
Navali Parallel Dam | ನವಲಿ ಜಲಾಶಯ ಯೋಜನೆಗೆ ಆಂಧ್ರದಿಂದ ತಗಾದೆ; ಮಾತುಕತೆಗೆ ಮುಂದಾದ ಸರ್ಕಾರ
ಆಂಧ್ರಪ್ರದೇಶದ ತಗಾದೆಯಿಂದ ಕಳೆದ ಎರಡು ದಶಕಗಳಿಂದ ನನೆಗುದಿಗೆ ಬಿದ್ದಿರುವ ನವಲಿ ಸಮಾನಾಂತರ ಜಲಾಶಯ ನಿರ್ಮಾಣದ ಮಾತುಕತೆಗೆ ಈಗ ರಾಜ್ಯ ಸರ್ಕಾರ ಪ್ರಯತ್ನ ಆರಂಭಿಸಿದೆ.
ಆಂಧ್ರಪ್ರದೇಶದ ತಕರಾರಿನಿಂದ ನನೆಗುದಿಗೆ ಬಿದ್ದಿದ್ದ ದಶಕಗಳ ಹಿಂದಿನ ಜಲಾಶಯ ನಿರ್ಮಾಣ ಯೋಜನೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರವಾಗಿ ನವಲಿ ಬಳಿ ಜಲಾಶಯ ನಿರ್ಮಿಸಬೇಕೆಂಬ ರಾಜ್ಯದ ಪ್ರಸ್ತಾವಕ್ಕೆ ಆಂಧ್ರಪ್ರದೇಶ, ತೆಲಂಗಾಣ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಯೋಜನೆ ವಿಳಂಬವಾಗಿತ್ತು.
ರಾಜ್ಯಕ್ಕೆ ಹಂಚಿಕೆಯಾಗಿರುವ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಸಲು ಜಲಾಶಯ ನಿರ್ಮಾಣಕ್ಕೆ ಪಟ್ಟು ಹಿಡಿದಿರುವ ಸರ್ಕಾರ, ಇದೀಗ ಆಂಧ್ರ ಪ್ರದೇಶ ಮುಖ್ಯಮಂತ್ರಿಯೊಂದಿಗೆ ಮಾತುಕತೆಗೆ ಸಿದ್ಧವಾಗಿದೆ. ಆ ಮೂಲಕ ರೈತರಲ್ಲಿ ಜಲಾಶಯ ನಿರ್ಮಾಣದ ಕನಸು ಚಿಗುರೊಡೆದಿದೆ.
ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ರೈತರಿಗೆ ಸಮರ್ಪಕ ನೀರು ಪೂರೈಸುವುದು ಕಷ್ಟಸಾಧ್ಯವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ರೈತರು ನೀರಾವರಿ ಸಮಸ್ಯೆಗೆ ನವಲಿ ಸಮಾನಾಂತರ ಜಲಾಶಯವೇ ಪರಿಹಾರ ಎಂದು ಅರಿತಿರುವ ರಾಜ್ಯ ಸರ್ಕಾರ ಮರಳಿ ಪ್ರಯತ್ನ ಆರಂಭಿಸಿದೆ.
ಆಂಧ್ರಪ್ರದೇಶ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಂದಾಗಿದ್ದಾರೆ.
ತುಂಗಭದ್ರಾ ಅಣೆಕಟ್ಟಿನಲ್ಲಿ 30 ಟಿಎಂಸಿ ಅಡಿ ಹೂಳು
ಕರ್ನಾಟಕದ ದಾವಣಗೆರೆ, ಬಳ್ಳಾರಿ, ರಾಯಚೂರು, ಕೊಪ್ಪಳ ಸೇರಿದಂತೆ ಆಂಧ್ರಪ್ರದೇಶದ ಕರ್ನೂಲು, ಮೆಹಬೂಬ್ ನಗರ ಇತರೆ ಜಿಲ್ಲೆಗಳಿಗೆ ನೀರಾವರಿ, ಕುಡಿಯುವ ನೀರು ಪೂರೈಕೆ ಹಾಗೂ ವಿದ್ಯುತ್ ಉತ್ಪಾದನೆಗಾಗಿ 1953 ರಲ್ಲಿ ತುಂಗಭದ್ರಾ ಅಣೆಕಟ್ಟು ನಿರ್ಮಿಸಲಾಯಿತು. ಪ್ರಸ್ತುತ, ಜಲಾಶಯದಲ್ಲಿ 30 ಟಿಎಂಸಿ ಅಡಿಗಿಂತಲೂ ಹೆಚ್ಚು ಹೂಳು ತುಂಬಿದ್ದು, 174ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗ 105.78ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗುತ್ತಿದೆ. ಆದರೆ, ಕರ್ನಾಟಕಕ್ಕೆ ಹಂಚಿಕೆಯಾಗಿರುವ 138.99 ಟಿಎಂಸಿ ಅಡಿ ನೀರಿನಲ್ಲಿ ಸುಮಾರು 30ಟಿಎಂಸಿ ಅಡಿಗಿಂತ ಹೆಚ್ಚು ನೀರು ಆಂಧ್ರಪ್ರದೇಶಕ್ಕೆ ಹರಿಯುತ್ತಿದೆ. ಕೃಷ್ಣಾ ನ್ಯಾಯಾಧೀಕರಣ ತೀರ್ಪಿನಂತೆ ಅವಿಭಜಿತ ಆಂಧ್ರಪ್ರದೇಶಕ್ಕೆ 73.01 ಟಿಎಂಸಿ ಅಡಿ ನೀರು ಹಂಚಿಕೆಯಾಗಿದ್ದರೂ ಹೆಚ್ಚುವರಿ ನೀರು ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕನಕಗಿರಿ ತಾಲೂಕಿನ ನವಲಿಯಲ್ಲಿ ಸಮಾನಾಂತರ ಜಲಾಶಯ ನಿರ್ಮಿಸಲು ರಾಜ್ಯ ಸರ್ಕಾರ ಯೋಜಿಸಿತ್ತು. 2022ರಲ್ಲಿ ಜಲಾಶಯದಲ್ಲಿ ಸಂಗ್ರಹವಾದ ಮತ್ತು ಹರಿದು ಹೋದ ನೀರಿನ ಪ್ರಮಾಣವೇ 604.64 ಟಿಎಂಸಿ ಅಡಿ ಆಗಿತ್ತು.
ವಿಳಂಬಕ್ಕೆ ರಾಜಕೀಯವೂ ಕಾರಣ
2008 ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ನೀರಾವರಿ ಸಚಿವರಾಗಿದ್ದ ಶಿವರಾಜ ತಂಗಡಗಿ ಅವರು ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಪ್ರಸ್ತಾಪ ಸಲ್ಲಿಸಿದ್ದರು. ನಂತರ ಬಂದ ಸರ್ಕಾರಗಳು ಯೋಜನೆ ಅನುಷ್ಠಾನಕ್ಕೆ ಅಷ್ಟಾಗಿ ಆಸಕ್ತಿ ವಹಿಸಲಿಲ್ಲ. 2020ರಲ್ಲಿ ಮತ್ತೆ ಬಿಜೆಪಿ ಸರ್ಕಾರದ ಅವಧಿಯಲ್ಲೇ 24 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಯೋಜನಾ ವರದಿ(ಡಿಪಿಆರ್) ತಯಾರಿಸಲು ಸಿದ್ಧತೆ ನಡೆಸಿತ್ತು. ಆಗಲೂ ಯೋಜನೆ ಕುರಿತು ಪರ-ವಿರೋಧದ ಚರ್ಚೆಗಳು ಆರಂಭವಾಗಿ ಸ್ಥಗಿತಗೊಂಡಿತು. 2022 ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬಜೆಟ್‌ನಲ್ಲಿ ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಯೋಜನೆಗೆ 1000ಕೋಟಿ ಅನುದಾನ ಹಂಚಿಕೆ ಮಾಡಿತು. ಅಲ್ಲದೇ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಗೋವಿಂದ ಕಾರಜೋಳ ನೇತೃತ್ವದಲ್ಲಿ 13,040 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಯೋಜನಾ ವರದಿಯನ್ನೂ (ಡಿಪಿಆರ್) ಸಿದ್ಧಪಡಿಸಿತ್ತು. ಈ ಮಧ್ಯೆ, ರಾಜಕೀಯ ಕಾರಣಗಳಿಂದ ಯೋಜನೆಗೆ ಆಂಧ್ರಪ್ರದೇಶ ವಿರೋಧ ವ್ಯಕ್ತಪಡಿಸಿತ್ತು. ಎರಡೂ ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರಗಳು ಆಡಳಿತ ನಡೆಸುತ್ತಿದ್ದರಿಂದ ಒಮ್ಮತಕ್ಕೆ ಬಂದಿರಲಿಲ್ಲ.
ಜಲಾಶಯ ನಿರ್ಮಾಣಕ್ಕೆ ರೈತರ ವಿರೋಧ
ಕನಕಗಿರಿ ತಾಲೂಕಿನ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡುವುದರಿಂದ 14 ಸಾವಿರ ಎಕರೆ ರೈತರ ಭೂಮಿ ಸೇರಿದಂತೆ ಒಟ್ಟು 23 ಸಾವಿರ ಎಕರೆ ಪ್ರದೇಶ ಮುಳುಗಡೆ ಆಗುವ ಭೀತಿಯಲ್ಲಿದೆ. ಕನಕಗಿರಿ ತಾಲೂಕು ಒಂದರಲ್ಲೇ ಸುಮಾರು 20 ಹಳ್ಳಿಗಳು ಜಲಾವೃತವಾಗಲಿವೆ. ಇನ್ನು ನವಲಿ ಬಳಿ 9000 ಸರ್ಕಾರಿ ಭೂಮಿ ಇರುವುದರಿಂದ ಜಲಾಶಯಕ್ಕೆ ಸೂಕ್ತ ಜಾಗ ಎಂದು ಪರಿಗಣಿಸಲಾಗಿತ್ತು. ಆದರೆ, ಜಲಾಶಯ ನಿರ್ಮಾಣಕ್ಕೆ ರೈತರು ಹಾಗೂ ಸ್ಥಳೀಯರು ಅಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ.
ಈ ಹಿಂದೆ ತುಂಗಭದ್ರಾ ಜಲಾಶಯ ನಿರ್ಮಾಣ ಸಂದರ್ಭದಲ್ಲೇ ಕೊಪ್ಪಳ, ವಿಜಯನಗರ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ 7 ಕಡೆ ಸಮಾನಾಂತರ ಜಲಾಶಯ ನಿರ್ಮಿಸುವ ಕುರಿತು ಚರ್ಚೆ ನಡೆದಿತ್ತು ಎನ್ನಲಾಗಿದೆ.
ಈ ಮಧ್ಯೆ, ಹಲವು ರೈತರು ನವಲಿ ಜಲಾಶಯ ನಿರ್ಮಾಣಕ್ಕೆ ಪಟ್ಟು ಹಿಡಿದಿದ್ದರು. ತುಂಗಭದ್ರಾ ಜಲಾಶಯದಲ್ಲಿ ಇತ್ತೀಚೆಗೆ 19ನೇ ಕ್ರೆಸ್ಟ್ ಗೇಟ್ ಚೈನ್ ಲಿಂಕ್ ತುಂಡಾದ ಪರಿಣಾಮ ನಿತ್ಯ ಲಕ್ಷಾಂತರ ಕ್ಯುಸೆಕ್ ನೀರು ಪೋಲಾಯಿತು. ಒಂದು ವೇಳೆ ಸಮಾನಾಂತರ ಜಲಾಶಯ ನಿರ್ಮಾಣವಾಗಿದ್ದರೆ ಅಷ್ಟೂ ನೀರು ರಾಜ್ಯದ ಬಳಕೆಗೆ ಸಿಗುತ್ತಿತ್ತು ಎಂದು ವಾದಿಸುತ್ತಾರೆ.
ವಿಳಂಬವಾದ ಪ್ರಮುಖ ನೀರಾವರಿ ಯೋಜನೆ
ರಾಜ್ಯದಲ್ಲಿ ಹಲವು ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿರುವುದರಿಂದ ನೀರಾವರಿ ಆಶ್ರಿತ ರೈತರು ಬವಣೆ ಅನುಭವಿಸುವಂತಾಗಿದೆ. ನವಲಿ ಜಲಾಶಯ, ಮಹಾದಾಯಿ, ಮೇಕೆದಾಟು, ಕೃಷ್ಣಾ ಮೇಲ್ದಂಡೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳು ಹೆಚ್ಚು ವಿಳಂಬವಾಗುತ್ತಿವೆ. ಈ ಎಲ್ಲವೂ 1.5 ಲಕ್ಷ ಕೋಟಿಗಿಂತ ಹೆಚ್ಚು ವೆಚ್ಚದ ಯೋಜನೆಗಳಾಗಿದ್ದು, 8 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶ ಹೊಂದಿವೆ.
ಸಮರ್ಪಕ ಅನುದಾನ, ರಾಜ್ಯಗಳ ನಡುವಿನ ಸಮನ್ವಯ ಕೊರತೆ, ಕೇಂದ್ರ ಸರ್ಕಾರದ ಅಸಹಕಾರ ಹಾಗೂ ರಾಜ್ಯ ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ನೀರಾವರಿ ಯೋಜನೆಗಳು ಕುಟುಂತ್ತಾ ಸಾಗಿವೆ ಎಂಬುದು ನೀರಾವರಿ ಹೋರಾಟಗಾರರ ಆರೋಪವಾಗಿದೆ.
ನವಲಿ ಜಲಾಶಯದಿಂದ ಉಪಯೋಗ ಏನು?
ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿಯಾಗಿ ಹರಿದು ಹೋಗುವ 30 ಟಿಎಂಸಿ ಅಡಿ ನೀರನ್ನು ಸಂಗ್ರಹಿಸಿ ಗಂಗಾವತಿ, ಕನಕಗಿರಿ, ಮಸ್ಕಿ, ರಾಯಚೂರು ಕೊನೆ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನವಲಿ ಜಲಾಶಯದ ನಿರ್ಮಾಣದ ಉದ್ದೇಶವಾಗಿದೆ. ಜಲಾಶಯದಿಂದ 20 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶ ನೀರಾವರಿಗೆ ಒಳಪಡಲಿದೆ. ಜಲಾಶಯದಿಂದ ರೈತರಿಗೆ ನೀರು ಹರಿಸಲು ಕಾಲುವೆ ನಿರ್ಮಾಣಕ್ಕೆ 8-10 ಸಾವಿರ ಕೋಟಿ ರೂ. ಅನುದಾನದ ಅಗತ್ಯವಾಗಿದೆ.
ಮತ್ತೆ ಮುನ್ನೆಲೆಗೆ ಬಂದ ನವಲಿ ಯೋಜನೆ
ನವಲಿ ಸಮಾನಾಂತರ ಜಲಾಶಯ ನಿರ್ಮಾಣದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಲಾಶಯ ನಿರ್ಮಾಣ ಸಂಬಂಧ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ಅವರೊಂದಿಗೆ ಮಾತುಕತೆ ನಡೆಸಲು ಸಮಯ ಕೋರಿದ್ದಾರೆ.
ಆಂಧ್ರಪ್ರದೇಶ ಸರ್ಕಾರ ಸಮಯ ನೀಡಿದ್ದು, ಮಾರ್ಚ್ ತಿಂಗಳಾಂತ್ಯದಲ್ಲಿ ಮಾತುಕತೆ ನಡೆಯಲಿದೆ. ಇದು ಅಂತರರಾಜ್ಯ ಯೋಜನೆಯಾಗಿರುವುದರಿಂದ ಜಲಾಶಯ ನಿರ್ಮಾಣಕ್ಕೆ ಆಂಧ್ರ ಪ್ರದೇಶದ ಒಪ್ಪಿಗೆ ಬೇಕಾಗಿದೆ. ಈ ಹಿಂದಿನ ವರ್ಷಗಳಲ್ಲಿ ಜಲಾಶಯ ನಿರ್ಮಾಣಕ್ಕೆ ಆಂಧ್ರಪ್ರದೇಶ ತಕರಾರು ಮಾಡಿದ್ದರಿಂದಲೇ ಯೋಜನೆ ವಿಳಂಬವಾಯಿತು ಎಂದು ಹೋರಾಟಗಾರ ಅಶೋಕ್ ಚಂದರಗಿ ಅವರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
ಜಲಸಂಪನ್ಮೂಲ ಸಚಿವರು ಹೇಳುವುದೇನು?
ರಾಜ್ಯದ ರೈತರ ಹಿತದೃಷ್ಟಿಯಿಂದ ನವಲಿ ಸಮಾನಾಂತರ ಜಲಾಶಯ ಅಗತ್ಯವಾಗಿದೆ. ಪ್ರತಿ ವರ್ಷ ಆಂಧ್ರಪ್ರದೇಶಕ್ಕೆ ಹೆಚ್ಚುವರಿ ನೀರು ಹರಿದು ಹೋಗುವುದನ್ನು ತಪ್ಪಿಸಲು ಜಲಾಶಯ ನಿರ್ಮಿಸುವ ಸಂಬಂಧ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜೊತೆ ಚರ್ಚಿಸಲಾಗುವುದು. ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ಈಗಾಗಲೇ ಬಜೆಟ್ ನಲ್ಲಿ ₹ 22 ಸಾವಿರ ಕೋಟಿ ಅನುದಾನ ಹಂಚಿಕೆ ಮಾಡಿದೆ ಎಂದು ಜಲಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.