
ನಿಮಗೆ ದಮ್ಮಯ್ಯ ಅಂತೀನಿ, ಕುಮಾರಸ್ವಾಮಿಯನ್ನು ಸೋಲಿಸಿ: ಸಿಎಂ ಸಿದ್ದರಾಮಯ್ಯ ಮನವಿ
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಮತ್ತು ರಾಜ್ಯದ ಬಿಜೆಪಿ ಸಂಸದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ. ದಯವಿಟ್ಟು ಮುಂದಿನ ಚುನಾವಣೆಯಲ್ಲಿ ಅವರನ್ನು ಸೋಲಿಸಿ, ನಿಮಗೆ ದಮ್ಮಯ್ಯ ಎಂದು ಕೇಳಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನತೆಯಲ್ಲಿ ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಮತ್ತು ರಾಜ್ಯದ ಬಿಜೆಪಿ ಸಂಸದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯಕ್ಕೆ ದ್ರೋಹ ಮಾಡಿದವರನ್ನು ಗೆಲ್ಲಿಸಬೇಡಿ
ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಕುಮಾರಸ್ವಾಮಿ ಸೇರಿದಂತೆ ಯಾವುದೇ ಬಿಜೆಪಿ ಸಂಸದರು ಧ್ವನಿ ಎತ್ತಿಲ್ಲ ಎಂದು ಆರೋಪಿಸಿದ ಸಿದ್ದರಾಮಯ್ಯ, "ರಾಜ್ಯಕ್ಕೆ ಆಗುತ್ತಿರುವ ಮೋಸ, ದ್ರೋಹದ ಬಗ್ಗೆ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಅವರು ಒಂದೇ ಒಂದು ದಿನವಾದರೂ ಸಂಸತ್ತಿನಲ್ಲಿ ಬಾಯಿ ಬಿಟ್ಟಿದ್ದಾರಾ? ಇಂಥವರನ್ನು ಗೆಲ್ಲಿಸಿ ರಾಜ್ಯಕ್ಕಾಗಲೀ, ನಿಮಗಾಗಲೀ ಏನು ಪ್ರಯೋಜನ? ಇವರನ್ನು ಗೆಲ್ಲಿಸಿದ್ದಕ್ಕೆ ಈಗೇಕೆ ತಲೆ ಮೇಲೆ ಕೈ ಹೊತ್ತು ಕೂರುತ್ತೀರಿ?" ಎಂದು ಜನರನ್ನು ಪ್ರಶ್ನಿಸಿದರು.
"ನಾನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು 'ಅಮಾವಾಸ್ಯೆ ಸೂರ್ಯ' ಎಂದು ಕರೆಯುತ್ತೇನೆ. ಅವರಾಗಲೀ, ಕುಮಾರಸ್ವಾಮಿ ಅವರಾಗಲೀ ರಾಜ್ಯದ ಪರವಾಗಿ ಎಂದಿಗೂ ನಿಂತಿಲ್ಲ. ಹೀಗಿರುವಾಗ ಅವರನ್ನು ಮತ್ತೆ ಗೆಲ್ಲಿಸುವುದು ರಾಜ್ಯಕ್ಕೆ ಮಾಡುವ ಅನ್ಯಾಯ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರದ್ದು ಸ್ವಂತ ಮಾತಿಲ್ಲ, ಎಲ್ಲವೂ ಆರ್‌ಎಸ್‌ಎಸ್ ಪಾಠ
ಬಿಜೆಪಿ ನಾಯಕರಾದ ಆರ್. ಅಶೋಕ್ ಮತ್ತು ಬಿ.ವೈ. ವಿಜಯೇಂದ್ರ ಅವರಿಗೆ ಸ್ವಂತಿಕೆಯಿಲ್ಲ, ಅವರು ಕೇವಲ ಆರ್‌ಎಸ್‌ಎಸ್ ಬರೆದುಕೊಟ್ಟಿದ್ದನ್ನು ಓದುತ್ತಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು. "ಒಮ್ಮೆ ವಿಧಾನಸಭೆಯಲ್ಲಿ ಆರ್. ಅಶೋಕ್ ಅವರನ್ನೇ ಕೇಳಿದ್ದೆ, ಆಗ ಅವರು 'ಏನ್ಮಾಡೋದು ಸರ್, ಆರ್‌ಎಸ್‌ಎಸ್‌ನವರು ಬಂದು ಕೂತಿರುತ್ತಾರೆ, ಅವರು ಹೇಳಿದ್ದನ್ನೇ ಹೇಳಬೇಕು, ಇಲ್ಲದಿದ್ದರೆ ನಮ್ಮನ್ನು ಬಿಡುವುದಿಲ್ಲ' ಎಂದು ಅಸಹಾಯಕತೆ ತೋಡಿಕೊಂಡಿದ್ದರು," ಎಂದು ಸಿಎಂ ಹಳೆಯ ಘಟನೆಯನ್ನು ಮೆಲುಕು ಹಾಕಿದರು.
ಅಮಾವಾಸ್ಯೆ ಸೂರ್ಯ ಬಾಯಿ ಬಿಟ್ಟಿದ್ದಾರಾ?
ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಿಜೆಪಿ ಸಂಸದರು ಬಾಯಿ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿಎಂ, "ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ನಿಮ್ಮ ಪರವಾಗಿ ಸಂಸತ್ತಿನಲ್ಲಿ ಎಂದಾದರೂ ಮಾತನಾಡಿದ್ದಾರಾ? ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ, ನಾನು ಅವರನ್ನು 'ಅಮಾವಾಸ್ಯೆ ಸೂರ್ಯ' ಅಂತ ಕರೆಯುತ್ತೇನೆ, ಅವರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿ ಬಿಟ್ಟಿದ್ದಾರಾ?" ಎಂದು ಪ್ರಶ್ನಿಸಿದರು. ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರೂ ರಾಜ್ಯದ ಪರವಾಗಿ ಧ್ವನಿ ಎತ್ತಿಲ್ಲ ಎಂದು ದೂರಿದರು.
ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧ
ಈ ವೇಳೆ, ಗಾಂಧಿನಗರದ ಶಾಸಕ ದಿನೇಶ್ ಗುಂಡೂರಾವ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಸಿಎಂ, "ದಿನೇಶ್ ಗುಂಡೂರಾವ್ ಅವರು ಕೇವಲ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಶ್ರಮಿಸುವ ಜನಮುಖಿ ನಾಯಕ. ರಸ್ತೆ ಅಗಲೀಕರಣದಿಂದ ಜನರಿಗೆ ತೊಂದರೆಯಾಗುತ್ತದೆ ಎಂದು ಅದನ್ನು ನಿರಾಕರಿಸಿ, ಚಿಕ್ಕಪೇಟೆಯ ಆಧುನೀಕರಣಕ್ಕೆ ಯೋಜನೆ ರೂಪಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು," ಎಂದು ಕರೆ ನೀಡಿದರು. ವೇದಿಕೆಯಲ್ಲೇ ಗ್ರೇಟರ್ ಬೆಂಗಳೂರು ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ ಸಿಎಂ, "ಒಂದು ವಾರದೊಳಗೆ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಿ, ಒಂದು ಲೇಯರ್ ಟಾರ್ ಹಾಕಬೇಕು" ಎಂದು ತಾಕೀತು ಮಾಡಿದರು.