Meternal death | ಬೆಳಗಾವಿಯಲ್ಲಿ ನಿಲ್ಲದ ಬಾಣಂತಿಯರ ಸಾವು; ವೈದ್ಯರ ವಿರುದ್ಧ ಆಕ್ರೋಶ
ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವು ಮುಂದುವರಿದಿದೆ. ವೈದ್ಯರ ನಿರ್ಲಕ್ಷ್ಯವೇ ಬಾಣಂತಿಯರ ಸಾವಿಗೆ ಕಾರಣವೆಂದು ಕುಟುಂಬಸ್ಥರ ಆರೋಪವಾಗಿದೆ.
ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವು ಮುಂದುವರಿದಿದೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆ ನಂತರ ಗಂಗವ್ವ ಗೊಡಕುಂದ್ರಿ(31) ಎಂಬುವರು ಮೃತಪಟ್ಟಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ತಾಲೂಕಿನ ಕರಡಿಗುದ್ದಿ ಗ್ರಾಮದ ಗಂಗವ್ವ ಗೊಡಕುಂದ್ರಿ ಅವರನ್ನು ಜ. 28 ರಂದು ಹೆರಿಗೆಗೆ ದಾಖಲಿಸಲಾಗಿತ್ತು. ಜ. 30ರ ರಾತ್ರಿ ಗಂಗವ್ವ ಗೊಡಕುಂದ್ರಿ ಅವರಿಗೆ ಹೆರಿಗೆ ಆಗಿತ್ತು. ಗಂಗವ್ವ ಗೊಡಕುಂದ್ರಿ ಅವರಿಗೆ ಕಡಿಮೆ ರಕ್ತದೊತ್ತಡ ಇದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಜ.31ರಂದು ಕುಟುಂಬಸ್ಥರಿಗೆ ತಿಳಿಸಿದ್ದರು. ಇದಾದ ಸ್ಪಲ್ಪ ಹೊತ್ತಿನಲ್ಲೆ ಬಾಣಂತಿ ಗಂಗವ್ವ ಗೊಡಕುಂದ್ರಿ ಮೃತಪಟ್ಟಿದ್ದರು.
ಬಳಿಕ ವೈದ್ಯರು ಗಂಗವ್ವ ಗೊಡಕುಂದ್ರಿ ಕುಟುಂಬಸ್ಥರ ಕಡೆಯಿಂದ ಖಾಲಿ ಹಾಳೆ ಮೇಲೆ ಸಹಿ ಪಡೆದು ಮೃತದೇಹ ಕೊಟ್ಟು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಜ. 22ರಂದು ಬೆಳೆಗಾವಿಯ ನಿಲಜಿ ಗ್ರಾಮದ ಬಾಣಂತಿ ಅಂಜಲಿ ಪಾಟೀಲ್ ಎಂಬುವರು ಮೃತಪಟ್ಟಿದ್ದರು. ವೈದ್ಯರ ನಿರ್ಲಕ್ಷ್ಯ ಹಾಗೂ ಸೂಕ್ತ ಚಿಕಿತ್ಸೆ ಕೊರತೆಯಿಂದ ಬಾಣಂತಿ ಮೃತಪಟ್ಟಿರುವ ಆರೋಪ ಕೇಳಿಬಂದಿತ್ತು.
ಜ. 24ರಂದು ಬೆಳಗಾವಿಯ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷದಿಂದ ಮುತ್ತವ್ವ ಸಂತೋಷ ಗೊಳಸಂಗಿ (31) ಎಂಬುವರು ಹೆರಿಗೆ ನಂತರ ಮೃತುಪಟ್ಟಿದ್ದರು. ಹೆರಿಗೆ ವೇಳೆ ಅಧಿಕ ರಕ್ತಸ್ರಾವದಿಂದ ಬಾಣಂತಿ ಮೃತಪಟ್ಟಿದ್ದರು.
ಇನ್ನು 2024 ಡಿಸೆಂಬರ್ 19ರಿಂದ 23ರವರೆಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ಬಾಣಂತಿಯರು ಮೃತಪಟ್ಟಿದ್ದರು.
ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ವೈಶಾಲಿ ಕೊಟಬಾಗಿ ( 20), ರಾಮದುರ್ಗ ತಾಲೂಕಿನ ನಾಗನೂರ ತಾಂಡಾದ ಬಾಣಂತಿ ಕಲ್ಪನಾ ಅನಿಲ ಲಮಾಣಿ (26) ಮೃತಪಟ್ಟಿದ್ದರು. ಬಿಮ್ಸ್ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದರು.
ಬಳ್ಳಾರಿಯಲ್ಲೂ ಮುಂದುವರಿದ ಸಾವು
ಬಳ್ಳಾರಿ ಆಸ್ಪತ್ರೆಯಲ್ಲೂ ಬಾಣಂತಿಯರ ಸಾವು ಮುಂದುವರಿದಿದೆ.
ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಜ. 31ರಂದು ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ಬಾಣಂತಿ ಮಹಾದೇವಿ (21)ಎಂಬುವವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಹೊರಗಿನಿಂದ ಔಷಧ ತಂದುಕೊಟ್ಟರೂ ಬಳಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದರು.