
Untouchability| ದೇಗುಲ ಪ್ರವೇಶಿಸಿದ ದಲಿತರು | ಉತ್ಸವ ಮೂರ್ತಿ ಸ್ಥಳಾಂತರಿಸಿದ ಸವರ್ಣೀಯರು
ಅಸ್ಪೃಶ್ಯತೆ ನಿರ್ಮೂಲನೆಗೆ ಸರ್ಕಾರಗಳು ಏನೇ ಕ್ರಮ ಕೈಗೊಂಡರೂ ಸಮಾಜದಲ್ಲಿ ಅಸ್ಪೃಶ್ಯತೆ ಆಳವಾಗಿ ಬೇರೂರಿದೆ. ಇದಕ್ಕೆ ನಿದರ್ಶನ- ಮಂಡ್ಯ ಜಿಲ್ಲೆಯ ಹನಕೆರೆಯಲ್ಲಿ ದಲಿತರು ದೇಗುಲ ಪ್ರವೇಶಿಸಿದರೆಂದು ದೇವರ ಮೂರ್ತಿಯನ್ನೇ ಬೇರೆಡೆ ಸಾಗಿಸಲಾಗಿದೆ.
ರಾಜ್ಯದಲ್ಲಿ ಅಸ್ಪೃಶ್ಯತೆ ಇಂದಿಗೂ ಆಚರಣೆಯಲ್ಲಿದೆ. ಜಾತಿ ವ್ಯವಸ್ಥೆ ನಿರ್ಮೂಲನೆಗೆ ಸರ್ಕಾರಗಳು ಏನೇ ಕ್ರಮ ಕೈಗೊಂಡರೂ ಸಮಾಜದಲ್ಲಿ ಅಸ್ಪೃಶ್ಯತೆ ಆಳವಾಗಿ ಬೇರೂರಿದೆ. ಇದಕ್ಕೆ ನಿದರ್ಶನವೆಂಬಂತೆ ಮಂಡ್ಯ ಜಿಲ್ಲೆಯ ಹನಕೆರೆಯಲ್ಲಿ ದಲಿತರು ದೇಗುಲ ಪ್ರವೇಶಿಸಿದರೆಂದು ದೇವರ ಉತ್ಸವ ಮೂರ್ತಿಯನ್ನೇ ಸವರ್ಣೀಯರು ಬೇರೆಡೆ ಸಾಗಿಸಿದ್ದಾರೆ.
ಹನಕೆರೆ ಗ್ರಾಮದ ಕಾಲಭೈರವೇಶ್ವರ ಸ್ವಾಮಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ. ಇಲ್ಲಿ ಈ ಹಿಂದಿನಿಂದಲೂ ದಲಿತರಿಗೆ ದೇಗುಲ ಪ್ರವೇಶ ನಿರಾಕರಿಸಲಾಗಿತ್ತು. ಭಾನುವಾರ ದಲಿತ ಸಮುದಾಯದ ಕೆಲ ಯುವಕರು ದೇಗುಲ ಪ್ರವೇಶಕ್ಕೆ ಅವಕಾಶ ನೀಡುವಂತೆ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ದಲಿತರು ಮತ್ತು ಸವರ್ಣಿಯರ ಮಧ್ಯೆ ಶಾಂತಿ ಸಭೆ ನಡೆಸಿ, ದಲಿತರ ದೇಗುಲ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದರು.
ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಸವರ್ಣೀಯರ ಗುಂಪು ದೇವಾಲಯದ ಉತ್ಸವ ಮೂರ್ತಿಯನ್ನೇ ಬೇರೆಡೆ ಸಾಗಿಸಿ, ದಲಿತರು ಪ್ರವೇಶಿಸಿರುವ ಈ ದೇವಾಲಯವೇ ಬೇಡ ಎಂದು ಹೇಳಿದ್ದರು. ಅಲ್ಲದೇ ದೇವಸ್ಥಾನದ ನಾಮಫಲಕ ಹೊಡೆದು ಹಾಕಿದ್ದರು.
ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ತಹಶೀಲ್ದಾರ್ ಶಿವಕುಮಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದಲಿಂಗೇಶ್ ಹಾಗೂ ಮಾಜಿ ಶಾಸಕ ಎಂ. ಶ್ರೀನಿವಾಸ್ ನೇತೃತ್ವದಲ್ಲಿ ಸಭೆ ನಡೆಸಿ, ಸಮಸ್ಯೆ ಬಗೆಹರಿಸಲಾಯಿತು.
ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ಮಾತನಾಡಿ, ದಲಿತರ ದೇಗುಲ ಪ್ರವೇಶಕ್ಕೆ ಬಹುತೇಕ ಸವರ್ಣೀಯ ಮುಖಂಡರು ಒಪ್ಪಿಗೆ ನೀಡಿದ್ದಾರೆ. ಯಾವುದೇ ಮುಜರಾಯಿ ಇಲಾಖೆ ವ್ಯಾಪ್ತಿಯ ದೇಗುಲಗಳಲ್ಲಿ ಜಾತಿ ತಾರತಮ್ಯ ಮಾಡುವಂತಿಲ್ಲ ಎಂದು ತಿಳಿಸಿದರು.
ಇನ್ನು ಹನಕೆರೆ ಕಾಲಭೈರವೇಶ್ವರ ದೇಗುಲದ ಗಲಭೆಗೆ ಸೋಮವಾರ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಮುಜರಾಯಿ ಇಲಾಖೆಗೆ ಸೇರಿದ ಯಾವುದೇ ಜಾತಿ ಬೇಧ ಮಾಡುವಂತಿಲ್ಲ. ಈಗ ಕಾಲ ಬದಲಾಗುತ್ತಿದೆ. ಎಲ್ಲರಿಗೂ ದೇವರು ಒಬ್ಬನೇ. ಬದಲಾಗುತ್ತಿರುವ ಸಮಾಜವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಗಲಭೆಗೆ ಕುರಿತಂತೆ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಇಂತಹ ಘಟನೆ ಮರು ಕಳುಹಿಸುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಅಲ್ಲಲ್ಲಿ ದಲಿತರ ದೇಗುಲ ಪ್ರವೇಶ ವಿಚಾರವಾಗಿ ಗಲಾಟೆಗಳು ನಡೆಯುತ್ತಲೇ ಇವೆ. ಈಚೆಗೆ ದೊಡ್ಡಬಳ್ಳಾಪುರ ತಾಲೂಕಿನ ಮಲ್ಲತಹಳ್ಳಿ ಗ್ರಾಮದಲ್ಲಿ ದಲಿತರ ದೇಗುಲ ಪ್ರವೇಶಕ್ಕೆ ಸವರ್ಣೀಯರು ವಿರೋಧ ವ್ಯಕ್ತಪಡಿಸಿ, ಗಲಾಟೆ ಮಾಡಿದ್ದರು. ಆಗ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಹಾಗೂ ಪೊಲೀಸ್ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಸಂಧಾನ ಸಭೆ ನಡೆಸಿ, ಸಮಸ್ಯೆ ಇತ್ಯರ್ಥ ಮಾಡಿದ್ದರು.
ಅದೇ ರೀತಿ ಇತ್ತೀಚೆಗೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೂನೂರು ಗ್ರಾಮದಲ್ಲಿ ಬಸವೇಶ್ವರ ಹಾಗೂ ಮಾರಮ್ಮ ದೇವಿ ದೇವಾಲಯಗಳಿಗೆ ದಲಿತರ ಪ್ರವೇಶ ನಿರಾಕರಿಸಿದ್ದರಿಂದ ಘರ್ಷಣೆ ನಡೆದಿತ್ತು. ಪೊಲೀಸರು ಶಾಂತಿ ಸಭೆ ನಡೆಸಿ, ವಿವಾದ ಬಗೆಹರಿಸಿದ್ದರು.