ಸಚಿವ ಜಮೀರ್ ನೀಡಿದ್ದ  ಕಾಲಾ ಕುಮಾರಸ್ವಾಮಿ ಹೇಳಿಕೆ ಸರಿಯಲ್ಲ: ಡಿ.ಕೆ ಶಿವಕುಮಾರ್‌
x
ಡಿ.ಕೆ ಶಿವಕುಮಾರ್‌

ಸಚಿವ ಜಮೀರ್ ನೀಡಿದ್ದ 'ಕಾಲಾ ಕುಮಾರಸ್ವಾಮಿ' ಹೇಳಿಕೆ ಸರಿಯಲ್ಲ: ಡಿ.ಕೆ ಶಿವಕುಮಾರ್‌

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು 'ಕರಿಯ' ಎಂದು ಕರೆದಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆ ತಪ್ಪು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.


Click the Play button to hear this message in audio format

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು 'ಕರಿಯ' ಎಂದು ಕರೆದಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆ ತಪ್ಪು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಪಕ್ಷದ ಅಧ್ಯಕ್ಷನಾಗಿ ಇದನ್ನು ಹೇಳುತ್ತಿದ್ದೇನೆ. ಜಮೀರ್ ಹಾಗೂ ಕುಮಾರಸ್ವಾಮಿ ನಡುವೆ ವೈಯಕ್ತಿಕ ವಿಚಾರಗಳು ಏನೇ ಇದ್ದರೂ ಕಪ್ಪು ಬಿಳುಪು ಎಂದೆಲ್ಲ ಮಾತನಾಡುವುದು ಸರಿಯಲ್ಲ. ನಾನು ಆ ಹೇಳಿಕೆಯನ್ನು ಒಪ್ಪುವುದಿಲ್ಲ, ಅದನ್ನು ನಾನು ಖಂಡಿಸುತ್ತೇನೆ. ಜಮೀರ್ ಅವರು ಏನು ಬೇಕಾದ್ರೂ ಕರೆದುಕೊಳ್ಳಲಿ. ಕರಿಯ ಅಂತಾದ್ರೂ ಅನ್ನಲಿ, ಕೊಚ್ಚೆ ಅಂತಾದ್ರೂ ಕರೆಯಲಿ. ನಾನು ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ಆ ಹೇಳಿಕೆ ಸರಿಯಲ್ಲ. ಈ ಕುರಿತು ಜಮೀರ್ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಆಮೇಲೆ ನಿರ್ಧರಿಸೋಣ ಎಂದರು.

ಚನ್ನಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಜಮೀ‌ರ್ ಅವರು, ತಮ್ಮ ಹಳೆಯ ಗೆಳೆಯ ಹಾಗೂ ಈಗ ರಾಜಕೀಯ ವಿರೋಧಿಯಾಗಿರುವ ಕುಮಾರಸ್ವಾಮಿ ಅವರ ವಿರುದ್ಧ ಟೀಕೆ ಮಾಡಿದ್ದರು. "ಬಿಜೆಪಿಯವರಿಗಿಂತ ಕಾಲಾ ಕುಮಾರಸ್ವಾಮಿ (ಕಪ್ಪು ಬಣ್ಣ ಹೊಂದಿರುವ ಕುಮಾರಸ್ವಾಮಿ) ಹೆಚ್ಚು ಡೇಂಜರ್" ಎಂದು ಉರ್ದುವಿನಲ್ಲಿ ಹೇಳಿಕೆ ನೀಡಿದ್ದರು. "ಯೋಗೇಶ್ವರ್ ಕಾಂಗ್ರೆಸ್‌ನಿಂದಲೇ ರಾಜಕೀಯ ಪ್ರಾರಂಭ ಮಾಡಿದ್ರು ಆದರೆ ಕೆಲವು ವ್ಯತ್ಯಾಸಗಳಾಗಿ ಬಿಜೆಪಿಗೆ ಹೋದ್ರು. ಜೆಡಿಎಸ್‌ಗೆ ಹೋಗಬೇಕು ಅಂದುಕೊಂಡಿದ್ದರೂ, ಕುಮಾರಸ್ವಾಮಿ ಆ ಪಕ್ಷದ ಅಭ್ಯರ್ಥಿಯಾಗಲು ಒಪ್ಪಲಿಲ್ಲ ಎಂದು ಹೇಳಿಕೆ ನೀಡಿದ್ದರು.

ಮುಸಲ್ಮಾನ ಮತದಾರರನ್ನು ಸೆಳೆಯುವ ಉದ್ದೇಶ ಇಟ್ಟುಕೊಂಡು ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ವಕ್ಸ್ ಸಚಿವರೂ ಆಗಿರುವ ಜಮೀರ್‌ ಕುಮಾರಸ್ವಾಮಿ ಅದಕ್ಕಿಂತ ಹಿಂದೆ ನೀಡಿದ್ದ ಹೇಳಿಕೆಯನ್ನು ಸ್ಮರಿಸಿಕೊಂಡು ಟೀಕೆ ಮಾಡಿದ್ದರು. ""ಈ ಹಿಂದೆ ಹಿಜಾಬ್ ಬೇಡ ಬೇಡ ಅಂದಿದ್ದೀರಿ ಕುಮಾರಸ್ವಾಮಿ ಅವರೇ. ಈಗ ನಿಮಗೆ ಮುಸಲ್ಮಾನರ ಓಟ್ ಬೇಕಾ? ಏ ಕುಮಾರಸ್ವಾಮಿ, ನಿನ್ನ ರೇಟ್ ಹೇಳು, ಮುಸಲ್ಮಾನರು ಒಂದೊಂದು ಪೈಸೆ ಹಾಕಿ ಇಡೀ ನಿನ್ನ ಕುಟುಂಬವನ್ನೇ ಖರೀದಿ ಮಾಡ್ತಾರೆ. ಈ ಕುಮಾರಸ್ವಾಮಿ ಬಿಜೆಪಿ ಹೋಗಿ ಮುಸಲ್ಮಾನರನ್ನು ಖರೀದಿ ಮಾಡ್ತಾನಂತೆ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಜಮೀರ್ ಹೇಳಿಕೆ ದೇಶಾದ್ಯಂತ ಚರ್ಚೆಗೆ ಒಳಗಾಗಿ ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿತ್ತು. ವಿವಾದಕ್ಕೆ ಒಳಗಾದ ಬಳಿಕ ಸಮಜಾಯಿಷಿ ನೀಡಲು ಮುಂದಾದ ಜಮೀರ್‌, ತಮ್ಮ‌ ಹೇಳಿಕೆ ಕುರಿತು ಕ್ಷಮೆಯಾಚನೆ ಮಾಡಿದ್ದರು. ನಾನು ಹೇಳಿರುವ ಉದ್ದೇಶವೇ ಬೇರೆಯಾಗಿತ್ತು. ಹಿಂದೆ ನಾನು ಅವರು ಜೊತೆಯಲ್ಲಿದ್ದಾಗ ನನ್ನನ್ನು ಕುಳ್ಳ ಎನ್ನುತ್ತಿದ್ದರು. ನಾನು ಅವರನ್ನು ಕರಿಯಣ್ಣ ಎಂದು ಕರೆಯುತ್ತಿದೆ," ಎಂದು ಸಮಜಾಯಿಷಿ ನೀಡಿದ್ದರು. "ಅವರ ಮೇಲೆ ನನಗೆ ಗೌರವವಿದೆ. ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೇಳಲು ನಾನು ಸಿದ್ಧʼʼ ಎಂದು ಅವರು ಕ್ಷಮೆಯಾಚಿಸಿದ್ದರು.

Read More
Next Story