Actor Darshan Case | ಜಾಮೀನು ಸಿಗುತ್ತಲೇ ಸರ್ಜರಿ ಇಲ್ಲದೆ ಆಸ್ಪತ್ರೆಯಿಂದ ಹೊರಟ ದರ್ಶನ್
ಕೊಲೆ ಪ್ರಕರಣದಲ್ಲಿ ಜುಲೈ ತಿಂಗಳಿನಲ್ಲಿ ಜೈಲು ಸೇರಿದ್ದ ದರ್ಶನ್‌ಗೆ ತೀವ್ರ ಬೆನ್ನುನೋವು ಸಮಸ್ಯೆ ಕಾರಣ ಮುಂದೊಡ್ಡಿ ಮಧ್ಯಂತರ ಜಾಮೀನು ಪಡೆದಿದ್ದರು. ಇದೀಗ ಜಾಮೀನು ದೊರೆಯುತ್ತಿದ್ದಂತೆ ಆಪರೇಷನ್ ಮಾಡಿಸದೇ ಇದ್ದಲ್ಲಿ ಲಕ್ವಾ ಹೊಡೆಯಲಿದೆ ಎಂದು ಹೈಕೋರ್ಟ್ ಎದುರು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು. ಇದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಆಕ್ಷೇಪ ಕೂಡ ವ್ಯಕ್ತಪಡಿದ್ದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ನಟ ದರ್ಶನ್ ಕಳೆದ ಒಂದೂವರೆ ತಿಂಗಳಿನಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ರಾಜ್ಯ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದರೂ ಈವರೆಗೆ ಸರ್ಜರಿ ಮಾಡಿಕೊಂಡಿಲ್ಲ. ಇದೀಗ ದರ್ಶನ್‌ಗೆ ಪೂರ್ಣ ಪ್ರಮಾಣದ ಜಾಮೀನು ಮಂಜೂರು ಮಾಡಿದ್ದು, ದರ್ಶನ್‌ಗೆ ನಿರಾಳವಾಗಿದೆ. ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ನಟ ದರ್ಶನ್ ಜಾಮೀನು ಸಿಗುತ್ತಿದ್ದಂತೆಯೇ ಸದ್ಯ ಯಾವುದೇ ಶಸ್ತ್ರಚಿಕಿತ್ಸೆ ಬೇಡ ಎಂದು ರೇಂಜ್ ರೋವರ್ ಕಾರ್ ಹತ್ತಿ ಮನೆಗೆ ನಡೆದಿದ್ದಾರೆ.
ಕೊಲೆ ಪ್ರಕರಣದಲ್ಲಿ ಜುಲೈ ತಿಂಗಳಿನಲ್ಲಿ ಜೈಲು ಸೇರಿದ್ದ ದರ್ಶನ್‌ಗೆ ತೀವ್ರ ಬೆನ್ನುನೋವು ಸಮಸ್ಯೆ ಕಾಡಿತ್ತು. ಆಪರೇಷನ್ ಮಾಡಿಸದೇ ಇದ್ದಲ್ಲಿ ಲಕ್ವಾ ಹೊಡೆಯಲಿದೆ ಎಂದು ಹೈಕೋರ್ಟ್ ಎದುರು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು. ಇದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಆಕ್ಷೇಪ ಕೂಡ ವ್ಯಕ್ತಪಡಿದ್ದರು. ಆರೋಗ್ಯ ವಿಚಾರದಲ್ಲಿ ಅನುಮಾನಗಳು ಬರಬಾರದು ಎಂದು ಸ್ವತಃ ಜಡ್ಜ್ ಹೇಳಿಕೆ ಕೂಡ ನೀಡಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್ ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಮಧ್ಯಂತರ ಜಾಮೀನು ಸಿಕ್ಕ ಬಳಿಕವೂ 49 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ದರ್ಶನ್ ವಿವಿಧ ಕಾರಣಗಳನ್ನು ನೀಡಿ ಸರ್ಜರಿಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಹೈಕೋರ್ಟ್ ದರ್ಶನ್ ಸೇರಿದಂತೆ ಇತರ ಆರೋಪಿಗಳಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಶುಕ್ರವಾರ ಜಮೀನು ಮಂಜೂರು ಮಾಡಿತ್ತು. ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ದರ್ಶನ್ ತಮಗೆ ಯಾವ ಸರ್ಜರಿ ಕೂಡ ಅಗತ್ಯವಿಲ್ಲ. ಫಿಸಿಯೋಥೆರಪಿ ಮೂಲಕವೇ ನಾನು ಗುಣಮುಖನಾಗಿದ್ದೇನೆ ಎಂದು ಹೇಳಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸಬೂಬು ನೀಡಿ ಶಸ್ತ್ರಚಿಕಿತ್ಸೆಯಿಂದ ತಪ್ಪಿಸಿಕೊಂಡ ದರ್ಶನ್
ತೀವ್ರ ಬೆನ್ನು ನೋವಿದೆ ಸರ್ಜರಿ ಮಾಡಿಸಬೇಕು ಎಂದು ಮಧ್ಯಂತರ ಜಾಮೀನು ಪಡೆದಿದ್ದ ನಟ ಆಸ್ಪತ್ರೆಗೆ ದಾಖಲಾಗಿ 48 ದಿನಗಳಾದರೂ ಸರ್ಜರಿ ಮಾಡಿಸಿಕೊಳ್ಳಲಿಲ್ಲ. ಬಿಪಿ ಏರುಪೇರಾಗಿದೆ, ಪತ್ನಿ ವಿಜಯಲಕ್ಷ್ಮಿ ಸೈನ್ ಮಾಡಿಲ್ಲ ಇಂತಹ ಕಾರಣಗಳನ್ನು ಹೇಳಿ ಸರ್ಜರಿ ಮಾಡಿಸಿಕೊಂಡಿಲ್ಲ. ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದರ್ಶನ್ ಸೋಮವಾರ ಜಾಮೀನು ಪ್ರಕ್ರಿಯೆ ಮುಗಿಸಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಡಿಸ್ಚಾರ್ಜ್ ಆಗಿದ್ದಾರೆ.
ಡಿಸ್ಚಾರ್ಜ್ ಆಗಿ ಹೊರ ಬರುತ್ತಿದ್ದಂತೆಯೇ ದರ್ಶನ್ ಕರೆದೊಯ್ಯಲು ಹೆಂಡತಿ ಕಾರು ತಂದಿದ್ದರೂ ನಟ, ಗೆಳೆಯ ಧನ್ವೀರ್ ಕಾರಿನಲ್ಲಿ ಮಗ ವಿನಿಶ್ ಜೊತೆ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಫ್ಲಾಟ್ಗೆ ಬಂದಿದ್ದು ಅವರೊಂದಿಗೆ ಅವರ ಸಹೋದರ ದಿನಕರ್ ತೂಗುದೀಪ ಹಾಗೂ ಪತ್ನಿಯೂ ಇದ್ದರು.
ಫ್ಲಾಟ್ ಬಳಿ ಅಲರ್ಟ್
ಹೊಸಕೆರೆಹಳ್ಳಿ ಅಪಾರ್ಟ್‌ಮೆಂಟ್ ಬಳಿ ಅಲರ್ಟ್ ಮಾಡಲಾಗಿದೆ. ದರ್ಶನ್ ಬರುವುದರಿಂದ ಅಭಿಮಾನಿಗಳು ಕೂಡ ಜಮಾಯಿಸುವ ಸಾಧ್ಯತೆ ಹಿನ್ನಲೆಯಲ್ಲಿ ಅಪಾರ್ಟ್‌ಮೆಂಟ್‌ನ ಮುಂಭಾಗದಲ್ಲಿ ಸೆಕ್ಯುರಿಟಿ ಸಿಬ್ಬಂದಿ ಎಚ್ಚರಿಕೆ ವಹಿಸಿದ್ದಾರೆ. ಅವರು ಇನ್ನು ಮನೆಯಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ ಎಂಬ ಮಾಹಿತಿಯೂ ಇದೆ.
ದರ್ಶನಿಗೆ ಎದುರಾಗಲಿದೆಯೇ ಕಂಟಕ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರಿಗೆ ಹೈಕೋರ್ಟ್ ನೀಡಿರುವ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಪೊಲೀಸರು ಮುಂದಾಗಿದ್ದಾರೆ.
ಈ ಬಗ್ಗೆ ಬೆಂಗಳೂರು ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರು ಮಾಹಿತಿ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಹೈಕೋರ್ಟ್‌ನ ಈ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.