
ʻನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ!ʼ: ಮೃತ ನೇಹಾ ಹಿರೇಮಠ ತಂದೆಯ ಸ್ಪೋಟಕ ಹೇಳಿಕೆ
ಹುಬ್ಬಳ್ಳಿಯ ವಿವಿಬಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಮಧ್ಯೆ ಮೃತ ನೇಹಾ ತಂದೆ ನಿರಂಜನ್ ಹಿರೇಮಠ ಅವರು ʻನನ್ನ ಕುಟುಂಬಕ್ಕೆ ಜೀವ ಬೆದರಿಕೆʼ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ನಮ್ಮ ಮನೆಗೆ ಪೊಲೀಸ್ ಭದ್ರತೆ ಕೊಡಬೇಕು. ಆರೋಪಿಯನ್ನು ಮಂಪರು ಪರೀಕ್ಷೆಯ ಒಳಪಡಿಸಬೇಕುʼʼ ಎಂದು ನೇಹಾ ತಂದೆ ನಿರಂಜನ್ ಹಿರೇಮಠ ಆಗ್ರಹಿಸಿದ್ದಾರೆ.
ʻʻನನ್ನ ಮಗಳ ಕೊಲೆಯ ಹಿಂದೆ ಸಾಕಷ್ಟು ಪಿತೂರಿಗಳು ನಡೆದಿವೆ. ಕೊಲೆಗೂ ಮುಂಚೆ ನನ್ನ ಮನೆಯ ಸುತ್ತಮುತ್ತಲೂ ಕೆಲವೊಬ್ಬರು ಬಂದು ಹೋಗಿದ್ದಾರೆ. ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಆರೋಪಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಎಲ್ಲ ಸತ್ಯ ಹೊರಬೀಳುತ್ತೆʼʼ ಎಂದು ಹಿರೇಮಠ ಹೇಳಿದ್ದಾರೆ.
ʻʻಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುವುದಾಗಿ ಹೇಳಿದ್ದಾರೆ, ಅವರಿಗೆ ಕೆಲವೊಂದು ಮಾಹಿತಿಗಳನ್ನು ಕೊಡುತ್ತೇನೆ. ಕೆಲವೊಂದು ಬೇಡಿಕೆಗಳನ್ನು ಇಡುತ್ತೇನೆ. ಕೊಲೆ ಆರೋಪಿ ಜೊತೆ ಶಾಮಿಲಾದವರ ಬಂಧನಕ್ಕೆ ಆಗ್ರಹಿಸುತ್ತೇನೆ. ಸದ್ಯ ನಡೆಯುತ್ತಿರವ ತನಿಖೆ ಇನ್ನೂ ಸಮಾಧಾನ ತಂದಿಲ್ಲ, ಸಿಐಡಿ ಅಧಿಕಾರಿಗಳು ತಮ್ಮದೇ ಮಗ್ಗಲಿನಲ್ಲಿ ವಿಚಾರಣೆ ನಡೆಸಿದ್ದಾರೆ. ಆರೋಪಿಗೆ ಗಲ್ಲು ಶಿಕ್ಷೆಯಾದರೆ ಮಾತ್ರ ಸಮಾಧಾನವಾಗುತ್ತೆʼʼ ಎಂದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಆಗಿರುವ ನಿರಂಜನ್ ಹಿರೇಮಠ ಅವರು, ನೇಹಾ ಕೊಲೆಯಾದ ಮೊದಲೆರಡು ದಿನಗಳ ಕಾಲ ಮಾಧ್ಯಮಗಳೊಂದಿಗೆ ಮಾತಾಡುವಾಗ ತಮ್ಮ ಪಕ್ಷದ ನಾಯಕರನ್ನೇ ತೆಗಳುತ್ತಿದ್ದರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ನೇಹಾ ಹತ್ಯೆಯ ಬಗ್ಗೆ ನೀಡಿದ ಹೇಳಿಕೆಗಳ ಬಗ್ಗೆ ಅಸಹನೆ ಮತ್ತು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಅದರೆ, ಈಗ ಅವರು ಬೇರೆ ರೀತಿ ಮಾತಾಡುತ್ತಿದ್ದಾರೆ ಎನ್ನುವ ಆರೋಪ ಅವರ ಮೇಲಿದೆ. ಈ ಎಲ್ಲ ಆರೋಪವನ್ನು ನಿರಂಜನ್ ಹಿರೇಮಠ್ ಅವರು ಅಲ್ಲಗಳೆದಿದ್ದಾರೆ. ನೇಹಾ ಕೊಲೆಯಾದ ದಿನದಿಂದ ತಮ್ಮ ಹೇಳಿಕೆಯಾಗಲೀ ಅಥವಾ ನಿಲುವಾಗಲೀ ಬದಲಾಗಿಲ್ಲ. ತನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು, ಪೊಲೀಸರು ಪ್ರಕರಣದ ಆಳಕ್ಕೆ ಇಳಿದು ತನಿಖೆ ಮಾಡಬೇಕು ಮತ್ತು ಹತ್ಯೆ ಹಿಂದಿನ ಷಡ್ಯಂತ್ರವನ್ನು ಬಯಲು ಮಾಡಬೇಕು ಅನ್ನೋದು ತಮ್ಮ ಕುಟುಂದ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ರಾಜಕೀಕರಣಕ್ಕೆ ಬ್ರೇಕ್ ಹಾಕಲು ಮುಂದಾದ ಸಿಎಂ
ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ರಾಜಕೀಯಗೊಳಿಸಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು ಮುಂದಾಗಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಅವರು ನೇಹಾ ಅವರ ಮನೆಗೆ ಭೇಟಿ ನೀಡುವ ಮೂಲಕ ಅದಕ್ಕೆ ಬ್ರೇಕ್ ಹಾಕಿದ್ದಾರೆ.
ಇಂದು ನೇಹಾ ಹಿರೇಮಠ ಮನೆಗೆ ಸಿಎಂ ಭೇಟಿ ಮಾಡುತ್ತಿದ್ದು, ನೇಹಾ ಹಿರೇಮಠ ಮನೆಯ ಸುತ್ತ ಪೋಲಿಸ್ ಭದ್ರತೆ ಒದಗಿಸಲಾಗಿದೆ. ನೇಹಾ ಅವರ ಹತ್ಯೆಯನ್ನು ಹಿಂದೂ ಮುಸ್ಲಿಂ ಹೋರಾಟ ಎಂಬಂತೆ ಬಿಂಬಿಸಿ ರಾಜ್ಯಾದ್ಯಂತ ಸುದ್ದಿ ಹರಡುತ್ತಿದ್ದ ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಮತ್ತವರ ಸಚಿವರು ಇದು ಸೂಕ್ಷ್ಮ ವಿಷಯ ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಬಾರದು ಎಂದು ಹೇಳಿದ್ದರು. ಬಿಜೆಪಿ ತನ್ನ ರಾಜಕೀಯಕ್ಕಾಗಿ ಹೇಳಿಕೆ ನೀಡುತ್ತಲೇ ಬಂದಿದ್ದರು. ಆದರೆ ಈಗ ಸಿದ್ದರಾಮಯ್ಯ ಅವರೇ ನೇಹಾ ಅವರ ಮನೆಗೆ ಭೇಟಿ ನೀಡುವ ಮೂಲಕ ಬಿಜೆಪಿಯ ರಾಜಕೀಯಕ್ಕೆ ತೆರೆ ಎಳೆದಿದ್ದಾರೆ.