
ದರ್ಶನ್ ದಶಾವತಾರ | ವಿವಾದಗಳನ್ನೇ ಅಪ್ಪಿಕೊಂಡ ʼಚಾಲೆಂಜಿಂಗ್ʼ ಸ್ಟಾರ್!
ತನ್ನ ಪ್ರೇಯಸಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ ಎಂಬ ಕಾರಣಕ್ಕೆ ತನ್ನದೇ ಅಭಿಮಾನಿಯನ್ನು ಕೊಲೆ ಮಾಡಿಸಿರುವ ಆರೋಪ ಹೊತ್ತಿರುವ ಗಂಭೀರ ಪ್ರಕರಣದಲ್ಲಿ ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ದರ್ಶನ್ ಬಂಧನಕ್ಕೊಳಗಾಗಿದ್ದಾರೆ.
ಲೈಟ್ ಬಾಯ್ ಆಗಿ ಚಿತ್ರರಂಗ ಪ್ರವೇಶಿಸಿದ ದರ್ಶನ್, ತಮ್ಮ ತಂದೆ ತೂಗುದೀಪ ಶ್ರೀನಿವಾಸ್ ಅವರ ನಂಟಿನ ಹೊರತಾಗಿಯೂ ಸ್ವಾರ್ ನಟನ ಪಟ್ಟಕ್ಕೇರಲು ಸಾಕಷ್ಟು ಶ್ರಮಿಸಿದ್ದಾರೆ. ಆದರೆ, ಅದೇ ಹೊತ್ತಿಗೆ ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಿಂದಲೂ ಪರಿಶ್ರಮದಿಂದ ಪಡೆದ ತಮ್ಮ ಸ್ಟಾರ್ ಗಿರಿಯ ಕಾರಣಕ್ಕೆ ಸುದ್ದಿಯಾಗಿರುವುದಕ್ಕಿಂತ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದರಲ್ಲೇ ದರ್ಶನ್ ಸುದ್ದಿಯಾಗುತ್ತಿದ್ದಾರೆ.
ಹಾಲು ಮಾರಿಕೊಂಡಿದ್ದ ದಿನಗಳು
ಮೈಸೂರಿನ ಸಿದ್ಧಾರ್ಥ ಲೇಔಟ್ನಲ್ಲಿ ವಾಸವಿದ್ದ ದರ್ಶನ್ ಕುಟುಂಬಕ್ಕೆ ಅವರ ತಂದೆ ತೂಗುದೀಪ್ ನಿಧನದ ಬಳಿಕ ಆರ್ಥಿಕ ಸಂಕಷ್ಟ ಎದುರಾಗಿತ್ತು. ಆ ದಿನಗಳಲ್ಲಿ ದರ್ಶನ್ ಹಸು- ಎಮ್ಮೆ ಸಾಕಿ, ಹಾಲು ಮಾರಿ ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಆ ಬಳಿಕ ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ನೀಸಾಸಂ ರಂಗ ಶಿಕ್ಷಣ ಕೇಂದ್ರಕ್ಕೆ ಸೇರಿ ನಟನೆ ಕಲಿಯಲು ಯತ್ನಿಸಿದರು. ಅಲ್ಲಿ ಕೋರ್ಸ್ ಅರ್ಧಕ್ಕೇ ನಿಲ್ಲಿಸಿ ಬೆಂಗಳೂರಿಗೆ ಮರಳಿ, ಸಿನಿಮಾ ಉದ್ಯಮದಲ್ಲಿ ಲೈಟ್ ಬಾಯ್ ಆಗಿ ಉದ್ಯೋಗ ಆರಂಭಿಸಿದ್ದರು. ಬಳಿಕ ಕೆಲವು ಧಾರಾವಾಹಿಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿದ್ದರು.
ಆ ಬಳಿಕ 2001ರಲ್ಲಿ ರೌಡಿಸಂ ಕಥೆಯ ʼಮೆಜೆಸ್ಟಿಕ್ʼ ಸಿನಿಮಾದ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.
ಸರಣಿ ವಿವಾದಗಳ ಸುಳಿ
ತೀರಾ ಕಷ್ಟಪಟ್ಟು ಸಿನಿಮಾ ರಂಗದಲ್ಲಿ ಹೆಸರು ಮಾಡಿದ ದರ್ಶನ್, ಆ ಹೆಸರಿನೊಂದಿಗೆ ಬಂದ ಜನಪ್ರಿಯತೆ ಮತ್ತು ಹಣದ ಅಮಲಿನಲ್ಲಿ ತೇಲತೊಡಗಿದರು. ಕನ್ನಡ ಸಿನಿಮಾ ರಂಗದ ಅತ್ಯಂತ ಜನಪ್ರಿಯ ನಟರಾಗಿ, ಬಾಕ್ಸ್ ಆಫೀಸ್ ದೊರೆಯಾಗಿ ದರ್ಶನ್ ಪಡೆದ ಯಶಸ್ಸು ಹಣ ಗಳಿಕೆಯಲ್ಲಿ ಹೊಸ ಹೊಸ ದಾಖಲೆಗಳಿಗೆ ಕಾರಣವಾಯಿತು. ಹಾಗೇ ಅತಿದೊಡ್ಡ ಅಭಿಮಾನಿ ಪಡೆಯನ್ನೂ ಬೆಳೆಸಿತು.
ಆದರೆ, ಆ ಜನಪ್ರಿಯತೆಯ ಜೊತೆಗೇ ಬರಬೇಕಿದ್ದು ಸಾಮಾಜಿಕ ಜವಾಬ್ದಾರಿ ಮತ್ತು ಸಜ್ಜನಿಕೆಯ ಜಾಗದಲ್ಲಿ ಅವರ ನಡೆ- ನುಡಿಗಳು ಮತ್ತೆ ಮತ್ತೆ ವಿವಾದಕ್ಕೊಳಗಾದವು. ನಿರಂತರ ವಿವಾದಗಳ ಮೂಲಕವೇ ಸ್ಟಾರ್ ನಟ ದರ್ಶನ್ ಸುದ್ದಿಯಾಗತೊಡಗಿದರು.
ತಮ್ಮ ಪತ್ನಿ ಮೇಲಿನ ಹಲ್ಲೆ ಘಟನೆಯಿಂದ ಆರಂಭವಾಗಿ ಇತ್ತೀಚಿನ ಜೆಟ್ಲ್ಯಾಗ್ ಪಬ್ನಲ್ಲಿ ತಡರಾತ್ರಿ ಪಾರ್ಟಿಯವರೆಗೆ ಸರಣಿ ವಿವಾದಗಳು, ದರ್ಶನ್ ಅವರ ಚಾಲೆಂಜಿಂಗ್ ಎಂಬ ಬಿರುದಿಗೇ ಅಪಖ್ಯಾತಿಯಾಗಿ ಸಿನಿಮಾ ಸಾಧನೆಯ ಜೊತೆಜೊತೆಯಲ್ಲೇ ತಳುಕು ಹಾಕಿಕೊಂಡಿವೆ. ತೆರೆಯ ಮೇಲೆ ಹೀರೋ ಆಗಿ ಮೆರೆಯುವ ನಟ ನಿಜ ಜೀವನದಲ್ಲಿ ವಿವಾದಗಳನ್ನೇ ಹಾಸಿಹೊದ್ದಿರುವುದು ವಿಪರ್ಯಾಸ.
ಪತ್ನಿ ಮೇಲೆ ಹಲ್ಲೆ ನಡೆಸಿ ಜೈಲಿಗೆ
ನಟ ದರ್ಶನ್ ವಿರುದ್ಧ ಮೊದಲ ಪೊಲೀಸ್ ದೂರು ದಾಖಲಾಗಿದ್ದು ಸ್ವತಃ ಅವರ ಪತ್ನಿಯಿಂದಲೇ. 2011ರಲ್ಲಿ ಪತಿ ದರ್ಶನ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರ ಪತ್ನಿ ವಿಜಯಲಕ್ಷ್ಮಿ ಪೊಲೀಸರಿಗೆ ದೂರು ನೀಡಿದ್ದರು. ಆ ಪ್ರಕರಣದಲ್ಲಿ ಪೊಲೀಸರು ದರ್ಶನ್ ಅವರನ್ನು ಬಂಧಿಸಿ, ಜೈಲಿಗೆ ಕಳಿಸಿದ್ದರು.
ಕೌಟುಂಬಿಕ ಕಲಹದಲ್ಲಿ ದರ್ಶನ್ ತಮ್ಮ ಪತ್ನಿ ಮೇಲೆ ಅಮಾನುಷ ಹಲ್ಲೆ ಮಾಡಿದ್ದರು. ವಿಜಯಲಕ್ಷ್ಮಿ ಅವರ ಮುಖ, ಕೈಗೆ ಹೊಡೆದು ಗಾಯಗೊಳಿಸಿದ್ದರು. ಹಲ್ಲೆಗೊಳಗಾದ ವಿಜಯಲಕ್ಷ್ಮಿ ಅವರು ನೀಡಿದ ದೂರಿನ ಆಧಾರದಲ್ಲಿಪೊಲೀಸರು ದರ್ಶನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ 28 ದಿನಗಳ ಕಾಲ ಜೈಲಿನಲ್ಲಿದ್ದರು. ಬಳಿಕ ವಿಜಯಲಕ್ಷ್ಮಿ ಮತ್ತು ದರ್ಶನ್ ನಡುವೆ ಚಿತ್ರರಂಗದ ಪ್ರಮುಖರು ರಾಜೀ ಪಂಚಾಯ್ತಿ ನಡೆಸಿದ್ದರು. ಆ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಅವರು ದೂರು ವಾಪಸ್ ಪಡೆದರು.
ನಿರ್ಮಾಪಕ ಉಮಾಪತಿ ವಿವಾದ
ಸಿನಿಮಾ ನಿರ್ಮಾಪಕರೊಂದಿಗೆ ದರ್ಶನ್ ವಿವಾದಗಳು ಕೂಡ ಸಾಕಷ್ಟು ಸುದ್ದಿ ಮಾಡಿವೆ. ಆ ಪೈಕಿ ‘ರಾಬರ್ಟ್’ ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರೊಂದಿಗೆ ದರ್ಶನ್ ಕಳೆದ ಮೂರು ವರ್ಷಗಳಿಂದ ವಿವಾದ ಮುಂದುವರಿಸುತ್ತಲೇ ಇದ್ದಾರೆ. 2021 ರಲ್ಲಿ ಇಬ್ಬರ ನಡುವಿನ ವಿವಾದ ಆರಂಭವಾಗಿತ್ತು. ಆಗ ತಮ್ಮ ಹೆಸರು ಬಳಸಿಕೊಂಡು ಉಮಾಪತಿ ಅವರು 25 ಕೋಟಿ ರೂಪಾಯಿ ಸಾಲ ಪಡೆದು ವಂಚನೆಗೆ ಯತ್ನಿಸಿದ್ದಾರೆ ಎಂದು ದರ್ಶನ್ ಆರೋಪಿಸಿದ್ದರು. ಆ ಬಗ್ಗೆ ಪೊಲೀಸ್ ದೂರು ಸಹ ದಾಖಲಿಸಿದ್ದರು. ಆದರೆ ಉಮಾಪತಿ ಆ ಆರೋಪವನ್ನು ತಳ್ಳಿ ಹಾಕಿದ್ದಲ್ಲದೆ, ತಮ್ಮ ಮತ್ತು ದರ್ಶನ್ ನಡುವಿನ ವ್ಯವಹಾರ ಕುರಿತ ಸಾಕ್ಷ್ಯಗಳನ್ನು ಬಿಡುಗಡೆ ಮಾಡಿದ್ದರು. ಈಗಲೂ ಈ ಇಬ್ಬರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಆರೋಪ, ಪ್ರತ್ಯಾರೋಪ, ಪರೋಕ್ಷ ಟಾಂಗ್ ಕೊಡುವುದು ಮುಂದುವರಿದಿದೆ.
ದಲಿತ ವ್ಯಕ್ತಿ ಮೇಲೆ ಹಲ್ಲೆ ಆರೋಪ
ಮೈಸೂರಿನ ಪ್ರಸಿದ್ಧ ಹೋಟೆಲ್ ಒಂದರಲ್ಲಿ ತಂಗಿದ್ದಾಗ ಅಲ್ಲಿನ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ ಆರೋಪ ಕೂಡ ದರ್ಶನ್ ವಿರುದ್ಧ ಕೇಳಿಬಂದಿತ್ತು. ನಿರ್ಮಾಪಕ ಸಂದೇಶ ನಾಗರಾಜ್ ಅವರಿಗೆ ಸೇರಿದ ಹೋಟೆಲ್ ಸಂದೇಶ್ ಪ್ರಿನ್ಸ್ನಲ್ಲಿ ಸಪ್ಲೈಯರ್ ಆಗಿದ್ದ ದಲಿತ ಯುವಕನ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ ಎಂದು ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅವರಿಗೆ ಆಪ್ತವಾಗಿದ್ದ ನಿರ್ಮಾಪಕ ಸಂದೇಶ್ ನಾಗರಾಜ್ ಅವರು ನಿರ್ದೇಶಕ ಇಂದ್ರಜಿತ್ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ಲೀಕ್ ಆಗಿತ್ತು. ಆಡಿಯೋನಲ್ಲಿ, ಸ್ವತಃ ಸಂದೇಶ್ ನಾಗರಾಜ್ ಅವರೇ, ತಮ್ಮ ಹೋಟೆಲ್ನಲ್ಲಿ ದರ್ಶನ್ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದಾಗಿ ಹೇಳಿಕೊಂಡಿದ್ದರು. ಪ್ರಕರಣದ ಸಂಬಂಧ ಪೊಲೀಸರು ಹೋಟೆಲ್ಗೆ ಹೋಗಿ ಪರಿಶೀಲನೆ ನಡೆಸಿದ್ದರು.
ವನ್ಯಜೀವಿ ಕಾಯ್ದೆ ಉಲ್ಲಂಘನೆ
ವನ್ಯಜೀವಿ ಕಾಯ್ದೆಯನ್ನು ಉಲ್ಲಂಘಿಸಿ ಕೆಲವು ಪಕ್ಷಿಗಳು ಮತ್ತು ಪ್ರಾಣಿಗಳನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿರುವ ಹಿನ್ನೆಲೆಯಲ್ಲಿ ನಟ ದರ್ಶನ್ ಅವರ ಮೈಸೂರಿನ ಫಾರಂ ಹೌಸ್ ಮೇಲೆ ದಾಳಿ ನಡೆಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಕಾನೂನು ಬಾಹಿರವಾಗಿ ಸಾಕುತ್ತಿದ್ದ ಬಾರ್ ಹೆಡೆಡ್ ಗೂಸ್(ಪಟ್ಟೆ ಬಾತುಕೋಳಿ) ಪಕ್ಷಿಗಳನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ದರ್ಶನ್ ವಿರುದ್ಧ ವನ್ಯಜೀವಿ ಕಾಯ್ದೆ ಉಲ್ಲಂಘನೆ ಪ್ರಕರಣ ಕೂಡ ದಾಖಲಾಗಿತ್ತು.
ಸಹ ನಟ ಶಿವಶಂಕರ್ ಮೇಲೆ ಹಲ್ಲೆ
ಪತ್ನಿ ಮೇಲಿನ ಹಲ್ಲೆ ಪ್ರಕರಣ ಮಾಸುವ ಮುನ್ನವೇ ನಟ ದರ್ಶನ್ ತಮ್ಮೊಂದಿಗೆ ನಟಿಸಿದ್ದ ಸಹನಟನ ಮೇಲೂ ಹಲ್ಲೆ ನಡೆಸಿ ವಿವಾದಕ್ಕೊಳಗಾಗಿದ್ದರು. 2019 ರಲ್ಲಿ ಬಿಡುಗಡೆ ಆದ ಅವರ ನಟನೆಯ ‘ಯಜಮಾನ’ ಸಿನಿಮಾದ ಚಿತ್ರೀಕರಣದ ವೇಳೆ ಸಹನಟ ಶಿವಶಂಕರ್ ಎಂಬುವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ವರದಿಯಾಗಿತ್ತು. ಸಿನಿಮಾದ ಹಾಡೊಂದರ ಶೂಟಿಂಗ್ ನಡೆಯಬೇಕಾದರೆ ಮೊಬೈಲ್ ನಲ್ಲಿ ರೆಕಾರ್ಡಿಂಗ್ ಮಾಡುತ್ತಿದ್ದರು ಎಂಬ ಕ್ಷುಲ್ಲಕ ಕಾರಣಕ್ಕೆ ದರ್ಶನ್, ತಮ್ಮ ಸಹ ನಟ ಶಿವಶಂಕರ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ದೂರು ದಾಖಲಾಗಿರಲಿಲ್ಲ.
ಜೆಟ್ಲ್ಯಾಗ್ ಪಬ್ ಪ್ರಕರಣ
ತಮ್ಮ ಇತ್ತೀಚಿನ ಸಿನಿಮಾ ‘ಕಾಟೇರ’ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಜೆಟ್ಲ್ಯಾಗ್ ಪಬ್ನಲ್ಲಿ ಹಮ್ಮಿಕೊಂಡಿದ್ದ ಪಾರ್ಟಿಯ ವಿಷಯದಲ್ಲೂ ನಟ ದರ್ಶನ್ ಕೇಸು ಮೈಮೇಲೆ ಎಳೆದುಕೊಂಡಿದ್ದಾರೆ.
ಸಿನಿಮಾದ ಸಂಭ್ರಮದಲ್ಲಿ ನಿಯಮ ಮೀರಿ ತಡರಾತ್ರಿಯವರೆಗೆ ಪಬ್ನಲ್ಲಿ ಪಾರ್ಟಿ ಮಾಡಿದ ವಿಷಯದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆ ಹಿನ್ನೆಲೆಯಲ್ಲಿ ದರ್ಶನ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿ, ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ಜೆಟ್ಲ್ಯಾಗ್ ಪಬ್ನಲ್ಲಿ ನಿಯಮ ಮೀರಿ ತಡರಾತ್ರಿ ವರೆಗೆ ಪಾರ್ಟಿ ಮಾಡಿದ್ದಾರೆಂದು ಆರೋಪಿಸಿ ನಟ ದರ್ಶನ್, ರಾಕ್ಲೈನ್ ವೆಂಕಟೇಶ್, ಡಾಲಿ ಧನಂಜಯ್, ಸತೀಶ್ ನೀನಾಸಂ ಮತ್ತಿತರರ ವಿರುದ್ಧ ದೂರು ದಾಖಲಾಗಿತ್ತು. ಕಳೆದ ಜನವರಿ 15 ರಂದು ದರ್ಶನ್ ಪ್ರಕರಣದ ಸಂಬಂಧ ಪೊಲೀಸ್ ಠಾಣೆಗೆ ವಿಚಾರಣೆ ಹಾಜರಾಗಿದ್ದರು.
ಹುಲಿ ಉಗುರು ಪ್ರಕರಣದಲ್ಲಿ ದಾಳಿ
ಬಿಗ್ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವರ್ತೂರು ಸಂತೋಷ್ ಎಂಬ ವ್ಯಕ್ತಿ ಹುಲಿ ಉಗುರು ಧರಿಸಿದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ ಬಳಿಕ ರಾಜ್ಯದಲ್ಲಿ ಹುಲಿ ಉಗುರು ಧರಿಸಿದ ಹಲವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ನಟ ದರ್ಶನ್, ಜಗ್ಗೇಶ್ ಸೇರಿದಂತೆ ಹಲವು ನಟರು ಸಂಕಷ್ಟಕ್ಕೆ ಸಿಲುಕಿದ್ದರು. ದರ್ಶನ್ ಕೂಡ ಹುಲಿ ಉಗುರು ಧರಿಸಿದ್ದರು ಎಂಬ ಹಿನ್ನೆಲೆಯಲ್ಲಿ ಅವರ ಮನೆಯ ಮೇಲೆ ದಾಳಿ ನಡೆದಿತ್ತು. ಆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ದರ್ಶನ್ರಿಂದ ಹುಲಿ ಉಗುರು ವಶಪಡಿಸಿಕೊಂಡಿದ್ದರು.
ಮಹಿಳಾ ನಿಂದನೆ ದೂರು ದಾಖಲು
ಮಹಿಳೆಯರ ವಿಷಯದಲ್ಲಿ ನಾಲಿಗೆ ಹರಿಬಿಟ್ಟು ಹಲವು ಬಾರಿ ನಟ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ಯಶಸ್ವಿ ಚಿತ್ರ ‘ಕಾಟೇರ’ದ ಸಕ್ಸಸ್ ಮೀಟ್ನಲ್ಲಿ ಕೂಡ ಯಾರನ್ನೋ ಉದ್ದೇಶಿಸಿ ಅಶ್ಲೀಲವಾಗಿ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಹಾಗೇ ಆ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದವು. ಆ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಮಹಿಳಾ ಸಂಘಟನೆಗಳು ದರ್ಶನ್ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿ ದೂರು ದಾಖಲಿಸಿದ್ದವು.
ಇಷ್ಟೇ ಅಲ್ಲದೆ, ವನ್ಯಜೀವಿ ವಲಯದಲ್ಲಿ ಅಕ್ರಮ ಪ್ರವೇಶ, ಮೃತ ದಸರಾ ಆನೆ ಅರ್ಜುನನ ಸಮಾಧಿ ಅಕ್ರಮ ನಿರ್ಮಾಣ, ಮಾಧ್ಯಮದವರ ವಿರುದ್ಧ ಹರಿಹಾಯ್ದು ನಿಷೇಧಕ್ಕೊಳಪಟ್ಟಿದ್ದು, ನಟ ಪುನೀತ್ ರಾಜ್ಕುಮಾರ್ ಬಗ್ಗೆ ಅವರ ನಿಧನದ ಬಳಿಕ ವಿವಾದಿತ ಹೇಳಿಕೆ ನೀಡಿದ್ದು, ಸಾಕು ನಾಯಿ ದಾಳಿಯಿಂದ ನೊಂದ ಮಹಿಳೆಯ ದೂರು, ಸೇರಿದಂತೆ ಸಾಲು ಸಾಲು ವಿವಾದಗಳು ನಟ ದರ್ಶನ್ ಅವರನ್ನು ಸುತ್ತಿಕೊಂಡಿವೆ.
ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ, ಕೃತ್ಯಗಳಿಂದ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ ದರ್ಶನ್ ಇದೀಗ ತಮ್ಮದೇ ಅಭಿಮಾನಿ ಯುವಕನೊಬ್ಬನನ್ನು ಕೊಲೆ ಮಾಡಿಸಿರುವ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ.