
ಸಿದ್ದರಾಮಯ್ಯ
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್, ಸುಪ್ರೀಂ ತೀರ್ಪು ಸರ್ಕಾರದ ನಿಲುವಿಗೆ ಸಂದ ಜಯ ಎಂದ ಸಿಎಂ
ಈ ತೀರ್ಪಿನ ಮೂಲಕ ದಸರಾ ಉದ್ಘಾಟನೆಗೆ ಸಂಬಂಧಿಸಿದ ಎಲ್ಲಾ ವಿವಾದಗಳು ಅಂತ್ಯಗೊಂಡಿದ್ದು, ರಾಜ್ಯ ಸರ್ಕಾರದ ನಿಲುವಿಗೆ ಕಾನೂನಾತ್ಮಕ ಮಾನ್ಯತೆ ದೊರೆತಂತಾಗಿದೆ.
ಮೈಸೂರು ದಸರಾ ಮಹೋತ್ಸ ಉದ್ಘಾಟಿಸಲು ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. "ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ನಮ್ಮ ಸರ್ಕಾರದ ಜಾತ್ಯತೀತ ನಿಲುವಿಗೆ ಸಂದ ಜಯ" ಎಂದು ಅವರು ಬಣ್ಣಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, "ಮೈಸೂರು ದಸರಾ ಕೇವಲ ಧಾರ್ಮಿಕ ಆಚರಣೆಯಲ್ಲ, ಅದೊಂದು ನಾಡಹಬ್ಬ. ಜಾತಿ, ಧರ್ಮಗಳನ್ನು ಮೀರಿ ನಾಡಿನ ಸಮಸ್ತ ಜನರು ಒಟ್ಟಾಗಿ ಸಂಭ್ರಮಿಸುವ ಈ ಹಬ್ಬವನ್ನು ಧಾರ್ಮಿಕ ಚೌಕಟ್ಟಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ನಾವು ಮೊದಲಿನಿಂದಲೂ ಇದನ್ನೇ ಪ್ರತಿಪಾದಿಸುತ್ತಾ ಬಂದಿದ್ದೇವೆ" ಎಂದು ಹೇಳಿದ್ದಾರೆ.
"ಕೆಲವರು ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಿ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಿದರು. ಆದರೆ, ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ನಮ್ಮ ಸರ್ಕಾರದ ನಿಲುವಿಗೆ ಅಂತಿಮವಾಗಿ ಮನ್ನಣೆ ದೊರೆತಿದೆ. ಜಾತಿ, ಧರ್ಮಗಳ ಹೆಸರಿನಲ್ಲಿ ವೈಷಮ್ಯ ಬಿತ್ತುವ ವಿಚ್ಛಿದ್ರಕಾರಿ ಶಕ್ತಿಗಳಿಗೆ ತಾಯಿ ಚಾಮುಂಡೇಶ್ವರಿ ಸದ್ಬುದ್ಧಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಮುಖ್ಯಮಂತ್ರಿಗಳು ಆಶಿಸಿದ್ದಾರೆ.
ಈ ತೀರ್ಪಿನ ಮೂಲಕ ದಸರಾ ಉದ್ಘಾಟನೆಗೆ ಸಂಬಂಧಿಸಿದ ಎಲ್ಲಾ ವಿವಾದಗಳು ಅಂತ್ಯಗೊಂಡಿದ್ದು, ರಾಜ್ಯ ಸರ್ಕಾರದ ನಿಲುವಿಗೆ ಕಾನೂನಾತ್ಮಕ ಮಾನ್ಯತೆ ದೊರೆತಂತಾಗಿದೆ.