Dasara inauguration | Progressive writers demand security for Banu Mushtaq
x

ಮಾಧ್ಯಮಗೋಷ್ಠಿಯಲ್ಲಿ ಪ್ರಗತಿಪರ ಲೇಖಕಿಯರು ಹಾಗೂ ಹೋರಾಟಗಾರ್ತಿಯರು ಮಾತನಾಡಿದರು.

ದಸರಾ ಉದ್ಘಾಟನೆ| ಬಾನು ಮುಷ್ತಾಕ್‌ ಪರ ನಿಂತ ಪ್ರಗತಿಪರ ಲೇಖಕಿಯರು

ಸಂವಿಧಾನದ ಆಶಯದಂತೆ ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟದಂತಿದೆ. ದಸರಾ ಕೇವಲ ಯಾವುದೇ ಒಂದು ಜಾತಿ, ಧರ್ಮದ ಹಬ್ಬವಲ್ಲ. ಇದೊಂದು ನಾಡಹಬ್ಬವಾಗಿದೆ ಎಂದು ಲೈಂಗಿಕ ಅಲ್ಪ ಸಂಖ್ಯಾತ ಹಕ್ಕುಗಳ ಹೋರಾಟಗಾರ್ತಿ ಡಾ. ಅಕ್ಕೈ ಪದ್ಮಶಾಲಿ ತಿಳಿಸಿದರು.


Click the Play button to hear this message in audio format

ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಹಲವು ಚಿಂತಕರು ಮತ್ತು ಪ್ರಗತಿಪರ ಸಾಹಿತಿಗಳು ರಾಜ್ಯ ಸರ್ಕಾರದ ಕ್ರಮ ಸ್ವಾಗತಿಸಿ, ಬಾನು ಮುಷ್ತಾಕ್‌ ಬೆಂಬಲಕ್ಕೆ ನಿಂತಿದ್ದಾರೆ.

ಬೂಕರ್‌ ಪ್ರಶಸ್ತಿ ವಿಜೇತ ಲೇಖಕಿಯಾದ ಬಾನು ಮುಷ್ತಾಕ್ ಅವರನ್ನು ವಿರೋಧಿಸುವುದು ಸರಿಯಲ್ಲ.ಇಂತಹ ಪ್ರತಿಭಾವಂತ ಲೇಖಕಿಯನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ಹೆಮ್ಮೆಪಡುವ ವಿಚಾರವಾಗಿದೆ. ಬಾನು ಮುಷ್ತಾಕ್‌ ಪರವಾಗಿ ನಾಡಿನ ಎಲ್ಲ ಮಹಿಳೆಯರು ಹಾಗೂ ಪಜ್ಞಾವಂತರ ಪರವಾಗಿ ನಾವು ಬೆಂಬಲ ಸೂಚಿಸಲಿದ್ದೇವೆ ಎಂದು ಲೇಖಕಿ ಡಾ. ಆರ್‌. ಪೂರ್ಣಿಮಾ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ʼನಾವು ಎದ್ದು ನಿಲ್ಲದಿದ್ದರೆ-ಕರ್ನಾಟಕ ವೇದಿಕೆ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕೆಲ ಮೂಲಭೂತವಾದಿಗಳು ಬೂಕರ್‌ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್‌ ಅವರ ಆಯ್ಕೆ ವಿರೋಧಿಸಿ ಹೇಳಿಕೆ ನೀಡುತ್ತಿದ್ದಾರೆ. ಕೆಲ ಸಂಘಟನೆಗಳು ಹಿಂದೆ ಸರಿಯುವಂತೆಯೂ ಒತ್ತಾಯಿಸುತ್ತಿವೆ. ಧಾರ್ಮಿಕ ನಂಬಿಕೆಯ ನೆಲೆಯಲ್ಲಿ ಅವರನ್ನು ವಿರೋಧಿಸುವುದು ಕೂಡಿಬಾಳುವ ನೆಲದ ಸಂಸ್ಕೃತಿಗೆ ಅಪಚಾರ ಎಸಗಿದಂತಾಗಿದೆ ಎಂದು ಹೇಳಿದ್ದಾರೆ.

ಲೈಂಗಿಕ ಅಲ್ಪ ಸಂಖ್ಯಾತ ಹಕ್ಕುಗಳ ಹೋರಾಟಗಾರ್ತಿ ಡಾ. ಅಕ್ಕೈ ಪದ್ಮಶಾಲಿ ಮಾತನಾಡಿ, "ಬಾನು ಮುಷ್ತಾಕ್ ಅವರ ಬೆಂಬಲಕ್ಕೆ ನಾವು ನಿಲ್ಲುತ್ತೇವೆ. ಅವರ ಆಯ್ಕೆ ವಿರೋಧಿಸುವವರಿಂದ ಅಪಾಯ ಎದುರಾಗುವ ಭೀತಿಯಿದೆ. ಆದ್ದರಿಂದ ಸರ್ಕಾರ ಬಾನು ಮುಷ್ತಾಕ್‌ ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.

ಧರ್ಮರಾಯಸ್ವಾಮಿ ಕರಗವನ್ನು ನಾವು ದರ್ಗಾಗೆ ಕರೆದುಕೊಂಡು ಹೋಗುವ ಸಂಪ್ರದಾಯವಿದೆ. ಆದರೆ, ಕೆಲ ಕೋಮುವಾದಿ ಹಾಗೂ ಹಿಂದುತ್ವವಾದಿಗಳು ಬಾನು ಮುಷ್ತಾಕ್‌ ಆಯ್ಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 2017 ರಲ್ಲಿ ಕವಿ ನಿಸಾರ್‌ ಅಹಮದ್‌ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದಾಗ ಯಾರೂ ಕೂಡ ರಾದ್ದಾಂತ ಮಾಡಿರಲಿಲ್ಲ. ಅವಕಾಶ ವಂಚಿತ ಸಮುದಾಯಕ್ಕೆ ಸೇರಿದ ಹೆಣ್ಣು ಮಗಳಿಗೆ ದಸರಾ ಉದ್ಘಾಟಿಸುವ ಅವಕಾಶ ನೀಡಿರುವುದನ್ನು ಕೆಲ ಮತಾಂಧರು ಸಹಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.

ಸಂವಿಧಾನದ ಆಶಯದಂತೆ ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟದಂತಿದೆ. ಮೈಸೂರು ದಸರಾ ಕೇವಲ ಯಾವುದೇ ಒಂದು ಜಾತಿ, ಧರ್ಮದ ಹಬ್ಬವಲ್ಲ. ನಾಡಹಬ್ಬವಾಗಿರುವುದರಿಂದ ನಾವೆಲ್ಲರೂ ಒಗ್ಗಟ್ಟಾಗಿ ಸರ್ಕಾರದ ನಿರ್ಧಾರ ಸ್ವಾಗತಿಸಬೇಕು. ಬಾನು ಮುಷ್ತಾಕ್‌ ಅವರಿಗೆ ಅರಿಶಿಣ, ಕುಂಕುಮವಿಡಬೇಕು ಎಂದು ಒತ್ತಡ ಹೇರುವುದು ಸರಿಯಲ್ಲ. ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಾನು ಮುಷ್ತಾಕ್‌ ಅವರೊಂದಿಗೆ ಮಹಿಳಾ, ವಿದ್ಯಾರ್ಥಿ ಹಾಗೂ ಪ್ರಗತಿಪರ ಸಂಘಟನೆಗಳು ಸದಾ ಇರಲಿವೆ ಎಂದು ಹೇಳಿದ್ದಾರೆ.

"ಬಾನು ಮುಷ್ತಾಕ್ ವಿಚಾರದಲ್ಲಿ ಕೆಲವರು ಕೋಮುಭಾವನೆ ಕೆರಳಿಸುತ್ತಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ವಿರೋಧ ವ್ಯಕ್ತಪಡಿಸುತ್ತಿರುವುದು ಸಮಂಜಸವಲ್ಲ. ಉದ್ಘಾಟನಾ ಸಮಾರಂಭದ ವೇಳೆ ಏನಾದರೂ ಅನಾಹುತ ನಡೆದರೆ, ಅದಕ್ಕೆ ಈಗ ವಿರೋಧ ವ್ಯಕ್ತಪಡಿಸುತ್ತಿರುವವರೇ ನೇರ ಹೊಣೆʼʼ ಎಂದು ಲೇಖಕಿ ಗೌರಮ್ಮ ಎಚ್ಚರಿಕೆ ನೀಡಿದರು.

Read More
Next Story