Delhi CM Rekha Gupta Assault Case: Second Accused Arrested
x

ದೆಹಲಿ ಸಿಎಂ ರೇಖಾಗುಪ್ತಾ ಮೇಲೆ ಹಲ್ಲೆ ಮಾಡಿದ್ದ ತಹಸಿನ್‌ ಸೈಯದ್‌

ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಎರಡನೇ ಆರೋಪಿ ಬಂಧನ

ಆಗಸ್ಟ್ 20ರಂದು ದೆಹಲಿ ಮುಖ್ಯಮಂತ್ರಿಯವರ ಸಿವಿಲ್ ಲೈನ್ಸ್‌ನಲ್ಲಿರುವ ಕಚೇರಿಯಲ್ಲಿ ನಡೆದ 'ಜನ ಸುನ್‌ವಾಯಿ' (ಸಾರ್ವಜನಿಕ ಅಹವಾಲು ಸ್ವೀಕಾರ) ಕಾರ್ಯಕ್ರಮದ ವೇಳೆ ಆಟೋ ಚಾಲಕ ಖಿಮ್ಜಿ ಎಂಬಾತ ರೇಖಾ ಗುಪ್ತಾ ಅವರ ಮೇಲೆ ಹಲ್ಲೆ ನಡೆಸಿದ್ದ.


ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎರಡನೇ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಸಕ್ರಿಯಾ ರಾಜೇಶ್‌ಭಾಯ್ ಖಿಮ್ಜಿಯ ಸ್ನೇಹಿತನಾದ ತಹಸೀನ್ ಸೈಯದ್‌ನನ್ನು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಬಂಧಿಸಿ, ದೆಹಲಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆ.20ರಂದು ಮುಖ್ಯಮಂತ್ರಿಯವರ ಸಿವಿಲ್ ಲೈನ್ಸ್‌ನಲ್ಲಿರುವ ಕಚೇರಿಯಲ್ಲಿ ನಡೆದ 'ಜನ ಸುನ್‌ವಾಯಿ' (ಸಾರ್ವಜನಿಕ ಅಹವಾಲು ಸ್ವೀಕಾರ) ಕಾರ್ಯಕ್ರಮದ ವೇಳೆ ಆಟೋ ಚಾಲಕನಾದ ಖಿಮ್ಜಿ, ದೆಹಲಿ ಸಿಎಂ ರೇಖಾ ಗುಪ್ತಾ ಅವರ ಮೇಲೆ ಹಲ್ಲೆ ನಡೆಸಿದ್ದ.

ಬೀದಿ ನಾಯಿಗಳನ್ನು ಸ್ಥಳಾಂತರಿಸುವ ಕುರಿತ ಸುಪ್ರೀಂಕೋರ್ಟ್ ಆದೇಶವನ್ನು ವಿರೋಧಿಸಿ ಈ ಕೃತ್ಯ ಎಸಗಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ. ತನಿಖೆ ವೇಳೆ ಆರೋಪಿ ಖಿಮ್ಜಿ ಮುಖ್ಯಮಂತ್ರಿಯವರ ನಿವಾಸದ ವಿಡಿಯೋವನ್ನು ತನ್ನ ಸ್ನೇಹಿತ ತಹಸೀನ್‌ಗೆ ಕಳುಹಿಸಿದ್ದ. ಹಲ್ಲೆಗೂ ಮುನ್ನ ಖಿಮ್ಜಿಯಿಂದ ತಹಸೀನ್‌ 2 ಸಾವಿರ ರೂ.ಕಳುಹಿಸಿದ್ದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತಹಸೀನ್‌ನನ್ನು ಬಂಧಿಸಲಾಗಿದೆ.

ಪೊಲೀಸರ ತನಿಖೆಯ ಪ್ರಕಾರ ಪ್ರಮುಖ ಆರೋಪಿ ಖಿಮ್ಜಿ ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಈ ಹಿಂದೆ ರಾಜ್‌ಕೋಟ್‌ನಲ್ಲಿ ಆತನ ವಿರುದ್ಧ ಹಲ್ಲೆ ಮತ್ತು ಅಕ್ರಮ ಮದ್ಯ ಮಾರಾಟ ಸೇರಿ ಐದು ಪ್ರಕರಣಗಳು ದಾಖಲಾಗಿವೆ. 2017ರಲ್ಲಿ ವ್ಯಕ್ತಿಯೊಬ್ಬನ ತಲೆಗೆ ಕತ್ತಿಯಿಂದ ಹೊಡೆದ ಪ್ರಕರಣವೂ ಆತನ ಮೇಲಿದೆ. ಭದ್ರತೆ ಹೆಚ್ಚಾಗಿದ್ದರಿಂದ ಚಾಕುವಿನಿಂದ ಹಲ್ಲೆ ಮಾಡುವ ತನ್ನ ಮೂಲ ಯೋಜನೆ ಕೈಬಿಟ್ಟಿದ್ದಾಗಿ ಆತ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಖಿಮ್ಜಿ ಐದು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದು, ಆತನ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.

Read More
Next Story