ಸಿ.ಎಂ ಸ್ಥಾನ ಸನ್ನಿಹಿತ ಹೇಳಿಕೆ ವಿವಾದ ; ಸುದ್ದಿ ತಿರುಚಿದರೆ ಮಾನನಷ್ಟ ಮೊಕದ್ದಮೆ ದಾಖಲು, ಡಿಸಿಎಂ ಎಚ್ಚರಿಕೆ
x

ಡಿಕೆ ಶಿವಕುಮಾರ್

ಸಿ.ಎಂ ಸ್ಥಾನ ಸನ್ನಿಹಿತ ಹೇಳಿಕೆ ವಿವಾದ ; ಸುದ್ದಿ ತಿರುಚಿದರೆ ಮಾನನಷ್ಟ ಮೊಕದ್ದಮೆ ದಾಖಲು, ಡಿಸಿಎಂ ಎಚ್ಚರಿಕೆ

ನಾನು ಸಿಎಂ ಹುದ್ದೆ ಅಲಂಕರಿಸಲು ಆತುರಪಡುತ್ತಿಲ್ಲ. ನಾನು ಇಲ್ಲಿಗೆ ಬಂದಿರುವುದು ಸಾರ್ವಜನಿಕರ ಸೇವೆ ಮಾಡಲು. ರಾಜಕಾರಣ ಮಾಡಲು ಅಲ್ಲ. ಜನರ ಸೇವೆ ಮಾಡಲು ಹಗಲು ರಾತ್ರಿ ತಿರುಗುತ್ತಿದ್ದೇನೆ ಎಂದು ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.


Click the Play button to hear this message in audio format

ಮುಖ್ಯಮಂತ್ರಿ ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಎಲ್ಲೂ ಹೇಳಿಲ್ಲ, ಕೆಲ ಮಾಧ್ಯಮಗಳು ಸುದ್ದಿ ತಿರುಚುತ್ತಿವೆ. ಸುದ್ದಿ ತಿರುಚಿ ವಿವಾದ ಸೃಷ್ಟಿಸುವ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಲಾಲ್‌ಬಾಗ್ ಉದ್ಯಾನದಲ್ಲಿ ಶನಿವಾರ ನಡೆದ 'ನಾಗರಿಕರ ಜತೆ ನಡಿಗೆ' ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ನನ್ನ ಹೇಳಿಕೆ ತಿರುಚಲಾಗಿದೆ

ನಾನು ಸಾರ್ವಜನಿಕರ ಭೇಟಿಗೆ ಬಂದಾಗ ಕೆಲವರು 'ನೀವು ಮುಖ್ಯಮಂತ್ರಿ ಆಗಬೇಕು. ಆ ಸಮಯ ಹತ್ತಿರ ಬರುತ್ತಿದೆಯೇ ಎಂದು ಕೇಳಿದರು. ಆದರೆ, ಸಿಎಂ ಆಗುವ ಕಾಲ ಹತ್ತಿರ ಬರುತ್ತಿದೆ ಎಂದು ನಾನೇ ಹೇಳಿದ್ದೇನೆ ಎಂದು ಕೆಲ ಮಾಧ್ಯಮಗಳು ಸುದ್ದಿ ತಿರುಚಿ ಪ್ರಸಾರ ಮಾಡುತ್ತಿವೆ. ನೀವು ಹಾಗೆಲ್ಲ ಸುದ್ದಿ ತಿರುಚಿ ತೋರಿಸಬೇಡಿ ಎಂದು ಮನವಿ ಮಾಡಿದರು.

'ಆತುರವೂ ಇಲ್ಲ, ಹೇಳುವ ಅವಶ್ಯಕತೆಯೂ ಇಲ್ಲ'

ನಾನು ಸಿಎಂ ಹುದ್ದೆ ಅಲಂಕರಿಸಲು ಆತುರ ಪಡುತ್ತಿಲ್ಲ. ನಾನು ಇಲ್ಲಿಗೆ ಬಂದಿರುವುದು ಸಾರ್ವಜನಿಕರ ಸೇವೆ ಮಾಡಲು. ರಾಜಕಾರಣ ಮಾಡಲು ಅಲ್ಲ. ಜನರ ಸೇವೆ ಮಾಡಲು ಹಗಲು ರಾತ್ರಿ ತಿರುಗುತ್ತಿದ್ದೇನೆ. ನನಗೆ ನನ್ನ ಗುರಿ ಗೊತ್ತಿದೆ. ಭಗವಂತ ನನಗೆ ಯಾವಾಗ ಅವಕಾಶ ಕೊಡುತ್ತಾನೋ ಕೊಡಲಿ. ರಾಜ್ಯದ ಜನರ ಸೇವೆ ಹಾಗೂ ಬೆಂಗಳೂರಿನ ನಾಗರಿಕರಿಗೆ ಉತ್ತಮ ಆಡಳಿತ ನೀಡಲು ಶ್ರಮಿಸುತ್ತಿದ್ದೇನೆ. ನಾನು ಆ ರೀತಿ ಹೇಳಿಲ್ಲ, ಅದರ ಅಗತ್ಯವೂ ನನಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾನನಷ್ಟ ಮೊಕದ್ದಮೆ ಎಚ್ಚರಿಕೆ

ಒಳ್ಳೆಯ ಕೆಲಸ ಬಿಟ್ಟು ವಿವಾದ ಸೃಷ್ಟಿಸಲು ಕೆಲ ಮಾಧ್ಯಮಗಳು ಪ್ರಯತ್ನಿಸುತ್ತಿವೆ. ಇದೇ ರೀತಿ ನನ್ನ ವಿಚಾರದಲ್ಲಿ ಸುಳ್ಳು ಸುದ್ದಿ ಹಾಕಿ, ದಾರಿ ತಪ್ಪಿಸುವ ಪ್ರಯತ್ನ ಮಾಡಿದರೆ ನಾನು ಮಾನನಷ್ಟ ಮೊಕದ್ದಮೆ ಹಾಕಬೇಕಾಗುತ್ತದೆ ಎಂದೂ ಡಿಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ನೀವು ಇದೇ ರೀತಿ ಸುದ್ದಿ ತಿರುಚುವುದಾದರೆ, ನಾನು ನಿಮಗೆ ಸಹಕಾರ ನೀಡುವುದಿಲ್ಲ. ಕಾರ್ಯಕ್ರಮಗಳಿಗೆ ಕರೆಯುವುದೂ ಇಲ್ಲ. ಮಾಧ್ಯಮಗೋಷ್ಠಿ ಕರೆಯುವುದೂ ಇಲ್ಲ. ಮಾಧ್ಯಮಗಳು ರಾಜಕಾರಣ ಮಾಡುವುದು ಬೇಡ ಎಂದು ಮನವಿ ಮಾಡಿದ್ದಾರೆ.

Read More
Next Story