
ದೆಹಲಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್
ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗಕ್ಕೆ ಬಿಡುವುದಿಲ್ಲ; ಡಿ.ಕೆ.ಶಿವಕುಮಾರ್
ಮಹದೇವಪುರ, ಆಳಂದ, ಗಾಂಧಿನಗರ ಸೇರಿದಂತೆ ದೇಶದ ಅನೇಕ ಕಡೆಗಳಲ್ಲಿ ಅಲ್ಪಸಂಖ್ಯಾತರ ಮತಗಳನ್ನು ವ್ಯವಸ್ಥಿತವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದರು.
ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಮತ ಕಳ್ಳತನದ ವಿರುದ್ಧ ಬೃಹತ್ ಹೋರಾಟ ನಡೆಸುತ್ತಿದ್ದೇವೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲು ಬಿಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಮತಕಳ್ಳತನ ವಿರೋಧಿಸಿ ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಶನಿವಾರ ರಾತ್ರಿ ದೆಹಲಿಗೆ ಆಗಮಿಸಿದ ಡಿಸಿಎಂ ಅವರು ವಿಮಾನ ನಿಲ್ದಾಣ ಮತ್ತು ಕರ್ನಾಟಕ ಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಈ ಹಿಂದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮತ ಕಳ್ಳತನದ ಕುರಿತು ದೊಡ್ಡ ಹೋರಾಟ ರೂಪಿಸಲಾಗಿತ್ತು. ಈಗ ಅದೇ ಹೋರಾಟವನ್ನು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ರಾಮಲೀಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಜನರ ಹಕ್ಕನ್ನು ಕಸಿಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಅವರು ತಿಳಿಸಿದರು.
ಅಲ್ಪಸಂಖ್ಯಾತರ ಮತ ವ್ಯವಸ್ಥಿತವಾಗಿ ತೆಗೆದುಹಾಕುವ ಯತ್ನ
ಮಹದೇವಪುರ, ಆಳಂದ, ಗಾಂಧಿನಗರ ಸೇರಿದಂತೆ ದೇಶದ ಅನೇಕ ಕಡೆಗಳಲ್ಲಿ ಅಲ್ಪಸಂಖ್ಯಾತರ ಮತಗಳನ್ನು ವ್ಯವಸ್ಥಿತವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದರು. ರಾಹುಲ್ ಗಾಂಧಿ ಅವರು ಈ ಬಗ್ಗೆ ಪ್ರಶ್ನಿಸಿದಾಗ ಚುನಾವಣಾ ಆಯೋಗವು ಮಾಹಿತಿ ನೀಡುವಂತೆ ಕೇಳುತ್ತಿದೆ. ಆದರೆ, ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೂ ಮಾಹಿತಿ ನೀಡುತ್ತಿಲ್ಲ. ತಾವೇ ಖುದ್ದಾಗಿ ಹೋಗಿ ಮಾಹಿತಿ ನೀಡಿದ್ದರೂ ಸಿಐಡಿ ಅಧಿಕಾರಿಗಳು ದೂರವಾಣಿ ಸಂಖ್ಯೆಗಳು ಮತ್ತು ಇತರೆ ಮಾಹಿತಿಗಳನ್ನು ಕೇಳಿದ್ದರೂ ಆಯೋಗವು ಒದಗಿಸಿಲ್ಲ. ಆದರೂ ತನಿಖಾ ವರದಿ ತಯಾರಾಗಿದೆ ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತರಿಗೆ ಐಡಿ ಕಾರ್ಡ್
ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿಯ ಜವಾಬ್ದಾರಿ ನೀಡಿ, ಬಿಜೆಪಿ ಕಾರ್ಯಕರ್ತರಿಗೆ ಐಡಿ ಕಾರ್ಡ್‌ಗಳನ್ನು ನೀಡಿದ ಬಗ್ಗೆ ತಾವೇ ದೊಡ್ಡ ಹೋರಾಟ ರೂಪಿಸಿದ್ದೆ. ಈ ಸಮಸ್ಯೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಬಿಹಾರ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ರೀತಿ ನಡೆದಿದೆ. ಗೆಲುವು-ಸೋಲು ಮುಖ್ಯವಲ್ಲ, ದೇಶದ ಪ್ರಜಾಪ್ರಭುತ್ವ ಉಳಿಯಬೇಕು ಮತ್ತು ಜನರಿಗೆ ನ್ಯಾಯ ಒದಗಿಸಬೇಕು ಎಂಬ ಉದ್ದೇಶದಿಂದ ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಜನರು, ಕರ್ನಾಟಕದಿಂದಲೂ ಹಲವರು ಬಂದಿದ್ದಾರೆ ಎಂದರು.
ಕೊನೆಯ ಕ್ಷಣದಲ್ಲಿ ವಿಶೇಷ ರೈಲು ರದ್ದು
ಪ್ರತಿಭಟನೆಗೆ ಬರಲು ಸಿದ್ಧರಾಗಿದ್ದ ಕಾರ್ಯಕರ್ತರಿಗಾಗಿ ಕೆಪಿಸಿಸಿಯಿಂದ ಒಂದು ಕೋಟಿ ರೂ. ಹಣ ಕಟ್ಟಿ ರೈಲು ಬುಕ್ ಮಾಡಲು ತಯಾರಿದ್ದರೂ, ಕೊನೆಯ ಕ್ಷಣದಲ್ಲಿ ವಿಶೇಷ ರೈಲನ್ನು ರದ್ದುಗೊಳಿಸಲಾಗಿದೆ. ಅವರಿಗೆ ಏನೋ ತೊಂದರೆ ಇರಬೇಕು, ಅದಕ್ಕೆ ರದ್ದು ಮಾಡಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಅವರಿಂದ ಜಾಗೃತಿ
ಮತದಾರರ ಪಟ್ಟಿಯಲ್ಲಿ ಸತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದ್ದವರನ್ನು ರಾಹುಲ್ ಗಾಂಧಿ ಅವರು ಭೇಟಿ ಮಾಡಿ ಅರಿವು ಮೂಡಿಸಿದ್ದಾರೆ. ಒಂದೇ ಮನೆಯಲ್ಲಿ 80 ಮತಗಳಿದ್ದ ವಿಚಾರವನ್ನು ಮಾಧ್ಯಮಗಳು ಸಹ ವರದಿ ಮಾಡಿವೆ. ಈ ಪ್ರತಿಭಟನೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದ ನೋಟಿಸ್
ದೆಹಲಿ ಭೇಟಿ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವಿರಾ ಎಂಬ ಪ್ರಶ್ನೆಗೆ, ಸದ್ಯಕ್ಕೆ ಪ್ರತಿಭಟನೆಗೆ ಬಂದಿದ್ದೇನೆ. ಇದರ ನಡುವೆಯೇ, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನೋಟಿಸ್ ನೀಡಿದ್ದಾರೆ. ಡಿಸೆಂಬರ್ 19ರೊಳಗೆ ಉತ್ತರಿಸಲು ಹೇಳಿದ್ದು, ವಕೀಲರನ್ನು ಬರಲು ಹೇಳಿದ್ದೇನೆ. ಬಹುಶಃ ಸೋಮವಾರ ಹೋಗಬಹುದು. ಕಾನೂನು ತಜ್ಞರ ಸಲಹೆ ಪಡೆದು ಮುಂದೆ ಹೋಗುತ್ತೇನೆ. ಹೋಗುವಾಗ ಮಾಧ್ಯಮಗಳಿಗೆ ತಿಳಿಸುತ್ತೇನೆ ಎಂದರು.
ಪಕ್ಷದ ಕಚೇರಿಯೇ ದೇವಾಲಯ. ಭಾನುವಾರ ಮಧ್ಯಾಹ್ನ ಇಂದಿರಾ ಭವನದಲ್ಲಿ ಊಟಕ್ಕೆ ಆಹ್ವಾನ ನೀಡಲಾಗಿದ್ದು, ಅಲ್ಲಿಗೆ ಹೋದಾಗ ಎಲ್ಲ ನಾಯಕರು ಸಿಗುತ್ತಾರೆ. ತಾವು ದೆಹಲಿಗೆ ಬಂದಿರುವುದು ಗೊತ್ತಾದ ಕೂಡಲೇ ಗೆಳೆಯರು, ನಾಯಕರು ಭೇಟಿಗೆ ಬಂದಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

