Decrease in AIDS cases in the state, increase in homosexual men is a concern
x

ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿ ಏಡ್ಸ್‌ ಪ್ರಕರಣಗಳ ಇಳಿಕೆ, ಪುರುಷ ಸಲಿಂಗಿಗಳಲ್ಲಿ ಹೆಚ್ಚಳ; ಆತಂಕ

2004 ರಿಂದ 2025ರವರೆಗೆ ಒಂದು ಲಕ್ಷಕ್ಕೂ ಅಧಿಕ ಜನರು ಏಡ್ಸ್‌ಗೆ ಬಲಿಯಾಗಿದ್ದಾರೆ. ಮೊದಲು ಏಡ್ಸ್ ಕುರಿತು ಅಜ್ಞಾನದಿಂದ ಸಮಾಜದಲ್ಲಿ ಬಹಳ ಸಮಸ್ಯೆ ಆಗಿತ್ತು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.


Click the Play button to hear this message in audio format

ಏಡ್ಸ್ ಸೋಂಕಿತರ ಜೊತೆ ಸರ್ಕಾರ ನಿಲ್ಲುತ್ತದೆ ಎಂದು ಧೈರ್ಯ ತುಂಬಿ, 2030ರೊಳಗೆ ಎಚ್‌ಐವಿ ಹರಡುವಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ಗುರಿ ಹೊಂದಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಿಶ್ವ ಏಡ್ಸ್ ದಿನಾಚರಣೆಯಂದು ಸೋಮವಾರ ಮೈಸೂರಿನ ಜೆ.ಕೆ. ಅಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಒಂದೊಂದು ಜಿಲ್ಲೆಯಲ್ಲಿ ಏಡ್ಸ್ ದಿನಾಚರಣೆ ಆಚರಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವುದಾಗಿ ಹೇಳಿದರು. ಮರಣ ಹೊಂದಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವುದರ ಜೊತೆಗೆ ಸೋಂಕಿತರಿಗೆ ಮಾನಸಿಕ ಬೆಂಬಲ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

2004ರಿಂದ 2025ರವರೆಗೆ ಒಂದು ಲಕ್ಷಕ್ಕೂ ಅಧಿಕ ಜನರು ಏಡ್ಸ್‌ಗೆ ಬಲಿಯಾಗಿದ್ದಾರೆ ಎಂದು ಸಚಿವರು ಬಹಿರಂಗಪಡಿಸಿದರು. ಮೊದಲು ಏಡ್ಸ್ ಕುರಿತ ಅಜ್ಞಾನದಿಂದಾಗಿ ಸಮಾಜದಲ್ಲಿ ಬಹಳ ಸಮಸ್ಯೆಗಳಿದ್ದವು. ಆದರೆ ಇದೀಗ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಎಚ್‌ಐವಿ ಪೀಡಿತರಿಗೆ ಭರವಸೆ ತುಂಬುವ ಕೆಲಸ ಆರೋಗ್ಯ ಇಲಾಖೆ ಮಾಡುತ್ತಿದೆ ಎಂದರು.

ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಏಡ್ಸ್ ಸೋಂಕಿತರು ಸಾಮಾನ್ಯ ಜನರಂತೆ ಬದುಕಬಹುದು ಎಂದು ತಿಳಿಸಿದ ಅವರು, ಸರ್ಕಾರ ಉಚಿತ ಚಿಕಿತ್ಸೆ ಮತ್ತು ಔಷಧಿ ನೀಡುವುದರ ಜೊತೆಗೆ ಮಾನಸಿಕ ಧೈರ್ಯವೂ ತುಂಬುತ್ತಿದೆ ಎಂದು ಹೇಳಿದರು.

ಪುರುಷ ಸಲಿಂಗಿಗಳಲ್ಲಿ ಹೆಚ್ಚಳ ಆತಂಕ

ಇತ್ತೀಚಿಗೆ ಪುರುಷ ಸಲಿಂಗಿಗಳಲ್ಲಿ ಹೆಚ್ಚಿನ ರೋಗಿಗಳು ದಾಖಲಾಗುತ್ತಿರುವುದು ಆತಂಕ ಮೂಡಿಸುತ್ತದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು. ವಿವಿಧ ಆ್ಯಪ್‌ಗಳ ಮೂಲಕ ಮತ್ತು ಹಾಸ್ಟೆಲ್‌ಗಳಲ್ಲಿ ಸ್ನೇಹಿತರ ಸಂಪರ್ಕ ಸಾಧಿಸುವುದರಿಂದ ಈ ಸಮಸ್ಯೆ ಹೆಚ್ಚುತ್ತಿದೆ ಎಂದರು.

ಇದು ಕಾನೂನು ಬಾಹಿರವಲ್ಲದಿರುವುದರಿಂದ ಕೇವಲ ಜಾಗೃತಿ ಮೂಡಿಸುವ ಮೂಲಕವೇ ತಡೆಯಬೇಕಾಗಿದೆ ಎಂದು ಸ್ಪಷ್ಟಪಡಿಸಿದರು. ಸರ್ಕಾರ, ಪಾಲಕರು, ಶಿಕ್ಷಕರು, ಸಮಾಜ ಮತ್ತು ಮಾಧ್ಯಮಗಳ ಸಹಕಾರದಿಂದ ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದು ಒತ್ತಿ ಹೇಳಿದರು.

ಕರ್ನಾಟಕದಲ್ಲಿ ಪರಿಸ್ಥಿತಿ

ಎಚ್‌ಐವಿ ಸೋಂಕಿತರು ಹೆಚ್ಚು ಇರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ ಎಂದು ಸಚಿವರು ಹೇಳಿದರು. ಆದರೆ ಆರೋಗ್ಯ ವ್ಯವಸ್ಥೆ ಚೆನ್ನಾಗಿರುವುದರಿಂದ ಪರಿಸ್ಥಿತಿ ಉಲ್ಬಣಗೊಂಡಿಲ್ಲ ಎಂದು ತಿಳಿಸಿದರು. ಅಧಿಕಾರಿಗಳು ಎನ್‌ಜಿಒಗಳ ಜೊತೆ ಸೇರಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ಸೋಂಕಿತರಿಗೆ ಸಮಾಜದಲ್ಲಿ ಮುಜುಗರವಾಗದಂತೆ ತಡೆಯುವುದು ಮತ್ತು ಸರಿಯಾಗಿ ಚಿಕಿತ್ಸೆ ಪಡೆಯುವಂತೆ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದರು.

ಬೆಂಗಳೂರು-ಬೆಳಗಾವಿಯಲ್ಲಿ ಹೆಚ್ಚು ಪ್ರಕರಣಗಳು

ರಾಜ್ಯ ಏಡ್ಸ್ ನಿಯಂತ್ರಣ ಮಾಹಿತಿ ಪ್ರಕಾರ ಬೆಂಗಳೂರು ನಗರ ಮತ್ತು ಬೆಳಗಾವಿಯಲ್ಲಿ ಹೆಚ್ಚು ಎಚ್‌ಐವಿ ಸೋಂಕಿತರಿದ್ದಾರೆ. ಆದರೆ ಪಾಸಿಟಿವಿಟಿ ದರದಲ್ಲಿ ಬಾಗಲಕೋಟೆ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.

2024ರವರೆಗೆ ರಾಜ್ಯದಲ್ಲಿ ಒಟ್ಟು 4.5 ಲಕ್ಷ ಎಚ್‌ಐವಿ ಸೋಂಕಿತರಿದ್ದು, ಪ್ರಸ್ತುತ ಆಂಟಿ-ರೆಟ್ರೋವೈರಲ್ ಥೆರಪಿ (ART) ಕೇಂದ್ರಗಳಲ್ಲಿ 3.2 ಲಕ್ಷಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸ ಪ್ರಕರಣಗಳಲ್ಲಿ ಇಳಿಕೆ

ರಾಜ್ಯದಲ್ಲಿ ಹೊಸದಾಗಿ ಪತ್ತೆಯಾಗುವ ಎಚ್‌ಐವಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಸಂತಸದ ಸುದ್ದಿಯಾಗಿದೆ. 2010ರಲ್ಲಿ ಪ್ರತಿ 100 ಗರ್ಭಿಣಿಯರಲ್ಲಿ ಶೇ. 0.48 ಇದ್ದ ಎಚ್‌ಐವಿ ಪ್ರಮಾಣ ಪ್ರಸ್ತುತ ಶೇ. 0.15ಕ್ಕಿಂತ ಕಡಿಮೆಯಾಗಿದೆ.

Read More
Next Story