Tungabhadra Dam | ಟಿಬಿ ಡ್ಯಾಂ ಕ್ರಸ್ಟ್‌ ಗೇಟ್‌ ಬದಲಾವಣೆಗೆ ನಿರ್ಧಾರ: ಅಧಿಕಾರಿಗಳಿಂದ ಪರಿಶೀಲನೆ
x

Tungabhadra Dam | ಟಿಬಿ ಡ್ಯಾಂ ಕ್ರಸ್ಟ್‌ ಗೇಟ್‌ ಬದಲಾವಣೆಗೆ ನಿರ್ಧಾರ: ಅಧಿಕಾರಿಗಳಿಂದ ಪರಿಶೀಲನೆ

ತಾಂತ್ರಿಕ ತಜ್ಞರ ತಂಡ ಈಗಾಗಲೇ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜಲಾಶಯದ ಎಲ್ಲ 33 ಗೇಟ್ ಗಳನ್ನು ಯಾವಾಗ ಬದಲಾಯಿಸಬೇಕು. ಎಲ್ಲಿ ತಯಾರು ಮಾಡಿಸಬೇಕು, ಹೊಸ ಮಾದರಿ ಗೇಟ್‌ಗಳು ಯಾವ ರೀತಿ ಇರಬೇಕು ಎನ್ನುವ ಬಗ್ಗೆ ಟಿಬಿ ಡ್ಯಾಂ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.


ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ಗಳ ಬದಲಾವಣೆಗೆ ಕಾಲ ಕೂಡಿ ಬಂದಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋದ ಹಿನ್ನೆಲೆಯಲ್ಲಿ ಜಲಾಶಯದ ಗೇಟುಗಳ ಭದ್ರತೆ ಕುರಿತು ಆತಂಕ ವ್ಯಕ್ತವಾಗಿತ್ತು. ಇದರ ಪರಿಣಾಮ ಹಳೆಯ ಕ್ರಸ್ಟ್ ಗೇಟ್‌ಗಳನ್ನು ತೆರವು ಮಾಡಿ, ಹೊಸ ಗೇಟುಗಳನ್ನು ಅಳವಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಯಾವುದೇ ಜಲಾಶಯದಲ್ಲಿ ಐವತ್ತು ವರ್ಷದ ನಂತರ ಕ್ರಸ್ಟ್ ಗೇಟ್ ಬದಲಿಸಬೇಕು ಎಂಬ ನಿಯಮವಿದೆ. ಆದರೆ 1953 ರಲ್ಲಿ ಜಲಾಶಯದ ಆರಂಭವಾದಾಗಿನಿಂದ ಕ್ರಸ್ಟ್ ಗೇಟ್ ಬದಲಿಸಿರಲಿಲ್ಲ. ಈಗ ಒಂದು ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋದ ಬಳಿಕ ತುಂಗಭದ್ರ ಜಲಾಶಯ ಮಂಡಳಿ ಹೊಸ ಗೇಟುಗಳನ್ನು ಅಳವಡಿಸಲು ಈಗಾಗಲೇ ಪರಿಶೀಲನೆ ನಡೆಸಿದೆ.

ಕೊಪ್ಪಳ ತಾಲೂಕಿನ ಮುನಿರಾಬಾದ್‌ ಬಳಿ ಇರುವ ತುಂಗಭದ್ರಾ ಜಲಾಶಯವು ಕರ್ನಾಟಕದ ನಾಲ್ಕು ಜಿಲ್ಲೆಗಳು, ನೆರೆಯ ತೆಲಂಗಾಣ, ಆಂಧ್ರಪ್ರದೇಶದ ಲಕ್ಷಾಂತರ ಜನರಿಗೆ ಜೀವನಾಡಿಯಂತಿದೆ. ಕುಡಿಯುವ ನೀರು ಮತ್ತು ಕೃಷಿ ಬಳಕೆಗೆ ಜಲಾಶಯದಿಂದಲೇ ನೀರು ಪೂರೈಕೆಯಾಗಲಿದೆ. ಕಳೆದ ಆಗಸ್ಟ್ 10 ರಂದು ರಾತ್ರಿ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿತ್ತು. ಇದರಿಂದ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹೋಗಿತ್ತು.

ಜಲಾಶಯದ ಕ್ರಸ್ಟ್ ಗೇಟ್‌ಗಳ ಚೈನ್ ಲಿಂಕ್ ಬದಲಿಸದ ಕಾರಣ ಗೇಟ್‌ ಕೊಚ್ಚಿಕೊಂಡು ಹೋಗಿತ್ತು. ಜಲಾಶಯದ ಗೇಟ್‌ಗಳನ್ನು ಕೂಡಲೇ ಬದಲಿಸಬೇಕು ಎಂಬ ತಜ್ಞರ ಸೂಚನೆ ಹಿನ್ನೆಲೆಯಲ್ಲಿ ಗೇಟ್‌ಗಳ ಬದಲಾವಣೆಗೆ ಸರ್ಕಾರ ಮುಂದಾಗಿದೆ.

ತಾಂತ್ರಿಕ ತಜ್ಞರ ತಂಡ ಈಗಾಗಲೇ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜಲಾಶಯದ ಎಲ್ಲ 33 ಗೇಟ್ ಗಳನ್ನು ಯಾವಾಗ ಬದಲಾಯಿಸಬೇಕು. ಎಲ್ಲಿ ತಯಾರು ಮಾಡಿಸಬೇಕು, ಹೊಸ ಮಾದರಿ ಗೇಟ್‌ಗಳು ಯಾವ ರೀತಿ ಇರಬೇಕು ಎನ್ನುವ ಬಗ್ಗೆ ಟಿಬಿ ಡ್ಯಾಂ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸದ್ಯ ಜಲಾಶಯ ತುಂಬಿರುವ ಕಾರಣ ಬರುವ ಬೇಸಿಗೆ ಅವಧಿಯಲ್ಲಿ ಗೇಟ್‌ಗಳ ಬದಲಾವಣೆಗೆ ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿದೆ.

ಅಣೆಕಟ್ಟು ಕ್ರಟಿಸ್ಟ್‌ ಗೇಟ್‌ ತಜ್ಞ ಕನ್ನಯ್ಯ ನಾಯ್ಡು ಪ್ರತಿಕ್ರಿಯಿಸಿ, ಜಲಾಶಯದ ಆಯಸ್ಸು ಕೇವಲ ಮೂವತ್ತು ವರ್ಷ ಮಾತ್ರ. ಮೂವತ್ತು ವರ್ಷದ ಬಳಿಕ ಅದನ್ನು ನಿಷ್ಕ್ರಿಯಗೊಳಿಸಿ ಹೊಸ ಜಲಾಶಯ ನಿರ್ಮಿಸಬೇಕಾಗುತ್ತದೆ. ಈ ಕುರಿತು ಮೂರೂ ರಾಜ್ಯಗಳ ಸರ್ಕಾರಗಳು ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

Read More
Next Story