ಮಳೆ ಹಾನಿ ಪ್ರದೇಶಕ್ಕೆ ಡಿಸಿಎಂ ಭೇಟಿ | ಕಸ ವಿಲೇವಾರಿ, ಫುಟ್‌ಪಾತ್ ಒತ್ತುವರಿ ತೆರವು ಸೂಚನೆ
ಭಾನುವಾರ ರಾತ್ರಿ ಸುರಿದ ಮಳೆಯಿಂದ ನೀರು ನುಗ್ಗಿ ಹಾನಿಗೊಳಗಾದ ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪರಿಶೀಲನೆ ನಡೆಸಿದರು.
ಈ ವೇಳೆ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ʻʻನಗರ ಸಂಚಾರದ ವೇಳೆ ಸಾಕಷ್ಟು ರಸ್ತೆಗುಂಡಿಗಳು ಕಂಡು ಬಂದವು. ಮಳೆ ಹೆಚ್ಚಾದ ಕಾರಣಕ್ಕೆ ಸುಮಾರು ಅರ್ಧ ಅಡಿಗೂ ಆಳದ ಗುಂಡಿಗಳಾಗಿವೆ. ಇವುಗಳನ್ನು ಕೂಡಲೇ ಮುಚ್ಚಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪೊಲೀಸರಿಗೂ ಎಲ್ಲಿಲ್ಲಿ ರಸ್ತೆಗುಂಡಿಗಳಿವೆ ಅದರ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದೇನೆ. ಈಗಾಗಲೇ ನೂತನ ಆಪ್ ಅನ್ನು ಬಿಡುಗಡೆ ಮಾಡಿದ್ದು ಅಲ್ಲಿ ಫೋಟೊ ತೆಗೆದು ಹಾಕಿದರೆ ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದುʼʼ ಎಂದು ಹೇಳಿದರು.
ʻʻರಾಜಕಾಲುವೆಗಳಿಗೆ ರಕ್ಷಣಾ ಗೋಡೆಗಳನ್ನು ಎಲ್ಲಾ ಕಡೆ ನಿರ್ಮಾಣ ಮಾಡಬೇಕು ಹಾಗೂ ರಸ್ತೆ ನಿರ್ಮಾಣದ ತೀರ್ಮಾನ ಮಾಡಲಾಗಿದೆ. ಅಲ್ಲದೇ ಅನೇಕ ಕಡೆ ರಸ್ತೆ ಫುಟ್ ಪಾತ್ ಗಳಲ್ಲಿ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿಯಲಾಗಿದೆ. ಇದರ ಬಗ್ಗೆ ಕ್ರಮವಹಿಸಲಾಗುವುದು. ಇದರಿಂದ ಮೋರಿ ಮುಚ್ಚಿಕೊಳ್ಳುವುದು, ನೀರಿನ ಹರಿವಿಗೆ ತೊಂದರೆ ಉಂಟಾಗುತ್ತಿದೆ. ಅನೇಕ ಉದ್ಯಾನಗಳಲ್ಲೂ ಕಟ್ಟಡ ತ್ಯಾಜ್ಯಗಳನ್ನು ಸುರಿಯುತ್ತಿದ್ದು, ಇದರ ಬಗ್ಗೆ ಗಮನಹರಿಸಲಾಗುವುದುʼʼ ಎಂದರು.
ಒಣಗಿರುವ ಮರದ ತೆರವಿಗೆ ಈ ಹಿಂದೆಯೇ ಸಾರ್ವಜನಿಕರು ದೂರು ನೀಡಿದ್ದರೂ ಕ್ರಮ ತೆಗೆದುಕೊಳ್ಳಲಾಗಿಲ್ಲ ಯಾಕೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ʻʻಇಡೀ ಬೆಂಗಳೂರಿನಾದ್ಯಂತ ಕೂಡಲೇ ಒಣಗಿದ ಮರಗಳ ತೆರವು ಮಾಡಲಾಗುವುದು. ಎಲ್ಲೆಲ್ಲಿ ತೆರವು ಮಾಡಬೇಕು ಎನ್ನುವ ಬಗ್ಗೆ ಪಟ್ಟಿ ತಯಾರಿಸಿ ಮುಂದುವರಿಯಲಾಗುವುದು. ನಿರ್ಲಕ್ಷ್ಯವಹಿಸಿರುವ ಅಧಿಕಾರಿಗಳ ಬಗ್ಗೆ ಸಭೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದುʼʼ ಎಂದು ಉತ್ತರಿಸಿದರು.
ʻʻಬೆಂಗಳೂರಿನಲ್ಲಿ ಅಂತಹ ಮಳೆ ಬಂದಿಲ್ಲ. ರಾಜ್ಯದ ಇತರೆಡೆ ಉತ್ತಮ ಮಳೆ ಬಂದಿದೆ. ಬೆಂಗಳೂರು ಸುತ್ತಲೂ ಯಾವ ಕೆರೆಗಳೂ ತುಂಬಿಲ್ಲ, ಅಕ್ಕಪಕ್ಕದ ಜಿಲ್ಲೆಗಳಲ್ಲೂ ಮಳೆ ಬಂದಿಲ್ಲ. ಪಶ್ಚಿಮ ಘಟ್ಟ ಸೇರಿದಂತೆ ಒಂದಷ್ಟು ಕಡೆ ಮಳೆ ಬಂದು ಅಣೆಕಟ್ಟುಗಳು ತುಂಬಿವೆ. ಬೆಂಗಳೂರು ನಗರದ ಒಳಗಿರುವ ಕೆರೆಗಳಲ್ಲೂ ಅಷ್ಟಾಗಿ ನೀರಿಲ್ಲ. ಅಪಾರ್ಟಮೆಂಟ್‌ಗಳಿಗೆ ನೀರು ನುಗಿದ್ದರೆ ಸರಿ ಮಾಡೋಣ. ಜೊತೆಗೆ ಮಳೆಯೂ ಚೆನ್ನಾಗಿ ಬರಬೇಕು, ಕೆರೆಗಳು ತುಂಬಬೇಕು, ಅಂತರ್ಜಲ ಹೆಚ್ಚಾಗಬೇಕು. ಮಳೆ ಇನ್ನೂ ಸಾಲದುʼʼ ಎಂದರು.
ಸಂಚಾರಿ ಪೊಲೀಸರೆ ಹೆಚ್ಚು ಕೆಲಸ ಮಾಡುತ್ತಿದ್ದು ಬಿಬಿಎಂಪಿ ಅಧಿಕಾರಿಗಳು ಸಮಸ್ಯೆ ನಿವಾರಣೆಗೆ ಬರುತ್ತಿಲ್ಲ ಎಂದು ಕೇಳಿದಾಗ ʻʻಇದರ ಬಗ್ಗೆ ಗಮನ ಹರಿಸಲಾಗುವುದು. ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ಮಾಡಿಕೊಂಡ ಕಾರಣಕ್ಕೆ ಕಸ ಹೆಚ್ಚಾಗಿದೆ. ಇದರ ತೆರವಿನ ಬಗ್ಗೆ ಗಮನ ನೀಡಲಾಗುವುದುʼʼ ಎಂದು ಹೇಳಿದರು.
ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದ ತೊಂದರೆಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ನಗರದ ಜಯದೇವ ಆಸ್ಪತ್ರೆ ಹಾಗೂ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. pic.twitter.com/D3SeZzplBo
— DK Shivakumar (@DKShivakumar) August 12, 2024