ಡಿಸಿಎಂ ನೈಟ್‌ ರೌಂಡ್ಸ್ | ರಸ್ತೆ ಕಾಮಗಾರಿ ಪರಿಶೀಲಿಸಿದ ಡಿ.ಕೆ ಶಿವಕುಮಾರ್
x
ರಸ್ತೆ ಕಾಮಾಗಾರಿಯನ್ನು ಸ್ವತ: ಪರೀಕ್ಷಿಸಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌

ಡಿಸಿಎಂ ನೈಟ್‌ ರೌಂಡ್ಸ್ | ರಸ್ತೆ ಕಾಮಗಾರಿ ಪರಿಶೀಲಿಸಿದ ಡಿ.ಕೆ ಶಿವಕುಮಾರ್

ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಸೋಮವಾರ ತಡರಾತ್ರಿ ಬೆಂಗಳೂರಿನ ಹಲವು ರಸ್ತೆಗಳಿಗೆ ಖುದ್ದು ಭೇಟಿ ನೀಡಿ ಬಿಬಿಎಂಪಿ ಕೈಗೊಂಡಿರುವ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಪರಿಶೀಲನೆ ನಡೆಸಿದರು.


Click the Play button to hear this message in audio format

ಬೆಂಗಳೂರು ರಸ್ತೆ ಗುಂಡಿಗಳಿಗೆ ಬ್ರೇಕ್ ಹಾಕಲು ವಿಶೇಷ ಕಾಳಜಿ ತೋರಿರುವ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಸೋಮವಾರ ತಡರಾತ್ರಿ ಬೆಂಗಳೂರಿನ ಹಲವು ರಸ್ತೆಗಳಿಗೆ ಖುದ್ದು ಭೇಟಿ ನೀಡಿ ಬಿಬಿಎಂಪಿ ಕೈಗೊಂಡಿರುವ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳನ್ನು ಖುದ್ದು ಪರಿಶೀಲನೆ ನಡೆಸಿದರು.

ಡಿ.ಕೆ.ಶಿವಕುಮಾರ್ ಅವರು ತಡರಾತ್ರಿ 2 ಗಂಟೆಯವರೆಗೆ ಸುತ್ತಾಟ ನಡೆಸಿ ಗುಂಡಿಗಳನ್ನು ಪರಿಶೀಲಿಸಿದ್ದಾರೆ. ಅವರೊಂದಿಗೆ ಬಿಬಿಎಂಪಿ ಅಧಿಕಾರಿಗಳು ಸಹ ನಿದ್ದೆಗೆಟ್ಟು ಸಿಟಿ ರೌಂಡ್ಸ್‌ಗೆ ಜೊತೆಯಾಗಿದ್ದಾರೆ. ಬೆಂಗಳೂರಿನ ಪ್ರಮುಖ ರಸ್ತೆಗಳಾದ ಜೆಸಿ ರಸ್ತೆ, ಟ್ರಿನಿಟಿ ಜಂಕ್ಷನ್ ಹಾಗೂ ದೊಮ್ಮಲೂರು ಬ್ರಿಡ್ಜ್ ಬಳಿ ರಸ್ತೆ ಗುಂಡಿಗಳ ದುರಸ್ತಿ ಕಾಮಗಾರಿಯ ಸ್ಥಿತಿಗತಿಗಳನ್ನು ಪರಿಶೀಲಿಸಿದ್ದಾರೆ. ಸ್ಥಳೀಯ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರೀಸ್, ಮುಖ್ಯ ಆಯುಕ್ತ ತುಷಾರ ಗಿರಿನಾಥ್, ಬಿಎಂಆರ್ಡಿಎ ಆಯುಕ್ತ ರಾಜೇಂದ್ರ ಚೋಳನ್, ವಿಶೇಷ ಆಯುಕ್ತ ಡಾ.ಕೆ.ಹರೀಶ್ ಕುಮಾರ್, ವಲಯಾರಣ್ಯಾಧಿಕಾರಿ ಸ್ನೇಹಲ್ ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳು ಡಿ.ಕೆ ಶಿವಕುಮಾರ್‌ ಜೊತೆಗಿದ್ದರು.

ಕೆಲವು ರಸ್ತೆಗಳಲ್ಲಿ ಡಿ ಕೆ ಶಿವಕುಮಾರ್‌ ಅವರು ತಾವೇ ಗಡಾರಿ ಮೂಲಕ ಗುಂಡಿಗೆ ಮುಚ್ಚಿದ್ದ ಡಾಂಬರನ್ನು ಅಗೆಯುವ ಪ್ರಯತ್ನವನ್ನೂ ಮಾಡಿದ್ದಾರೆ. ಈ ಮೂಲಕ ರಸ್ತೆ ದುರಸ್ತಿ ಕಾಮಗಾರಿಯ ಗುಣಮಟ್ಟವನ್ನು ಖುದ್ದು ಪರಿಶೀಲಿಸಿ ಖಾತ್ರಿಪಡಿಸಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಅಧಿಕಾರಿಗಳು ನೀಡಿದ ಮಾಹಿತಿ ಕೇಳಿ ಕೂರುವವನು ನಾನಲ್ಲ. ಕಾಮಗಾರಿಯ ಗುಣಮಟ್ಟವನ್ನು ಕಣ್ಣಾರೆ ನೋಡಿ ಪರಿಶೀಲಿಸುವುದು ಈ ಭೇಟಿಯ ಉದ್ದೇಶ. ಜಾಗತಿಕ ನಗರವಾಗಿ ಗುರುತಿಸಿಕೊಂಡಿರುವ ಬೆಂಗಳೂರಿನ ಘನತೆಗೆ ಚ್ಯುತಿ ಬರದಂತೆ ಕಾಪಾಡುವುದೇ ನಮ್ಮ ಧ್ಯೇಯ ಎಂದು ಹೇಳಿದ್ದಾರೆ.

ಇತ್ತೀಚೆಗೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಡಿ.ಕೆ.ಶಿವಕುಮಾರ್‌ ಅವರು 15 ದಿನಗಳಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಯಾವುದೇ ಗುಂಡಿಗಳು ಕಣ್ಣಿಗೆ ಕಾಣಿಸಬಾರದು. ಎರಡು ವಾರಗಳ ನಂತರ ನಾನೇ ಖುದ್ದಾಗಿ ಇಡೀ ಬೆಂಗಳೂರು ನಗರವನ್ನು ಸುತ್ತಾಡಿ ಪ್ರತಿ ರಸ್ತೆಯನ್ನು ಪರಿಶೀಲಿಸುತ್ತೇನೆ ಎಂದಿದ್ದರು. ಬಳಿಕ ಡಿಕೆಶಿ ಅಮೇರಿಕಾಗೆ ಪ್ರವಾಸ ತೆರಳಿದ್ದರು.

ಡಿಸಿಎಂ ಆದೇಶದ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ರಸ್ತೆಗಳಿಗಿಳಿದು, ಖುದ್ದು ಸ್ಥಳಕ್ಕೇ ಬಂದು ಹಗಲು ರಾತ್ರಿಯೆನ್ನದೆ ರಸ್ತೆ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಿದ್ದರು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಕೂಡ ಬೆಂಗಳೂರಿನ ಪ್ರಮುಖ ರಸ್ತೆಗಳಿಗೆ ಭೇಟಿ ನೀಡಿ, ರಸ್ತೆ ಗುಂಡಿ ಮುಚ್ಚುವ ಹಾಗೂ ಪಾದಚಾರಿ ಮಾರ್ಗ ದುರಸ್ತಿ ಕಾರ್ಯವನ್ನು ಪರಿಶೀಲಿಸಿದ್ದರು.

ಪ್ರವಾಸ ಮುಗಿಸಿ ವಾಪಸ್‌ ಬಂದಿದ್ದ ಅವರು, ಬೆಂಗಳೂರಿನಲ್ಲಿ ಎಷ್ಟು ರಸ್ತೆ ಗುಂಡಿಗಳಿವೆ? ಎನ್ನುವ ಮಾಹಿತಿ ನನ್ನ ಬಳಿ ಇದೆ. ಹಾಗಾಗಿ ಇವುಗಳನ್ನು ಮುಚ್ಚಲು ಅಭಿಯಾನದ ರೀತಿಯಲ್ಲಿ ಕೆಲಸ ಮಾಡಿದ್ದೇವೆ, ಇದು ನಮ್ಮ ಜವಾಬ್ದಾರಿ ಕೂಡ ಹೌದು. ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಆದೇಶ ಕೊಟ್ಟ ತಕ್ಷಣ ಅಧಿಕಾರಿಗಳು ಈ ರೀತಿ ಕಾರ್ಯಪ್ರವೃತ್ತರಾಗಿರುವುದನ್ನು ನಾನು ನೋಡಿರಲಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳನ್ನು ಶ್ಲಾಘಿಸಿದ್ದರು.

Read More
Next Story