ಆಂಧ್ರ, ತೆಲಂಗಾಣದಂತೆ ಮದ್ಯದಂಗಡಿ ಪರವಾನಗಿ ಶುಲ್ಕದಲ್ಲಿ ಈಡಿಗ, ಬಿಲ್ಲವರಿಗೆ ಶೇ. 50ರಷ್ಟು ರಿಯಾಯಿತಿ  ನೀಡಲು ಆಗ್ರಹ
x

ಆಂಧ್ರ, ತೆಲಂಗಾಣದಂತೆ ಮದ್ಯದಂಗಡಿ ಪರವಾನಗಿ ಶುಲ್ಕದಲ್ಲಿ ಈಡಿಗ, ಬಿಲ್ಲವರಿಗೆ ಶೇ. 50ರಷ್ಟು ರಿಯಾಯಿತಿ ನೀಡಲು ಆಗ್ರಹ

ಈಡಿಗ, ಬಿಲ್ಲವ ಮತ್ತು ಸಮುದಾಯದ ಉಪ ಜಾತಿಗಳ ಮದ್ಯ ಮಾರಾಟಗಾರರ ಹಿತರಕ್ಷಣೆಗೆ ಸರ್ಕಾರ ಮುಂದಾಗಬೇಕು. ಈಡಿಗ, ಬಿಲ್ಲವ ಸಮುದಾಯದ ಮುಖಂಡರಿಂದ ಸಿಎಂ ಸಿದ್ದರಾಮಯ್ಯಗೆ ಮನವಿ


ನೆರೆ ರಾಜ್ಯಆಂಧ್ರಪ್ರದೇಶ, ತೆಲಂಗಾಣದಂತೆ ಮದ್ಯದಂಗಡಿ ಪರವಾನಗಿ ಶುಲ್ಕದಲ್ಲಿ ಈಡಿಗ, ಬಿಲ್ಲವರಿಗೆ ಶೇಕಡ 50ರಷ್ಟು ರಿಯಾಯಿತಿ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗಿದೆ.

ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ನೇತೃತ್ವದಲ್ಲಿ ಈಡಿಗ, ಬಿಲ್ಲವ ಸಮುದಾಯದ ಮುಖಂಡರ ನಿಯೋಗವು ದೆಹಲಿಯ ಕರ್ನಾಟಕ ಭವನದಲ್ಲಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮನವಿ ಮಾಡಿತು. ಸೇಂದಿ ಮತ್ತು ಸಾರಾಯಿ ಉತ್ಪಾದನೆ ಹಾಗೂ ಮಾರಾಟವನ್ನೇ ಕುಲ ಕಸುಬನ್ನಾಗಿ ಹೊಂದಿದ್ದ ಈಡಿಗ, ಬಿಲ್ಲವ ಮತ್ತು 26 ಉಪ ಜಾತಿಗಳ ಜನರು ಈಗ ಸಂಕಷ್ಟದಲ್ಲಿದ್ದಾರೆ. ಕರ್ನಾಟಕದಲ್ಲಿ ಸೇಂದಿ ಹಾಗೂ ಸಾರಾಯಿ ಉತ್ಪಾದನೆ, ಮಾರಾಟವನ್ನು ನಿಷೇಧಿಸಿದ ಬಳಿಕ ಈ ಉದ್ಯಮವನ್ನೇ ನೆಚ್ಚಿಕೊಂಡಿದ್ದ ಈಡಿಗ, ಬಿಲ್ಲವ ಸೇರಿದಂತೆ ಸಮುದಾಯದ ಉಪ ಜಾತಿಗಳ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಲಕ್ಷಾಂತರ ಜನರು ನೇರವಾಗಿ ಮತ್ತು ಪರೋಕ್ಷವಾಗಿ ತೊಂದರೆಗೊಳಗಾಗಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಸೇಂದಿ ಮತ್ತು ಸಾರಾಯಿ ನಿಷೇಧದ ಸಂದರ್ಭಗಳಲ್ಲಿ ಉದ್ಯೋಗ ಕಳೆದುಕೊಳ್ಳುವ ಈಡಿಗ ಹಾಗೂ ಅದರ ಉಪ ಜಾತಿಗಳ ಜನರ ಪುನರ್ವಸತಿ ವಿಷಯದಲ್ಲಿ ಸರ್ಕಾರ ನೀಡಿದ್ದ ಯಾವುದೇ ಭರವಸೆಗಳೂ ಈಡೇರಿಲ್ಲ. ಇದರಿಂದಾಗಿ ಅನೇಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬದುಕನ್ನೇ ಕಳೆದುಕೊಂಡಿದ್ದಾರೆ. ಆದರೆ, ಸರ್ಕಾರದ ತೀರ್ಮಾನಕ್ಕೆ ತಲೆಬಾಗಿದ ಸಮುದಾಯದ ಜನರು ಸರ್ಕಾರದ ನಿಯಂತ್ರಣದಲ್ಲಿ ಪಾನೀಯ ನಿಗಮದಿಂದ ಮದ್ಯ ಖರೀದಿಸಿ, ಮಾರಾಟ ಮಾಡುವ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ನಿಯೋಗವು ತಿಳಿಸಿದೆ.

ಮದ್ಯ ಮಾರಾಟದ ಮೇಲಿನ ಲಾಭಾಂಶದಲ್ಲಿ ಶೇಕಡ 20ರಷ್ಟನ್ನು ಮದ್ಯದಂಗಡಿಗಳ ಮಾಲೀಕರಿಗೆ ನೀಡಲಾಗುತ್ತಿತ್ತು. ಅದನ್ನು ಶೇಕಡ 10ಕ್ಕೆ ಇಳಿಸಿರುವುದರಿಂದ ಮದ್ಯ ಮಾರಾಟಗಾರರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಸೇಂದಿ, ಸಾರಾಯಿ ಮಾರಾಟ ನಿಷೇಧದಿಂದ ಉದ್ಯೋಗ ಕಳೆದುಕೊಂಡ ಈಡಿಗ, ಬಿಲ್ಲವ ಮತ್ತು ಉಪ ಜಾತಿಗಳ ಜನರಿಗೆ ಇದರಿಂದ ಇನ್ನಷ್ಟು ತೊಂದರೆಯಾಗಿದೆ. ಇದೀಗ ರಾಜ್ಯ ಸರ್ಕಾರವು ಮದ್ಯದಂಗಡಿಗಳ ಪರವಾನಗಿ ಶುಲ್ಕವನ್ನು ದುಪ್ಪಟ್ಟು ಮಾಡಿ ಆದೇಶ ಹೊರಡಿಸಿದೆ. ಇದರಿಂದ ಸಮುದಾದಯ ಜನರು ಮದ್ಯ ವ್ಯಾಪಾರದಿಂದಲೂ ಹೊರ ಹೋಗುವಂತಹ ಸನ್ನಿವೇಶ ನಿರ್ಮಾಣವಾಗುತ್ತಿದೆ ಎಂದು ಆಳಲು ತೋಡಿಕೊಂಡಿದ್ದಾರೆ.

ನಿಯೋಗದ ಬೇಡಿಕೆಗಳು :

ಈಡಿಗ, ಬಿಲ್ಲವ ಮತ್ತು ಸಮುದಾಯದ ಉಪ ಜಾತಿಗಳ ಮದ್ಯ ಮಾರಾಟಗಾರರ ಹಿತರಕ್ಷಣೆಗೆ ಸರ್ಕಾರ ಮುಂದಾಗಬೇಕು. ಮದ್ಯ ಮಾರಾಟದಲ್ಲಿ ಹಿಂದಿನಂತೆ ಶೇಕಡ 20ರಷ್ಟು ಲಾಭಾಂಶವನ್ನು ಮದ್ಯ ಮಾರಾಟಗಾರರಿಗೆ ನೀಡಬೇಕು. ಮದ್ಯ ಮಾರಾಟದಿಂದ ರಾಜ್ಯ ಸರ್ಕಾರದ ಆದಾಯವನ್ನು ಹೆಚ್ಚಿಸಿಕೊಳ್ಳಲು ರಾಜ್ಯ ಫೆಡರೇಷನ್‌ ಆಫ್‌ ವೈನ್‌ ಮರ್ಚಂಟ್ಸ್‌ ಅಸೋಸಿಯೇಷನ್ಸ್‌ ಮೂಲಕ ನೀಡಿರುವ ಸಲಹೆಯನ್ನು ಪರಿಗಣಿಸಬೇಕು. ಆಂಧ್ರಪ್ರದೇಶ ಸರ್ಕಾರವು ಅಲ್ಲಿನ ಒಟ್ಟು ಮದ್ಯದಂಗಡಿಗಳ ಪರವಾನಗಿಗಳಲ್ಲಿ ಶೇಕಡ 10ರಷ್ಟನ್ನು ಈಡಿಗ ಸಮುದಾಯಕ್ಕೆ ಮೀಸಲಿರಿಸಿದೆ. ಈಡಿಗ ಸಮುದಾಯದ ಮದ್ಯದಂಗಡಿಗಳ ಮಾಲೀಕರಿಗೆ ಮದ್ಯದಂಗಡಿಗಳ ಪರವಾನಗಿ ಶುಲ್ಕದಲ್ಲಿ ಶೇಕಡ 50ರಷ್ಟು ರಿಯಾಯ್ತಿ ನೀಡಿದೆ. ಈ ಎರಡೂ ವಿಷಯಗಳ ಕುರಿತು ಅಧ್ಯಯನ ನಡೆಸಿ, ರಾಜ್ಯದಲ್ಲೂ ಅದೇ ರೀತಿಯ ಸೌಲಭ್ಯವನ್ನು ಒದಗಿಸಬೇಕು ಎಂದು ಆಗ್ರಹಿಸಿದೆ.

ತೆಲಂಗಾಣದಲ್ಲಿ ಮದ್ಯ ಮಾರಾಟದಲ್ಲಿ ತೊಡಗಿರುವ ಈಡಿಗರೇ ಆಗಿರುವ ಗೌಡ್‌ ಸಮುದಾಯದ ಮದ್ಯ ವ್ಯಾಪಾರಿಗಳಿಗೆ ವ್ಯಾವಹಾರಿಕ ಲಾಭಾಂಶ ನೀಡುವ ಮೂಲಕ ಕುಲ ಕಸುಬುದಾರರಿಗೆ ಪ್ರೋತ್ಸಾಹ ನೀಡುತ್ತಿದೆ. ಅದೇ ರೀತಿಯಲ್ಲಿ ವ್ಯಾವಹಾರಿಕ ಲಾಭಾಂಶ ನೀಡುವ ಪ್ರೋತ್ಸಾಹಕ ಯೋಜನೆಯನ್ನು ಜಾರಿಗೊಳಿಸಬೇಕು. ಈ ಮೂಲಕ ಈಡಿಗ, ಬಿಲ್ಲವ ಮತ್ತು ಅದರ ಉಪ ಜಾತಿಗಳ ಮದ್ಯ ಮಾರಾಟಗಾರರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಮನವಿ ಮಾಡಿದೆ.

Read More
Next Story