
ಸಾಂದರ್ಭಿಕ ಚಿತ್ರ
ಸಿಎಂ ಸ್ಥಾನ| ಡಿಸಿಎಂ ಡಿಕೆಶಿ ಆಪ್ತರಿಂದ ದೆಹಲಿ ಯಾತ್ರೆ; ಹೈಕಮಾಂಡ್ ಮೇಲೆ ಒತ್ತಡ
ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಮದ್ದೂರು ಶಾಸಕ ಕಡಲೂರು ಉದಯ್ ಸೇರಿದಂತೆ ಡಿಕೆಶಿ ಬೆಂಬಲಿಗ ಶಾಸಕರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸಿಎಂ ಸ್ಥಾನದ ಬೇಡಿಕೆ ಇಡಲಿದ್ದಾರೆ.
ಕಾಂಗ್ರೆಸ್ ಸರ್ಕಾರ 2.5 ವರ್ಷ ಪೂರ್ಣಗೊಳಿಸುವ ಹೊತ್ತಿನಲ್ಲೇ ʼನವೆಂಬರ್ ಕ್ರಾಂತಿʼ ನಡೆಯಲಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗಳು ಇದೀಗ ಸೊರಗುತ್ತಿವೆ. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟು ಕೊನೆ ಕ್ಷಣದವರೆಗೂ ಲಾಬಿ ನಡೆಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇದೀಗ ಮೌನ ವಹಿಸಿದ್ದಾರೆ.
ಸಿಎಂ ಸ್ಥಾನಕ್ಕಾಗಿ ಲಾಬಿ ನಡೆಸಲು ಸಾಕಷ್ಟು ಬಾರಿ ದೆಹಲಿಗೆ ತೆರಳಿದರೂ ಡಿಕೆಶಿಗೆ ಹೈಕಮಾಂಡ್ ನಾಯಕರು ಭೇಟಿಯ ಅವಕಾಶ ನೀಡಿರಲಿಲ್ಲ. ಆದರೆ, ಇದೀಗ ಡಿಸಿಎಂ ಬೆಂಬಲಿಗ ಶಾಸಕರು ದೆಹಲಿಗೆ ತೆರಳಲು ಮುಂದಾಗಿದ್ದು, ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರದ ಮೊರೆ ಹೋಗಿದ್ದಾರೆ.
ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಮದ್ದೂರು ಶಾಸಕ ಕಡಲೂರು ಉದಯ್ ಸೇರಿದಂತೆ ಡಿಕೆಶಿ ಬೆಂಬಲಿಗ ಶಾಸಕರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸಿಎಂ ಸ್ಥಾನದ ಬೇಡಿಕೆ ಇಡಲಿದ್ದಾರೆ. ಡಿಕೆಶಿ ಆಪ್ತ ಬಣದ ಶಾಸಕರು ಈಗಾಗಲೇ ಇತರೆ ಶಾಸಕರನ್ನು ಸಂಪರ್ಕಿಸಿ ಅವರನ್ನೂ ದೆಹಲಿಗೆ ಕರೆದುಕೊಂಡು ಹೋಗುವ ಯೋಜನೆ ರೂಪಿಸಿ ಸಿಎಂ ಬಣಕ್ಕೆ ಎದಿರೇಟು ನೀಡಲು ಸಿದ್ದರಾಗಿದ್ದಾರೆ.
ಹೈಕಮಾಂಡ್ ಮೇಲೆ ಒತ್ತಡ ಹೇರಿ ಡಿಕೆಶಿಯನ್ನು ಸಿಎಂ ಸ್ಥಾನದಲ್ಲಿ ಕೂರಿಸಬೇಕು ಎಂಬ ಉದ್ದೇಶ ಹೊಂದಿರುವ ಕೆಲವು ಶಾಸಕರು ಹೈಕಮಾಂಡ್ ಎಚ್ಚರಿಕೆ ನಡುವೆಯೂ ಆಗ್ಗಿಂದಾಗೆ ಡಿಸಿಎಂ ಡಿಕೆಶಿ ಪರವಾಗಿ ಹೇಳಿಕೆ ನೀಡುತ್ತಿದ್ದರು. "ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಅವರ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರಕಬೇಕು" ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. "ಪಕ್ಷ ಅಧಿಕಾರಕ್ಕೆ ಬರಲು ಡಿಕೆಶಿಯವ ಪಾತ್ರ ಬಹಳ ಮುಖ್ಯವಾಗಿತ್ತು. ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ದೊರಕಬೇಕು" ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆ ನೀಡಿದ್ದರು.
ಹೈಕಮಾಂಡ್ ಬಳಿಗೆ ಡಿಕೆಶಿ ಆಪ್ತ ಶಾಸಕರು ಎಷ್ಟು ಮಂದಿ ತೆರಳಿ ಒತ್ತಡ ಹೇರುತ್ತಾರೆ ಹಾಗೂ ನಾಯಕರು ಈ ಶಾಸಕರುಗಳ ಮಾತನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂಬುದು ಮುಖ್ಯವಾಗಿದೆ. ತಮ್ಮ ಬಣದ ನಾಯಕ ಡಿಕೆಶಿಗೆ ಹೈಕಮಾಂಡ್ ಭೇಟಿಗೆ ಅವಾಕಶ ನೀಡಿಲ್ಲ. ಇನ್ನು ಶಾಸಕರಿಗೆ ಭೇಟಿ ಮಾಡಲು ಅವಕಾಶ ನೀಡುತ್ತದೆಯೇ ಎಂಬುದು ಮುಖ್ಯವಾಗಿದೆ.
ನಾಯಕತ್ವ ಬದಲಾವಣೆ, ಹೈಕಮಾಂಡ್ ಹೇಳಿಲ್ಲ: ಜಿ. ಪರಮೇಶ್ವರ್
ನಮ್ಮ ಸರ್ಕಾರವು ಎರಡೂವರೆ ವರ್ಷದ ಅವಧಿಯಲ್ಲಿ ಜನಸಮುದಾಯಕ್ಕೆ ನಾವು ನೀಡಿದ್ದ ಭರವಸೆಗಳನ್ನು ಆದ್ಯತೆಯ ಮೇಲೆ ಈಡೇರಿಸಿದ್ದೇವೆ ಎಂಬ ಸಮಾಧಾನವಿದೆ. ಈ ಅವಧಿಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ. ನಮ್ಮ ಹೈಕಮಾಂಡ್‌ನಿಂದ ನಾಯಕತ್ವ ಬದಲಾವಣೆಯ ಬಗ್ಗೆ ಯಾರು ಏನನ್ನೂ ಹೇಳಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲೂ ಚರ್ಚೆಯಾಗಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಆದ್ಯತೆಯ ಮೇಲೆ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದ್ದೇವೆ. ಮುಂದೆ ಹೆಚ್ಚಿನ ರೀತಿಯಲ್ಲಿ ಹಣಕಾಸಿನ ವಿಚಾರದಲ್ಲಿ ಅನವಶ್ಯಕ ಖರ್ಚುಗಳನ್ನು ಸರಿಪಡಿಸುವ ಪ್ರಯತ್ನ ಮಾಡಬೇಕು. ಕೇಂದ್ರ ಸರ್ಕಾರ ಜಿಎಸ್‌ಟಿ ಪಾಲಿನಲ್ಲಿ ಕಡಿಮೆ ನೀಡಿದೆ. ಕೇಂದ್ರ ಸರ್ಕಾರದ ಸಹಯೋಗದಲ್ಲಿ ಆಗುವ ಯೋಜನೆಗಳಲ್ಲಿ ಸರಿಯಾದ ಸಮಯದಲ್ಲಿ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಜಲ ಜೀವನ್ ಮಿಷನ್ ಯೋಜನೆಯ ಸಾಕಷ್ಟು ಅನುದಾನ ಬಾಕಿ ಇದೆ. ಇಡೀ ದೇಶದಲ್ಲಿ ಮನೆಮನೆಗೆ ಗಂಗೆ, ನೀರು ತಲುಪಿಸುತ್ತೇವೆ ಎಂದು ಹೇಳುತ್ತಾರೆ. ಅದರ ಹಣವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಮುಖ್ಯಮಂತ್ರಿಗಳು ಅನುಭವಿ ಹಣಕಾಸು ಸಚಿವರು. 17ನೇ ಬಾರಿ ಬಜೆಟ್ ಮಂಡಿಸುವವರಿದ್ದಾರೆ. ಇದನ್ನೆಲ್ಲ ಚರ್ಚೆ ಮಾಡಿ, ಹಣಕಾಸಿನ ವಿಚಾರದಲ್ಲಿ ಒಂದಷ್ಟು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಧರ್ಮಸ್ಥಳ ಪ್ರಕರಣ, ಸದನಕ್ಕೆ ಮಾಹಿತಿ
ಧರ್ಮಸ್ಥಳ ಪ್ರಕರಣದ ಕುರಿತು ಎಸ್‌ಐಟಿಯವರಿಗೆ ಸರ್ಕಾರದಿಂದ ಸ್ಪಷ್ಟವಾಗಿ ಹೇಳಿದ್ದೇವೆ. ವರದಿ ನೀಡುವುದು ಅಧಿಕಾರಿಗಳಿಗೆ ಬಿಟ್ಟದ್ದು. ಎಸ್‌ಐಟಿಯವರು ಸರ್ಕಾರಕ್ಕೆ ವರದಿ ಕೊಡಲೇಬೇಕಾಗುತ್ತದೆ. ಪ್ರಕರಣದ ವಾಸ್ತವಾಂಶ ಏನಿದೆ ಎಂಬುದನ್ನು ಸದನಕ್ಕೆ ಮಾಹಿತಿ ನೀಡಲೇಬೇಕು ಎಂದು ಹೇಳಿದರು.

