
ಜಿ. ಪರಮೇಶ್ವರ್
ಸಿಎಂ ಸ್ಥಾನದ ಮೇಲೆ ಗೃಹ ಸಚಿವರ ಕಣ್ಣು; ಹೊಸ ವರ್ಷವೇ ಬಾಂಬ್ ಸಿಡಿಸಿದ ಪರಮೇಶ್ವರ್
ಈಚೆಗೆ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆದಿದ್ದಾಗಲೂ ಪರಮೇಶ್ವರ್ ಬೆಂಬಲಿಗರು ಭಿತ್ತಿಪತ್ರಗಳನ್ನು ಹಿಡಿದು, ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್ ತಾತ್ಕಾಲಿಕವಾಗಿ ಬ್ರೇಕ್ ಹಾಕಿದರೂ ʼಸಿಎಂ ಸ್ಥಾನʼದ ರೇಸ್ ನಿಂತಿಲ್ಲ.
ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅದಕ್ಕಾಗಿ ಶತಾಯ ಗತಾಯ ಪ್ರಯತ್ನ ಮುಂದುವರಿಸಿರುವಾಗಲೇ ದಲಿತ ಸಿಎಂ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೊಸ ವರ್ಷದ ಆರಂಭದಲ್ಲೇ ಸಿಎಂ ಸ್ಥಾನದ ಆಸೆ ವ್ಯಕ್ತಪಡಿಸಿ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಜಕೀಯ ಪದೋನ್ನತಿ ಬಗ್ಗೆ ಬೆಂಗಳೂರಿನಲ್ಲಿ ಗುರುವಾರ ಪ್ರತಿಕ್ರಿಯೆ ನೀಡಿದ ಅವರು, ನನಗೂ ಕೂಡ ಎಲ್ಲರಿಗೂ ಇರುವಂತೆ ಆಸೆ, ಉದ್ದೇಶ ಇದೆ. ನಾನು ಆಶಾವಾದಿಯಾಗಿಯೇ ಇಲ್ಲಿಯವರೆಗೂ ಬದುಕಿದ್ದೇನೆ. ಜೀವನದಲ್ಲಿ ಎಲ್ಲರಿಗೂ ಏನೇನೊ ಆಗಬೇಕು ಎಂಬುದು ಇರುತ್ತದೆ. ನನಗೂ ಎಲ್ಲರ ರೀತಿಯೇ ಗುರಿ ಇದೆ. ನಾನು ರಾಜಕೀಯಕ್ಕೆ ಸೇರುವಾಗ ಶಾಸಕನಾಗಬೇಕು, ಮಂತ್ರಿಯಾಗಬೇಕು ಅಂದುಕೊಂಡಿದ್ದೆ. ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಹೋಗಬೇಕು ಅನ್ನಿಸುತ್ತದೆ. ಸಿಎಂ ಆಗಬೇಕೆಂಬ ಅಭಿಲಾಷೆಯೂ ಇದೆ ಎಂದು ತಿಳಿಸಿದರು.
ಹೈಕಮಾಂಡ್ ನಿರ್ಧಾರ ಅಂತಿಮ
ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಪ್ರಶ್ನೆಗೆ ನೇರವಾಗಿ ಉತ್ತರ ನೀಡದ ಅವರು, ಇದೆಲ್ಲವೂ ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
“ವಾತಾವರಣ ಯಾರಿಗೆ ಪೂರಕವಾಗಿದೆ, ಯಾರಿಗೆ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ನಾನು ಬದ್ಧ” ಎಂದು ಹೇಳಿದರು.
ಕಾಂಗ್ರೆಸ್ ಒಳರಾಜಕೀಯದಲ್ಲಿ ಮಹತ್ವದ ಹೇಳಿಕೆ
ಡಾ.ಜಿ. ಪರಮೇಶ್ವರ್ ಅವರ ಈ ಹೇಳಿಕೆ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಮಹತ್ವದ ಬೆಳವಣಿಗೆ ಎಂದೇ ಪರಿಗಣಿಸಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಕುರಿತ ಸಮರ ನಡೆಯುತ್ತಿದೆ. ಈ ಹೊತ್ತಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ದಲಿತ ನಾಯಕತ್ವದ ಚರ್ಚೆ
ಪಕ್ಷದೊಳಗೆ ದಲಿತ ನಾಯಕತ್ವದ ವಿಚಾರ ಈ ಹಿಂದಿನಿಂದಲೂ ಚರ್ಚೆಯಾಗುತ್ತಿದೆ. ಅನುಭವಿ ರಾಜಕಾರಣಿಯೂ ಆಗಿರುವ ಪರಮೇಶ್ವರ್ ಅವರ ಹೆಸರು ಹಲವು ಬಾರಿ ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬಂದಿದೆ.
ಈಚೆಗೆ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆದಿದ್ದಾಗಲೂ ಪರಮೇಶ್ವರ್ ಬೆಂಬಲಿಗರು ಭಿತ್ತಿಪತ್ರಗಳನ್ನು ಹಿಡಿದು, ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಈಗ ಹೊಸ ವರ್ಷದ ಆರಂಭದಲ್ಲೇ ದಲಿತ ನಾಯಕತ್ವದ ಬೇಡಿಕೆ ಇಟ್ಟಿರುವುದು, ಇದು ಬಲಗೊಳ್ಳುವ ಸಾಧ್ಯತೆ ಇದೆ.

