Dasara Add Row | ವಾಮಮಾರ್ಗ, ಮೋಸ ಸ್ಥಿರಗೊಳಿಸುವ ಸರ್ಕಾರ: ಕುಮಾರಸ್ವಾಮಿ ಆರೋಪ
x

Dasara Add Row | ವಾಮಮಾರ್ಗ, ಮೋಸ ಸ್ಥಿರಗೊಳಿಸುವ ಸರ್ಕಾರ: ಕುಮಾರಸ್ವಾಮಿ ಆರೋಪ

ದಸರಾದ ಆಯುಧ ಪೂಜೆಯ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ನವ ವಿನಾಶಕಾರಿ ಶಕ್ತಿಗಳ ಪಟ್ಟಿಯೊಂದಿಗೆ ನೀಡಿರುವ ಜಾಹೀರಾತು ಇದೀಗ ಪ್ರತಿಪಕ್ಷ ನಾಯಕರ ಟೀಕೆಗೆ ಗುರಿಯಾಗಿದೆ.


ವಿಜಯದಶಮಿ ಪ್ರಯುಕ್ತ ಪತ್ರಿಕೆಗಳಿಗೆ ರಾಜ್ಯ ಸರ್ಕಾರ ನೀಡಿರುವ ಜಾಹೀರಾತು ಇದೀಗ ವಿಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿದೆ. ʼದುಷ್ಟ ಶಕ್ತಿ ಎದುರು ಸತ್ಯದ ಜಯʼ ಎಂಬ ತಲೆಬರಹದಡಿ ನೀಡಿರುವ ಜಾಹೀರಾತಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಮೈಸೂರಿನಲ್ಲಿ ತೀವ್ರ ವಾಗ್ದಾಳಿ ನಡೆಸಿದರು.

ಚಾಮುಂಡಿ ಬೆಟ್ಟದಲ್ಲಿ ದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟಿದೆ. ದುಷ್ಟಶಕ್ತಿಗಳ ಎದುರು ಸತ್ಯದ ಜಯವಂತೆ. ಕರ್ನಾಟಕ ರಾಜ್ಯವನ್ನು ವಾಮಮಾರ್ಗ, ಮೋಸದಿಂದ ಅಸ್ಥಿರಗೊಳಿಸಲಾಗುತ್ತಿದೆ ಎಂದು ಜಾಹೀರಾತಿನಲ್ಲಿ ಹೇಳಿದೆ. ಆದರೆ, ನಿಜವಾಗಿಯೂ ಕಾಂಗ್ರೆಸ್ ಸರ್ಕಾರವೇ ರಾಜ್ಯದಲ್ಲಿ ವಾಮಾಮಾರ್ಗ, ಮೋಸವನ್ನು ಸ್ಥಿರಗೊಳಿಸಲು ಹೊರಟಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ನವರು ಯಾವ ಸತ್ಯ, ಧರ್ಮ ಉಳಿಸಿದ್ದಾರೆ ಎಂದು ಪ್ರಶ್ನಿಸಿದ ಅವರು, ಬಡವರಿಗೆ ಸೇರಬೇಕಾದ ಮಹರ್ಷಿ ವಾಲ್ಮೀಕಿ ನಿಗಮದಿಂದ ಹಣವನ್ನು ನುಂಗಿದ್ದಾರೆ. ಸರ್ಕಾರಕ್ಕೆ ಮೋಸ ಮಾಡಿ ಮುಡಾ ನಿವೇಶನ ಪಡೆದಿದ್ದಾರೆ. ಈಗ ಪರಿಸ್ಥಿತಿ ವ್ಯತಿರಿಕ್ತವಾಗುತ್ತಿದ್ದಂತೆ ಹೆದರಿ ವಾಪಸ್ ನೀಡಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯ ಅವರ ಬಳಿ ಇರುವ ಹಣಕಾಸು ಸಚಿವಾಲಯದ ಮೂಲಕವೇ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗವಾಗಿದೆ. ಇದರ ಸತ್ಯಾಂಶಗಳು ಹೊರಬರುವ ಕಾಲ ದೂರವಿಲ್ಲ ಎಂದು ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದರು. ಸಿದ್ದರಾಮಣ್ಣನ ಬಗ್ಗೆ ಹಿನಕಲ್ ಸಾಕಮ್ಮ ಅವರನ್ನು ಕೇಳಿದರೆ ತಿಳಿಯುತ್ತದೆ, ಸಿಎಂ ಕುಟುಂಬ ಯಾವ ವಾಮ ಮಾರ್ಗದಲ್ಲಿ ನಿವೇಶನ ಪಡೆದಿದ್ದಾರೆ ಎಂಬುದು. ಇಂತಹ ಇತಿಹಾಸಗಳು ಸಾಕಷ್ಟಿವೆ. ಇಲ್ಲಿ ಸ್ಥಿರಗೊಳಿಸುವುದು, ಅಸ್ಥಿರಗೊಳಿಸುವುದು ಕೈಯಲ್ಲಿಲ್ಲ. ಎಲ್ಲ ಚಾಮುಂಡೇಶ್ವರಿ ದೇವಿಯ ಕೈಯಲ್ಲಿದೆ ಎಂದು ಹೇಳಿದರು.

ಕುಮಾರಸ್ವಾಮಿ ಕೇವಲ ಆರೋಪ ಮಾಡದೇ ದಾಖಲೆ ನೀಡಲಿ ಎಂಬ ಆಡಳಿತ ಪಕ್ಷದವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಎಷ್ಟು ದಾಖಲೆ ಕೊಡಲಿ?, ಈಗ ಕೊಟ್ಟಿರುವುದನ್ನೇ ಅರಗಿಸಿಕೊಳ್ಳಲು ಆಗುತ್ತಿಲ್ಲ. ನಾನು ಮಾಧ್ಯಮದವರ ಎದುರು ತೋರಿಸಿದ್ದ ಪೆನ್‌ಡ್ರೈವ್‌ನಲ್ಲಿ ವರ್ಗಾವಣೆ ದಂಧೆ ಬಗ್ಗೆ ಇತ್ತೇ ಹೊರತು ಅಶ್ಲೀಲ ಚಿತ್ರ ಇರಲಿಲ್ಲ ಎಂದು ಹೇಳಿದರು.

ನಾನು ಎರಡು ಬಾರಿ ಮುಖ್ಯಮಂತ್ರಿಯಾದರೂ ಯಾರಿಂದಲೂ ಹೆದರಿಸಿ, ಒತ್ತಡ ಹಾಕಿ ಕಮಿಷನ್ ಪಡೆದಿಲ್ಲ. ಈ ಸತ್ಯವನ್ನು ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಹೇಳುತ್ತಿದ್ದೇನೆ. ನಾನು ಕಮಿಷನ್ ಪಡೆದಿಲ್ಲ ಎಂದು ಹೇಳಿದರು.

ಕೋವಿಡ್ ಹಗರಣದ ತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿರುವ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರ ನಿರ್ಧಾರಕ್ಕೆ ನಮ್ಮದೇನೂ ತಕರಾರಿಲ್ಲ. ಸರ್ಕಾರ ರಚನೆಯಾಗಿ 15 ತಿಂಗಳಾಗಿವೆ. ಇಷ್ಟು ದಿನ ಸುಮ್ಮನಿದ್ದವರು, ಈಗ ತನಿಖೆ ಮಾಡುತ್ತಾರಾ? ಅವರ ವೈಫಲ್ಯ ಮುಚ್ಚಿಕೊಳ್ಳಲು ಇವೆಲ್ಲ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಸರ್ಕಾರದ ಜಾಹೀರಾತು ಏನು?

‘ದುಷ್ಟ ಶಕ್ತಿ ಎದುರು ಸತ್ಯದ ಜಯʼ ಎಂಬ ತಲೆಬರಹದಡಿ ಪೂರ್ಣಪುಟದ ಜಾಹೀರಾತು ನೀಡಿರುವ ಕಾಂಗ್ರೆಸ್ ಸರ್ಕಾರ‌, ತಮ್ಮ ʼಸರ್ಕಾರವನ್ನು ಅಸ್ಥಿರಗೊಳಿಸಲು ವಾಮಮಾರ್ಗ, ಮೋಸದಿಂದ ಯತ್ನಿಸುತ್ತಿರುವ ದುಷ್ಟಶಕ್ತಿಗಳನ್ನು ತಾಯಿ ಚಾಮುಂಡೇಶ್ವರಿ ನಿಗ್ರಹಿಸಲಿ’ ಎಂದು ಜಾಹೀರಾತಿನಲ್ಲಿ ಹೇಳಿತ್ತು.

ದಸರಾ ಹಬ್ಬದ ಆಯುಧ ಪೂಜೆಯ ದಿನ ಶುಕ್ರವಾರ ರಾಜ್ಯದ ಮುಖ್ಯವಾಹಿನಿ ದಿನಪತ್ರಿಕೆಗಳ ಮುಖಪುಟದಲ್ಲೇ ಈ ಜಾಹೀರಾತು ಪ್ರಕಟವಾಗಿತ್ತು. ರಾಜ್ಯದ ಜನತೆಗೆ ದಸರಾ ಶುಭಾಶಯ ಕೋರುವ ನೆಪದಲ್ಲಿ ವಿರೋಧ ಪಕ್ಷಗಳಿಗೆ ಪರೋಕ್ಷ ಟಾಂಗ್‌ ಕೊಡುವುದು ಆ ಜಾಹೀರಾತಿನ ಉದ್ದೇಶ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿತ್ತು.

ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ, ಇದು ಸರ್ಕಾರದ ಅಸ್ಥಿರಗೊಳಿಸಲು ಬಿಜೆಪಿಯಿಂದ ಷಡ್ಯಂತ್ರ ಅಂತಾ ಆರೋಪಿಸುತ್ತಲೇ ಬಂದಿದ್ದಾರೆ. ಇದೀಗ ದಸರಾಗೆ ಶುಭಾಶಯ ಕೋರುವ ಸರ್ಕಾರದ ಜಾಹೀರಾತಿನಲ್ಲೂ ಸಿದ್ದರಾಮಯ್ಯ ಸರ್ಕಾರ ಆ ಮಾತುಗಳನ್ನೇ ಪುನರುಚ್ಚರಿಸಿದೆ.

ಅಷ್ಟೇ ಅಲ್ಲ, ನವರಾತ್ರಿಯಲ್ಲಿ ಸಂಹರಿಸಬೇಕಾದ ವಿನಾಶಕಾರಿ ಶಕ್ತಿಗಳನ್ನೂ ಜಾಹೀರಾತಿನಲ್ಲಿ ಉಲ್ಲೇಖ ಮಾಡಲಾಗಿದೆ. ಜಾಹೀರಾತಿನ ಪ್ರಕಾರ ನವ ವಿನಾಶಕಾರಿ ಶಕ್ತಿಗಳ ಪಟ್ಟಿ ಮತ್ತು ಅವುಗಳ ನಿಗ್ರಹ ಕ್ರಮಗಳು ಇಂತಿವೆ;

ಪ್ರತಿಪದ: ಕೋಮುಗಲಭೆ-ಶಾಂತಿ ಸೌಹಾರ್ದತೆಯಿಂದ ನಿಗ್ರಹ.

ದ್ವಿತೀಯ: ಸಾಮಾಜಿಕ ಪಿಡುಗು-ವೈಜ್ಞಾನಿಕ ಅರಿವಿನಿಂದ ನಿವಾರಣೆ.

ತೃತೀಯ: ಶಾಂತಿಭಂಗ-ಸಾಮರಸ್ಯ ಕದಡುವವರ ನಿರ್ಮೂಲನೆ.

ಚತುರ್ಥಿ: ದುಷ್ಕೃತ್ಯ-ಕಠಿಣ ಶಿಕ್ಷೆ.

ಪಂಚಮಿ: ವಿಧ್ವಂಸಕತೆ-ಧೈರ್ಯ & ಶೌರ್ಯದಿಂದ ದಮನ.

ಷಷ್ಠಿ: ಅಶಾಂತಿ-ಕಾನೂನು ಸುವ್ಯವಸ್ಥೆಯಿಂದ ನಿವಾರಣೆ.

ಸಪ್ತಮಿ: ಪ್ರಚೋದನೆ-ಪ್ರೇರೇಪಿಸುವವರ ನಿರ್ಮೂಲನೆ.

ಅಷ್ಟಮಿ: ಸುಳ್ಳು ವದಂತಿ-ಮೂಲದಿಂದಲೇ ನಾಶ.

ನವಮಿ: ಅಪಪ್ರಚಾರ- ಮಾಡುವವರ ಮೇಲೆ ಕ್ರಮ.

Read More
Next Story