
ಮಕ್ಕಳ ಹಕ್ಕುಗಳ ರಕ್ಷಣೆಗೆ ತಮಿಳುನಾಡು ಮಾದರಿಯಲ್ಲಿ ಎಸ್‌ಒಪಿ ಜಾರಿಗೆ ತೀರ್ಮಾನ
ಮಕ್ಕಳ ಸೈಬರ್ ಕ್ರೈಂ ತಡೆಯುವ ನಿಟ್ಟಿನಲ್ಲಿ ತಮಿಳುನಾಡು ಮಾದರಿಯಲ್ಲಿ ಮಕ್ಕಳ ಸೈಬರ್ ಕ್ರೈಂ ತಡೆಗೆ ಎಸ್‌ಒಪಿ ಜಾರಿಗೊಳಿಸಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳ ಸೈಬರ್ ಕ್ರೈಂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವು ತಮಿಳುನಾಡು ರಾಜ್ಯದ ಮಾದರಿಯಲ್ಲಿ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಜಾರಿಗೊಳಿಸಲು ಮುಂದಾಗಿದೆ.
ಮಕ್ಕಳ ಸೈಬರ್ ಕ್ರೈಂಗಳೆಂದರೆ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ನಡೆಸಲಾಗುವ ಅಪರಾಧಗಳಾಗಿವೆ. ಆನ್‌ಲೈನ್ ಮಕ್ಕಳ ಲೈಂಗಿಕ ಶೋಷಣೆ, ಮಕ್ಕಳ ಅಶ್ಲೀಲತೆ, ಆನ್‌ಲೈನ್ ಕಿರುಕುಳ ಮತ್ತು ಬೆದರಿಸುವಿಕೆ ಪ್ರಕರಣಗಳು ಸೇರಿವೆ. ಇವು ಮಕ್ಕಳ ಹಕ್ಕುಗಳಿಗೆ ತೊಡಕಾಗಲಿವೆ. ಹೀಗಾಗಿ ಮಕ್ಕಳ ಸೈಬರ್ ಕ್ರೈಂ ತಡೆಯಲು ತಮಿಳುನಾಡಿನಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಎಸ್‌ಒಪಿಯನ್ನು ಜಾರಿಗೊಳಿಸಲಾಗಿದೆ. ಯಾವ ಇಲಾಖೆಯ ಏನೇನು ಜವಾಬ್ದಾರಿಗಳನ್ನು ನಿರ್ವಹಣೆ ಮಾಡಬೇಕು ಎಂಬುದನ್ನು ಉಲ್ಲೇಖಿಸಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಜಾರಿಗೊಳಿಸಿ ಮಕ್ಕಳ ಸೈಬರ್ ಕ್ರೈಂ ತಡೆಯಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ತೀರ್ಮಾನಿಸಿದೆ.
ಬೆಂಗಳೂರಿನಲ್ಲಿ ಚೈಲ್ಡ್ ಫಂಡ್ ಇಂಡಿಯಾ ಸಹಯೋಗದಲ್ಲಿ ನಡೆದ ಆನ್‌ಲೈನ್‌ನಿಂದ ಮಕ್ಕಳ ಸುರಕ್ಷತೆ ಮತ್ತು ಮಕ್ಕಳ ರಕ್ಷಣಾ ವ್ಯವಸ್ಥೆಯ ಕಾರ್ಯವಿಧಾನಗಳನ್ನು ಬಲಪಡಿಸುವ ಕುರಿತು ನಡೆದ ಸಮಾಲೋಚನಾ ಸಭೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಕೆ.ನಾಗಣ್ಣಗೌಡ, ಮಕ್ಕಳ ಸುರಕ್ಷತೆಗಾಗಿ ತಮಿಳುನಾಡು ಮಾದರಿಯ ಎಸ್‌ಒಪಿಯಯನ್ನು ರಾಜ್ಯದಲ್ಲಿ ಜಾರಿಗೊಳಿಸುವ ಬಗ್ಗೆ ನಿರ್ಧರಿಸಲಾಗಿದೆ. ಮುಂದಿನ ದಿನದಲ್ಲಿ ಇದನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಆನ್‌ಲೈನ್ ಬೆದರಿಕೆಗಳಿಂದ ಮಕ್ಕಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ನೀತಿಗಳು ಮತ್ತು ಮಧ್ಯಸ್ಥಿಕೆಗಳನ್ನು ರೂಪಿಸುವಲ್ಲಿ ಅಧ್ಯಯನದ ಸಂಶೋಧನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಪಾಯಕಾರಿ ಅಂಶಗಳನ್ನು ಗುರುತಿಸುವ ಮೂಲಕ ಪರಿಣಾಮಕಾರಿ ಮೌಲ್ಯಮಾಪನ ಮಾಡಲಾಗುತ್ತದೆ. ಮಕ್ಕಳ ಹಕ್ಕುಗಳು ಮೊಟಕಾಗದಂತೆ ಕ್ರಮವಹಿಸಲು ಉದ್ದೇಶಿತ ತಂತ್ರಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಕ್ಕಳ ಹಕ್ಕುಗಳ ಪರ ವಕಾಲತ್ತು ವಹಿಸಲು ಮತ್ತು ಡಿಜಿಟಲ್ ಸ್ಥಳಗಳಲ್ಲಿ ಅವರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯನಿರ್ವಹಿಸುತ್ತದೆ ಎಂದರು.
ಕೋವಿಡ್ ನಂತರ ಆನ್‌ಲೈನ್ ಬಳಕೆ ಹೆಚ್ಚಾಗಿದೆ
ಚೈಲ್ಡ್ ಫಂಡ್ ಇಂಡಿಯಾ ಅಧ್ಯಯನ ವರದಿ ಪ್ರಕಾರ, ಕೋವಿಡ್ ಸಮಸ್ಯೆ ಬಳಿಕ ಮಕ್ಕಳಲ್ಲಿ ಸಾಮಾಜಿಕ ಮಾಧ್ಯಮ ಬಳಕೆ ಹೆಚ್ಚಾಗಿದೆ. ಅದರಲ್ಲಿಯೂ ಹಿರಿಯ ಮಕ್ಕಳಲ್ಲಿ ಅಂದರೆ 15-18 ವರ್ಷ ವಯಸ್ಸಿನವರು ಆನ್‌ಲೈನ್ ಬಳಕೆ ಹೆಚ್ಚಾಗಿದೆ. ಸುಮಾರು ಶೇ.90 ಕಿರಿಯ ಮಕ್ಕಳು (15 ವರ್ಷದೊಳಗೆ) ಮತ್ತು ಶೇ.99 ರಷ್ಟು ಹಿರಿಯ ಮಕ್ಕಳು ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪ್‌ಗಳನ್ನು ಬಳಸುತ್ತಿದ್ದಾರೆ. ಮಕ್ಕಳು ಬೆಳೆದಂತೆ ಅವರ ಆನ್‌ಲೈನ್ ತೊಡಗಿಸಿಕೊಳ್ಳುವಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಆನ್‌ಲೈನ್ ಸ್ನೇಹವು 15-18 ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬಂದಿದೆ. ಕುತೂಹಲಕಾರಿ ಅಂಶವೆಂದರೆ, ಗಂಡು ಮಕ್ಕಳು ಹೆಣ್ಣು ಮಕ್ಕಳಿಗಿಂತ ಶಾಲೆಯ ಹೊರಗೆ ಆನ್‌ಲೈನ್ ಸ್ನೇಹವನ್ನು ರೂಪಿಸುವ ಸಾಧ್ಯತೆ ಹೆಚ್ಚು ಎಂದು ಉಲ್ಲೇಖಿಸಲಾಗಿದೆ.
15-18 ವರ್ಷ ವಯಸ್ಸಿನ ಮಕ್ಕಳು ಅಸುರಕ್ಷಿತ ಆನ್‌ಲೈನ್ ಸಂವಹನಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ಈ ವಯಸ್ಸಿನ ಸುಮಾರು ಶೇ. 5 ರಷ್ಟು ಮಕ್ಕಳು ಆನ್‌ಲೈನ್‌ನಲ್ಲಿ ಅಸುರಕ್ಷಿತ ಅಥವಾ ಮುಜುಗರಕ್ಕೊಳಗಾಗಿದ್ದಾರೆ. ಇನ್‌ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣದಲ್ಲಿ ಶೇ. 77 ರಷ್ಟು ಮಕ್ಕಳು ಬಳಕೆ ಮಾಡುತ್ತಿದ್ದಾರೆ. ಅಸುರಕ್ಷಿತ ಹೊಂದಿರುವವರಲ್ಲಿ, ಶೇ.53 ಮಕ್ಕಳು ಅಪರಾಧಿ ಅಪರಿಚಿತ ವ್ಯಕ್ತಿಯಾಗಿದ್ದಾರೆ. ಶೇ. 35 ಪರಿಚಿತ ವ್ಯಕ್ತಿಯ ಒಳಗೊಳ್ಳುವಿಕೆಯನ್ನು ಸೂಚಿಸಿದರೆ, ಶೇ.12 ರಷ್ಟು ಎರಡೂ ಘಟನೆಗಳನ್ನು ಅನುಭವಿಸಿದ್ದಾರೆ. 15-18 ವರ್ಷ ವಯಸ್ಸಿನವರು ಶೇ.16 ರಷ್ಟು ಮಕ್ಕಳು ಆನ್‌ಲೈನ್‌ನಲ್ಲಿ ಅಪರಿಚಿತರೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದು, ಅವರಲ್ಲಿ ಶೇ.10 ಜನರು ಆ ಅಪರಿಚಿತರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದರು. ಆನ್‌ಲೈನ್‌ನಲ್ಲಿ ಅಪರಿಚಿತರೊಂದಿಗೆ ಸ್ನೇಹ ಬೆಳೆಸಿಕೊಂಡವರಲ್ಲಿ ಶೇ. 15 ಜನರು ತಕ್ಷಣದ ಅನಾಹುತಗಳನ್ನು ಅನುಭವಿಸಿದ್ದಾರೆ ಎಂಬುದು ವರದಿ ಹೇಳಿದೆ.
ಗೆಳೆಯರೊಂದಿಗೆ ಆನ್‌ಲೈನ್ ಲೈಂಗಿಕ ದೌರ್ಜನ್ಯ
ಕೇವಲ ಶೇ. 43 ರಷ್ಟು ಪೋಷಕರು ಮಾತ್ರ ತಮ್ಮ ಮಗುವಿನ ಮೇಲೆ ನಿಗವಹಿಸುತ್ತಾರೆ. 12-14 ವರ್ಷ ವಯಸ್ಸಿನ ಮಕ್ಕಳು ಶೇ.78 ಮತ್ತು 15-18 ವರ್ಷ ವಯಸ್ಸಿನ ಮಕ್ಕಳಲ್ಲಿ ಶೇ.75, ತಮ್ಮ ಗೆಳೆಯರೊಂದಿಗೆ ಆನ್‌ಲೈಲ್ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದರು. ಆದರೂ ಬಹಳಷ್ಟು ಪೋಷಕರಿಗೆ ತಮ್ಮ ಮಕ್ಕಳ ಆನ್‌ಲೈನ್ ಸಂವಹನಗಳ ಬಗ್ಗೆ ತಿಳಿದಿರಲಿಲ್ಲ. ಅನ್‌ಲೈನ್ ಲೈಂಗಿಕ ದೌರ್ಜನ್ಯದ ಅಪಾಯಗಳ ಬಗ್ಗೆ ತಿಳಿದಿದ್ದರೂ, ಪರಿಣಾಮಕಾರಿಯಾಗಿ ಸುರಕ್ಷತಾ ಕ್ರಮಗಳ ಮಾಹಿತಿಯ ಕೊರತೆ ಇದೆ. ಲೈಂಗಿಕ್ ದೌರ್ಜನ್ಯದ ಅಪಾಯದ ಕುರಿತು ಹೆಣ್ಣು ಮಕ್ಕಳು ಹೆಚ್ಚಿನ ಅರಿವನ್ನು ಹೊಂದಿದ್ದಾರೆ. ಆದರೆ ಗಂಡು ಮಕ್ಕಳು ಕಡಿಮೆ ಅಪಾಯದ ಗ್ರಹಿಕೆಯನ್ನು ಹೊಂದಿದ್ದರು. ಇದು ಹುಡುಗರಿಗೆ ಉತ್ತಮ ಸಂಪರ್ಕದ ಅಗತ್ಯವನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ.