
ನನ್ನ ವಿರುದ್ಧ ಪಿತೂರಿ ನಡೆಸುತ್ತಿರುವ ಬಿಜೆಪಿಯನ್ನು ಸೋಲಿಸಿ: ಸಿಎಂ ಸಿದ್ದರಾಮಯ್ಯ ಕರೆ
ನನ್ನ ವಿರುದ್ಧ ಷಡ್ಯಂತ್ರ, ಪಿತೂರಿ ನಡೆಸುತ್ತಿರುವ ಬಿಜೆಪಿಯನ್ನು ಉಪ ಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಿ ಎಂದು ಸಿಎಂ ಸಿದ್ದರಾಮಯ್ಯ ಸಂಡೂರು ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕರೆ ನೀಡಿದರು.
ಉಪ ಚುನಾವಣೆಯ ಹೊಸ್ತಿಲಲ್ಲಿರುವ ಸಂಡೂರಿನಲ್ಲಿ ತಾಲ್ಲೂಕು ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ವೇಳೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸುವುದರ ಜೊತೆಗೆ ಪೂರ್ಣಗೊಂಡಿರುವ ಸುಮಾರು 400 ಕೋಟಿಗೂ ಅಧಿಕ ಮೊತ್ತದ ಯೋಜನೆಗಳನ್ನು ಸಿಎಂ ಸಂಡೂರು ಜನತೆಗೆ ಅರ್ಪಿಸಿದರು.
ಈ ತುಕಾರಾಮ್ ಅವರು ಈ ಬಾರಿ ಶಾಸಕರಾದ ಬಳಿಕ 1200 ಕೋಟಿ ಅನುದಾನವನ್ನು ಸಂಡೂರು ಜನತೆಗಾಗಿ ತಂದಿದ್ದಾರೆ. ಅಭಿವೃದ್ಧಿ ಎಂದರೆ ತುಕಾರಾಮ್. ತುಕಾರಾಮ್ ಎಂದರೆ ಅಭಿವೃದ್ಧಿ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಡೂರಿನ ಜನತೆಯೂ ಸೇರಿ ರಾಜ್ಯದ ಜನತೆಗೆ ಐದೈದು ಗ್ಯಾರಂಟಿಗಳನ್ನು 56000 ಕೋಟಿ ವೆಚ್ಚದಲ್ಲಿ ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ಬಿಜೆಪಿ ಯವರು ಸುಳ್ಳುಗಳನ್ನು ಎರಚುತ್ತಾ ಕುಳಿತಿದ್ದಾರೆ. ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ಬಿಜೆಪಿಯ ಪೆದ್ದ ಶಿಖಾಮಣಿಗಳು ಸುಳ್ಳುಗಳನ್ನು ಎರಚುತ್ತಾ ಕುಳಿತಿದ್ದಾರೆ. ಹಾಗಿದ್ರೆ ಬರೀ ಸಂಡೂರಿನ ಅಭಿವೃದ್ಧಿಗೆ ಕಳೆದ ಒಂದು ವರ್ಷದಲ್ಲಿ ತುಕಾರಾಮ್ ಅವರು 1200 ಕೋಟಿ ರೂಪಾಯಿ ಅನುದಾನ ತರಲು ಸಾಧ್ಯವಾಗುತ್ತಿತ್ತೇ? ಎಂದು ಪ್ರಶ್ನಿಸಿದರು.
ಸಂಡೂರಿನ ಜನರ ತೆರಿಗೆ ಹಣಕ್ಕೆ, ರಾಜ್ಯದ ಜನರ ತೆರಿಗೆ ಹಣಕ್ಕೆ ಕೇಂದ್ರ ಸರ್ಕಾರ ನಿರಂತರವಾಗಿ ವಂಚಿಸುತ್ತಿದೆ. ನಿಮಗೆ, ನಮಗೆ ಕೇಂದ್ರದಿಂದ ಬರಬೇಕಾದ ಹಣವನ್ನು ಕೊಡಿ ಎಂದು ಮೋದಿಗೆ ಕೇಳುವ ಧೈರ್ಯ ಬಿಜೆಪಿಗೆ ಇಲ್ಲ. ವಿಜಯೇಂದ್ರಗೂ ಇಲ್ಲ. ಇದು ಸಂಡೂರಿನ ಜನತೆಗೆ, ರಾಜ್ಯದ ಜನತೆಗೆ ಬಗೆದ ದ್ರೋಹ ಅಲ್ಲವೇ? ತೆರಿಗೆ ಕಟ್ಟುವುದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಆದರೆ ನಮ್ಮ ಪಾಲು ವಾಪಾಸ್ ಕೊಡುವುದರಲ್ಲಿ ಕೇಂದ್ರ ಸರ್ಕಾರ ಕೊನೆ ಸ್ಥಾನದಲ್ಲಿದೆ ಎಂದು ಸಿಎಂ ಟೀಕಿಸಿದರು.
ಸಂಡೂರಿನಲ್ಲಿ 12 ಸಾವಿರ ಮನೆಗಳನ್ನು ಕಟ್ಟಿ ಕ್ಷೇತ್ರದ ಜನರಿಗೆ ಹಂಚಿಕೆ ಮಾಡಿರುವುದರ ಶ್ರೇಯಸ್ಸು ಸಂತೋಷ್ ಲಾಡ್- ತುಕಾರಾಮ್ ಜೋಡಿಗೆ ಸಲ್ಲಬೇಕು. ತುಕಾರಾಮ್ ಅವರು ನನ್ನ ಬಲವಂತಕ್ಕೆ, ಪಕ್ಷದ ಮಾತಿಗೆ ಬೆಲೆ ಕೊಟ್ಟು ಲೋಕಸಭೆಗೆ ಸ್ಪರ್ಧಿಸಿದರು. ಅವರು ಸಂಡೂರು ಜನತೆಯ ಮೇಲೆ ಬಹಳ ಪ್ರೀತಿ, ವಿಶ್ವಾಸ ಇಟ್ಟುಕೊಂಡಿದ್ದಾರೆ. ಅವರಂತಹ ಕಾಯಕ ನಾಯಕ ನಿಮಗೆ ಬೇರೆಲ್ಲೂ ಸಿಗುವುದಿಲ್ಲ. ಹೀಗಾಗಿ ಸಂಡೂರು ಉಪಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನಿಮ್ಮ ಆಶೀರ್ವಾದ ಹೀಗೇ ಮುಂದುವರೆಯಲಿ ಎಂದು ಸಿಎಂ ವಿನಂತಿಸಿದರು.