ದಾವಣಗೆರೆ ಕ್ಷೇತ್ರ | ಕಾಂಗ್ರೆಸ್ – ಬಿಜೆಪಿಗೆ ಬಂಡಾಯ, ಬಣ ರಾಜಕಾರಣದ ಬಿಸಿ!
x
ಕಾಂಗ್ರೆಸ್‌ - ಬಿಜೆಪಿ

ದಾವಣಗೆರೆ ಕ್ಷೇತ್ರ | ಕಾಂಗ್ರೆಸ್ – ಬಿಜೆಪಿಗೆ ಬಂಡಾಯ, ಬಣ ರಾಜಕಾರಣದ ಬಿಸಿ!

ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಎದುರಾಗಿರುವ ಬಣ ರಾಜಕೀಯ, ಬಂಡಾಯ ತಲೆನೋವಾಗಿ ಪರಿಣಮಿಸಿದೆ.


ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಎದುರಾಗಿರುವ ಬಣ ರಾಜಕೀಯ, ಬಂಡಾಯ ತಲೆನೋವಾಗಿ ಪರಿಣಮಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಬಣ ಸಂಘರ್ಷ ಮತ್ತು ಬಂಡಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ನಿಭಾಯಿಸಲು ಎರಡೂ ಪಕ್ಷಗಳ ನಾಯಕರು ಹರಸಾಹಸ ಪಡುತ್ತಿದ್ದಾರೆ.

ಇದೀಗ ದಾವಣಗೆರೆಯ ಹೊನ್ನಾಳಿಯಲ್ಲಿ ಬಿಜೆಪಿಯಲ್ಲಿನ ಬಣ ರಾಜಕೀಯ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಗುರುವಾರ ನಡೆದ ಪಕ್ಷದ ಚುನಾವಣಾ ಕಾರ್ಯಾಲಯದ ಉದ್ಘಾಟನೆ ಸಮಾರಂಭದಲ್ಲಿ ಬಿಜೆಪಿ ಕಾರ್ಯಕರ್ತರು ಬಣ ರಾಜಕೀಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಾಗೂ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ಸಾಕ್ಷಿಯಾದರು.

ʻಕ್ಷೇತ್ರದಲ್ಲಿ ಎಂ.ಪಿ ರೇಣುಕಾಚಾರ್ಯ ಅವರ ವಿರುದ್ಧ ಬಣ ರಾಜಕೀಯ ನಡೆದಿದೆ. ರೇಣುಕಾಚಾರ್ಯ ಅವರಿಗೆ ತಿಳಿಯದೆ ಚುನಾವಣಾ ಪ್ರಚಾರ ನಡೆಸಲಾಗುತ್ತಿದೆ. ಇದು ಸರಿಯಲ್ಲʼ ಎಂದು ರೇಣುಕಾಚಾರ್ಯ ಅವರ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸಿದ್ದೇಶ್ವರ ಅವರ ಪರ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು.

ಕಾರ್ಯಕರ್ತರ ನಡುವೆ ವಾಗ್ವಾದ ಪ್ರಾರಂಭವಾಗುತ್ತಿದ್ದಂತೆಯೇ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು, ʻನಿಮಗೂ ನರೇಂದ್ರ ಮೋದಿ ಬೇಕು. ಅವರಿಗೂ ಮೋದಿ ಬೇಕು. ಇಬ್ಬರೂ ಸಹ ಪ್ರಚಾರ ಮಾಡಿʼ ಎಂದು ಹೇಳಿದರು. ಇದಕ್ಕೆ ಕಾರ್ಯಕರ್ತರು ಸಮ್ಮತಿಸಲಿಲ್ಲ.

"ಪಕ್ಷದಲ್ಲೇ ಇದ್ದು ಪ್ರತ್ಯೇಕವಾಗಿ ಚುನಾವಣಾ ಪ್ರಚಾರ ನಡೆಸುವಂತೆ ಯಾರು ಹೇಳಿದ್ದಾರೆ. ಈ ರೀತಿ ಮಾಡುವ ಉದ್ದೇಶವೇನು" ಎಂದು ರೇಣುಕಾಚಾರ್ಯ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಆಗ ಮಧ್ಯ ಪ್ರವೇಶಿಸಿದ ರೇಣುಕಾಚಾರ್ಯ ಅವರು, ʻಬಿಜೆಪಿಯಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಪಕ್ಷದ ತಾಲ್ಲೂಕು ಘಟಕ ಮತ್ತು ಜಿಲ್ಲಾ ಘಟಕದ ಅಧ್ಯಕ್ಷರು ಇಲ್ಲಿದ್ದಾರೆ. ಎಲ್ಲ ಪದಾಧಿಕಾರಿಗಳೂ ಇದ್ದಾರೆ. ಒಂದು ಗುಂಪು ವಿಧಾನಸಭಾ ಚುನಾವಣೆಯಲ್ಲೂ ನನ್ನ ವಿರುದ್ಧ ಕೆಲಸ ಮಾಡಿತ್ತು. ಅವರ ಆಟ ನಮ್ಮ ಬಳಿ ನಡೆಯುವುದಿಲ್ಲ. ಕಾರ್ಯಕರ್ತರು ಇದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡಿ. ಅಭ್ಯರ್ಥಿ ಪರ ಪ್ರಚಾರ ಮಾಡುವುದಕ್ಕೆ ಸಹಕಾರ ನೀಡಿʼ ಎಂದು ಎಲ್ಲರನ್ನು ಸಮಾಧಾನ ಮಾಡಿದರು.

ಬಂಡಾಯ ಬಿಟ್ಟು ಪ್ರಚಾರಕ್ಕೆ ಬಂದರು

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಮಾಜಿ ಸಚಿವ ಹಾಗೂ ಬಿ ಎಸ್‌ ಯಡಿಯೂರಪ್ಪ ಅವರ ಆಪ್ತರಾದ ರೇಣುಕಾಚಾರ್ಯ, ಮಾಜಿ ಸಚಿವ ಎಸ್‌ ಎ ರವೀಂದ್ರನಾಥ್ ಸೇರಿದಂತೆ ಕೆಲವು ನಾಯಕರು ಅಭ್ಯರ್ಥಿಯನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರು. ಬಂಡಾಯದ ಮುನ್ಸೂಚನೆ ಸಹ ನೀಡಿದ್ದರು. ಆದರೆ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ಮಧ್ಯಪ್ರವೇಶದಿಂದ ಬಂಡಾಯ ಶಮನವಾಗಿತ್ತು. ಇದೀಗ ರೇಣುಕಾಚಾರ್ಯ ಅವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರಾದರೂ, ಅವರ ಬೆಂಬಲಿಗರಿಗೆ ಸಣ್ಣ ಅಸಮಾಧಾನ ಇರುವುದು ಪ್ರಚಾರ ಸಭೆಗಳಲ್ಲಿ ಬಹಿರಂಗವಾಗುತ್ತಿದೆ.

ಕಾಂಗ್ರೆಸ್‌ನಲ್ಲೂ ಬಂಡಾಯದ ಬಿಸಿ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೂ ಬಂಡಾಯದ ಬಿಸಿ ಮುಟ್ಟಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಟಿಕೆಟ್ ನಿರೀಕ್ಷಿಸಿದ್ದ ಜಿ.ಬಿ ವಿನಯ್ ಕುಮಾರ್ ಅವರಿಗೆ ಟಿಕೆಟ್ ಕೈತಪ್ಪಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ನಡೆಸಿರುವ ಸಂಧಾನ ಯಶಸ್ವಿಯಾಗಿಲ್ಲ. ಹೀಗಾಗಿ, ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೂ ಒಳಏಟಿನ ಭೀತಿ ಇದೆ. ಜಿ.ಬಿ ವಿನಯ್ ಕುಮಾರ್ ಅವರು ಬಂಡಾಯ ಎದ್ದಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಏ‌.18ಕ್ಕೆ ನಾಮಪತ್ರ ಸಲ್ಲಿಸಲಿದ್ದು, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.

ʻದಾವಣಗೆರೆ ರಾಜಕೀಯ ಬಂಡವಾಳಶಾಹಿಯ ಸಾಮ್ರಾಜ್ಯವಾಗಿದೆ. ಈ ಕ್ಷೇತ್ರ ಎರಡು ಕುಟುಂಬಗಳಿಗೆ ಮಾತ್ರ ಸೀಮಿತವಾಗಿದೆ. ಕಳೆದ ನಾಲ್ಕು ದಶಕಗಳಿಂದ ಎರಡೇ ಕುಟುಂಬಗಳು ಇಲ್ಲಿ ಅಧಿಕಾರ ನಡೆಸುತ್ತಿವೆ. ದಾವಣಗೆರೆ ಉತ್ತರ ಕ್ಷೇತ್ರ ಮತ್ತು ದಕ್ಷಿಣ ಕ್ಷೇತ್ರಗಳ ನಡುವೆ ಸಾಕಷ್ಟು ಅಭಿವೃದ್ಧಿ ಅಸಮಾನತೆ ಇದೆ. ಎಲ್ಲ ವಲಯದಲ್ಲೂ ಅಸಮಾನತೆ ಇದೆ. ಇದನ್ನು ಸರಿಪಡಿಸಲು ಸ್ಪರ್ಧಿಸುತ್ತಿದ್ದೇನೆʼ ಎಂದು ಜಿ.ಬಿ ವಿನಯ್ ಕುಮಾರ್ ಹೇಳಿದ್ದಾರೆ.

ವಿನಯ್ ಕುಮಾರ್ ಅವರಿಗೆ ಹಲವು ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ. ಜನಾಭಿಪ್ರಾಯ ಸಂಗ್ರಹದ ನಂತರವೇ ಅವರು ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ್ದು, ವಿನಯ್‌ ಕುಮಾರ್‌ ಅವರು ಕಾಂಗ್ರೆಸ್‌ಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ.

Read More
Next Story