
ಕೇರಳ ಮತದಾರರಿಗೆ 'ವೇತನ ಸಹಿತ ರಜೆ'ಗೆ ಡಿಸಿಎಂ ಮನವಿ; "ನೀವು ಕೇರಳದ ಏಜೆಂಟೋ?" ಎಂದು ಜೆಡಿಎಸ್ ಟೀಕೆ
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಐಟಿ ಕಂಪನಿಗಳು, ಹೋಟೆಲ್ ಉದ್ಯಮ, ನರ್ಸಿಂಗ್ ಹೋಂಗಳು ಹಾಗೂ ಇತರೆ ಖಾಸಗಿ ವಲಯಗಳಲ್ಲಿ ಲಕ್ಷಾಂತರ ಕೇರಳ ಮೂಲದ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ನೆರೆಯ ಕೇರಳ ರಾಜ್ಯದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾನ ಮಾಡಲು ಅನುಕೂಲವಾಗುವಂತೆ, ರಾಜ್ಯದಲ್ಲಿ ನೆಲೆಸಿರುವ ಕೇರಳ ಮೂಲದ ಉದ್ಯೋಗಿಗಳಿಗೆ 'ವೇತನ ಸಹಿತ ರಜೆ' (Paid Leave) ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖಾಸಗಿ ಸಂಸ್ಥೆಗಳಿಗೆ ಅಧಿಕೃತ ಮನವಿ ಮಾಡಿದ್ದಾರೆ. ಆದರೆ, ಡಿಸಿಎಂ ಅವರ ಈ ನಡೆಗೆ ಪ್ರತಿ ಪಕ್ಷವಾದ ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, "ಮನೆಗೆ ಮಾರಿ, ಪರರಿಗೆ ಉಪಕಾರಿ" ಎಂಬ ಗಾದೆಯ ಮೂಲಕ ಸರ್ಕಾರದ ಆದ್ಯತೆಗಳನ್ನು ಪ್ರಶ್ನಿಸಿದೆ.
ಕೇರಳದಲ್ಲಿ ಡಿಸೆಂಬರ್ 9 ಮತ್ತು 11ರಂದು ಎರಡು ಹಂತಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಐಟಿ ಕಂಪನಿಗಳು, ಹೋಟೆಲ್ ಉದ್ಯಮ, ನರ್ಸಿಂಗ್ ಹೋಂಗಳು ಹಾಗೂ ಇತರೆ ಖಾಸಗಿ ವಲಯಗಳಲ್ಲಿ ಲಕ್ಷಾಂತರ ಕೇರಳ ಮೂಲದ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಲು ತಮ್ಮ ಊರುಗಳಿಗೆ ತೆರಳಬೇಕಿದೆ. ಈ ಕಾರಣಕ್ಕಾಗಿ, ಮಾನವೀಯ ನೆಲೆಯಲ್ಲಿ ಹಾಗೂ ಸಾಂವಿಧಾನಿಕ ಹಕ್ಕನ್ನು ಗೌರವಿಸಿ ಆಯಾ ದಿನಗಳಂದು ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡಬೇಕು ಎಂದು ಡಿಸಿಎಂ ಶಿವಕುಮಾರ್ ಅವರು ರಾಜ್ಯದ ಉದ್ಯೋಗದಾತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಜೆಡಿಎಸ್ ಆಕ್ರೋಶ: "ನೀವು ಕೇರಳದ ಚುನಾವಣಾ ಏಜೆಂಟೇ?"
ಡಿಸಿಎಂ ಅವರ ಈ ಪತ್ರ ಹೊರಬೀಳುತ್ತಿದ್ದಂತೆ ಜೆಡಿಎಸ್ ತನ್ನ ಅಧಿಕೃತ ಎಕ್ಸ್ (X) ಖಾತೆಯ ಮೂಲಕ ತೀವ್ರ ವಾಗ್ದಾಳಿ ನಡೆಸಿದೆ. "ನೀವು ಕರ್ನಾಟಕದ ಉಪಮುಖ್ಯಮಂತ್ರಿಯೋ ಅಥವಾ ಕೇರಳದ ಜನಪ್ರತಿನಿಧಿಯೋ?" ಎಂದು ನೇರವಾಗಿ ಪ್ರಶ್ನಿಸಿರುವ ಜೆಡಿಎಸ್, ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಪಕ್ಕಕ್ಕಿಟ್ಟು ನೆರೆಯ ರಾಜ್ಯದ ಮತದಾರರ ಬಗ್ಗೆ ತೋರುತ್ತಿರುವ ಕಾಳಜಿಯನ್ನು ಟೀಕಿಸಿದೆ.
"ಕೇರಳದ ವಲಸೆ ಕಾರ್ಮಿಕರ ಬಗ್ಗೆ ಇರುವ ಕಾಳಜಿ ಕನ್ನಡಿಗರ ಬಗ್ಗೆ ಇಲ್ಲವಾಯಿತೆ? ರಾಜ್ಯದ ಯುವಕರಿಗೆ ಯುವನಿಧಿ ಕೊಡುವ ಬಗ್ಗೆ ಗಮನವಿಲ್ಲ, ಬಡವರಿಗೆ ಕೊಡುತ್ತೇವೆ ಎಂದಿದ್ದ 10 ಕೆ.ಜಿ ಅಕ್ಕಿಯನ್ನು ಕಳೆದ ಎರಡೂವರೆ ವರ್ಷವಾದರೂ ಪ್ರತಿ ತಿಂಗಳು ಕೊಡಲು ನಿಮ್ಮಿಂದ ಸಾಧ್ಯವಾಗಿಲ್ಲ. ಆದರೆ ಕೇರಳದವರಿಗೆ ರಜೆ ಕೊಡಿಸಲು ಮಾತ್ರ ಎಲ್ಲಿಲ್ಲದ ಮುತುವರ್ಜಿ ತೋರುತ್ತಿದ್ದೀರಿ," ಎಂದು ಜೆಡಿಎಸ್ ಕಿಡಿಕಾರಿದೆ.
ಅಲ್ಲದೆ, ಸ್ವತಃ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿರುವ ಜೆಡಿಎಸ್, "ರಾಜ್ಯದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದ ದಿನನಿತ್ಯ ಜನರು ಸಾಯುತ್ತಿದ್ದಾರೆ. ಕನಿಷ್ಠ ಮೂಲಸೌಕರ್ಯಗಳಿಲ್ಲದೆ, ಅಭಿವೃದ್ಧಿ ಇಲ್ಲದೆ ಜನರು ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. ನೀವೇನಾದರೂ ಕೇರಳ ರಾಜ್ಯದ ಚುನಾವಣಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದೀರಾ? ಇನ್ನಾದರೂ ಡಿಸಿಎಂ ಆಗಿ ಕರ್ನಾಟಕದ ಜನರ ಪರವಾಗಿ ಕೆಲಸ ಮಾಡಿ. ನಿಮ್ಮನ್ನು ನೋಡಿದರೆ 'ಮನೆಗೆ ಮಾರಿ, ಪರರಿಗೆ ಉಪಕಾರಿ' ಎಂಬ ಮಾತು ನೆನಪಾಗುತ್ತದೆ," ಎಂದು ಲೇವಡಿ ಮಾಡಿದೆ.
ಬಿಹಾರ ಮಾದರಿಯ ರಾಜಕೀಯ ರಂಪಾಟ
ರಾಜ್ಯದಲ್ಲಿ ಹೊರರಾಜ್ಯದ ಚುನಾವಣೆಗಳಿಗಾಗಿ ರಜೆ ಘೋಷಿಸುವ ಅಥವಾ ಒತ್ತಾಯಿಸುವ ಪರಿಪಾಠ ಇದೇ ಮೊದಲಲ್ಲ. ಈ ಹಿಂದೆ ಬಿಹಾರ ವಿಧಾನಸಭೆ ಚುನಾವಣೆ ನಡೆದ ಸಂದರ್ಭದಲ್ಲೂ ರಾಜ್ಯ ಸರ್ಕಾರ ಇದೇ ರೀತಿಯ ಇಕ್ಕಟ್ಟಿಗೆ ಸಿಲುಕಿತ್ತು. ಅಂದು ಬೆಂಗಳೂರಿನ ಕಟ್ಟಡ ನಿರ್ಮಾಣ ವಲಯ ಮತ್ತು ಭದ್ರತಾ ಸಿಬ್ಬಂದಿ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಬಿಹಾರಿ ಕಾರ್ಮಿಕರಿಗೆ ಮತದಾನಕ್ಕಾಗಿ ರಜೆ ನೀಡಬೇಕೆಂದು ಡಿಸಿಎಂ ಮನವಿ ಮಾಡಿದ್ದರು.

