
ದೆಹಲಿ ಚಲೋ | ಕರ್ನಾಟಕದ ರೈತರ ಬಿಡುಗಡೆಗೆ ಸಿ.ಎಂ ಸಿದ್ದರಾಮಯ್ಯ ಪತ್ರ
ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ರೈತರಿಂದ ಒತ್ತಾಯ
ಕರ್ನಾಟಕದ ರೈತರನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದ್ದು, ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದ ರೈತರು ಸೇರಿದಂತೆ ದೇಶದ ವಿವಿಧ ರಾಜ್ಯಗಳ ರೈತರು ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ "ದೆಹಲಿ ಚಲೋ" ಹೋರಾಟ ನಡೆಸುತ್ತಿದ್ದಾರೆ.
ಮಧ್ಯಪ್ರದೇಶದಲ್ಲಿ ಕರ್ನಾಟಕದ ರೈತರನ್ನು ಬಂಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರ ಬರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಲು ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಕರ್ನಾಟಕದ ರೈತರನ್ನು ಯಾವುದೇ ಕಾರಣ ನೀಡದೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಂಧಿಸಲಾಗಿದೆ.
ಕರ್ನಾಟಕದ ರೈತರನ್ನು ಬಂಧಿಸಿ ನಾಲ್ಕು ದಿನಗಳಾದರೂ, ಬಿಡುಗಡೆ ಮಾಡಿಲ್ಲ. ಮಧ್ಯಪ್ರದೇಶದ ಪೊಲೀಸರು ರೈತರನ್ನು ಒಂದು ಜಾಗದಿಂದ ಒಂದು ಮತ್ತೊಂದು ಜಾಗಕ್ಕೆ ವರ್ಗಾಯಿಸುತ್ತಿದ್ದರು ಎಂದು ಈಗ ತಿಳಿದುಬಂದಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಶಾಂತಿಯುತವಾಗಿ ಭಾಗವಹಿಸುವುದು ಜನರ ಸಾಂವಿಧಾನಿಕ ಹಕ್ಕು. ಉತ್ತಮ ರೈತ ನೀತಿಗಳನ್ನು ಬಯಸುತ್ತಿರುವ ರೈತರನ್ನು ಮಧ್ಯಪ್ರದೇಶದಲ್ಲಿ ಪೊಲೀಸರು ಬಂಧಿಸಿ, ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ ಎಂದಿದ್ದಾರೆ. ವಿಳಂಬ ಮಾಡದೆ ಖುದ್ದು ಪರಿಶೀಲನೆ ನಡೆಸಿ , ರೈತರನ್ನು ಸ್ಥಳದಿಂದ ಸ್ಥಳಕ್ಕೆ ಸ್ಥಳಾಂತರಿಸದೆ ಕೂಡಲೇ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದಾರೆ.
ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ: ಆರೋಪ
ಕೇಂದ್ರ ಸರ್ಕಾರವು ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ಅವರು ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಕೇಂದ್ರ ಸರ್ಕಾರವು ವಾಮಮಾರ್ಗ ಅನುಸರಿಸುತ್ತಿದೆ. ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿದ್ದು, ೭೦ಕ್ಕೂ ಹೆಚ್ಚು ಜನ ರೈತರು ಅಸ್ವಸ್ಥರಾಗಿದ್ದಾರೆ. ಹರಿಯಾಣ, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರೈತರು ತೀವ್ರ ಹೋರಾಟವನ್ನು ನಡೆಸುತ್ತಿದ್ದಾರೆ. ಆದರೆ, ರೈತರು ಗಡಿ ಪ್ರವೇಶಿಸುವುದನ್ನು ತಡೆಯುವ ಉದ್ದೇಶದಿಂದ ಪೊಲೀಸರು ರೈಲು ನಿಲ್ದಾಣಗಳಲ್ಲೇ ರೈತರನ್ನು ತಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರೊಂದಿಗೆ ಮಾತನಾಡಿದ ಸಿ.ಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದಾರೆ. ರೈತರ ಆರೋಗ್ಯದ ಬಗ್ಗೆ ವಿಚಾರಿಸಿದರು.