ಬಿಜೆಪಿ ಕೋರ್‌ ಕಮಿಟಿ ಸಭೆ| ಯತ್ನಾಳ್ ವಿಷಯ ಬೇಡ, ರಾಜ್ಯ ಉಸ್ತುವಾರಿಗೇ ಹೇಳಿ ಎಂದ ತರುಣ್‌ ಚುಗ್‌
x
ರಾಜ್ಯ ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಯಿತು

ಬಿಜೆಪಿ ಕೋರ್‌ ಕಮಿಟಿ ಸಭೆ| ಯತ್ನಾಳ್ ವಿಷಯ ಬೇಡ, ರಾಜ್ಯ ಉಸ್ತುವಾರಿಗೇ ಹೇಳಿ ಎಂದ ತರುಣ್‌ ಚುಗ್‌

ಪಕ್ಷದ ಆಂತರಿಕ ವಿಚಾರಗಳನ್ನು ‌ನನ್ನೊಂದಿಗೆ ಮಾತನಾಡುವುದು ಬೇಡ. ಡಿಸೆಂಬರ್ 7ಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಉಸ್ತುವಾರಿ ರಾಧಾ ಮೋಹನ್ ದಾಸ್ ಬಂದಾಗ ಅವರೊಂದಿಗೆ ಈ ವಿಷಯಗಳನ್ನು ಮಾತನಾಡಿ ಎಂದು ತರುಣ್ ಚುಗ್ ಸೂಚಿಸಿದ್ದಾರೆ.


ಶೋಕಾಸ್ ನೋಟಿಸ್ ನೀಡಿದ್ದರೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಬಿಜೆಪಿ ನಾಯಕರ ಮೇಲೆ ವಾಗ್ದಾಳಿ ಮುಂದುವರಿಸಿರುವುದು ಬಿಜೆಪಿಗೆ ತಲೆನೋವಾಗಿದೆ. ಒಂದೆಡೆ ಶೋಕಾಸ್ ನೋಟಿಸ್​ಗೆ ಉತ್ತರ ನೀಡಲು ಯತ್ನಾಳ್ ದೆಹಲಿಗೆ ತೆರಳಿದ್ದಾರೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಯತ್ನಾಳ್ ಬಾಯಿಗೆ ಕಡಿವಾಣ ಹಾಕಲು ಬಿಜೆಪಿ ನಾಯಕರು, ಮುಖಂಡರು ಆಗ್ರಹಿಸಿದ್ದಾರೆ.

ಸಭೆಯ ಆರಂಭದಲ್ಲೇ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಆಂತರಿಕ ಬೆಳವಣಿಗೆ ವಿಚಾರ ಪ್ರಸ್ತಾಪವಾಗಿದೆ. ಆದರೆ ಪಕ್ಷ ಸಂಘಟನೆಗೆ ಸೀಮಿತವಾದ ವಿಷಯಗಳನ್ನಷ್ಟೇ ಮಾತನಾಡುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಸೂಚಿಸಿದ್ದಾರೆ. ಆದರೆ, ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಅವರು ವಿಷಯ ಪ್ರಸ್ತಾಪಿಸುತ್ತಿದ್ದಂತೆಯೆ ಉಳಿದ ನಾಯಕರು ಮಾತನಾಡಿದ್ದಾರೆ.

ಆದರೂ ಪಕ್ಷದ ಆಂತರಿಕ ಬೆಳವಣಿಗೆ ಬಗ್ಗೆ ಪ್ರಸ್ತಾಪ ಮಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಪಕ್ಷದಲ್ಲಿ ಎರಡು ಗುಂಪುಗಳಾಗಿವೆ. ಇದರಿಂದಾಗಿ ಪಕ್ಷಕ್ಷೆ ಡ್ಯಾಮೇಜ್ ಆಗುತ್ತಿದೆ. ಯತ್ನಾಳ್ ಟೀಮ್ ವಿರುದ್ಧ ಕ್ರಮ ಕೈಗೊಳ್ಳುವುದು ನ್ಯಾಯ ಯುತವಾಗಿದೆ. ಆದರೆ ಮತ್ತೊಂದು ಟೀಮ್ ಕೂಡಾ ಅದನ್ನೇ ಮಾಡುತ್ತಿದೆ. ಮಾಜಿ ಶಾಸಕ ರೇಣುಕಾಚಾರ್ಯ ‌ಸೇರಿದಂತೆ ಉಳಿದವರು ಪ್ರತ್ಯೇಕ ಸಭೆ ಮಾಡಿರುವುದು ಕೂಡ ಸರಿಯಲ್ಲ ಎಂದು ಸದಾನಂದಗೌಡ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚುಗ್ ಗಮನಕ್ಕೆ ತಂದಿದ್ದಾರೆ. ಸದಾನಂದಗೌಡ ಆಗ್ರಹಕ್ಕೆ ಪಕ್ಷದ ಆಂತರಿಕ ವಿಚಾರಗಳನ್ನು ‌ನನ್ನೊಂದಿಗೆ ಮಾತನಾಡುವುದು ಬೇಡ. ಡಿಸೆಂಬರ್ 7ಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಬಂದಾಗ ಅವರೊಂದಿಗೆ ಈ ವಿಷಯಗಳನ್ನು ಮಾತನಾಡಿ ಎಂದು ತರುಣ್ ಚುಗ್ ಕೋರ್ ಕಮಿಟಿಯಲ್ಲಿ ಸೂಚಿಸಿದ್ದಾರೆ. ಸದ್ಯ ಪಕ್ಷ ಸಂಘಟನೆಗೆ ಗಮನ ಕೊಡಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಚುಗ್​ ಸೂಚಿಸಿದ್ದಾರೆ.

ಸಂಘಟನಾತ್ಮಕ ಸಭೆಯಲ್ಲೂ ಯತ್ನಾಳ್ ಚರ್ಚೆ

ಬಿಜೆಪಿ ರಾಜ್ಯ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ಬಳಿಕ ನಡೆದ ಸಂಘಟನಾತ್ಮಕ ಸಭೆಯಲ್ಲಿಯೂ ಬಿಜೆಪಿ ಜಿಲ್ಲಾಧ್ಯಕ್ಷರುಗಳು ಯತ್ನಾಳ್ ವಿಚಾರ ಪ್ರಸ್ತಾಪಿಸಿದ್ದಾರೆ. ತರುಣ್ ಚುಗ್ ನೇತೃತ್ವದಲ್ಲಿ ಸಭೆಯಲ್ಲಿ ಜಿಲ್ಲಾಧ್ಯಕ್ಷರು ಪಕ್ಷದ ಆಂತರಿಕ ಬೆಳವಣಿಗೆಗಳು, ನಾಯಕರ ಹೇಳಿಕೆಗಳ ಕುರಿತು ಚುಗ್​ ಗಮನಕ್ಕೆ ತಂದಿದ್ದಾರೆ. ಈ ಬೆಳವಣಿಗೆಗಳಿಂದ ಪಕ್ಷಕ್ಕೆ ಮುಜುಗರವಾಗುತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಮುಜುಗರ ತಪ್ಪಿಸಬೇಕು ಎಂದು ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆಗಲೂ ಕೂಡ ಚುಗ್​ ಸಂಘಟನಾತ್ಮಕ ವಿಷಯಗಳನ್ನು ಚರ್ಚೆ ಮಾತ್ರ ಮಾಡೋಣ. ಉಳಿದ ವಿಚಾರಗಳನ್ನು ವರಿಷ್ಠರ ಗಮನಕ್ಕೆ ತರುತ್ತೇನೆ ಎಂಬ ಭರವಸೆಯನ್ನು ಜಿಲ್ಲಾಧ್ಯಕ್ಷರುಗಳಿಗೆ ನೀಡಿದ್ದಾರೆ. ಸಭೆಯ ಬಳಿಕ ತಮ್ಮ ಮೇಲೆ ಯತ್ನಾಳ್ ಸೇರಿದಂತೆ ಕೆಲ ನಾಯಕರು ಕೊಡುತ್ತಿರುವ ಹೇಳಿಕೆಗಳ ಕುರಿತು ಬಿ.ವೈ. ವಿಜಯೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಹರೀಶ್ ಹೆಸರಿನಲ್ಲೇ ಬಿಪಿ ಇದೆ ಎಂದ ವಿಜಯೇಂದ್ರ‌

ದೆಹಲಿಯಲ್ಲಿ ತಮ್ಮ ವಿರುದ್ಧ ಮಾತನಾಡಿದ್ದ ಶಾಸಕ ಬಿ.ಪಿ. ಹರೀಶ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿಜಯೇಂದ್ರ, ‘ಹರೀಶ್ ಹೆಸರಿನ ಮುಂದೆ ಏನು ಇದೆ ಹೇಳಿ? ಬಿಪಿ ಇದೆ. ಹೀಗಾಗಿ ಅವರು ಸಹನೆಯನ್ನು ಕಳೆದುಕೊಳ್ಳುತ್ತಾರೆ. ಅವರು ಕೂಡಾ ಎರಡನೇ ಬಾರಿ‌ ಗೆದ್ದಿರುವ ಶಾಸಕರಾಗಿದ್ದಾರೆ. ನೋಟಿಸ್ ಸೇರಿದಂತೆ ಉಳಿದ ವಿಚಾರಗಳು ಹೈಕಮಾಂಡ್ ನಾಯಕರ ಮುಂದಿವೆ’ ಎಂದಿದ್ದಾರೆ.

‘ರಾಜ್ಯದ ಅಧ್ಯಕ್ಷನನ್ನಾಗಿ ನನ್ನನ್ನು ರಾಷ್ಟ್ರೀಯ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಸ್ವಂತ ಶಕ್ತಿ ಅಧಿಕಾರಕ್ಕೆ ಬರಬೇಕು. ಇನ್ನು ಹೊಂದಾಣಿಕೆ ರಾಜಕೀಯಕ್ಕೂ ಇತಿಶ್ರೀ ಹಾಡಬೇಕು. ಯತ್ನಾಳ್‌ಗೆ ನೋಟಿಸ್ ಕೊಟ್ಟಾಗಿದೆ. ಕೇಂದ್ರ ವರಿಷ್ಠರು ಗಮನಿಸುತ್ತಿದ್ದಾರೆ. ಶಿಸ್ತು ಕ್ರಮ ಕೈಗೊಳ್ಳಬೇಕಾ? ಅಥವಾ ಸುಮ್ಮನೆ ಇರಬೇಕಾ? ಎಂಬುದರ ಕುರಿತು ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ’ ಎಂದು ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

ಚುಗ್​ ಮೂಲಕ ನಡ್ಡಾಗೆ ಪತ್ರ

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಮೂಲಕ ಜಿಲ್ಲಾಧ್ಯಕ್ಷರುಗಳು ಪತ್ರ ಬರೆದಿದ್ದಾರೆ ಎಂಬ ಮಾಹಿತಿಯಿದೆ. ಸಭೆಯ ಬಳಿಕ ಈ ಕುರಿತು ಮಾತನಾಡಿದ ವಿಜಯೇಂದ್ರ ಇದನ್ನು ನಿರಾಕರಿಸಿದರಾದರೂ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾಗೆ ರಾಜ್ಯ ಬಿಜೆಪಿಯ 32 ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರ ಸಹಿ ಮಾಡಿ ಪತ್ರ ಕೊಟ್ಟಿದ್ದಾರೆ ಎನ್ನಲಾಗಿದೆ.

ಶಮನಗೊಳಿಸುವ ಶಕ್ತಿ ಇದೆ: ಆರ್. ಅಶೋಕ್

ಪಕ್ಷದ ಸಂಘಟನೆ ವಿಚಾರವಾಗಿ ನಾಲ್ಕು ಘಂಟೆ ಸಭೆ ಮಾಡಿದ್ದೇವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಸಭೆಯ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ರಾಜ್ಯ ಬಿಜೆಪಿಯಲ್ಲಿನ ಭಿನ್ನಮತದ ಕುರಿತು ಮಾತನಾಡಿ, ಪಕ್ಷದೊಳಗಿನ ಎಲ್ಲಾ ವಿಚಾರಗಳ ಬಗೆಗೂ ಚರ್ಚೆ ಮಾಡಿದ್ದೇವೆ. ಅಸಮಾಧಾನಗಳನ್ನು ಶಮನಗೊಳಿಸುವ ಶಕ್ತಿ ನಮ್ಮ ವರಿಷ್ಠರಿಗಿದೆ. ವಾರದೊಳಗೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ನಮ್ಮ ವರಿಷ್ಠರು ಎಲ್ಲವನ್ನೂ ಸರಿಪಡಿಸುವಷ್ಟು ಶಕ್ತರಾಗಿದ್ದಾರೆ. ಪಕ್ಷದಲ್ಲಿ ಎಲ್ಲರೂ ಒಟ್ಟಿಗಿದ್ದೇವೆ ಎಂದಿದ್ದಾರೆ.

ಒಟ್ಟಾರೆಯಾಗಿ ಪಕ್ಷ ಸಂಘಟನೆ ಕುರಿತಂತೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆ ನಡೆದಿದ್ದರೂ, ಪ್ರಮುಖವಾಗಿ ಶಾಸಕ ಯತ್ನಾಳ್ ವಿಚಾರ ಚರ್ಚೆಯಾಗಿದೆ. ಅವರನ್ನು ಉಚ್ಛಾಟನೆ ಮಾಡುವಂತೆ ಯಾರೂ ಆಗ್ರಹಿಸಿಲ್ಲ. ಯತ್ನಾಳ್​ರನ್ನು ಬಿಜೆಪಿ ಹೈಕಮಾಂಡ್ ಯಾರ ರೀತಿ ಸಮಾಧಾನ ಮಾಡುತ್ತದೆ ಎಂಬುದು ಆ ಪಕ್ಷದ ಕಾರ್ಯಕರ್ತರಲ್ಲಿ ಕುತೂಹಲ ಮೂಡಿಸಿದೆ.

Read More
Next Story