
ತಮಿಳುನಾಡಿನಲ್ಲಿದ್ದ ಇಬ್ಬರೂ ಆರೋಪಿಗಳನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.
ಡೇಟಿಂಗ್ ಆ್ಯಪ್‌ನಲ್ಲಿ ಪ್ರೀತಿಯ ನಾಟಕ: ಟೆಕ್ಕಿಗೆ ಹನಿಟ್ರ್ಯಾಪ್ ಮಾಡಿ ದೋಚಿದ್ದ ಪ್ರೇಮಿಗಳು ಅರೆಸ್ಟ್!
ಪ್ರಜ್ಞೆ ಬಂದ ನಂತರ ತಾನು ಮೋಸ ಹೋಗಿರುವುದನ್ನು ಅರಿತ ಯುವಕ, ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು, ತಮಿಳುನಾಡಿನಲ್ಲಿದ್ದ ಇಬ್ಬರೂ ಆರೋಪಿಗಳನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.
ಡೇಟಿಂಗ್ ಆ್ಯಪ್ ಮೂಲಕ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರನ್ನು ಪರಿಚಯಿಸಿಕೊಂಡು, ಪ್ರೀತಿಯ ನಾಟಕವಾಡಿ, ಹೋಟೆಲ್ ಕೋಣೆಯಲ್ಲಿ ನಿದ್ದೆ ಮಾತ್ರೆ ನೀಡಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿದ್ದ ಖತರ್ನಾಕ್ ಪ್ರೇಮಿಗಳಿಬ್ಬರನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಕವಿಪ್ರಿಯಾ ಮತ್ತು ಆಕೆಯ ಪ್ರಿಯಕರ ಹರ್ಷವರ್ಧನ್ ಬಂಧಿತ ಆರೋಪಿಗಳು.
ಆರೋಪಿಗಳಾದ ಕವಿಪ್ರಿಯಾ ಮತ್ತು ಹರ್ಷವರ್ಧನ್, ಇಬ್ಬರೂ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. 'Happen' ಎಂಬ ಡೇಟಿಂಗ್ ಆ್ಯಪ್‌ನಲ್ಲಿ ಸಕ್ರಿಯರಾಗಿದ್ದ ಇವರು, ಕೈತುಂಬಾ ಸಂಬಳ ಪಡೆಯುತ್ತಿದ್ದ ಟೆಕ್ಕಿಯೊಬ್ಬರನ್ನು ಟಾರ್ಗೆಟ್ ಮಾಡಿದ್ದರು. ಒಂದು ತಿಂಗಳ ಕಾಲ ಆತನೊಂದಿಗೆ ಸ್ನೇಹ ಬೆಳೆಸಿದ್ದ ಕವಿಪ್ರಿಯಾ, ನವೆಂಬರ್ 11 ರಂದು ಇಂದಿರಾನಗರದ ಲಾಡ್ಜ್‌ವೊಂದರಲ್ಲಿ ಭೇಟಿಯಾಗಿದ್ದಾರೆ.
ಅಲ್ಲಿ ಇಬ್ಬರೂ ಪಾರ್ಟಿ ಮಾಡಿ, ಊಟ ಸೇವಿಸಿದ್ದಾರೆ. ಬಳಿಕ ಯುವಕನಿಗೆ ಪಾನೀಯದಲ್ಲಿ ನಿದ್ದೆ ಮಾತ್ರೆ ಬೆರೆಸಿ ನೀಡಿ, ಆತ ಪ್ರಜ್ಞೆ ತಪ್ಪಿದ ನಂತರ, ಯುವಕನ ಮೈಮೇಲಿದ್ದ ಸುಮಾರು 6.89 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬ್ರೇಸ್ಲೆಟ್, ಚೈನ್, 12 ಸಾವಿರ ಮೌಲ್ಯದ ಹೆಡ್‌ಸೆಟ್ ಹಾಗೂ 10 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.
ಆರೋಪಿಗಳ ಬಂಧನ ಮತ್ತು ಬಯಲಾದ ಸತ್ಯ
ಪ್ರಜ್ಞೆ ಬಂದ ನಂತರ ತಾನು ಮೋಸ ಹೋಗಿರುವುದನ್ನು ಅರಿತ ಯುವಕ, ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು, ತಮಿಳುನಾಡಿನಲ್ಲಿದ್ದ ಇಬ್ಬರೂ ಆರೋಪಿಗಳನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.
ವಿಚಾರಣೆ ವೇಳೆ, ಹೈ-ಫೈ ಜೀವನ ನಡೆಸಲು ಮತ್ತು ಸಾಲ ತೀರಿಸಲು ತಾವು ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಕದ್ದ ಚಿನ್ನಾಭರಣಗಳನ್ನು ಚೆನ್ನೈನಲ್ಲಿ ಅಡವಿಟ್ಟಿರುವುದಾಗಿಯೂ ಒಪ್ಪಿಕೊಂಡಿದ್ದು, ಪೊಲೀಸರು ಅವುಗಳನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ಕೈತುಂಬಾ ಸಂಬಳವಿದ್ದರೂ, ಮೋಜು-ಮಸ್ತಿಯ ದುರಾಸೆಗೆ ಬಿದ್ದು, ಇಬ್ಬರೂ ಟೆಕ್ಕಿಗಳು ಈಗ ಜೈಲು ಸೇರುವಂತಾಗಿದೆ.

