Coastal Tension | ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ; ಅಲ್ಲಲ್ಲಿ ಚೂರಿ ಇರಿತ, ಕಲ್ಲು ತೂರಾಟ, ಸಮಗ್ರ ತನಿಖೆಗೆ ಮುಖ್ಯಮಂತ್ರಿ ಸೂಚನೆ
x

Coastal Tension | ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ; ಅಲ್ಲಲ್ಲಿ ಚೂರಿ ಇರಿತ, ಕಲ್ಲು ತೂರಾಟ, ಸಮಗ್ರ ತನಿಖೆಗೆ ಮುಖ್ಯಮಂತ್ರಿ ಸೂಚನೆ

ಶುಕ್ರವಾರ ನಿಗದಿಯಾಗಿದ್ದ ಪಿ.ಯು. ಗಣಿತ ಪರೀಕ್ಷೆ-2ಕ್ಕೆ ಹಾಜರಾಗಲು ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ. ಅದೇ ರೀತಿ ರಾಜೀವ ಗಾಂಧಿ ಆರೋಗ್ಯ ಬಿ ಫಾರ್ಮಾ ಸೆಮಿಸ್ಟರ್ ಪರೀಕ್ಷೆ ಶುಕ್ರವಾರ ನಿಗದಿಯಾಗಿದ್ದು ಅವರಿಗೂ ತೊಂದರೆಯಾಗಿದೆ.


ರೌಡಿಶೀಟರ್ ಮತ್ತು ಹಿಂದೂಪರ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಹತ್ಯೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗದಳ ಸಂಘಟನೆಗಳು ಕರೆ ನೀಡಿದ್ದ ದಕ್ಷಿಣ ಕನ್ನಡ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಬಂದ್‌ನಿಂದಾಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಅದೇ ರೀತಿ ಅಂಗಡಿಗಳು ಬಹುತೇಕ ಮುಚ್ಚಿದೆ. ಆದರೆ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಈ ಅನಿರೀಕ್ಷಿತ ಪರಿಸ್ಥಿತಿಯಿಂದ ತೀವ್ರ ತೊಂದರೆ ಎದುರಿಸಿದ್ದಾರೆ.

ಬಸ್‌ಗಳ ಮೇಲೆ ಕಲ್ಲು ತೂರಾಟ

ಬೆಂಗಳೂರಿನಿಂದ ರಾತ್ರಿ ಹೊರಡು ಮಂಗಳೂರಿಗೆ ಬಂದ ನಾಲ್ಕು ಬಸ್‌ಗಳ ಮೇಲೆ ಕಿಡಿಗೇಡಿಗಳು ನಸುಕಿನಲ್ಲಿ ಕಲ್ಲು ಎಸೆದ ಘಟನೆ ನಡೆದಿದೆ. ಪಂಪ್‌ವೆಲ್ ಬಳಿ ನಡೆದ ಈ ದಾಳಿಯಲ್ಲಿ ಬಸ್‌ಗಳ ಗಾಜುಗಳು ಒಡೆದುಹೋಗಿವೆಯಾದರೂ, ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಈ ಘಟನೆಯ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತನ್ನ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದೆ. "ಪಂಪ್‌ವೆಲ್ ಬಳಿ ನಾಲ್ಕು ಬಸ್‌ಗಳ ಮೇಲೆ ಕಲ್ಲು ಎಸೆದು ಗಾಜುಗಳು ಒಡೆದಿವೆ. ಪ್ರಯಾಣಿಕರ ಸುರಕ್ಷತೆಗಾಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ," ಎಂದು ಕೆಎಸ್​ಆರ್​​ಟಿಸಿ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಕ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ. ಅದೇ ರೀತಿ ಹಂಪನಕಟ್ಟೆಯ ಬಳಿ ಖಾಸಗಿ ಬಸ್​ ಒಂದರ ಮೇಲೂ ಕಲ್ಲು ತೂರಾಟ ನಡೆದಿದೆ.

ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಸ್ಯೆ

ಶುಕ್ರವಾರ ನಿಗದಿಯಾಗಿದ್ದ ಪಿ.ಯು. ಗಣಿತ ಪರೀಕ್ಷೆ-2ಕ್ಕೆ ಹಾಜರಾಗಲು ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ. ಅದೇ ರೀತಿ ರಾಜೀವ ಗಾಂಧಿ ಆರೋಗ್ಯ ಬಿ ಫಾರ್ಮಾ ಸೆಮಿಸ್ಟರ್ ಪರೀಕ್ಷೆ ಶುಕ್ರವಾರ ನಿಗದಿಯಾಗಿದ್ದು ಅವರಿಗೂ ತೊಂದರೆಯಾಗಿದೆ.

ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಸಾಧ್ಯವಾಗದೇ ಅನೇಕ ವಿದ್ಯಾರ್ಥಿಗಳು ಪರದಾಡಿದರು. ಬಂದ್‌ನಿಂದಾಗಿ ಸಾರ್ವಜನಿಕ ಸಾರಿಗೆ ಸಂಪೂರ್ಣವಾಗಿ ಬಂದ್ ಆಗಿದ್ದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ತೀವ್ರ ತೊಂದರೆ ಅನುಭವಿಸಿದ್ದಾರೆ.

ನಗರದಲ್ಲಿ ಜನಸಂಚಾರ ವಿರಳ

ಮಂಗಳೂರಿನಲ್ಲಿ ಬಹುತೇಕ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಮುಚ್ಚಿರುವುದರಿಂದ ಜನಸಂಚಾರ ವಿರಳವಾಗಿದೆ. ರಸ್ತೆಗಳಲ್ಲಿ ಜನರ ಸಂಚಾರವಿಲ್ಲದೇ ಬಿಕೋ ಎಂಬಂತೆ ಕಾಣುತ್ತಿದೆ. ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳು ಸಂಪೂರ್ಣ ಸ್ಥಬ್ದವಾಗಿವೆ. ಪೊಲೀಸರು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಿದ್ದಾರೆ.

ಸುಹಾಸ್ ಶೆಟ್ಟಿಯ ಹತ್ಯೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವಿಎಚ್​ಪಿ ಮತ್ತು ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ನಗರದಾದ್ಯಂತ ಹೆಚ್ಚಿನ ಪೊಲೀಸ್ ಬಂದೂಬಸ್ತ್​ ಜಾರಿಗೊಳಿಸಿದ್ದಾರೆ.

ಮೇ 5ರ ವರೆಗೆ ಸೆಕ್ಷನ್​ 144 ಜಾರಿ

ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಮಂಗಳೂರು ಕಮಿಷನರೇಟ್ ವ್ಯಾಪ್ತಿಗೆ ಸೀಮಿತವಾಗಿ ಜಾರಿಗೊಳಿಸಲಾಗಿದ್ದ ನಿಷೇಧಾಜ್ಞೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿಸ್ತರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಇದೇ 5ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ಎಂ.ಪಿ. ಅವರು ಆದೇಶ ಹೊರಡಿಸಿದ್ದಾರೆ.

Live Updates

  • 2 May 2025 4:49 PM IST

    ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಅಂತ್ಯಕ್ರಿಯೆ

    ಮಂಗಳೂರಿನಲ್ಲಿ ಗುರುವಾರ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿಯನ್ನ ನಡುರಸ್ತೆಯಲ್ಲೇ ಬರ್ಬರವಾಗಿ ತಲವಾರ್‌ನಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಇದೀಗ ಸುಹಾಸ್‌ ಪ್ರಾರ್ಥಿವ ಶರೀರವನ್ನು ಸ್ವಗ್ರಹಕ್ಕೆ ತಂದು ಅಂತ್ಯಸಂಸ್ಕಾರ ನಡೆಸಲಾಗಿದೆ. ಶುಕ್ರವಾರ (ಮೇ.2) ಬಂಟ್ವಾಳದ ಕಾರಿಂಜ ಪುಳಿಮಜಲಿನಲ್ಲಿರುವ ಮನೆಯ ಪಕ್ಕದಲ್ಲಿರುವ ತೋಟದಲ್ಲಿ ಸುಹಾಸ್‌ ಶೆಟ್ಟಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

  • 2 May 2025 2:38 PM IST

    ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ; ಚೂರಿ ಇರಿತ, ಹಲವೆಡೆ ಕಲ್ಲು ತೂರಾಟ

    ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕೊಲೆಯ ನಂತರ ಹಾಗೂ ಶುಕ್ರವಾರ ಪಾರ್ಥಿವ ಶರೀರದ ಅಂತಿಮಯಾತ್ರೆ ವೇಳೆ ಅಲ್ಲಲ್ಲಿ ಮತ್ತೆ ಗಲಾಟೆಯಾಗಿದ್ದು, ಚೂರಿ ಇರಿತ ಮತ್ತು ಕಲ್ಲು ತೂರಾಟದ ಘಟನೆಗಳು ವರದಿಯಾಗಿವೆ. ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಬಿ.ಸಿ.ರೋಡ್ ಮಾರ್ಗವಾಗಿ ಕಾರಿಂಜದವರೆಗೆ ಅಂತಿಮ ಯಾತ್ರೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆ ಬಂದ್‌ಗೆ ಕರೆ ನೀಡಿದ್ದಲ್ಲದೇ ನಿಷೇಧಾಜ್ಞೆಯನ್ನೂ ಜಾರಿ ಮಾಡಲಾಗಿತ್ತು. ಅಂತಿಮಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಕುಂಟಿಕಾನ, ಉಡುಪಿಯ ಹಿರಿಯಡ್ಕ ಹಾಗೂ ಬಡಗಬೆಟ್ಟಿನ ಚಾಕು ಇರಿತ ಪ್ರಕರಣಗಳು ವರದಿಯಾಗಿವೆ.  

    ಉಡುಪಿಯ ಹತ್ರಾಡಿ ಸಮೀಪ ಆಟೊ ರಿಕ್ಷಾ ಚಾಲಕ ಅಬೂಬಕ್ಕರ್‌ ಮೇಲೆ ತಲ್ವಾರ್‌ನಿಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಸಂಬಂಧ ಸಂದೇಶ ಬೊಮ್ಮರಬೆಟ್ಟು ಹಾಗೂ ಸುಶಾಂತ್ ಹಿರಿಯಡ್ಕ ಎಂಬವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಕುಂಟಿಕಾನದಲ್ಲಿ ಲುಕ್ಮಾನ್‌ ಎಂಬಾತನ ಮೇಲೆಯೂ ಕಪ್ಪುಬಣ್ಣದ ಇನ್ನೊವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಈ ವೇಳೆ ಹಿಂದೂ ಮಹಿಳೆಯರೇ ಆತನನ್ನು ರಕ್ಷಿಸಿದ್ದಾರೆ.  

    ಅಡ್ಯಾರು ಸಮೀಪದ ಕಣ್ಣೂರು ಬಳಿ ವ್ಯಕ್ತಿಯೊಬ್ಬರ ಮೇಲೆ ಶುಕ್ರವಾರ ಬೆಳಿಗ್ಗೆ ಚೂರಿ ಇರಿತದ ಘಟನೆ ನಡೆದಿದೆ. ಇರ್ಷಾದ್‌ ಎಂಬವರ ಮೇಲೆ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ. ಉಳ್ಳಾಲದ ಅಳೇಕಳ ಬಳಿ ಫೈಜಲ್ ಎಂಬಾತನ ಮೇಲೆ ಚೂರಿ ಇರಿತದ ಘಟನೆ ನಡೆದಿದೆ. ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ದುಷ್ಕರ್ಮಿಗಳಿಂದ ಈ ಕೃತ್ಯ ಎಸಗಿದ್ದಾರೆ.

  • 2 May 2025 1:16 PM IST

    ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ; ಯಾರೂ ರಾಜಕೀಯ ಮಾಡಬೇಡಿ- ಯು.ಟಿ.ಖಾದರ್‌ ಮನವಿ



    ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ರಾಜಕೀಯ ಮಾಡಬಾರದು. ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ಮುಖಂಡರು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಮನವಿ ಮಾಡಿದ್ದಾರೆ.

    ಸುಹಾಸ್ ಶೆಟ್ಟಿ ಎರಡು ಕೊಲೆ ಪ್ರಕರಣಗಳಲ್ಲಿ ಎ-1ಆರೋಪಿಯಾಗಿದ್ದ. ಈಗ ಆತನ ಕೊಲೆಯಾಗಿದ್ದು, ಈ ಬಗ್ಗೆ ತನಿಖೆ ನಡೆಯಲಿದೆ. ಆ ಬಳಿಕ ಸತ್ಯಾಂಶ ಹೊರಬೀಳಲಿದೆ ಎಂದು ಹೇಳಿದ್ದಾರೆ.

    ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣದ ಸಂಬಂದ ಆ ಭಾಗದ ಜನರು ಸಂಯಮ ಕಳೆದುಕೊಳ್ಳಬಾರದು. ಕರಾವಳಿ ಭಾಗ ಸಾಕಷ್ಟು ಸಮೃದ್ದಿಯಾಗಿದೆ. ಇಂತಹ ಪ್ರದೇಶದಲ್ಲಿ ಈ ರೀತಿ ಘಟನೆ ಮನಸ್ಸಿಗೆ ನೋವಾಗುತ್ತದೆ ಎಂದಿದ್ದಾರೆ.

  • 2 May 2025 1:09 PM IST

    ಸುಹಾಸ್ ಶೆಟ್ಟಿ ಕೊಲೆಯ ಹಿಂದೆ ಇಲಾಖೆಯ ಕೈವಾಡ?

    ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸ್ ಇಲಾಖೆ ನೆರವಾಯಿತೇ ಎಂಬ ಸಂಶಯವನ್ನು ವಿರೋಧ ಪಕ್ಷದ ನಾಯಕ ಆರ್ ಅಶೋಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು ಸುಹಾಸ್ ಎಲ್ಲಿದ್ದಾನೆ, ಅವನ ಬಳಿ ಯಾವುದಾದರೂ ಆಯುಧ ಇದೆಯಾ ಇಲ್ಲವಾ? ಅವನ ಚಲನವಲನಗಳ ಬಗ್ಗೆ ಹಂತಕರಿಗೆ ಗೊತ್ತಾಗಿದ್ದು ಹೇಗೆ, ನಮ್ಮ ಅಲ್ಲಿನ ಕಾರ್ಯಕರ್ತರು ಹೇಳುವ ಹಾಗೆ ಇಲಾಖೆಯ ಕೈವಾಡ ಇದೆಯಾ ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದರು. 

  • 2 May 2025 12:27 PM IST

    ಶಾಂತಿ ಕಾಪಾಡಲು ಮುಸ್ಲಿಮರ ಮನವಿ

    ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಆಗಿರುವ ಪರಿಸ್ಥಿತಿಯ ಲಾಭ ಪಡೆಯುವುದು ಹಾಗೂ ಪ್ರಚೋದನೆಗೆ ಒಳಗಾಗದಂತೆ ಮುಸ್ಲಿಂ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ. ಇಂದು ಶುಕ್ರವಾರ. ಕೆಲವೆಡೆ ಬೇಕಂತಲೇ ಮಸೀದಿಯ ಬಳಿ ಬಂದು ಪ್ರಚೋದಿಸುವ ಕೆಲಸವೂ ಆಗುವ ಸಾಧ್ಯತೆ ಇದೆ. ಆದ್ದರಿಂದ ಆ ಸಂದರ್ಭದಲ್ಲಿ ಅಲ್ಲಿ ನಿಂತು ಪರಿಸ್ಥಿತಿಯನ್ನು ಆದಷ್ಟು ಶಾಂತಿಯುತವಾಗಿ ಇರುವಂತೆ ಮಾಡಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದ್ದಾರೆ.

  • 2 May 2025 12:20 PM IST

    ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳ ಸುಳಿವು; ಎಡಿಜಿಪಿ ಆರ್. ಹಿತೇಂದ್ರ


    ಬಜಪೆ ಠಾಣೆ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳ ಹೆಸರು ಸಹಿತ ಸುಳಿವು ದೊರೆತಿದೆ. ಆರೋಪಿಗಳನ್ನು ಬಂಧಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಹೇಳಿದ್ದಾರೆ.



     


  • 2 May 2025 12:10 PM IST

    ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ: ಪೊಲೀಸ್ ಇಲಾಖೆಯ ಕೈವಾಡದ ಬಗ್ಗೆ ಅಶೋಕ್‌ ಅನುಮಾನ




    ಸುಹಾಸ್ ಶೆಟ್ಟಿ ಕೊಲೆಯ ಹಿಂದೆ ಪೊಲೀಸ್ ಇಲಾಖೆಯ ಕೈವಾಡ ಇರಬಹುದು ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಅನುಮಾನ ವ್ಯಕ್ತಪಡಿಸಿದ್ದಾರೆ. 

    ಸುಹಾಸ್ ಶೆಟ್ಟಿ ಕೊಲೆಯ ಬಗ್ಗೆ ಮಾಹಿತಿ ಕೊಟ್ಟವರು ಯಾರು, ಸುಹಾಸ್ ಶೆಟ್ಟಿ ಎಲ್ಲಿ ಹೋಗುತ್ತಾರೆ, ಅವರ ಬಳಿ ಯಾವುದೇ ಆಯುಧ ಇಲ್ಲ ಎಂದು ಮಾಹಿತಿ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಇಲಾಖೆಯ ಕೈವಾಡ ಇರಬಹುದು. ಘಟನೆಗೆ ಸಿದ್ದರಾಮಯ್ಯ ಸರ್ಕಾರವೇ ಕಾರಣ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ. ದೇಶದ್ರೋಹಿಗಳಿಗೆ ಗುಂಡಿಡುವ ಕಾನೂನು ಬರಬೇಕು ಎಂದು ಒತ್ತಾಯಿಸಿದ್ದಾರೆ.

  • 2 May 2025 11:48 AM IST

    ಉಡುಪಿಯಲ್ಲಿ ಮುಸ್ಲಿಂ ಯುವಕನ ಕೊಲೆಗೆ ಯತ್ನ

    ಸುಹಾಸ್‌ ಶೆಟ್ಟಿಯ ಹತ್ಯೆಗೆ ಪ್ರತಿಕಾರಕ್ಕಾಗಿ ಉಡುಪಿಯಲ್ಲಿ ಮುಸ್ಲಿಂ ಯುವಕನ ಹತ್ಯೆಗೆ ಯತ್ನ ನಡೆದಿದೆ. ಉಡುಪಿ ತಾಲೂಕಿನ ಅತ್ರಾಡಿಯಲ್ಲಿ ಮುಸ್ಲಿಂ ಆಟೋ ಚಾಲಕ ಅಬೂಬಕ್ಕರ್ ಎಂಬುವರ ಮೇಲೆ ದಾಳಿಯಾಗಿದೆ. ಆಟೋ ಅಡ್ಡಗಟ್ಟಿ ಚಾಲಕ ಅಬೂಬಕ್ಕರ್ ಕೊಲೆಗೆ ಯತ್ನಿಸಲಾಗಿದೆ. ಇನ್ನು ದಾಳಿಗೆ ಯತ್ನಿಸಿದವರನ್ನು ಸುಶಾಂತ್, ಸಂದೇಶ್ ಪೂಜಾರಿ ಎಂದು ಗುರುತಿಸಲಾಗಿದೆ. ಅಬೂಬಕ್ಕರ್ ನನ್ನು ಅಡ್ಡಗಟ್ಟಿ ಸುಶಾಂತ್, ಸಂದೇಶ್ ಪೂಜಾರಿ ಎಂಬುವರು ಕೊಲೆಗೆ ಯತ್ನಿಸಿದ್ದಾರೆ ಕೂಡಲೇ ಹಿರಿಯಡ್ಕ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.  

  • 2 May 2025 11:45 AM IST

    ಯುವಕನಿಗೆ ಚೂರಿ ಇರಿತ: ಆಸ್ಪತ್ರೆಗೆ ದಾಖಲು

    ಮಂಗಳೂರು: ನಗರದ ಹೊರವಲಯದ ಕಣ್ಣೂರಿನಲ್ಲಿ ಯುವಕನೊಬ್ಬನಿಗೆ ಶುಕ್ರವಾರ ನಸುಕಿನಲ್ಲಿ ಚೂರಿ ಇರಿತವಾಗಿದೆ. ಗಂಭೀರವಾಗಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಯುವಕನನ್ನು ನೌಷಾದ್ ಎಂದು ಗುರುತಿಸಲಾಗಿದೆ. ಯುವಕ ಬೆಳಿಗ್ಗೆ ಕೆಲಸಕ್ಕೆ ಹೊರಟಿದ್ದ ಎಂದು ಮೂಲಗಳು ತಿಳಿಸಿವೆ.

  • 2 May 2025 10:59 AM IST

    ಸುಹಾಸ್ ಕೊಲೆ ಆರೋಪಿಗಳ ಪತ್ತೆಗೆ 4 ತಂಡ ರಚನೆ :ಗೃಹಸಚಿವ ಪರಮೇಶ್ವರ್



    ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಆರೋಪಿಗಳನ್ನು ಪತ್ತೆಹಚ್ಚಲು ನಾಲ್ಕು ತಂಡಗಳನ್ನು ರಚಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತೆ ಸಚಿವರು ಮನವಿ ಮಾಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Read More
Next Story