ದರ್ಶನ್ ಅಟ್ಟಹಾಸ ಪ್ರಕರಣ | ಇಂದು ನ್ಯಾಯಾಧೀಶರ ಮುಂದೆ 164 ಹೇಳಿಕೆ ದಾಖಲು?
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್ ಮತ್ತು ಇತರರನ್ನು ಬೆಂಗಳೂರು ಪೊಲೀಸರು ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿ 164 ಹೇಳಿಕೆ ದಾಖಲಿಸುವ ಸಾಧ್ಯತೆಯಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್ ಮತ್ತು ಇತರ ಎಲ್ಲಾ ಆರೋಪಿಗಳನ್ನು ಬೆಂಗಳೂರು ಪೊಲೀಸರು ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ. ಬಂಧಿತ ಆರೋಪಿಗಳ ಆರು ದಿನಗಳ ಪೊಲೀಸ್ ಕಸ್ಟಡಿ ಭಾನುವಾರ ಕೊನೆಗೊಳ್ಳಲಿದೆ.
ಜೂ.11ರಿಂದ ಜೂ.17ರ ವರೆಗೆ ಪೊಲೀಸರು ದರ್ಶನ್ ಮತ್ತು ಪವಿತ್ರಾ ಗೌಡ ಅವರನ್ನು ವಶಕ್ಕೆ ಪಡೆದಿದ್ದರು. ಆದರೆ ಜೂ.17ರಂದು ಸರ್ಕಾರಿ ರಜೆ ಇರುವುದರಿಂದ ಪೊಲೀಸರು ಎರಡು ದಿನಗಳ ಮೊದಲೇ ಕೋರಮಂಗಲದ ಜಡ್ಜ್ ನಿವಾಸಕ್ಕೆ ಇಬ್ಬರನ್ನು ಹಾಜರುಪಡಿಸಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಪೊಲೀಸರು ದರ್ಶನ್ ಅವರ ಪ್ರಾಥಮಿಕ ವಿಚಾರಣೆಯನ್ನು ಮುಗಿಸಿದ್ದಾರೆ. ನ್ಯಾಯಾಧೀಶರ ಮುಂದೆ ಆರೋಪಿಗಳ 164 ಹೇಳಿಕೆಯನ್ನು ದಾಖಲಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಹಾಗೂ ಆತನ ಆಪ್ತ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ 13 ಮಂದಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರಿಂದ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪವಿತ್ರಾ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ ಕಾರಣ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಜರ್ ಮತ್ತು ಹೇಳಿಕೆಗಳನ್ನು ದಾಖಲಿಸುವುದು ಸೇರಿದಂತೆ ಹೆಚ್ಚಿನ ತನಿಖಾ ಪ್ರಕ್ರಿಯೆಗಳು ಈಗಾಗಲೇ ಪೂರ್ಣಗೊಂಡಿವೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲು ಬಳಸಿದ ವಸ್ತುಗಳು, ಸಿಸಿಟಿವಿ ದೃಶ್ಯಾವಳಿಗಳು, ಅಪರಾಧದಲ್ಲಿ ಬಳಸಿದ ವಾಹನಗಳು ಮತ್ತು ಇತರ ವಸ್ತು ಸಾಕ್ಷ್ಯಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.