
ಡಿ.ಕೆ ಶಿವಕುಮಾರ್
ಹೈಕಮಾಂಡ್ ಕರೆದರೆ ನಾವು ಹೋಗುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್
ಇದುವರೆಗೂ ಯಾರೂ ನನ್ನನ್ನು ದೆಹಲಿಗೆ ಕರೆದಿಲ್ಲ. ಇಂದಿರಾ ಗಾಂಧಿ ಅವರು ಆರಂಭಿಸಿದ ಅಂಗನವಾಡಿ ಯೋಜನೆಯ 50 ವರ್ಷದ ಕಾರ್ಯಕ್ರಮವಿದೆ. ಮುಂಬೈನಲ್ಲಿ ನನಗೆ ಖಾಸಗಿ ಕಾರ್ಯಕ್ರಮವಿದ್ದು, ಅಲ್ಲಿಗೆ ಹೋಗಿ ಇಂದೇ ( ಗುರುವಾರ) ಮರಳುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಹೈಕಮಾಂಡ್ ನಾಯಕರು ದಿಲ್ಲಿಗೆ ಕರೆದರೆ ಹೋಗುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಗುರುವಾರ ವಿಧಾನಸೌಧದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ಸಿಎಂ ಹಾಗೂ ಡಿಸಿಎಂ ಇಬ್ಬರನ್ನೂ ದಿಲ್ಲಿಗೆ ಕರೆದು ಚರ್ಚೆ ಮಾಡುತ್ತೇವೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ನನ್ನನ್ನು ಹಾಗೂ ಮುಖ್ಯಮಂತ್ರಿಗಳನ್ನು ಕರೆದರೆ ನಾವು ಮಾತನಾಡಿಕೊಂಡು ದೆಹಲಿಗೆ ಹೋಗುತ್ತೇವೆ. ಆದರೆ, ಇದುವರೆಗೂ ಅವರಿಂದ ಕರೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದುವರೆಗೂ ಯಾರೂ ನನ್ನನ್ನು ದೆಹಲಿಗೆ ಕರೆದಿಲ್ಲ. ಇಂದಿರಾ ಗಾಂಧಿ ಅವರು ಆರಂಭಿಸಿದ ಅಂಗನವಾಡಿ ಯೋಜನೆಯ 50 ವರ್ಷದ ಕಾರ್ಯಕ್ರಮವಿದೆ. ಮುಂಬೈನಲ್ಲಿ ನನಗೆ ಖಾಸಗಿ ಕಾರ್ಯಕ್ರಮವಿದ್ದು, ಅಲ್ಲಿಗೆ ಹೋಗಿ ಇಂದೇ ( ಗುರುವಾರ) ಮರಳುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಹೈಕಮಾಂಡ್‌ನತ್ತ ಎಲ್ಲರ ಚಿತ್ತ
ಕಾಂಗ್ರೆಸ್ ಸರ್ಕಾರವು ಎರಡೂವರೆ ವರ್ಷ ಪೂರೈಸಿದ ಬೆನ್ನಲ್ಲೇ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ. 2023ರ ವಿಧಾನಸಭಾ ಚುನಾವಣೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ 'ಅಧಿಕಾರ ಹಂಚಿಕೆ' ಒಪ್ಪಂದದ ಮಾತುಗಳು ಹರಿದಾಡುತ್ತಿದ್ದವು. ಇದೀಗ ಈ ವಿವಾದವನ್ನು ಬಗೆಹರಿಸಲು ಪಕ್ಷದ ಹೈಕಮಾಂಡ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, ಅಂತಿಮ ನಿರ್ಧಾರವನ್ನು ಪಕ್ಷದ ನಾಯಕತ್ವವು ದೆಹಲಿಯಿಂದ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದರು. ಹೈಕಮಾಂಡ್ ನಾನು, ರಾಹುಲ್ ಮತ್ತು ಸೋನಿಯಾ ಗಾಂಧಿ ಒಟ್ಟಾಗಿ ಈ ವಿಷಯದ ಬಗ್ಗೆ ನಿರ್ಧಾರ ಕೈಗೊಂಡು ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಅವರು ಬುಧವಾರ ತಿಳಿಸಿದ್ದರು.
ಈ ನಡುವೆ ಸರ್ಕಾರ ರಚನೆ ಸಂದರ್ಭದಲ್ಲಿ ನಡೆದಿತ್ತು ಎನ್ನಲಾದ ಅಧಿಕಾರ ಹಂಚಿಕೆ ಒಪ್ಪಂದದ ವಿಚಾರದ ಕುರಿತು ನಾಲ್ಕೈದು ಜನರ ನಡುವೆ ರಹಸ್ಯ ಮಾತುಕತೆ ನಡೆದಿರುವುದು ನಿಜ, ಆದರೆ, ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ಡಿ.ಕೆ. ಶಿವಕುಮಾರ್ ಈಗ ಅದೇ ವಿಚಾರ ಪ್ರಸ್ತಾಪಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ನಾಯಕರಿಗೆ ಟಾಂಗ್ ನೀಡಿದ್ದಾರೆ.
"ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಕೊಟ್ಟ ಮಾತಿನಂತೆ ನಡೆಯಿರಿ ಎಂಬ ಪಕ್ಷದ ನಾಯಕರನ್ನು ಆಗ್ರಹಿಸಿದ್ದಾರೆ. ಅಧಿಕಾರ ಹಂಚಿಕೆ ಒಪ್ಪಂದದ ಚರ್ಚೆಗಳು ಹಾಗೂ ನಾಯಕತ್ವ ಬದಲಾವಣೆ ಗೊಂದಲಗಳ ನಡುವೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಈ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.

