ಚಿಕ್ಕೋಡಿ ಜಿಲ್ಲೆ | ಬೇಡಿಕೆ ನ್ಯಾಯಯುತ; ಸೂಕ್ತ ಸಂದರ್ಭದಲ್ಲಿ ನಿರ್ಣಯ: ಸಚಿವ ಕೃಷ್ಣ ಬೈರೇಗೌಡ
x
ಸಚಿವ ಕೃಷ್ಣ ಭೈರೇಗೌಡ

ಚಿಕ್ಕೋಡಿ ಜಿಲ್ಲೆ | ಬೇಡಿಕೆ ನ್ಯಾಯಯುತ; ಸೂಕ್ತ ಸಂದರ್ಭದಲ್ಲಿ ನಿರ್ಣಯ: ಸಚಿವ ಕೃಷ್ಣ ಬೈರೇಗೌಡ

ಅಂದಿನ ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್. ಪಟೇಲ್ ಅವರು ಹಲವು ನೂತನ ಜಿಲ್ಲೆಗಳನ್ನು ರಚಿಸಿದ ಸಂದರ್ಭದಲ್ಲಿಯೇ ಬೆಳಗಾವಿ ಜಿಲ್ಲೆ ವಿಭಜನೆಗೊಂಡು ಚಿಕ್ಕೋಡಿ ನೂತನ ಜಿಲ್ಲೆಯಾಗಬೇಕಿತ್ತು. ಆದರೆ ಆ ಸಂದರ್ಭದಲ್ಲಿ ಅದು ನೆರವೇರಲಿಲ್ಲ.


Click the Play button to hear this message in audio format

ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಜಿಲ್ಲೆಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ರಚಿಸಬೇಕು ಎನ್ನುವ ಬೇಡಿಕೆ ನ್ಯಾಯಯುತವಾಗಿದ್ದು, ಸೂಕ್ತ ಸಂದರ್ಭದಲ್ಲಿ ಸರ್ಕಾರ ಈ ಬಗ್ಗೆ ನಿರ್ಣಯ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು.

ಸೋಮವಾರ ಸುವರ್ಣ ಸೌಧ ಜರುಗುತ್ತಿರುವ ಅಧಿವೇಶನದ ವಿಧಾನಸಭೆಯಲ್ಲಿ ಜರುಗಿದ ಪ್ರಶ್ನೋತ್ತರ ಕಲಾಪದ ವೇಳೆ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಕಂದಾಯ ಸಚಿವರು ಉತ್ತರ ನೀಡಿದರು.

ಶಾಸಕಿ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ರಾಜ್ಯದಲ್ಲಿಯೇ ಬೆಳಗಾವಿ ಜಿಲ್ಲೆಯು ಭೌಗೋಳಿಕವಾಗಿ ಅತಿ ದೊಡ್ಡ ಜಿಲ್ಲೆಯಾಗಿದೆ. ಜಿಲ್ಲೆಯು 55 ಲಕ್ಷ ಜನಸಂಖ್ಯೆ ಹೊಂದಿದ್ದು, 18 ವಿಧಾನಸಭಾ ಕ್ಷೇತ್ರಗಳು, 15 ತಾಲ್ಲೂಕುಗಳನ್ನು ಹೊಂದಿದೆ, ಅಲ್ಲದೆ 2 ಕ್ಕಿಂತ ಹೆಚ್ಚು ಲೋಕಸಭಾ ಕ್ಷೇತ್ರವನ್ನು ಕೂಡ ಒಳಗೊಂಡಿದೆ. ಜಿಲ್ಲೆಯ ಅಥಣಿ ತಾಲ್ಲೂಕಿನ ಕೊನೆಯ ಭಾಗದಿಂದ ಜಿಲ್ಲಾ ಕೇಂದ್ರಕ್ಕೆ 200 ಕಿ.ಮೀ. ಗೂ ಹೆಚ್ಚು ದೂರವಿದ್ದು, ಜನರು ತಮ್ಮ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರಕ್ಕೆ ಬರಲು ತುಂಬ ತೊಂದರೆ ಅನುಭವಿಸುತ್ತಿದ್ದಾರೆ. 1997 ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಜೆ.ಹೆಚ್. ಪಟೇಲ್ ಅವರು ಹಲವು ನೂತನ ಜಿಲ್ಲೆಗಳನ್ನು ರಚಿಸಿದ ಸಂದರ್ಭದಲ್ಲಿಯೇ ಬೆಳಗಾವಿ ಜಿಲ್ಲೆ ವಿಭಜನೆಗೊಂಡು ಚಿಕ್ಕೋಡಿ ನೂತನ ಜಿಲ್ಲೆಯಾಗಬೇಕಿತ್ತು. ಆದರೆ ಆ ಸಂದರ್ಭದಲ್ಲಿ ಅದು ನೆರವೇರಲಿಲ್ಲ. ಇದಾಗಿ 17 ವರ್ಷ ಕಳೆದರೂ ಬೇಡಿಕೆ ಈಡೇರಿಲ್ಲ. ಈಗಾಗಲೇ ಚಿಕ್ಕೋಡಿಯಲ್ಲಿ ಡಿಡಿಪಿಐ, ಡಿಡಿಪಿಯು ಸೇರಿದಂತೆ ಜಿಲ್ಲಾ ಕೇಂದ್ರದಲ್ಲಿ ಇರಬೇಕಾದ ಅನೇಕ ಇಲಾಖಾ ಕಚೇರಿಗಳು ಇವೆ. ಹೀಗಾಗಿ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ನೂತನ ಜಿಲ್ಲೆಯನ್ನು ರಚಿಸಬೇಕು ಎಂದು ಮನವಿ ಮಾಡಿದರು.

ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಪ್ರತಿಕ್ರಿಯಿಸಿ, ನೂತನ ಜಿಲ್ಲೆಯನ್ನು ರಚಿಸಬೇಕಾದರೆ, ಭೌಗೋಳಿಕ ಮತ್ತು ಆಡಳಿತಾತ್ಮಕ ಅಗತ್ಯತೆಗಳ ಜೊತೆಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಸಹ ಅವಲಂಬಿಸಿರುತ್ತದೆ. ಸಂಪನ್ಮೂಲಗಳ ಕ್ರೋಢೀಕರಣ ಮತ್ತು ಹಣಕಾಸಿನ ಇತಿಮಿತಿಗಳನ್ನು ಒಳಗೊಂಡಿರುತ್ತದೆ. ಹೊಸದಾಗಿ ಜಿಲ್ಲೆಗಳನ್ನು ರಚಿಸಲು ನಿರ್ದಿಷ್ಟ ಮಾನದಂಡ ರೂಪಿಸಿರುವುದಿಲ್ಲ. ಯಾವುದೇ ಒಂದು ಪ್ರದೇಶ, ತಾಲ್ಲೂಕನ್ನು ಜಿಲ್ಲೆಯನ್ನಾಗಿ ರಚಿಸುವ ಸಂದರ್ಭದಲ್ಲಿ ಅಲ್ಲಿನ ಭೌಗೋಳಿಕ ಹಿನ್ನೆಲೆ, ಜನಸಂಖ್ಯೆ, ಹಿಂದುಳಿದಿರುವಿಕೆ, ಹೊಸ ಜಿಲ್ಲೆಯ ರಚನೆಯಿಂದಾಗುವ ಅನುಕೂಲ, ಸಾರ್ವಜನಿಕ ಆಶೋತ್ತರಗಳಿಗೆ ಸ್ಪಂದನೆ, ತಾಲ್ಲೂಕು ಕೇಂದ್ರ ಮತ್ತು ಜಿಲ್ಲಾ ಕೇಂದ್ರಕ್ಕಿರುವ ದೂರ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿ ಮತ್ತು ಆಡಳಿತಾತ್ಮಕ ಅಂಶಗಳನ್ನು ಪರಾಮರ್ಶಿಸಲಾಗುತ್ತದೆ. ಬೆಳಗಾವಿ ಜಿಲ್ಲೆಯನ್ನು ವಿಭಜಿಸಬೇಕು ಎನ್ನುವುದು ಬಹಳಷ್ಟು ವರ್ಷಗಳ ಬೇಡಿಕೆಯಾಗಿದೆ ಹಾಗೂ ಬೇಡಿಕೆಯು ನ್ಯಾಯಯುತವೂ ಆಗಿದೆ. ಭೌಗೋಳಿಕವಾಗಿ ದೊಡ್ಡ ವಿಸ್ತೀರ್ಣವನ್ನು ಹೊಂದಿದೆ. ನೂತನ ಜಿಲ್ಲೆ ರಚನೆ ವಿಷಯವು ತಕ್ಷಣ ನಿರ್ಧಾರ ಆಗುವಂಥದ್ದಲ್ಲ, ಸಂಪುಟ ಸಭೆಯಲ್ಲಿ ಮಂಡಿಸಿ, ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಮುಖ್ಯವಾಗಿ ಮುಂದಿನ ಜನಗಣತಿ ಪ್ರಕ್ರಿಯೆ ಆಗುವವರೆಗೂ ದೇಶದ ಯಾವುದೇ ಕಂದಾಯ ಘಟಕಗಳನ್ನು ಬದಲಾವಣೆ ಮಾಡುವಂತಿಲ್ಲ ಎಂಬುದಾಗಿ ಈಗಾಗಲೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ಹೀಗಾಗಿ ಸರ್ಕಾರ ಸೂಕ್ತ ಸಂದರ್ಭದಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಿದರು.

Read More
Next Story