ಜನಕಲ್ಯಾಣ ಸಮಾವೇಶ | ಈ ಬಂಡೆ ಯಾವತ್ತಿದ್ರೂ ಸಿದ್ದರಾಮಯ್ಯನವರ ಜೊತೆಗೇ ಇರುತ್ತದೆ: ಡಿ ಕೆ ಶಿವಕುಮಾರ್
ಅಧಿಕಾರ ಹಂಚಿಕೆಯ ಒಪ್ಪಂದ ಬಗ್ಗೆ ಪ್ರಸ್ತಾಪಿಸಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಹಾಸನದಲ್ಲಿ ನಡೆದ ಕಾಂಗ್ರೆಸ್ ಜನ ಕಲ್ಯಾಣ ಸಮಾವೇಶದಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಅಧಿಕಾರ ಹಂಚಿಕೆಯ ಒಪ್ಪಂದ ಬಗ್ಗೆ ಪ್ರಸ್ತಾಪಿಸಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಹಾಸನದಲ್ಲಿ ನಡೆದ ಕಾಂಗ್ರೆಸ್ ಜನ ಕಲ್ಯಾಣ ಸಮಾವೇಶದಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
"ನಾನು ಯಾವತ್ತೂ ಸಿಎಂ ಜೊತೆ ಇರುತ್ತೇನೆ. ತಲೆ ಕೆಡಿಸಿಕೊಳ್ಳಬೇಡಿ. ಈ ಬಂಡೆ ಡಿಕೆ, ಸಿದ್ದರಾಮಯ್ಯ ಜತೆ ಇದೆ. ಈಗಲೂ ಇರುತ್ತೇನೆ, ನಾಳೆನೂ ಇರುತ್ತೇನೆ, ಸಾಯುವವರೆಗೂ ಇರುವೆ.." ಎಂದು ಸಿದ್ದರಾಮಯ್ಯ ಅವರ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಸ್ವಾಭಿಮಾನಿ ಸಮಿತಿಯ ಆಶ್ರಯದಲ್ಲಿ ಹಾಸನದಲ್ಲಿ ನಡೆದ ಜನ ಕಲ್ಯಾಣ ಸಮಾವೇಶ ಡಿ ಕೆ ಶಿವಕುಮಾರ್ ಅವರ ಈ ಭಾವನಾತ್ಮಕ ಮಾತುಗಳಿಗೆ ಸಾಕ್ಷಿಯಾಯಿತು.
ಹಾಸನ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡಲು ಸಿಎಂ ಸಿದ್ದರಾಮಯ್ಯ ಅವರ ಹೆಸರು ಹೇಳುತ್ತಿದ್ದಂತೆ ಅವರ ಪೋಟೋ ಪ್ರದರ್ಶನ ಮಾಡಿ ಸಿಎಂ ಸಿದ್ದರಾಮಯ್ಯ ಪರ ಅಬ್ಬರದ ಘೋಷಣೆ ಕೂಗಿದ ಡಿ ಕೆ ಶಿವಕುಮಾರ್, ಬಳಿಕ ಮಾತನಾಡಿ "ನಾನು ಎಲ್ಲಿ ಇರುತ್ತೇನೆಯೋ ಅಲ್ಲಿ ಪ್ರಾಮಾಣಿಕವಾಗಿಯೇ ಇರುತ್ತೇನೆ. ಈ ಹಾಸನದ ಇತಿಹಾಸ ನೋಡಿದರೆ ನೋವಾಗುತ್ತೆ. ಹಲವು ರಾಜಕೀಯ ಕುಟುಂಬಗಳು ನೋವುಂಡಿವೆ. ಹಾಸನಾಂಬೆ ಆ ಹೆಣ್ಣುಮಕ್ಕಳನ್ನು ರಕ್ಷಣೆ ಮಾಡಬೇಕು. ನಿಮ್ಮ ಹಾಸನದ ಮಾಜಿ ಸಂಸದರ ಸಾಕ್ಷಿಗುಡ್ಡೆ ಬಗ್ಗೆ ಮಾತನಾಡಲು ಅಸಹ್ಯವಾಗುತ್ತೆ. ವಿಜಯೇಂದ್ರ ಹಾಗೂ ಕುಮಾರಸ್ವಾಮಿಗೆ ಉಪಚುನಾವಣೆಯಲ್ಲಿ ಜನ ಉತ್ತರ ಕೊಟ್ಟಿದ್ದಾರೆ. ಇನ್ನು ಮುಂದೆ ಹಾಸನದ ಏಳು ವಿಧಾನಸಭೆ ಕ್ಷೇತ್ರ ಗೆಲ್ಲಿಸಿಕೊಡಿ" ಎಂದು ಮನವಿ ಮಾಡಿದರು.
"ಕಾಂಗ್ರೆಸ್ ಬೆಂಬಲಿಸಿದ್ದರಿಂದ ದೇವೇಗೌಡ ಪ್ರಧಾನಿ, ಬಿಜೆಪಿ ಬೆಂಬಲಿಸಿ ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಸರ್ಕಾರದ ಶಕ್ತಿ ನೂರೆಂಟು, ಗ್ಯಾರೆಂಟಿ ಪರಮನೆಂಟು. ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಆದರೆ ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚಂದ. ರಾಮನಗರದಲ್ಲಿ ನಾಲ್ಕಕ್ಕೆ ನಾಲ್ಕು ಕ್ಷೇತ್ರ ಗೆದ್ದಿದ್ದೇವೆ. ಹಾಸನದಲ್ಲೂ ಗೆಲ್ಲಲಿದ್ದೇವೆ" ಎಂದು ಅವರು ಹೇಳಿದರು.
ಕಾಂಗ್ರೆಸ್ ಜೆಡಿಎಸ್ ಭದ್ರಕೋಟೆ ಎಂದೇ ಕರೆಯಲಾಗುವ ಹಾಸನದಲ್ಲಿ ಬೃಹತ್ ಸಮಾವೇಶ ಆಯೋಜಿಸಿದೆ. ಈ ಸಮಾವೇಶದಲ್ಲಿ ಮುಖ್ಯಮಂತ್ರಿಯ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಬಹುತೇಕ ಎಲ್ಲಾ ಸಚಿವರು, ಪ್ರಮುಖರ ಭಾಗವಹಿಸಿದ್ದರು.