
ದಸರಾ ಮಹೋತ್ಸವ: 500 ಕೆ.ಜಿ. ಮರಳು ಮೂಟೆ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಗಜಪಡೆ
ಡಿಸಿಎಫ್ ಡಾ. ಪ್ರಭುಗೌಡ ಅವರ ನೇತೃತ್ವದಲ್ಲಿ ನಡೆದ ಈ ತಾಲೀಮಿನಲ್ಲಿ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಮಾವುತರು ಭಾಗವಹಿಸಿದ್ದರು.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2025ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾದ ಗಜಪಡೆಯು ತಾಲೀಮನ್ನು ಚುರುಕುಗೊಳಿಸಿದೆ. ಬುಧವಾರ, ಅರಮನೆಯ ಆವರಣದಲ್ಲಿ, 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊರಲಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಯು, 500 ಕೆ.ಜಿ. ತೂಕದ ಮರಳು ಮೂಟೆಯನ್ನು ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆಯಿತು.
ಅರಮನೆಯ ಕೋಡಿ ಸೋಮೇಶ್ವರ ದೇಗುಲದ ಬಳಿ ಅಭಿಮನ್ಯು ಹಾಗೂ ಕುಮ್ಕಿ ಆನೆಗಳಾದ ಕಾವೇರಿ ಮತ್ತು ಹೇಮಾವತಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಭಾರ ಹೊರುವ ತಾಲೀಮನ್ನು ಆರಂಭಿಸಲಾಯಿತು. ಮೊದಲ ದಿನವಾದ ಇಂದು, ಅಭಿಮನ್ಯುವಿಗೆ ಸುಮಾರು 200 ಕೆ.ಜಿ ತೂಕದ ಗಾದಿ, ನಮ್ದಾ, ಮತ್ತು ಚಾರ್ಜಮ್ (ಕಬ್ಬಿಣದ ತೊಟ್ಟಿಲು) ಅನ್ನು ಕಟ್ಟಿ, ನಂತರ 300 ಕೆ.ಜಿ ತೂಕದ ಮರಳು ಮೂಟೆಗಳನ್ನು ಹೊರಿಸಲಾಯಿತು.
ಅರಮನೆಯ ಬಲರಾಮ ದ್ವಾರದಿಂದ ಹೊರಬಂದ ಅಭಿಮನ್ಯು ಮತ್ತು ತಂಡ, ಚಾಮರಾಜೇಂದ್ರ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ಆಸ್ಪತ್ರೆ ವೃತ್ತ, ಮತ್ತು ಹೈವೇ ವೃತ್ತದ ಮಾರ್ಗವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಸಾಗಿ, ಪುನಃ ಅದೇ ಮಾರ್ಗದಲ್ಲಿ ಅರಮನೆಗೆ ಹಿಂತಿರುಗಿತು. ಈ ಮೂಲಕ, ಮೊದಲ ದಿನದ ಭಾರ ಹೊರುವ ತಾಲೀಮು ಯಶಸ್ವಿಯಾಗಿ ಪೂರ್ಣಗೊಂಡಿತು.
ಡಿಸಿಎಫ್ ಡಾ. ಪ್ರಭುಗೌಡ ಅವರ ನೇತೃತ್ವದಲ್ಲಿ ನಡೆದ ಈ ತಾಲೀಮಿನಲ್ಲಿ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಮಾವುತರು ಭಾಗವಹಿಸಿದ್ದರು. ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಭಾರವನ್ನು ಹೆಚ್ಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.