ವಾಕ್ಸಮರದ ಬಳಿಕ ಡಿಸಿಎಂ ಡಿಕೆಶಿ-ಕಿರಣ್ ಮಜುಮ್ದಾರ್‌ ಷಾ ಭೇಟಿ
x

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಷಾ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಮಾಲೋಚನೆ

ವಾಕ್ಸಮರದ ಬಳಿಕ ಡಿಸಿಎಂ ಡಿಕೆಶಿ-ಕಿರಣ್ ಮಜುಮ್ದಾರ್‌ ಷಾ ಭೇಟಿ

ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಮ್ದಾರ್‌ ಷಾ ಅವರು ಮಂಗಳವಾರ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.


Click the Play button to hear this message in audio format

ಬೆಂಗಳೂರಿನ ರಸ್ತೆಗುಂಡಿ ಮತ್ತು ಕಸದ ಸಮಸ್ಯೆಯ ಕುರಿತು ಸರ್ಕಾರವನ್ನು ಕಟುವಾಗಿ ಟೀಕಿಸಿ, ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಮ್ದಾರ್‌ ಷಾ ಅವರು ಮಂಗಳವಾರ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇತ್ತೀಚೆಗೆ ನಡೆದಿದ್ದ ತೀವ್ರ ವಾಕ್ಸಮರದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದ್ದು, ನಗರದ ಅಭಿವೃದ್ಧಿ ಕುರಿತು ಸರ್ಕಾರದೊಂದಿಗೆ ಕೈಜೋಡಿಸುವ ಮುನ್ಸೂಚನೆ ನೀಡಿದೆ.

ಮಾತಿನ ಚಕಮಕಿಯ ಹಿನ್ನೆಲೆ

ಕೆಲ ದಿನಗಳ ಹಿಂದೆ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್‌ ಷಾ ಅವರು ಬೆಂಗಳೂರಿನ ಕಳಪೆ ಮೂಲಸೌಕರ್ಯ, ಅದರಲ್ಲೂ ರಸ್ತೆಗುಂಡಿ ಮತ್ತು ಕಸದ ನಿರ್ವಹಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.

ಕಿರಣ್ ಮಜುಮ್ದಾರ್‌ ಷಾ ಅವರ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್, "ಉದ್ಯಮಿಗಳಿಗೆ ವೈಯಕ್ತಿಕ ಅಜೆಂಡಾಗಳಿವೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇವರೆಲ್ಲ ಯಾಕೆ ಬಾಯಿ ಬಿಟ್ಟಿರಲಿಲ್ಲ?" ಎಂದು ಪ್ರಶ್ನಿಸಿದ್ದರು. "ಸರ್ಕಾರದಿಂದ ಎಲ್ಲಾ ಸವಲತ್ತುಗಳನ್ನು ಪಡೆದು ಬೆಳೆದವರು, ತಾವು ಬೆಳೆದ ನಗರಕ್ಕೆ ಧಕ್ಕೆ ತರಬಾರದು" ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಡಿಸಿಎಂ ಅವರ 'ವೈಯಕ್ತಿಕ ಅಜೆಂಡಾ' ಆರೋಪಕ್ಕೆ ಟ್ವಿಟರ್‌ನಲ್ಲಿ ತಿರುಗೇಟು ನೀಡಿದ್ದ ಕಿರಣ್ ಮಜುಂದಾರ್ ಶಾ, "ನಿಮ್ಮ ಮಾತು ಸತ್ಯವಲ್ಲ. ನಾವು ಹಿಂದಿನ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳ ಅವಧಿಯಲ್ಲೂ ನಗರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೇವೆ. ಸ್ವಚ್ಛ ಮತ್ತು ಸುಸ್ಥಿತಿಯಲ್ಲಿರುವ ರಸ್ತೆಗಳನ್ನು ಹೊಂದುವುದೇ ನಮ್ಮ ಅಜೆಂಡಾ" ಎಂದು ಸ್ಪಷ್ಟಪಡಿಸಿದ್ದರು.

ಭೇಟಿ ಮತ್ತು ಸಮಾಲೋಚನೆ

ಈ ಆರೋಪ-ಪ್ರತ್ಯಾರೋಪಗಳ ಬಳಿಕ, ಮಂಗಳವಾರ ಕಿರಣ್ ಮಜುಮ್ದಾರ್‌ ಷಾ ಅವರು ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ. ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಬೆಂಗಳೂರಿನ ಅಭಿವೃದ್ಧಿಯ ಕುರಿತು ರಚನಾತ್ಮಕವಾಗಿ ಚರ್ಚೆ ನಡೆಸುವ ಪ್ರಯತ್ನ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಸಭೆಯು ನಗರದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಕಾರ್ಪೊರೇಟ್ ವಲಯದ ನಡುವಿನ ಸಹಭಾಗಿತ್ವಕ್ಕೆ ಹೊಸ ದಾರಿ ಮಾಡಿಕೊಡುವ ನಿರೀಕ್ಷೆಯಿದೆ.

Read More
Next Story