
ದಲಿತರ ಹಣ ಗ್ಯಾರಂಟಿಗೆ| ಬಿಜೆಪಿಯಿಂದ ಹೋರಾಟ: ವಿಜಯೇಂದ್ರ
ಸಿದ್ದರಾಮಯ್ಯನವರ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರವು ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ವರ್ಗಾವಣೆ ಮಾಡಿ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ.
ಬೆಂಗಳೂರು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ತಮ್ಮ ನೇತೃತ್ವದಲ್ಲಿ ಆರಂಭವಾದ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಉದ್ಘಾಟನೆ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಜ್ಯ ಸರಕಾರವು ಒಂದೆಡೆ ಎಸ್‍ಟಿ ಅಭಿವೃದ್ಧಿ ನಿಗಮ, ಎಸ್‍ಇಪಿ ಟಿಎಸ್‍ಪಿಗಳಲ್ಲಿ ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ವರ್ಗಾಯಿಸಿದೆ. ಮತ್ತೊಂದು ಕಡೆ ವಾಲ್ಮೀಕಿ ನಿಗಮದಲ್ಲಿ ದಲಿತರಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿ ಲೋಕಸಭಾ ಚುನಾವಣೆಯಲ್ಲಿ ದುರ್ಬಳಕೆ ಮಾಡಿಕೊಂಡಿದೆ. ಇವುಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿ ಹೋರಾಟ ಮಾಡುತ್ತಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ದಲಿತರಿಗೆ ಮೀಸಲಿಟ್ಟ 12 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ತದನಂತರ ಕೂಡ ಸುಮಾರು ಅಷ್ಟೇ ಮೊತ್ತ ವರ್ಗಾಯಿಸಿದ್ದಾರೆ. ಒಟ್ಟಾಗಿ 24,500 ಕೋಟಿ ಮೊತ್ತವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಈ ಕುರಿತು ದೆಹಲಿಯಿಂದ ಬಂದ ಪತ್ರಕ್ಕೆ ಸರಕಾರ ಉತ್ತರ ಕೊಡಬೇಕಿದೆ ಎಂದು ವಿವರಿಸಿದರು.
ಇದನ್ನು ದಲಿತರಿಗೇ ಬಳಸಿದ್ದೇವೆ; ದುರುಪಯೋಗ ಆಗಿಲ್ಲ ಎಂದಿದ್ದಾರೆ. ರಾಜ್ಯ ಸರಕಾರವು ದಲಿತರಿಗೆ ಅನ್ಯಾಯ ಮಾಡಿದೆ. ಇದು ಅಕ್ಷಮ್ಯ ಅಪರಾಧ. ಬಿಜೆಪಿ, ಸದನದ ಒಳಗೆ ಮತ್ತು ಹೊರಗೆ ಇದರ ವಿರುದ್ಧ ಹೋರಾಟ ಮುಂದುವರೆಸಲಿದೆ ಎಂದು ಅವರು ತಿಳಿಸಿದರು.
ಸಿದ್ದರಾಮಯ್ಯನವರು ಅಹಿಂದ ನಾಯಕರು ಎಂದು ಹೇಳಿಕೊಂಡು ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುತ್ತಾರೆ. ದಲಿತರ ಉದ್ಧಾರಕರು ಎಂದು ಹೇಳಿ, ತಾವೇ ದಲಿತರ ಉದ್ಧಾರ ಮಾಡಿರುವುದಾಗಿ ತಮ್ಮ ಬಗ್ಗೆ ತಾವು ಕೊಚ್ಚಿಕೊಳ್ಳುತ್ತಾರೆ ಎಂದು ಟೀಕಿಸಿದರು.