಸಲ್ಲಿಸಲಾಗಿದೆ. ಹೂಡಿಕೆ ಸಂದರ್ಭದಲ್ಲಿ ಅನಿವಾಸಿ ಕನ್ನಡಿಗರು ವಿವಿಧ ಪರವಾನಗಿಗಳನ್ನು ಪಡೆಯಲು 25–26 ಕಚೇರಿಗಳಿಗೆ ಅಲೆದಾಡಬೇಕಾಗಿದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಹೇಳಿದರು.

ಈಗಾಗಲೇ ಎರಡೂವರೆ ವರ್ಷ ಕಳೆದು ಹೋಗಿದೆ. ಇನ್ನಾದರೂ ಅನಿವಾಸಿ ಭಾರತೀಯರು ಹಾಗೂ ಕನ್ನಡಿಗರನ್ನು ಕಡೆಗಣಿಸದೇ ಬೇಡಿಕೆಗಳನ್ನು ಈಡೇರಿಸಬೇಕು. ಇದರಿಂದ ರಾಜ್ಯದ ಆರ್ಥಿಕ ಬೆಳವಣಿಗೆಗೆ ಸಹಾಯಕವಾಗಲಿದೆ. ಹೂಡಿಕೆಯೂ ಹೆಚ್ಚಲಿದೆ ಎಂದು ವಿವರಿಸಿದರು.

ಅನಿವಾಸಿಯರ ಕೊಡುಗೆ ಎಷ್ಟು?

ಭಾರತದಲ್ಲಿ ಅನಿವಾಸಿಯರಿಂದ 125–135 ಬಿಲಿಯನ್ ನಿಧಿ ಹರಿದು ಬಂದಿದೆ. ಇದು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಹೂಡಿಕೆಯಾಗಿದೆ. ಕರ್ನಾಟಕದಲ್ಲಿ ಹೂಡಿಕೆ ನೋಡುವುದಾದರೆ, ಅನಿವಾಸಿ ಕನ್ನಡಿಗರಿಂದಲೂ 10-12 ಬಿಲಿಯನ್‌ ಡಾಲರ್‌ ನಿಧಿ ಹರಿದು ಬಂದಿದೆ. ಕಳೆದ ಕೆಲವು ವರ್ಷಗಳಲ್ಲಿ ರಾಜ್ಯಾದ್ಯಂತ 6,000ಕ್ಕೂ ಹೆಚ್ಚು ಉದ್ಯಮಗಳನ್ನು ಅನಿವಾಸಿ ಭಾರತೀಯರು ಸ್ಥಾಪಿಸಿದ್ದಾರೆ. ಅಂದಾಜು 10 ವರ್ಷಗಳಲ್ಲಿ 8,000 ಕೋಟಿ ರೂ.ಮೌಲ್ಯದ ಹೂಡಿಕೆ ಹರಿದು ಬಂದಿದೆ ಎಂದು ಡಾ. ರೋನಾಲ್ಡ್ ಕೊಲಾಸೊ ವಿವರಿಸಿದರು.

ಇನ್ನು ಪ್ರತಿ ವರ್ಷ ರಾಜ್ಯ ಸರ್ಕಾರಕ್ಕೆ 600–800 ಕೋಟಿ ರೂ.ನಷ್ಟು ದೇಣಿಗೆ ಬರುತ್ತಿದೆ. ಹಾಗಾಗಿ 1,000 ಕೋಟಿ ರೂ.ಗಳ ರಿವಾಲ್ವಿಂಗ್ ಫಂಡ್ ಸ್ಥಾಪಿಸಲು ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಮುಖ್ಯಮಂತ್ರಿ ಮತ್ತು ಸಚಿವರು ಸಕಾರಾತ್ಮಕ ಭರವಸೆ ನೀಡಿದ್ದಾರೆ ಎಂದು ಹೇಳಿದರು.

Read More
Next Story