
ಮಹಿಳಾ ಕಾನ್‌ಸ್ಟೆಬಲ್ ಚಾಣಾಕ್ಷತನ; 29 ವರ್ಷದ ಬಳಿಕ ದಂಡುಪಾಳ್ಯ ಗ್ಯಾಂಗ್‌ನ ಆರೋಪಿ ಬಂಧನ
1997ರಲ್ಲಿ ಮಂಗಳೂರಿನ ಉರ್ವ ಮಾರಿಗುಡಿ ಕ್ರಾಸ್ ನಲ್ಲಿರುವ ಅನ್ವರ್ ಮಹಲ್ ಎಂಬ ಮನೆಗೆ ನುಗ್ಗಿದ್ದ ದಂಡುಪಾಳ್ಯ ಗ್ಯಾಂಗಿನ ಸದಸ್ಯರು, ಮನೆಯಲ್ಲಿದ್ದ ಲೂಯಿಸ್ ಡಿಮೆಲ್ಲೊ (80) ಮತ್ತು ಅವರ ಮೊಮ್ಮಗ ರಂಜಿತ್ ವೇಗಸ್ (19) ಎಂಬುವವರನ್ನು ಕ್ರೂರವಾಗಿ ಹತ್ಯೆ ಮಾಡಿದ್ದರು.
ಜೋಡಿ ಕೊಲೆ ಪ್ರಕರಣದಲ್ಲಿ ಮೂರು ದಶಕಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ 'ದಂಡುಪಾಳ್ಯ' ಗ್ಯಾಂಗ್‌ಗೆ ಸೇರಿದ ಆರೋಪಿಯನ್ನು ಮಂಗಳೂರಿನ ಉರ್ವ ಠಾಣೆಯ ಮಹಿಳಾ ಕಾನ್‌ಸ್ಟೆಬಲ್ ಲಲಿತಾ ಲಕ್ಷ್ಮಿ ಅವರು ಸಿನಿಮೀಯ ಶೈಲಿಯಲ್ಲಿ ತಂತ್ರ ಹೆಣೆದು ಬಲೆಗೆ ಕೆಡವಿದ್ದಾರೆ. ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಅಡಗಿದ್ದ ಆರೋಪಿ ಹನುಮಂತಪ್ಪ ಅಲಿಯಾಸ್ ಚಿಕ್ಕ ಹನುಮನನ್ನು 29 ವರ್ಷಗಳ ಬಳಿಕ ಖೆಡ್ಡಾಕ್ಕೆ ಕೆಡವಲಾಗಿದೆ.
ಪ್ರಕರಣದ ಹಿನ್ನೆಲೆ ಏನು?
1997ರಲ್ಲಿ ಮಂಗಳೂರಿನ ಉರ್ವ ಮಾರಿಗುಡಿ ಕ್ರಾಸ್ ನಲ್ಲಿರುವ ಅನ್ವರ್ ಮಹಲ್ ಎಂಬ ಮನೆಗೆ ನುಗ್ಗಿದ್ದ ದಂಡುಪಾಳ್ಯ ಗ್ಯಾಂಗಿನ ಸದಸ್ಯರು, ಮನೆಯಲ್ಲಿದ್ದ ಲೂಯಿಸ್ ಡಿಮೆಲ್ಲೊ (80) ಮತ್ತು ಅವರ ಮೊಮ್ಮಗ ರಂಜಿತ್ ವೇಗಸ್ (19) ಎಂಬುವವರನ್ನು ಕ್ರೂರವಾಗಿ ಹತ್ಯೆ ಮಾಡಿದ್ದರು. ಮನೆಯಲ್ಲಿದ್ದ ಅಪಾರ ಪ್ರಮಾಣದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಪ್ರಕರಣ ಇಡೀ ಕರಾವಳಿಯನ್ನೇ ಬೆಚ್ಚಿಬೀಳಿಸಿತ್ತು.
ಆಂಧ್ರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ
ಜೋಡಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಹಲವು ಆರೋಪಿಗಳನ್ನು ಬಂಧಿಸಿದ್ದರೂ ಆರನೇ ಆರೋಪಿ ಚಿಕ್ಕ ಹನುಮ ತಪ್ಪಿಸಿಕೊಂಡಿದ್ದ. ಪೊಲೀಸರ ಬಂಧನದಿಂದ ಪಾರಾಗಲು ತನ್ನ ಹೆಸರನ್ನು ಕೃಷ್ಣಪ್ಪ ಎಂದು ಬದಲಿಸಿಕೊಂಡಿದ್ದ. ಅಲ್ಲದೆ, ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಗ್ರಾಮದಲ್ಲಿ ಮದುವೆಯಾಗಿ, ಮೂವರು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದ. ಈತನ ವಿರುದ್ಧ 2010ರಲ್ಲಿ ಮಂಗಳೂರು ನ್ಯಾಯಾಲಯವು ದೀರ್ಘಾವಧಿಯಿಂದ ಬಾಕಿ ಉಳಿದ ಪ್ರಕರಣಎಂದು ಹೇಳಿ (Long Pending Case) ವಾರಂಟ್ ಹೊರಡಿಸಿತ್ತು.
ಮಹಿಳಾ ಕಾನ್‌ಸ್ಟೆಬಲ್ ತಂತ್ರಕ್ಕೆ ಸಿಕ್ಕಿಬಿದ್ದ ಆರೋಪಿ
ಜೋಡಿ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಉರ್ವ ಠಾಣೆಯ ಮಹಿಳಾ ಕಾನ್‌ಸ್ಟೆಬಲ್ ಲಲಿತಾ ಲಕ್ಷ್ಮಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ನ್ಯಾಯಾಲಯ ವಾರಂಟ್ ಹೊರಡಿಸಿದ ಬಳಿಕ ಲಲಿತಾ ಲಕ್ಷ್ಮಿ ಅವರು 29 ವರ್ಷಗಳ ಹಳೆಯ ಕೋರ್ಟ್ ದಾಖಲೆ ಮತ್ತು ಠಾಣೆಯಲ್ಲಿದ್ದ ಕಡತಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದರು.
ಆರೋಪಿಯು ಹೆಸರು ಬದಲಿಸಿಕೊಂಡಿರುವ ಸುಳಿವು ಸ್ವೀಕರಿಸಿದ ಲಲಿತಾ ಲಕ್ಷ್ಮಿ ಅವರು, ತಾಂತ್ರಿಕ ತಂಡದ ನೆರವಿನಿಂದ ಆರೋಪಿಯು ಆಂಧ್ರಪ್ರದೇಶದಲ್ಲಿ ಇದ್ದಾನೆಂಬುದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು. ನಿಖರ ಮಾಹಿತಿ ಮೇರೆಗೆ ಉರ್ವ ಠಾಣೆಯ ಇನ್ ಸ್ಪೆಕ್ಟರ್ ಶ್ಯಾಮ್ ಸುಂದರ್ ನೇತೃತ್ವದ ತಂಡ ಮದನಪಲ್ಲಿಗೆ ತೆರಳಿ ಆರೋಪಿಯನ್ನು ಸೆರೆಹಿಡಿದಿದೆ.
ಆರೋಪಿ ವಿರುದ್ಧ 13 ಕೊಲೆ ಪ್ರಕರಣ
ಬಂಧಿತ ಆರೋಪಿ ಚಿಕ್ಕ ಹನುಮನ ಮೇಲೆ ಕರ್ನಾಟಕದಲ್ಲಿ ಸುಮಾರು 13 ಕೊಲೆ ಮತ್ತು ದರೋಡೆ ಪ್ರಕರಣಗಳು ದಾಖಲಾಗಿವೆ. ಈತ ದಂಡುಪಾಳ್ಯ ಗ್ಯಾಂಗ್ನ ಪ್ರಮುಖ ಸದಸ್ಯ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ದಶಕಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕಾನ್ ಸ್ಟೆಬಲ್ ಲಲಿತಾ ಲಕ್ಷ್ಮಿ ಮತ್ತು ತಂಡಕ್ಕೆ ಮಂಗಳೂರು ಪೊಲೀಸ್ ಆಯುಕ್ತರು ಅಬಿನಂದನೆ ಸಲ್ಲಿಸಿದ್ದು, ಪುರಸ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ದಂಡುಪಾಳ್ಯ ಗ್ಯಾಂಗ್ ಇತಿಹಾಸ
ಕರ್ನಾಟಕ, ನೆರೆಹೊರೆಯ ರಾಜ್ಯಗಳಲ್ಲಿ 1990 ಮತ್ತು 2000 ರ ದಶಕದಲ್ಲಿ ಸರಣಿ ಕೊಲೆ, ದರೋಡೆ ಮತ್ತು ಅತ್ಯಾಚಾರಗಳ ಮೂಲಕ ಭೀತಿ ಹುಟ್ಟಿಸಿದ್ದ ದಂಡುಪಾಳ್ಯ ಗ್ಯಾಂಗ್ ನಿಂದ ಇಡೀ ಕರ್ನಾಟಕವೇ ಬೆಚ್ಚಿಬಿದ್ದಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ದಂಡುಪಾಳ್ಯ ಗ್ರಾಮಕ್ಕೆ ಸೇರಿದವರಾದ ಈ ಆರೋಪಿಗಳು ಒಂಟಿ ಮಹಿಳೆ ಹಾಗೂ ಮನೆಗಳನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದರು.
ದಂಡುಪಾಳ್ಯದ ಗ್ಯಾಂಗ್‌ನವರು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಗಂಟಲು ಸೀಳಿ ಕೊಲೆ ಮಾಡಿ, ಚಿನ್ನಾಭರಣ ದೋಚುತ್ತಿದ್ದರು. ಈ ಗ್ಯಾಂಗ್‌ನಲ್ಲಿ ಪುರುಷರು ಮತ್ತು ಮಹಿಳೆಯರು ಸೇರಿ ಸುಮಾರು 30ಕ್ಕೂ ಹೆಚ್ಚು ಸದಸ್ಯರಿದ್ದರು. ದಂಡುಪಾಳ್ಯ ಕೃಷ್ಣ, ಹನುಮ ಅಲಿಯಾಸ್ ಚಿಕ್ಕಹನುಮ, ಮುನಿಕೃಷ್ಣ ಮತ್ತು ದೊಡ್ಡ ಹನುಮ ಪ್ರಮುಖರು. ಈಗ ಚಿಕ್ಕ ಹನುಮನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

