ಗೃಹ ಸಚಿವ ಪರಮೇಶ್ವರ  ಸಂಸ್ಥೆಗಳಿಗೆ ಇಡಿ ದಾಳಿ: ಕಾಂಗ್ರೆಸ್‌ ʼಮಹಾನಾಯಕʼನ ಷಡ್ಯಂತ್ರ; ದಲಿತ ಮುಖಂಡರಿಂದ ಗಂಭೀರ ಆರೋಪ
x

ಗೃಹ ಸಚಿವ ಪರಮೇಶ್ವರ ಸಂಸ್ಥೆಗಳಿಗೆ ಇಡಿ ದಾಳಿ: ಕಾಂಗ್ರೆಸ್‌ ʼಮಹಾನಾಯಕʼನ ಷಡ್ಯಂತ್ರ; ದಲಿತ ಮುಖಂಡರಿಂದ ಗಂಭೀರ ಆರೋಪ

ಡಿಸೆಂಬರ್ ಗೆ ಸಿದ್ದರಾಮಯ್ಯ ಅವರ ಅಧಿಕಾರ ಅವಧಿ ಮುಗಿಯಲಿದೆ. ಎಲ್ಲಿ ದಲಿತ ಮುಖಂಡ ಜಿ. ಪರಮೇಶ್ವರ್ ಸಿಎಂ ಆಗುತ್ತಾರೆ ಎಂಬ ಕಾರಣಕ್ಕೆ ಕಾಂಗ್ರೆಸ್‌ನ ʼಮಹಾನಾಯಕʼ ಕುತಂತ್ರ ಮಾಡಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.


ಗೃಹ ಸಚಿವ ಡಾ.ಜಿ.ಪರಮೇಶ್ವರ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ ಜಾರಿ ನಿರ್ದೇಶನಾಲಯದ (ಇಡಿ) ದಾಳಿಯಲ್ಲಿ 'ಕಾಂಗ್ರೆಸ್‌ ಪಕ್ಷದ ಮಹಾ ನಾಯಕ ಇದ್ದಾರೆ' ಎಂದು ದಲಿತ ಸಂಘಟನೆಗಳ ಒಕ್ಕೂಟ ಮಾಡಿರುವ ಗಂಭೀರ ಆರೋಪ ಮಾಡಿವೆ.

ಸೋಮವಾರ ದಲಿತ ಸಂಘಟನೆಗಳ ಒಕ್ಕೂಟದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಲಿತ ಮುಖಂಡರು, ಡಾ. ಜಿ. ಪರಮೇಶ್ವರ ಅವರು ಸಿದ್ದರಾಮಯ್ಯ ಬಳಿಕ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ. ಅದನ್ನು ತಪ್ಪಿಸಲು ಕಾಂಗ್ರೆಸ್‌ನ ಕೆಲವು ಮುಖಂಡರೇ ಈ ದಾಳಿ ಹಿಂದೆ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ದಲಿತ ಸಂಘರ್ಷ ಸಮಿತಿಯ (ಬೀಮಾವಾದ) ಆರ್. ಮೋಹನ್ ರಾಜ್ ಮಾತನಾಡಿ, "ಪರಮೇಶ್ವರ್ ವಿರುದ್ಧ ಕಾಂಗ್ರೆಸ್ ಮುಖಂಡರ ಕೈವಾಡ ಇದೆ. ಅವರು ದುಬೈನಿಂದ ಬರುವ ಮಾಹಿತಿಯನ್ನು ಕಾಂಗ್ರೆಸ್ ಮುಖಂಡರೇ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ದಲಿತರನ್ನು ಸಿಎಂ ಮಾಡಬಾರದು ಎಂದು ಹಲವು ಬಾರಿ ಅಡ್ಡಿಪಡಿಸಿದ್ದಾರೆ," ಎಂದು ಆರೋಪ ಮಾಡಿದ್ದಾರೆ.

"ಪರಮೇಶ್ವರ್ ಅವರು ಸಿಎಂ ಆಗುವುದನ್ನು ತಪ್ಪಿಸಲು ಕಾಂಗ್ರೆಸ್ ಮುಖಂಡರೇ ಷಡ್ಯಂತ್ರಮಾಡಿದ್ದಾರೆ. ಇಡಿ ದಾಳಿಯ ಹಿಂದೆ ಕಾಂಗ್ರೆಸ್ ನವರ ಕುತಂತ್ರ ಇದೆ. ಡಿಸೆಂಬರ್ ಗೆ ಸಿದ್ದರಾಮಯ್ಯ ಅವರ ಅಧಿಕಾರ ಅವಧಿ ಮುಗಿಯಲಿದೆ. ಎಲ್ಲಿ ಪರಮೇಶ್ವರ್ ಸಿಎಂ ಆಗುತ್ತಾರೆ ಎಂದು ಕಾಂಗ್ರೆಸ್ ನವರು ಕುತಂತ್ರ ಮಾಡಿದ್ದಾರೆ," ಎಂದು ಮೋಹನರಾಜ್‌ ಆಪಾದಿಸಿದರು." ಪರಮೇಶ್ವರ್ ಸಿಎಂ ಆಗುವುದನ್ನು ತಪ್ಪಿಸಲು ಸ್ವಪಕ್ಷೀಯರೇ ಹುನ್ನಾರ ನಡೆಸಿದ್ದಾರೆ. ಅದರಲ್ಲಿ ʼಮಹಾನ್ ನಾಯಕನʼ ಕುತಂತ್ರ ಇದೆ ಎಂದು ಗಂಭೀರವಾಗಿ ಆರೋಪಿಸಿದರು. ಜತೆಗೆ, "ಆ ಮಹಾನ್ ನಾಯಕ ಯಾರೂ ಎಂದು ಗೊತ್ತಿದೆ," ಎಂದರು. ಆದರೆ, ಆ ʼಮಾಹಾನಾಯಕʼನ ಹೆಸರು ಹೇಳಲು ನಿರಾಕರಿಸಿದರು.

ಒಕ್ಕೂಟದ ಅಧ್ಯಕ್ಷ ಡಾ. ಎಂ. ವೆಂಕಟಸ್ವಾಮಿ ಮಾತನಾಡಿ, "ಪರಮೇಶ್ವರ್ ಅವರನ್ನು ಟಾರ್ಗೆಟ್ ಮಾಡಲಾಗಿದೆ.

ಮುಂದಿನ ಮುಖ್ಯಮಂತ್ರಿಯಾಗಬಾರದು ಎಂದು ಟಾರ್ಗೆಟ್‌ ಮಾಡಿ ಇಡಿ ದಾಳಿ ನಡೆಸಲಾಗಿದೆ," ಎಂದರು.

ದಲಿತ ಸಂಘರ್ಷ ಸಮಿತಿಯ ಎನ್ ‌.ಮೂರ್ತಿ ಮಾತನಾಡಿ, ಪರಮೇಶ್ವರ್ ಅವರು ಸಿಎಂ ಆಗಲು ತಪ್ಪಿಸಲು ಈ ಷಡ್ಯಂತ್ರ ನಡೆಸಲಾಗಿದ್ದು, ಈ ಸಂಬಂಧ ದಲಿತ ಸಂಘಟನೆಗಳಿಂದ ಹೋರಾಟ ಮಾಡಲಾಗುವುದು ಎಂದರು.

ಮಹಾನಾಯಕ

ಪರಮೇಶ್ವರ್ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ ಇಡಿ ದಾಳಿಯಲ್ಲಿ ಮಹಾನಾಯಕನ ಕೈವಾಡವಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೂಡ ಆರೋಪಿಸಿದ್ದರು. ಹಾಗಾಗಿ ದಲಿತ ಸಂಘಟನೆಗಳ ಪತ್ರಿಕಾಗೋಷ್ಠಿ ಮಹತ್ವ ಪಡೆದುಕೊಂಡಿದೆ.

ಪರಮೇಶ್ವರ್ ಅವರನ್ನು ರಾಜಕೀಯವಾಗಿ ಹಣಿಯಲು ಕಾಂಗ್ರೆಸ್‌ ಪಕ್ಷದ ಮಹಾನಾಯಕರೊಬ್ಬರು ಇಡಿಗೆ ಮಾಹಿತಿ ನೀಡಿದ್ದಾರೆ. ಸಿಎಂ ಆಗಲು ಹೊರಟಿರುವ ಆ ನಾಯಕನ ಕುತಂತ್ರದ ಭಾಗವೇ ಇಡಿ ದಾಳಿಯಾಗಿದೆ ಎಂದು ಕುಮಾರಸ್ವಾಮಿ ಅವರು ಹೆಸರು ಹೇಳದೆ ಕಿಡಿ ಕಾರಿದ್ದರು.

ಕುಮಾರಸ್ವಾಮಿ ಆರೋಪದ ಕುರಿತು ಪ್ರತಿಕ್ರಿಯಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌, ಕುಮಾರಸ್ವಾಮಿ ಅವರು ಯಾವುದನ್ನೂ ಸ್ಪಷ್ಟವಾಗಿ ಹೇಳುವುದಿಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿ ಇರಲು ಸುಮ್ಮನೆ ಏನೇನೋ ಹೇಳುತ್ತಿರುತ್ತಾರೆ. ಮಹಾನಾಯಕನ ಕುರಿತು ಮಾಹಿತಿ ಇದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದರು. ಪ್ರತಿಬಾರಿ ಆರೋಪ ಮಾಡಿದಾಗ ಸೂಕ್ತ ಸಮಯ ಬರಲಿ ಎನ್ನುತ್ತಾರೆ. ಅವರಿಗೆ ಮಾಹಿತಿ ಬಹಿರಂಗಪಡಿಸುವ ಸೂಕ್ತ ಸಮಯವೇ ಬಂದಿಲ್ಲ ಎನಿಸುತ್ತದೆ. ಸಮಯ ಬಂದಾಗಲೂ ಶೇಕಡಾ 1 ರಷ್ಟು ಕೂಡ ಹೊಸ ವಿಷಯ ಇರುವುದಿಲ್ಲ ಎಂದು ವ್ಯಂಗ್ಯವಾಡಿದ್ದರು.

ಡಿ.ಕೆ. ಶಿವಕುಮಾರ್‌ ವಿವಾದ

ಅಕ್ರಮ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದ ಆರೋಪಿ ರನ್ಯಾ ರಾವ್‌ಗೆ ಪರಮೇಶ್ವರ್ ಶಿಕ್ಷಣ ಸಂಸ್ಥೆಗಳಿಂದ 40 ಲಕ್ಷ ರೂ. ಸಂದಾಯವಾದ ಆರೋಪ ಮೇಲೆ ಇಡಿ ದಾಳಿ ನಡೆಸಿತ್ತು . ಇಡಿ ದಾಳಿಯ ಎರಡನೇ ದಿನವೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪರಮೇಶ್ವರ್ ಮನೆಗೆ ಭೇಟಿ ನೀಡಿದ ಮಾತುಕತೆ ನಡೆಸಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಪರಮೇಶ್ವರ್ ಅವರು ರನ್ಯಾ ರಾವ್ ಅವರಿಗೆ 15 ರಿಂದ 25ಲಕ್ಷ ಉಡುಗೊರೆ ನೀಡಿರಬಹುದು ಎಂದು ಹೇಳುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದರು.

ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ಕಾಂಗ್ರೆಸ್ ಪಕ್ಷ ಪರಮೇಶ್ವರ್ ಅವರ ಬೆಂಬಲಕ್ಕೆ ನಿಲ್ಲುವುದಾಗಿ ಘೋಷಿಸಿತ್ತು. ಡಿಕೆಶಿ ಅವರ ಹೇಳಿಕೆ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿತ್ತು.

Read More
Next Story