ಸಮಾಜಿಕ-ಶೈಕ್ಷಣಿಕ ಸಮೀಕ್ಷೆ ಎಡವಟ್ಟು| ಮೃತ ಶಿಕ್ಷಕರಿಗೂ ಗಣತಿಯ ಜವಾಬ್ದಾರಿ
x

ಜಾತಿ ಸಮೀಕ್ಷೆ

ಸಮಾಜಿಕ-ಶೈಕ್ಷಣಿಕ ಸಮೀಕ್ಷೆ ಎಡವಟ್ಟು| ಮೃತ ಶಿಕ್ಷಕರಿಗೂ ಗಣತಿಯ ಜವಾಬ್ದಾರಿ

ಗಣತಿದಾರರ ಪಟ್ಟಿಯಲ್ಲಿ ಮರಣ ಹೊಂದಿದ ಶಿಕ್ಷಕರ ಹೆಸರುಗಳೂ ಕೂಡ ಇರುವುದು ಹಿಂದುಳಿದ ವರ್ಗಗಳ ಆಯೋಗದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂಬ ಆರೋಪಗಳು ಕೇಳಿ ಬರುತ್ತವೆ. ಕಳೆದ ವರ್ಷ ನಿಧನರಾದ ರಾಮೇಗೌಡ ಹಾಗೂ ಸುರೇಶ್ ಕುಮಾರ್ ಹೆಸರು ಗಣತಿದಾರರ ಪಟ್ಟಿಯಲ್ಲಿ ಬಯಲಾಗಿದೆ.


Click the Play button to hear this message in audio format

ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಹಿಂದುಳಿದ ವರ್ಗಗಳ ಆಯೋಗ ಮತ್ತೊಂದು ಎಡವಟ್ಟು ಮಾಡಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಸಮೀಕ್ಷೆಗೆ ನಿಯೋಜಿಸಿರುವ ಗಣತಿದಾರರ ಪಟ್ಟಿಯಲ್ಲಿ ಮೃತಪಟ್ಟಿರುವ ಶಿಕ್ಷಕರ ಹೆಸರನ್ನೂ ಸೇರಿಸಿರುವುದು ಎಡವಟ್ಟಿಗೆ ಕಾರಣವಾಗಿದೆ.

ಕಳೆದ ವರ್ಷ ನಿಧನರಾದ ರಾಮೇಗೌಡ ಹಾಗೂ ಸುರೇಶ್ ಕುಮಾರ್ ಎಂಬ ಇಬ್ಬರು ಶಿಕ್ಷಕರ ಹೆಸರುಗಳು ಗಣತಿದಾರರ ಪಟ್ಟಿಯಲ್ಲಿ ಸೇರಿವೆ. ಇದಲ್ಲದೇ ನಿವೃತ್ತ ಶಿಕ್ಷಕರ ಹೆಸರು ಕೂಡ ಪಟ್ಟಿಯಲ್ಲಿ ಸೇರಿರುವುದು ಹೊಸ ಸಮಸ್ಯೆ ಸೃಷ್ಟಿಸಿದೆ. ಸಿಂಧನೂರು ತಾಲೂಕಿನಲ್ಲಿ 50ಕ್ಕೂ ಹೆಚ್ಚು ನಿವೃತ್ತ ಶಿಕ್ಷಕರ ಹೆಸರುಗಳು ಪಟ್ಟಿಯಲ್ಲಿವೆ. ಇಲಾಖೆ ಅಧಿಕಾರಿಗಳು ದಾಖಲೆಗಳನ್ನು ನಿಖರವಾಗಿ ಪರಿಶೀಲಿಸದೇ ಪಟ್ಟಿ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಗಣತಿ ಕಾರ್ಯಕ್ಕೆ ಹಿನ್ನಡೆ ಉಂಟು ಮಾಡಿದೆ ಎಂದು ರಾಯಚೂರು ಜಿಲ್ಲಾ ಶಿಕ್ಷಕರ ಸಂಘ ಅಳಲು ತೋಡಿಕೊಂಡಿದೆ.

ಸರ್ವರ್, ಮೊಬೈಲ್ ಅಪ್ಲಿಕೇಶನ್ ಸಮಸ್ಯೆ

ಇದೇ ವೇಳೆ ಸಿಂಧನೂರು ತಾಲೂಕಿನಲ್ಲಿ ಸರ್ವರ್ ಮತ್ತು ನೆಟ್‌ವರ್ಕ್ ಸಮಸ್ಯೆಯಿಂದ ಅನೇಕ ಶಿಕ್ಷಕರು ತಮ್ಮ ಮೊಬೈಲ್‌ಗಳಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ದತ್ತಾಂಶ ದಾಖಲಿಸಲು ದೊಡ್ಡ ಸಮಸ್ಯೆಯಾಗಿದೆ. ಆದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಶಿಕ್ಷಕರ ಮೇಲೆ ಅತಿಯಾದ ಒತ್ತಡ ಬೀಳುತ್ತಿದೆ ಎಂದು ಆರೋಪಿಸಿದ್ದಾರೆ. ಡಿಸಿಪಿಐ ಕಚೇರಿಯ ಮೂಲಗಳ ಪ್ರಕಾರ, ಈ ತಪ್ಪುಗಳನ್ನು ಸರಿಪಡಿಸಲು ತುರ್ತು ಸಭೆ ಕರೆಯಲಾಗಿದ್ದು, ಹೊಸ ಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ರಾಜ್ಯಾದ್ಯಂತ ನಡೆಯುತ್ತಿದೆ. 1.49 ಲಕ್ಷಕ್ಕೂ ಹೆಚ್ಚು ಶಿಕ್ಷಕರನ್ನು ಗಣತಿದಾರರಾಗಿ ನಿಯೋಜಿಸಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಸುಮಾರು 2,500 ಶಿಕ್ಷಕರು ಈ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ.

ಗಣತಿದಾರರಿಗೆ ಸರ್ಕಾರದ ಎಚ್ಚರಿಕೆ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ನಿಯೋಜಿತರಾಗಿರುವ ಅಧಿಕಾರಿ ಹಾಗೂ ನೌಕರರು ಸಮೀಕ್ಷಾ ಕಾರ್ಯಕ್ಕೆ ಹಾಜರಾಗದೇ ಹೋದರೆ ಅಥವಾ ಕರ್ತವ್ಯ ನಿರ್ವಹಿಸದಿದ್ದರೆ ಅಂತವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಬೆಂಗಳೂರು ವ್ಯಾಪ್ತಿಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಹಿಂದೆ ನಡೆದ ಗಣತಿಗಳಲ್ಲಿ ಕಡಿಮೆ ಪ್ರಮಾಣ ದಾಖಲಾಗಿದೆ. ಕೆಲವರು ಸರಿಯಾಗಿ ಕರ್ತವ್ಯ ನಿರ್ವಹಿಸಿರಲಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದವು. ಇದರಿಂದ ಎಚ್ಚೆತ್ತುಕೊಂಡಿರುವ ಸರ್ಕಾರವು, ಗಣತಿಗೆ ನಿಯೋಜನೆಗೊಂಡ ಸರ್ಕಾರಿ ಅಥವಾ ನಿಗಮ ಮಂಡಳಿಗಳ ಅಧಿಕಾರಿ ಮತ್ತು ನೌಕರರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು, 2021ರಡಿ ಹಾಗೂ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರನ್ವಯ ಶಿಸ್ತುಕ್ರಮ ಮತ್ತು ದಂಡನೆ ವಿಧಿಸುವ ಅಧಿಕಾರವಿದೆ ಎಂದು ಹೇಳಿದ್ದಾರೆ.

ಸಮೀಕ್ಷೆಯಲ್ಲಿ ತಾಂತ್ರಿಕ ಸಮಸ್ಯೆ

ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಶಿಕ್ಷಕರು ಎದುರಿಸುತ್ತಿದ್ದಾರೆ. ಗಣತಿಗೆ ಬಳಕೆಯಾಗುವ ಆಪ್ ಸರಿಯಾಗಿ ಓಪನ್ ಆಗುತ್ತಿಲ್ಲ. ಜಿಯೋಟ್ಯಾಗ್ ಮೂಲಕ ಗೂಗಲ್ ಲೊಕೇಷನ್ ಹಾಕಿ ಮನೆ ವಿಳಾಸ ಹುಡುಕುವುದು ಅಸಾಧ್ಯವಾಗಿದೆ. ಯುಎಚ್‌ಐಡಿ ಸಂಖ್ಯೆ ಹಾಕಿ ಲೊಕೇಷನ್ ಹುಡುಕಿಕೊಂಡು ಹೋಗುವುದಕ್ಕೂ ಕಷ್ಟವಾಗುತ್ತಿದೆ ಎಂದು ಗಣತಿದಾರರು ಆರೋಪಿಸಿದ್ದಾರೆ.

ಒಬ್ಬ ಶಿಕ್ಷಕರಿಗೆ 150 ರಿಂದ 175 ಮನೆಗಳನ್ನು ಸಮೀಕ್ಷೆಗೆ ನಿಗದಿಪಡಿಸಲಾಗಿದೆ. ಇಷ್ಟು ಮನೆ ಸಮೀಕ್ಷೆ ನಡೆಸಬೇಕಾದರೆ ಒಂದೂವರೆ ತಿಂಗಳಿಂದ 2 ತಿಂಗಳು ಬೇಕು. 60 ಪ್ರಶ್ನೆ ಓಪನ್ ಮಾಡುವುದು, ಲೊಕೇಷನ್ ಹುಡುಕುವುದು ಸೇರಿದಂತೆ ಸಮೀಕ್ಷೆಗೆ ದಿನಕ್ಕೆ ಮೊಬೈಲ್ ಡಾಟಾ 5 ಜಿಬಿ ಬೇಕಾಗುತ್ತದೆ. ಲೊಕೇಷನ್ ಮ್ಯಾಪ್ ನೀಡಿ ಹುಡುಕುವ ಬದಲು ಮತಗಟ್ಟೆ ಲಿಸ್ಟ್ ನೀಡಿ ಸಮೀಕ್ಷೆ ನಡೆಸಲು ಸೂಚಿಸಿದರೆ ಸುಲಭ ಆಗುತ್ತಿತ್ತು ಎಂದು ಶಿಕ್ಷಕರ ಅಳಲು ತೋಡಿಕೊಂಡಿದ್ದಾರೆ.

Read More
Next Story