
Delimitation | ಕ್ಷೇತ್ರ ಪುನರ್ ವಿಂಗಡಣೆ; ಕೇಂದ್ರದ ವಿರುದ್ಧ ʼದಕ್ಷಿಣ ರಾಜ್ಯʼಗಳ ಶಕ್ತಿ ಪ್ರದರ್ಶನಕ್ಕೆ ಕೈ ಜೋಡಿಸಲಿರುವ ಕರ್ನಾಟಕ
ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಮಾರ್ಚ್ 22 ರಂದು ತಮಿಳುನಾಡಿನ ಚೆನ್ನೈನಲ್ಲಿ ಜಂಟಿ ಕ್ರಿಯಾ ಸಮಿತಿಯ ಸಭೆ ನಡೆಯಲಿದ್ದು, ಏಳು ರಾಜ್ಯಗಳು ಒಗ್ಗಟ್ಟಿನಿಂದ ಹೋರಾಟದಲ್ಲಿ ಭಾಗವಹಿಸಲು ನಿರ್ಧರಿಸಿವೆ.
ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಗೆ (Delimitation) ಸಿದ್ಧತೆ ನಡೆಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ದಂಡಾಯಾತ್ರೆ ನಡೆಸಲು ದಕ್ಷಿಣ ರಾಜ್ಯಗಳು ಅಣಿಯಾಗುತ್ತಿವೆ. ಹೋರಾಟದ ಸಾರಥ್ಯ ವಹಿಸಿರುವ ತಮಿಳುನಾಡು ಸರ್ಕಾರವು ದಕ್ಷಿಣ ಭಾರತದ ಏಳು ರಾಜ್ಯಗಳನ್ನು ಒಂದೇ ವೇದಿಕೆಯಡಿ ಕರೆತಂದು ಕೇಂದ್ರಕ್ಕೆ ಬಿಸಿ ಮುಟ್ಟಿಸಲು ತಯಾರಿ ನಡೆಸುತ್ತಿದೆ.
ತಮಿಳುನಾಡು ಸರ್ಕಾರದ ಅರಣ್ಯ ಸಚಿವ ಡಾ.ಪೊನ್ನುಮುಡಿ ನೇತೃತ್ವದ ನಿಯೋಗವು ಬುಧವಾರ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ದಕ್ಷಿಣ ರಾಜ್ಯಗಳ ವಿರೋಧಿ ನಿಲುವು ತಳೆದಿರುವ ಕೇಂದ್ರದ ವಿರುದ್ಧ ಪ್ರತಿಭಟನೆಗೆ ಬೆಂಬಲ ಕೋರಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ರೂಪಿಸುವ ಸಲುವಾಗಿ ಮಾರ್ಚ್ 22 ರಂದು ತಮಿಳುನಾಡಿನ ಚೆನ್ನೈನಲ್ಲಿ ಜಂಟಿ ಕ್ರಿಯಾ ಸಮಿತಿ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ದಕ್ಷಿಣ ಭಾರತದ ಏಳು ರಾಜ್ಯಗಳನ್ನು ಒಗ್ಗಟ್ಟಿನಿಂದ ಹೋರಾಟಕ್ಕಿಳಿಸಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕಾರ್ಯತಂತ್ರ ರೂಪಿಸಿದ್ದಾರೆ.
ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ವಿಚಾರದಲ್ಲಿ ರಾಜಿರಹಿತ ಹೋರಾಟ ನಡೆಸಲು ತಮ್ಮೊಂದಿಗೆ ಕೈಜೋಡಿಸುವಂತೆ ಎಂ.ಕೆ ಸ್ಟಾಲಿನ್ ಅವರು ಕರ್ನಾಟಕ ಸೇರಿದಂತೆ ಏಳು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಶುಕ್ರವಾರ ಪತ್ರ ಬರೆದು ಆಹ್ವಾನಿಸಿದ್ದರು. ಇದರ ಬೆನ್ನಲ್ಲೇ ಸರ್ಕಾರದ ನಿಯೋಗವನ್ನು ಏಳೂ ರಾಜ್ಯಗಳಿಗೆ ಕಳುಹಿಸಿ ಖುದ್ದು ಆಹ್ವಾನ ನೀಡಿದ್ದಾರೆ.
ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ಕೇರಳ, ಕರ್ನಾಟಕ, ತೆಲಂಗಾಣ, ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಓಡಿಶಾ ಮುಖ್ಯಮಂತ್ರಿಗಳನ್ನು ಜಂಟಿ ಕ್ರಿಯಾ ಸಮಿತಿ ಸಭೆಗೆ ಆಹ್ವಾನಿಸಲಾಗಿದೆ.
ಕೇಂದ್ರದ ವಿರುದ್ಧ ಕರ್ನಾಟಕ ಸೆಡ್ಡು
ತೆರಿಗೆ ಪಾಲು ಹಂಚಿಕೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ಕೇಂದ್ರದ ವಿರುದ್ಧ ಅಸಮಾಧಾನ ಹೊಂದಿರುವ ಕರ್ನಾಟಕ ರಾಜ್ಯ ಕ್ಷೇತ್ರ ಪುನರ್ ವಿಂಗಡಣೆ ಪ್ರಸ್ತಾವವನ್ನು ವಿರೋಧಿಸಿ ತಮಿಳುನಾಡು ಹೋರಾಟಕ್ಕೆ ಕೈ ಜೋಡಿಸಿದೆ.
ರಾಜ್ಯದ ಹಿತಾಸಕ್ತಿ, ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿರುವ ಕೇಂದ್ರ ಸರ್ಕಾರದ ನಡೆಗೆ ರಾಜ್ಯ ಸರ್ಕಾರ ಈ ಹಿಂದಿನಿಂದಲೂ ಆಕ್ರೋಶ ವ್ಯಕ್ತಪಡಿಸುತ್ತಿದೆ. ತೆರಿಗೆ ಪಾಲಿನಲ್ಲಿ ಅನ್ಯಾಯ, ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಅಸಮರ್ಪಕ ಅನುದಾನ, ನೀರಾವರಿ ಯೋಜನೆಗಳಿಗೆ ಅನುಮತಿ ನಿರಾಕರಣೆ ಸೇರಿದಂತೆ ಹಲವು ವಿಚಾರಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಧ್ಯೆ ಸಂಘರ್ಷ ನಡೆಯುತ್ತಿದೆ. ಈಗ ಡಿಲಿಮಿಟೇಷನ್ ಕುರಿತು ಪ್ರಸ್ತಾವವನ್ನೂ ರಾಜ್ಯ ಸರ್ಕಾರ ವಿರೋಧಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ದಕ್ಷಿಣ ರಾಜ್ಯಗಳ ವಿರೋಧ ಏಕೆ?
ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಮಿಳುನಾಡು ಒಳಗೊಂಡು ದಕ್ಷಿಣ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ. ಮೊದಲ ಹಂತದಲ್ಲಿ ಅಸ್ತಿತ್ವದಲ್ಲಿರುವ 543 ಸ್ಥಾನಗಳನ್ನು ರಾಜ್ಯಗಳ ನಡುವೆ ಪುನರ್ ವಿಂಗಡಣೆ ಮಾಡಬಹುದು. ಎರಡನೇ ಹಂತದಲ್ಲಿ ಒಟ್ಟು ಸ್ಥಾನಗಳ ಸಂಖ್ಯೆಯನ್ನು 800ಕ್ಕಿಂತ ಹೆಚ್ಚಿಸಬಹುದು ಎನ್ನಲಾಗಿದೆ.
2026 ರ ನಂತರ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ನಡೆದಿದ್ದೇ ಆದಲ್ಲಿ ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ರಾಜ್ಯಗಳು ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳಲಿವೆ ಎಂಬ ಆತಂಕ ದಕ್ಷಿಣ ರಾಜ್ಯಗಳಲ್ಲಿದೆ.
ಕ್ಷೇತ್ರ ಪುನರ್ ವಿಂಗಡಣೆ ಮೂಲಕ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ. ಆದರೆ, ಜನಸಂಖ್ಯೆ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಂಡಿರುವ ರಾಜ್ಯಗಳು ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳಲಿವೆ. ಆದರೆ, ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಲೋಕಸಭಾ ಸ್ಥಾನಗಳು ಹೆಚ್ಚಲಿವೆ. ಆಗ ಲೋಕಸಭೆಯಲ್ಲಿ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾಗಲಿದೆ. ಉತ್ತರ ಭಾರತದ ರಾಜ್ಯಗಳ ಮೇಲೆ ಹಿಡಿತ ಸಾಧಿಸಿದರೆ ಸುಲಭವಾಗಿ ಅಧಿಕಾರಕ್ಕೇರಬಹುದು ಎಂಬುದು ಎನ್‌ಡಿಎ ಸರ್ಕಾರದ ಲೆಕ್ಕಾಚಾರವಾಗಿದೆ.
ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಅಧಿಕಾರ ಹಿಡಿಯಲು ಹೆಣಗಾಡುತ್ತಿದೆ. ಹಾಗಾಗಿ ಕ್ಷೇತ್ರ ಪುನರ್ ವಿಂಗಡಣೆ ಮಾರ್ಗದ ಮೂಲಕ ಅಧಿಕಾರ ಹಿಡಿಯುವುದು ಕೇಂದ್ರದ ತಂತ್ರಗಾರಿಕೆಯಾಗಿದೆ ಎನ್ನಲಾಗಿದೆ.
ಪ್ರಸ್ತುತ ಲೋಕಸಭೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಭಾರತದ ರಾಜ್ಯಗಳ ಪ್ರಾತಿನಿಧ್ಯ ಹೆಚ್ಚಾಗಿದೆ. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳಿರುವ ಕಾರಣ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ಕೇವಲ ಶೇ.24 ರಷ್ಟಿದೆ. ಕ್ಷೇತ್ರ ಪುನರ್ ವಿಂಗಡಣೆ ಆದಲ್ಲಿ ಅದು ಶೇ 19ಕ್ಕೆ ಕುಸಿಯಲಿದೆ. ದಕ್ಷಿಣ ರಾಜ್ಯಗಳಲ್ಲಿ ಗೆಲುವು ಸಾಧಿಸದೆ ಹೋದರೂ ಉತ್ತರ ಭಾರತದ ರಾಜ್ಯಗಳನ್ನು ಗೆಲ್ಲುವುದರಿಂದಲೇ ಸರ್ಕಾರ ರಚನೆಗೆ ಬಹುಮತ ಸಿಗಲಿದೆ ಎಂಬುದು ಕೇಂದ್ರದ ಆಲೋಚನೆಯಾಗಿದೆ ಎಂದು ತಿಳಿದು ಬಂದಿದೆ.
ಕ್ಷೇತ್ರ ಪುನರ್ ವಿಂಗಡಣೆ ಕುರಿತು ದಕ್ಷಿಣ ರಾಜ್ಯಗಳ ಆತಂಕ ನಿವಾರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಯಾವ ಆಧಾರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ನಡೆಯುತ್ತಿದೆ. ಯಾವ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಎಂಬ ಸ್ಪಷ್ಟನೆ ನೀಡದಿರುವುದು ಹೋರಾಟ ರೂಪಿಸಲು ಕಾರಣವಾಗಿದೆ.
ನವದಂಪತಿಗಳು ಬೇಗ ಮಕ್ಕಳನ್ನು ಮಾಡಿಕೊಳ್ಳಿ ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಇದೇ ಕಾರಣಕ್ಕಾಗಿ ಹೇಳಿಕೆ ನೀಡಿದ್ದರು ಎಂಬುದನ್ನು ಸ್ಮರಿಸಬಹುದಾಗಿದೆ.